ಆಸ್ಟ್ರಿಯಾದ ವೋಕರ್ ಟರ್ಕ್ ಯುಎನ್‍ಎಚ್‍ಸಿಆರ್ ಮುಖ್ಯಸ್ಥ

Update: 2022-09-09 17:20 GMT

ಜಿನೆವಾ, ಸೆ.9: ವಿಶ್ವಸಂಸ್ಥೆ ಮಾನವ ಹಕ್ಕುಗಳ ಹೈಕಮಿಷನರ್ (ಯುಎನ್‍ಎಚ್‍ಸಿಆರ್) ಆಗಿ ಆಸ್ಟ್ರಿಯಾದ ರಾಜತಾಂತ್ರಿಕ ವೋಕರ್ ಟರ್ಕ್‍ರ ಆಯ್ಕೆಯನ್ನು ವಿಶ್ವಸಂಸ್ಥೆ ಗುರುವಾರ ಅನುಮೋದಿಸಿದೆ.

ಚಿಲಿಯ  ಮಿಷೆಲ್ ಬ್ಯಾಚ್‍ಲೆಟ್ ಅವರ ಅಧಿಕಾರಾವಧಿ ಕಳೆದ ವಾರ ಅಂತ್ಯಗೊಂಡ ಬಳಿಕ ತೆರವಾಗಿದ್ದ ಹುದ್ದೆಗೆ ವೋಕರ್ ಟರ್ಕ್‍ರ ಹೆಸರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಬುಧವಾರ ಶಿಫಾರಸು ಮಾಡಿದ್ದು ಇದನ್ನು ಗುರುವಾರ ಅನುಮೋದಿಸಲಾಗಿದೆ. ವಿಶ್ವಸಂಸ್ಥೆಯ ವಿವಿಧ ಹುದ್ದೆಗಳಲ್ಲಿ ದೀರ್ಘಾವಧಿ ಕಾರ್ಯನಿರ್ವಹಿಸಿದ ಅನುಭವಿಯಾಗಿರುವ ಟರ್ಕ್, ಗುಟೆರಸ್ ಅವರು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಸಮಿತಿಯ ಮುಖ್ಯಸ್ಥರಾಗಿದ್ದ ಸಂದರ್ಭ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು. ಪ್ರಸ್ತುತ ಅವರು ವಿಶ್ವಸಂಸ್ಥೆ ಕಾರ್ಯನೀತಿ ವಿಭಾಗದ ಸಹಾಯಕ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಟರ್ಕ್ ಅವರು ತನ್ನ ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನವನ್ನು ಸಾರ್ವತ್ರಿಕ ಮಾನವ ಹಕ್ಕುಗಳನ್ನು  (ವಿಶೇಷವಾಗಿ ವಿಶ್ವದ ಕೆಲವು ದುರ್ಬಲ ಜನರು ಮತ್ತು ನಿರಾಶ್ರಿತರ)  ಮುನ್ನಡೆಸಲು ಮೀಸಲಿಟ್ಟಿದ್ದರು ಎಂದು ಗುಟೆರಸ್ ಶ್ಲಾಘಿಸಿದ್ದಾರೆ. ಕಳೆದ ವಾರ ತನ್ನ ಅಧಿಕಾರಾವಧಿಯ ಅಂತಿಮ ದಿನದಂದು ಬ್ಯಾಚೆಲೆಟ್, ಚೀನಾದ ಕ್ಸಿನ್‍ಜಿಯಾಂಗ್ ಪ್ರಾಂತದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮಾನವೀಯತೆಯ ವಿರುದ್ಧದ ಅಪರಾಧವನ್ನು ಎತ್ತಿತೋರಿಸುವ ವರದಿಯನ್ನು ಬಿಡುಗಡೆಗೊಳಿಸಿದ್ದರು. ಇದೀಗ ಇದೇ ಧೈರ್ಯವನ್ನು ಅವರ ಉತ್ತರಾಧಿಕಾರಿ ಪ್ರದರ್ಶಿಸಬೇಕಾಗಿದೆ. ವಿಶ್ವದಾದ್ಯಂತ ಮಾನವ ಹಕ್ಕುಗಳ ಉಲ್ಲಂಘನೆಯ ಸಂತ್ರಸ್ತರ ಬಗ್ಗೆ ಧ್ವನಿ ಎತ್ತಬೇಕಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್‍ನ್ಯಾಷನಲ್‍ನ ಮುಖ್ಯಸ್ಥೆ ಆಗ್ನೆಸ್ ಕಲಮರ್ಡ್ ಪ್ರತಿಕ್ರಿಯಿಸಿದ್ದಾರೆ. ಚೀನಾದ ಕ್ಸಿನ್‍ಜಿಯಾಂಗ್‍ನಲ್ಲಿ ಮಾನವೀಯತೆಯ ವಿರುದ್ಧದ ಅಪರಾಧವಾಗಿರಬಹುದು, ಉಕ್ರೇನ್ ಮತ್ತು ಇಥಿಯೋಪಿಯಾದಲ್ಲಿನ ಯುದ್ಧಾಪರಾಧವಾಗಿರಬಹುದು ಅಥವಾ ಅಮೆರಿಕದಲ್ಲಿನ ವರ್ಣಭೇದ ನೀತಿಯಾಗಿರಬಹುದು, ಇಲ್ಲಿ ಬಲಾಢ್ಯರ ಒತ್ತಡಕ್ಕೆ ಮಣಿಯದೆ ದೃಢವಾದ ತನಿಖೆ ಮತ್ತು ಬಲವಾದ ಧ್ವನಿ ಎತ್ತುವ ಮೂಲಕ ಮಾನವ ಹಕ್ಕುಗಳ ಮುಖ್ಯಸ್ಥರು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ನಿಲ್ಲಬೇಕಾಗಿದೆ ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ತಿರಾನಾ ಹಸನ್ ಹೇಳಿದ್ದಾರೆ. ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ಮುಂದಿನ ಹೈಕಮಿಷನರ್‍ನ ಕಾನೂನುಬದ್ಧತೆ ಮತ್ತು ಅಧಿಕಾರವನ್ನು ರೂಪಿಸುವ ಪ್ರಮುಖ ಅವಕಾಶವನ್ನು ಪ್ರಧಾನ ಕಾರ್ಯದರ್ಶಿ ಕಳೆದುಕೊಂಡರು ಎಂದು ಇತರ ಸಂಘಟನೆಗಳು ಪ್ರತಿಕ್ರಿಯಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News