ಪೊಲೀಸ್/ನ್ಯಾಯಾಂಗದ ಸಹಾಯವಿಲ್ಲದೆ ಒತ್ತುವರಿ ಬಿಡಿಸುತ್ತಿವೆಯೇ ಬೆಂಗಳೂರಿನ ಕೆರೆಗಳು..!

Update: 2022-09-11 05:35 GMT

ಒಂದೆರಡು ಬಡಾವಣೆಗಳು ಬಿಟ್ಟರೆ ಬೆಂಗಳೂರಿನಲ್ಲಿ ವೈಜ್ಞಾನಿಕವಾಗಿ ಮತ್ತು ಟೌನ್ ಪ್ಲಾನಿಂಗ್‌ಗೆ ಅನುಗುಣವಾಗಿ ಬಡಾವಣೆಗಳನ್ನು ಕಟ್ಟಿಲ್ಲ ಎನ್ನುತ್ತಾರೆ ಕೆಲವು ತಜ್ಞರು. ಹಾಗಾಗಿ ಒಂದು ಸಣ್ಣ ಮಳೆ ಬಂದರೂ ಬೆಂಗಳೂರು ತಡೆದುಕೊಳ್ಳುವುದಿಲ್ಲ. ರಸ್ತೆಯಲ್ಲಿ ಆಳೆತ್ತರಕ್ಕೆ ನೀರು ನಿಂತಿರುತ್ತದೆ. ಕೆಲವೊಮ್ಮೆ ಒಂದು ಬಸ್ಸು ಸಂಪೂರ್ಣವಾಗಿ ಮುಳುಗುವ ಎತ್ತರಕ್ಕೆ ನೀರು ನಿಲ್ಲುತ್ತದೆ.


 ಸ್ವಲ್ಪದಿನಗಳ ಹಿಂದೆ ಅಂತರ್ಜಾಲದಲ್ಲಿ ಒಂದು ಹಾಸ್ಯ ಹರಿದಾಡುತ್ತಿತ್ತು, ಬೆಂಗಳೂರಿನಲ್ಲಿ ಮಲ್ಲಿಗೆಪುರದ ಸರ್ವೇ ನಂಬರ್ 3/1 ಮತ್ತು 3/2 ರಲ್ಲಿ ಜಾಗ ಬಿಟ್ಟು ಉಳಿದೆಲ್ಲಾ ಜಾಗಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಬಹುದು. ಏಕೆಂದರೆ ಮೇಲಿನ ಸರ್ವೇ ನಂಬರಿನಲ್ಲಿ ಇರುವುದು ವಿಧಾನಸೌಧ ಮತ್ತು ರಾಜ್ಯ ಹೈಕೋರ್ಟ್. ಭೂಗಳ್ಳರು, ರಿಯಲ್ ಎಸ್ಟೇಟ್‌ನವರು, ಹದಗೆಟ್ಟ ವ್ಯವಸ್ಥೆ, ರಾಜಕಾರಣಿಗಳು, ಕೊನೆಗೆ ಜನಸಾಮಾನ್ಯರು ಎಲ್ಲಾ ಸೇರಿಕೊಂಡು ಇಂದು ಬೆಂಗಳೂರನ್ನು ಈ ಸ್ಥಿತಿಗೆ ತಂದಿದ್ದಾರೆ. ಕಳೆದ 10 ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಮತ್ತು ಸ್ವಯಂಕೃತ ಅಪರಾಧದಿಂದ ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತರುತ್ತಿರುವ ಪ್ರಪಂಚದ ‘ಸಿಲಿಕಾನ್ ಸಿಟಿ’ ಎಂದೇ ಗುರುತಿಸಲ್ಪಡುವ ಕರ್ನಾಟಕದ ರಾಜಧಾನಿಯಾದ ಬೆಂಗಳೂರು ಇಂದು ಘೋರ ಸ್ಥಿತಿಯಲ್ಲಿದೆ. ಅತಿಯಾಗಿ ಸುರಿಯುತ್ತಿರುವ ಮಳೆಯಿಂದ ಈ ನಗರ ಹೀನಾಯ ಸ್ಥಿತಿಗೆ ಬಂದುನಿಂತಿದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು?

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುವುದೆಂದರೆ ಅದರಲ್ಲಿ ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವುದೆಂದರೆ ಜನರಿಗೆ ಹೆಮ್ಮೆಯ ವಿಷಯವಾಗಿತ್ತು. ಅದರಲ್ಲೂ ಬೆಂಗಳೂರಿನಲ್ಲಿ ಒಂದು ಮನೆ ಮಾಡಬೇಕು ಅಥವಾ ಒಂದು ಫ್ಲ್ಯಾಟ್ ಖರೀದಿಸಬೇಕು ಎಂದು ಕೋಟ್ಯಂತರ ಮಂದಿ ಕನಸು ಕಾಣುತ್ತಿದ್ದ ದಿನಗಳವು. ಐಟಿ ಕಂಪೆನಿಗಳ ಬೆಳವಣಿಗೆಗೆ ಬೇಕಾದ ಎಲ್ಲಾ ಮೂಲಭೂತ ಸೌಲಭ್ಯಗಳು ಬೆಂಗಳೂರಿನಲ್ಲಿ ಅಂದು ದೊರೆಯುತ್ತಿತ್ತು. ಅದಕ್ಕೆ ಸರಕಾರದ ಪ್ರೋತ್ಸಾಹ ಸಹ ಇತ್ತು. ಹಾಗಾಗಿ ದೇಶ-ವಿದೇಶದ ಸಾವಿರಾರು ಕಂಪೆನಿಗಳು ಬೆಂಗಳೂರಿಗೆ ಬಂದು ತಮ್ಮ ಕಚೇರಿಗಳನ್ನು ತೆರೆದವು. 1990-2000ದ ದಶಕದಲ್ಲಿ 50 ಸಾವಿರದಿಂದ ಒಂದು ಲಕ್ಷ ರೂಪಾಯಿ ಸಂಬಳ ಎಂದರೆ ಅಂದಿನ ಕಾಲಕ್ಕೆ ಅದು ಅತ್ಯಂತ ದೊಡ್ಡ ವಿಚಾರವಾಗಿತ್ತು. ಬೆಂಗಳೂರಿಗೆ ದೇಶ-ವಿದೇಶಗಳ ಪ್ರತಿಭೆಗಳು ಬಂದವು. ಹಸಿರು ನಗರವಾಗಿದ್ದ ಬೆಂಗಳೂರು ಕ್ರಮೇಣ ವಲಸಿಗರ ಸ್ವರ್ಗವಾಯಿತು. ಆಧುನಿಕ ಸಂಪರ್ಕ ಸಾಧನೆಗಳು ಬಂದವು. ಬೆಂಗಳೂರು ಪ್ರತಿಯೊಬ್ಬರನ್ನು ಸ್ವಾಗತಿಸಿತು. ಹೀಗೆ ಬಂದ ಲಕ್ಷಾಂತರ ವಲಸಿಗರು ಕ್ರಮೇಣ ಬೆಂಗಳೂರಿನಲ್ಲೇ ಖಾಯಂ ಆಗಿ ನೆಲೆಸಲು ಆರಂಭಿಸಿದರು. ಇದರಿಂದ ಸಿಕ್ಕಸಿಕ್ಕಲ್ಲಿ ಮನೆಗಳು, ಕಟ್ಟಡಗಳು ಮತ್ತು ಫ್ಲಾಟ್‌ಗಳು ಏಳಲು ಆರಂಭಿಸಿದವು. ಇದನ್ನೇ ಕಾಯುತ್ತಿದ್ದ ರಿಯಲ್ ಎಸ್ಟೇಟ್ ಮತ್ತಿತರರು ನಿಧಾನವಾಗಿ ಬೆಂಗಳೂರಿನ ಇಂಚಿಂಚು ಜಾಗವನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಳ್ಳಲು ಪ್ರಾರಂಭಿಸಿದರು.

ರಸ್ತೆಗಳು, ಕೆರೆಗಳು, ಉದ್ಯಾನವನ ಎಲ್ಲಾ ನಿಧಾನವಾಗಿ ಮಾಯವಾದವು. ಲಕ್ಷಾಂತರ ಮಂದಿ ವಲಸಿಗರಿಗೆ ಮನೆ ಕಟ್ಟುವ ಜವಾಬ್ದಾರಿ ಹೊತ್ತ ಬೆಂಗಳೂರು ರಿಯಲ್ ಎಸ್ಟೇಟ್ ಮತ್ತಿತರರ ವಕ್ರದೃಷ್ಟಿ ಮೊದಲು ಬೀರಿದ್ದು, ಒಣಗಿನಿಂತ ಅನಾಥ ಕೆರೆಗಳು ಮತ್ತು ರಾಜ ಕಾಲುವೆಗಳ ಮೇಲೆ. ನಿಮಗೆ ಗೊತ್ತೇ, ಒಂದು ಕಾಲದಲ್ಲಿ ಕೋಲಾರ ಬಿಟ್ಟರೆ ಅತಿ ಹೆಚ್ಚು ಕೆರೆಗಳಿದ್ದದ್ದು ಬೆಂಗಳೂರಿನಲ್ಲಿ ಮಾತ್ರ. ಅಂದಿನ ಕೆಂಪೇಗೌಡರು ಬಹುಶಃ 400 ವರ್ಷಗಳ ಆನಂತರ ಬೆಂಗಳೂರು ಯಾವ ಮಟ್ಟಕ್ಕೆ ಬೆಳೆಯಬಹುದೆಂದು ಊಹಿಸಿ ಅದಕ್ಕೆ ಬೇಕಾದಷ್ಟು ಕೆರೆಗಳನ್ನು ಕಟ್ಟಿಸಿದ್ದರು. ಆದರೆ ಇಂದು ಬೆಂಗಳೂರಿನ ಆ ಕೆರೆಗಳ ಬಗ್ಗೆ ಬಿಬಿಎಂಪಿಯಲ್ಲೇ ಯಾವುದೇ ಸರಿಯಾದ ಮಾಹಿತಿಗಳಿಲ್ಲ ಎಂದರೆ ನಾವು ನಂಬಲೇ ಬೇಕು. ಒಣಗಿ ನಿಂತ ಕೆರೆಗಳ ಅಂಗಳಗಳು ರಿಯಲ್ ಎಸ್ಟೇಟ್ ಮಾಫಿಯಾದವರಿಗೆ ಚಿನ್ನದ ಗಣಿಗಳಾದವು. ಜನರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬೆಂಗಳೂರಿನಲ್ಲಿ ಮನೆ ಕಟ್ಟಿಕೊಳ್ಳುವುದು, ಮನೆಯನ್ನು ಬಾಡಿಗೆ/ಭೋಗ್ಯಕ್ಕೆ ನೀಡುವುದು ಭಾಗ್ಯವೆಂದು ತಿಳಿದು ರಿಯಲ್ ಎಸ್ಟೇಟ್ ಮಾಫಿಯಾದವರ ಹಿಂದೆ ಬಿದ್ದರು. ಬೆಂಗಳೂರಿನ ಪ್ರತೀ ಇಂಚಿನ ಬೆಲೆ ರಾಕೆಟ್‌ನಂತೆ ವೇಗವಾಗಿ ಏರಲಾರಂಭಿಸಿತು. ಅಣಬೆಗಳಂತೆ ಬಡಾವಣೆಗಳು ಹುಟ್ಟಿಕೊಂಡವು. ಕ್ರಿಶ. 2000ದ ಆನಂತರ ಬೆಂಗಳೂರು ನಗರದಲ್ಲಿ ಸ್ಥಳದ ಅಭಾವ ಕಂಡುಬಂದುದರಿಂದ ಎಲ್ಲರ ಕಣ್ಣು ಬಿದ್ದಿದ್ದು ಬೆಂಗಳೂರಿನ ಹೊರವಲಯದ ಮೇಲೆ. ಆ ಕಾಲಕ್ಕೆ ಅತ್ಯಂತ ಹೆಚ್ಚು ಕೆರೆಗಳು ಇದ್ದಿದ್ದೇ ಬೆಂಗಳೂರಿನ ಹೊರವಲಯದಲ್ಲಿ (ವರ್ತೂರು ಮತ್ತು ಬೆಳ್ಳಂದೂರು ಕೆರೆ). ಈ ಮಧ್ಯೆ ರಾಜಕಾಲುವೆಗಳು ಒತ್ತುವರಿ ಸದ್ದಿಲ್ಲದೆ ಆರಂಭವಾಯಿತು. ವಿಶೇಷ ಆರ್ಥಿಕ ವಲಯ ಹುಟ್ಟಿಕೊಂಡಿತು. ಮರಗಳ ಜಾಗದಲ್ಲಿ ಕಾಂಕ್ರಿಟ್ ಕಟ್ಟಡಗಳು ತಲೆ ಎತ್ತಿದ್ದವು. ಇದಕ್ಕೆಲ್ಲ ಅನುಮತಿ ನೀಡಿದವರು ಯಾರು ಎಂದು ಇವತ್ತು ಕೇಳಿದರೆ ಒಬ್ಬರು ಇನ್ನೊಬ್ಬರ ಕಡೆ ಕೈ ತೋರಿಸುತ್ತಿದ್ದಾರೆ.

ಇಂತಹ ಜಾಗಗಳನ್ನೇ ಸೈಟುಗಳಾಗಿ, ಲೇಔಟ್‌ಗಳಾಗಿ ಪರಿವರ್ತನೆ ಮಾಡಿ ಮನಸ್ಸಿಗೆ ಬಂದ ಬೆಲೆ ನಿಗದಿಪಡಿಸಿ ಶ್ರೀಮಂತರಿಗೆ ರಿಯಲ್ ಎಸ್ಟೇಟ್ ನವರು ಮಾರಿದರು. ಕೃಷಿ ಭೂಮಿಯನ್ನು ಅಧಿಕಾರಿಗಳು ಹಿಂದೆ ಮುಂದೆ ನೋಡದೆ ನಿವೇಶನ ಪರಿವರ್ತನೆಗಳಿಗೆ ಅನುಮತಿ ನೀಡಿದರು. ಶ್ರೀಮಂತರು ಕೋಟ್ಯಂತರ ರೂ.ಯನ್ನು ಕೊಟ್ಟು ಬಂಗಲೆಗಳನ್ನು, ವಿಲ್ಲಾಗಳನ್ನು ಕಟ್ಟಿಸಿಕೊಂಡು ಬದುಕಲಾರಂಭಿಸಿದರು. ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ರಾಜಕಾಲುವೆಗಳನ್ನು ಹೆಚ್ಚಾಗಿ ಒತ್ತುವರಿ ಮಾಡಿಕೊಂಡಿರುವ ಎಲ್ಲರೂ ಪ್ರಭಾವಿಗಳೇ. ಅವರನ್ನು ಸರಕಾರವಾಗಲೀ, ವ್ಯವಸ್ಥೆಯಾಗಲೀ ಮುಟ್ಟಲು ಸಾಧ್ಯವೇ? ಈ ಮಧ್ಯೆ ಐಟಿ/ಬಿಟಿ ಕಂಪೆನಿಗಳು ಬೆಂಗಳೂರನ್ನು ಬಿಟ್ಟು ಬೇರೆಡೆ ಹೋಗುವ ಧಮಕಿ ಹಾಕುತ್ತಿವೆ. ಇವರನ್ನು ಉಳಿಸಿಕೊಳ್ಳುವುದಕ್ಕೆ ವ್ಯವಸ್ಥೆ ಟೊಂಕ ಕಟ್ಟಿ ನಿಂತಿದೆ. ಜನ ಸಾಮಾನ್ಯರ ಪಾಡು ಯಾರಿಗೂ ಬೇಡ. ಸೂಕ್ಷ್ಮವಾಗಿ ಬೆಂಗಳೂರಿನ ಭೂಪಟವನ್ನು ಗಮನಿಸಿದವರಿಗೆ ಒಂದು ವಿಷಯ ಅರ್ಥವಾಗುತ್ತದೆ. ಕಳೆದ ಎರಡು ತಿಂಗಳಿಂದ ಬೀಳುತ್ತಿರುವ ಭಾರೀ ಮಳೆಗೆ ಬೆಂಗಳೂರಿನ ಸ್ಥಿತಿ ಅಧ್ವಾನವಾಗಲು ಮುಖ್ಯ ಕಾರಣ ಬೆಂಗಳೂರಿನ ಹೊರವಲಯ ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿಕೊಂಡಿರುವುದು. ಬೆಂಗಳೂರಿನ ಹೆಚ್ಚಿನ ಬಡಾವಣೆಗಳು ಮತ್ತು ಫ್ಲ್ಯಾಟುಗಳು ಹಾಗೂ ವಿಲ್ಲಾಗಳು ಈ ಕೆರೆಗಳ ಮೇಲೆಯೇ ನಿಂತಿರುವುದು. ಹಾಗಾಗಿ ಮಳೆ ಬಂದ ಅವಕಾಶವನ್ನು ಬಳಸಿಕೊಂಡ ಬೆಂಗಳೂರಿನ ಕೆರೆಗಳು ಯಾವುದೇ ಪೊಲೀಸ್, ನ್ಯಾಯಾಂಗದ ಸಹಾಯವಿಲ್ಲದೆ ತಾವು ಕಳೆದುಕೊಂಡ ಜಾಗಗಳನ್ನು ಪುನಃ ಆಕ್ರಮಿಸಿವೆ ಅಷ್ಟೇ. ಬೆಂಗಳೂರಿನ ಮೂಲ ಸಮಸ್ಯೆಯೆಂದರೆ ಬೆಂಗಳೂರು ಮೂಲತಃ ಒಂದು ವ್ಯವಸ್ಥಿತ ನಗರವಲ್ಲ. ಕ್ರಿ.ಶ. 1930ರಿಂದ ಇಂದಿನವರೆಗೆ ಬೆಂಗಳೂರು ಯದ್ವಾತದ್ವಾ ಬೆಳೆಯುತ್ತಿರುವುದು ಒಂದು ದೊಡ್ಡ ತಲೆನೋವಿನ ವಿಚಾರ. ಒಂದೆರಡು ಬಡಾವಣೆಗಳು ಬಿಟ್ಟರೆ ಬೆಂಗಳೂರಿನಲ್ಲಿ ವೈಜ್ಞಾನಿಕವಾಗಿ ಮತ್ತು ಟೌನ್ ಪ್ಲಾನಿಂಗ್‌ಗೆ ಅನುಗುಣವಾಗಿ ಬಡಾವಣೆಗಳನ್ನು ಕಟ್ಟಿಲ್ಲ ಎನ್ನುತ್ತಾರೆ ಕೆಲವು ತಜ್ಞರು. ಹಾಗಾಗಿ ಒಂದು ಸಣ್ಣ ಮಳೆ ಬಂದರೂ ಬೆಂಗಳೂರು ತಡೆದುಕೊಳ್ಳುವುದಿಲ್ಲ. ರಸ್ತೆಯಲ್ಲಿ ಆಳೆತ್ತರಕ್ಕೆ ನೀರು ನಿಲ್ಲುತ್ತದೆ. ಕೆಲವೊಮ್ಮೆ ಒಂದು ಬಸ್ಸು ಸಂಪೂರ್ಣವಾಗಿ ಮುಳುಗುವ ಎತ್ತರಕ್ಕೆ ನೀರು ನಿಂತಿರುತ್ತದೆ. ಬೆಂಗಳೂರು ದೇಶಕ್ಕೆ ಹೆಚ್ಚಿನ ವಿದೇಶಿ ವಿನಿಮಯ ಕೊಡುವ ಒಂದು ಸಮೃದ್ಧ ಸ್ಥಳವೆಂದೇ ಹೆಚ್ಚಿನವರು ಭಾವಿಸಿದ್ದಾರೆ.

ಮಳೆ ಬಂದಾಗ ಮಾತ್ರ ಅಲ್ಲಿಗೆ ಭೇಟಿ ಕೊಡುವ ರಾಜಕಾರಣಿಗಳು ಕೊನೆಗೆ ಬೆಂಗಳೂರು ನೆನಪಿಗೆ ಬರುವುದು ಮತದಾನದ ಸಮಯದಲ್ಲಿ ಮಾತ್ರ. ಈಗ ರಾಜಕಾರಣಿಗಳು ಪರಸ್ಪರ ಬೈದಾಡಿಕೊಂಡು ಓಡಾಡುತ್ತಿದ್ದಾರೆ. ಅವರಿಗೆ ಮುಂದೆ ಬರುವ ಬಿಬಿಎಂಪಿ ಚುನಾವಣೆಯದೇ ಚಿಂತೆಯಾಗಿದೆ. ಇದಕ್ಕೆ ನಾವು ಕೇವಲ ರಾಜಕಾರಣಿಗಳನ್ನು, ಭೂಗಳ್ಳರನ್ನು ಮತ್ತು ರಿಯಲ್ ಎಸ್ಟೇಟ್ ಅವರನ್ನು ಮಾತ್ರ ದೂಷಿಸಿ ಪ್ರಯೋಜನವಿಲ್ಲ. ಬೆಂಗಳೂರಿನ ಇಂದಿನ ಸ್ಥಿತಿಗೆ ಜನಸಾಮಾನ್ಯರು ಸಹ ಒಂದು ರೀತಿಯಲ್ಲಿ ಕಾರಣ. ಬೆಂಗಳೂರಿನಲ್ಲಿ ಮನೆ ಮಾಡಬೇಕು, ಅಲ್ಲೇ ವಾಸ ಮಾಡಬೇಕು ಎಂಬ ಹಠಕ್ಕೆ ಬಿದ್ದ ರಾಜ್ಯ ಮತ್ತು ದೇಶದ ಇತರ ಭಾಗದ ಜನರ ಅತಿಯಾದ ಆಸೆ ಮತ್ತು ಡಿಮ್ಯಾಂಡ್ ಅನ್ನು ಭೂಗಳ್ಳರು ಸರಿಯಾಗಿ ಬಳಸಿಕೊಂಡಿರುವುದು ಇಲ್ಲ್ಲಿ ಕಂಡುಬರುತ್ತದೆ. ಅದರಲ್ಲೂ ಬೆಂಗಳೂರಿನ ಹೊರವಲಯದಲ್ಲಿ ಪ್ರಶಾಂತವಾದ ಜೀವನ ನಡೆಸಲು ಕೋಟ್ಯಂತರ ಹಣವನ್ನು ಖರ್ಚು ಮಾಡಿ ವಿಲ್ಲಾಗಳನ್ನು ಮತ್ತು ಬಂಗಲೆಗಳನ್ನು ಖರೀದಿ ಮಾಡುವುದು ಒಂದು ಫ್ಯಾಷನ್ ಆಗಿ ಪರಿವರ್ತನೆ ಆಗಿದೆ. ಇಂದು ಎಲ್ಲಾ ಬಂಗಲೆಗಳು ಮತ್ತು ವಿಲ್ಲಾಗಳು ನೀರಿನಲ್ಲಿ ಮುಳುಗಿ ಕುಡಿಯಲು ಒಂದು ಲೋಟ ನೀರು ಕೂಡ ಸಿಗುತ್ತಿಲ್ಲ ಅವರಿಗೆ. ಮನೆ ಬಿಟ್ಟು ಕೆಳಗೆ ಬರಲು ಆಗುತ್ತಿಲ್ಲ. ಅವರ ವಾಹನಗಳು ಮುಳುಗಿ ಹೋಗಿವೆ. ತಿನ್ನಲು ಅನ್ನವಿಲ್ಲ. ವಿದ್ಯುತ್ ಸಹ ಇಲ್ಲ. ಒಂದೊಮ್ಮೆ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಶವವನ್ನು ಹೊರಗಡೆ ತರಲು ಸಾಧ್ಯವಾಗದ ಪರಿಸ್ಥಿತಿ. ಫ್ಲಾಟ್‌ಗಳ ಮೊದಲ ಅಂತಸ್ತು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ. ಕಳಪೆ ಗುಣಮಟ್ಟದಿಂದ ಮನೆಗಳ ಗೋಡೆ ಕುಸಿತದಿಂದ ಮುಗ್ಧ ಜೀವಗಳು ಬಲಿಯಾಗುತ್ತಿವೆ. ಎಲ್ಲದಕ್ಕೂ ಲಂಚ ಪಡೆದು ಅನುಮತಿ ಕೊಟ್ಟ ಅಧಿಕಾರಿ ವರ್ಗ ಬೆಚ್ಚಗಿನ ಮನೆಯಲ್ಲಿ ಕುಳಿತುಕೊಂಡು ಟಿವಿಗಳಲ್ಲಿ ಜನರ ಪರಿಸ್ಥಿತಿ ನೋಡಿ ನೋಡಿ ಮರುಕ ಪಡುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾದವರು ಮುಂದೆ ಯಾವ ಕೆರೆಯ ಮೇಲೆ ಬಂಗಲೆ ಕಟ್ಟಬೇಕೆಂದು ಯೋಚಿಸುತ್ತಿದ್ದಾರೆ ಎನ್ನಬಹುದೇ? ಬೆಂಗಳೂರಿನ ಸಮಸ್ಯೆ ಇಂದು ನಾಳೆ ಮುಗಿಯುವಂತಹದ್ದಲ್ಲ. ಏಕೆಂದರೆ ಪ್ರಪಂಚದೆಲ್ಲೆಡೆ ಮುಂದಿನ ವರ್ಷಗಳಲ್ಲಿ ಹೆಚ್ಚಿನ ಮಳೆ ಸುರಿಯಲಿದೆಯಂತೆ. ಇದಕ್ಕೆ ಮುಖ್ಯ ಕಾರಣ ಹವಾಮಾನದಲ್ಲಿ ಆಗುತ್ತಿರುವ ಅನಪೇಕ್ಷಿತ ಬದಲಾವಣೆಗಳು.

ಹಸಿರು ಮನೆ ಪರಿಣಾಮದಿಂದ ಉತ್ತರ-ಧ್ರುವ ಮತ್ತು ದಕ್ಷಿಣ-ಧ್ರುವದ ಮಂಜುಗಡ್ಡೆಗಳು ಬಹಳ ವೇಗವಾಗಿ ಕರಗಿ ಸಮುದ್ರ ಸೇರುತ್ತಿವೆ. ಪ್ರಪಂಚದಲ್ಲಿ ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳು ಇಂಗಾಲದ ಡೈ ಆಕ್ಸೈಡನ್ನು ವಾತಾವರಣಕ್ಕೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಿಡುತ್ತವೆ. ಇದರಿಂದ ಪರಿಸರದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಬದಲಾವಣೆಗಳಾಗುತ್ತಿದ್ದು, ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲು ಮತ್ತು ಮಳೆಗಾಲದಲ್ಲಿ ಅತಿಯಾದ ಮಳೆಯು ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಬೆಂಗಳೂರು ಸಹ ಕೈಗಾರಿಕೀಕರಣದ ಕಡೆ ಮುಖ ಮಾಡಿದೆ. ಐಟಿ/ಬಿಟಿ ಕಂಪೆನಿಗಳ ಹವಾ ನಿಯಂತ್ರಿತ ಯಂತ್ರಗಳು, ಕಟ್ಟಡಗಳ ಗಾಜಿನ ಕವಚಗಳು, ಸಿಮೆಂಟ್ ರೋಡ್‌ಗಳು, ಮರ ಗಿಡಗಳ ನಾಶ ಬೆಂಗಳೂರು ನಗರದ ತಾಪಮಾನವನ್ನು ಹೆಚ್ಚಿಸುತ್ತಿದೆ. ಇಂತಹ ಹವಾಮಾನ ಬದಲಾವಣೆಗೆ ಬಡವರು, ಸ್ಲಂ ನಿವಾಸಿಗಳು ಮತ್ತು ಗ್ರಾಮೀಣ ಪರಿಸರದ ಜನರೇ ಹೆಚ್ಚಾಗಿ ಬಲಿಯಾಗುತ್ತಾರೆ. ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ನಾವು ಯಾರನ್ನು ದೂಷಣೆ ಮಾಡಿ ಪ್ರಯೋಜನವಿಲ್ಲ. ಬದಲಾಗಿ ಮುಂದಿನ ಪೀಳಿಗೆಗೆ ಬೆಂಗಳೂರನ್ನು ಉಳಿಸಬೇಕಾದರೆ ನಾವು ಇಂದಿನಿಂದಲೇ ಕಾರ್ಯಪ್ರವೃತ್ತರಾಗ ಬೇಕಾಗುತ್ತದೆ. ಬೆಂಗಳೂರು ವಿಸ್ತರಣೆಯನ್ನು ತಡೆಗಟ್ಟಿ ರಾಜ್ಯದ ಇತರ ಜಿಲ್ಲೆಗಳ ಅಭಿವೃದ್ಧಿಗೆ ಗಮನ ನೀಡಬೇಕು. ಒತ್ತುವರಿ ವಿಚಾರದಲ್ಲಿ ನ್ಯಾಯಾಂಗ ಮಧ್ಯ ಪ್ರವೇಶ ಮಾಡಬೇಕು. ‘‘ಬೆಂಗಳೂರು ಉಳಿಸಿ’’ ಎನ್ನುವ ಹೋರಾಟ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಬಾರದು.

Writer - ಡಾ. ಡಿ.ಸಿ. ನಂಜುಂಡ

contributor

Editor - ಡಾ. ಡಿ.ಸಿ. ನಂಜುಂಡ

contributor

Similar News