ಶುಕ್ರನಲ್ಲಿದೆಯೇ ಜೀವಜಾಲದ ಕುರುಹು!

Update: 2022-09-18 05:57 GMT

ಭೂಮಿಯ ಆಚೆಗಿನ ಜೀವ ಮತ್ತು ಜೀವನದ ನಮ್ಮ ಹುಡುಕಾಟವು ಅವಿರತವಾಗಿ ಮುಂದುವರಿದೇ ಇದೆ. ಅನ್ಯಗ್ರಹಗಳಲ್ಲಿ ಜೀವಿಗಳು ಇಲ್ಲ ಎಂಬುದು ಸಾಬೀತಾಗಿದ್ದರೂ ವೈವಿಧ್ಯಮಯ ಪ್ರಯತ್ನಗಳು ನಡೆಯುತ್ತಲೇ ಇವೆ. ಅದಕ್ಕಾಗಿ ಅಕ್ಕಪಕ್ಕದ ಗ್ರಹಗಳ ನೆಲ, ಜಲ, ಶಿಲೆ ಮತ್ತು ವಾಯುವನ್ನು ಪದೇ ಪದೇ ಪರೀಕ್ಷೆಗೆ ಒಡ್ಡಲಾಗುತ್ತದೆ. ಅದು ಮಂಗಳ ಗ್ರಹ ಇರಬಹುದು ಅಥವಾ ಶುಕ್ರ ಗ್ರಹ ಇರಬಹುದು. ಇವೆರಡೂ ಗ್ರಹಗಳಲ್ಲಿ ಜೀವಿಗಳ ಸಾಧ್ಯತೆಗಳನ್ನು ವಿಜ್ಞಾನಿಗಳು ಪದೇ ಪದೇ ಚರ್ಚೆಗೆ ಒಳಪಡಿಸುತ್ತಲೇ ಇದ್ದಾರೆ. ಮಂಗಳನ ಅಂಗಳದಲ್ಲಿ ಹಿಂದೊಮ್ಮೆ ನೀರು ಇತ್ತು. ಅಲ್ಲದೆ ಅಲ್ಲಿನ ಧೂಳಿನ ಮೇಲ್ಮೈಯಲ್ಲೂ  ನೀರು ಇದೆ. ಹಾಗಾಗಿ ಮಂಗಳನಲ್ಲಿ ಜೀವಿಗಳ ಇರುವಿಕೆಯನ್ನು ತಳ್ಳಿಹಾಕುವಂತಿಲ್ಲ ಎಂದು ವಿಜ್ಞಾನಿಗಳು ವಾದಿಸುತ್ತಲೇ ಇದ್ದಾರೆ. ಹೀಗೆ ಸಿಕ್ಕ ಸಣ್ಣ ಸಣ್ಣ ಸುಳಿವುಗಳ ಆಧಾರದ ಮೇಲೆ ಅನ್ಯಗ್ರಹಗಳಲ್ಲಿ ಜೀವಿಗಳ ಸಾಧ್ಯತೆಗಳನ್ನು ಪತ್ತೆ ಹಚ್ಚಲು ಪ್ರಯತ್ನಗಳು ನಡೆದಿವೆ.

ಈಗ ಆಶ್ಚರ್ಯಕರವಾದ ತಿರುವಿನಲ್ಲಿ ಮ್ಯಾಸಚೈಸೆಟ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾರ್ಡಿಫ್ ವಿಶ್ವವಿದ್ಯಾನಿಲಯ ಮತ್ತು ಇತರೆಡೆಯ ವಿಜ್ಞಾನಿಗಳು ಭೂ ಗ್ರಹಕ್ಕೆ ಹತ್ತಿರವಿರುವ ಶುಕ್ರನ ಮೋಡಗಳಲ್ಲಿ ಜೀವಿಗಳ ಚಿಹ್ನೆಗಳನ್ನು ಗಮನಿಸಿದ್ದಾರೆ. ಅಲ್ಲಿ ಜೀವಿಗಳ ಪುರಾವೆಗಳನ್ನು ಅವರು ಕಂಡುಕೊಂಡಿಲ್ಲವಾದರೂ, ಅವರ ವೀಕ್ಷಣೆಯು ನಿಜವಾಗಿಯೂ ಜೀವನದೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಕಿರು ಸಂದೇಹವನ್ನು ಹೊರಹಾಕಿದೆ.

ಕಾರ್ಡಿಫ್ ವಿಶ್ವವಿದ್ಯಾನಿಲಯದ ಜೇನ್ ಗ್ರೀವ್ಸ್ ನೇತೃತ್ವದ ಖಗೋಳಶಾಸ್ತ್ರಜ್ಞರು, ಶುಕ್ರನ ವಾತಾವರಣದಲ್ಲಿ ಫಾಸ್ಫೈನ್‌ನ ರೋಹಿತದ ಫಿಂಗರ್‌ಪ್ರಿಂಟ್ ಅಥವಾ ಬೆಳಕಿನ ಆಧಾರಿತ ಸುಳಿವನ್ನು ಪತ್ತೆ ಮಾಡಿದರು. ಫಾಸ್ಫೈನ್ ಎಂಬುದು ಜೀವಿಗಳ ಉಪಉತ್ಪನ್ನವಾಗಿದೆ. ಎಂಐಟಿ ವಿಜ್ಞಾನಿಗಳು ಈ ಹಿಂದೆಯೇ ಇಂತಹ ಸುಳಿವನ್ನು, ಅಂದರೆ ಅಲ್ಲಿನ ಶಿಲೆಗಳಲ್ಲಿ ವಿಷಕಾರಿ ಅನಿಲದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇಂತಹ ವಿಷಕಾರಿ ಅನಿಲಗಳು ಜೀವಂತ ಜೀವಿಗಳಿಂದ ಮಾತ್ರ ಉತ್ಪತ್ತಿಯಾಗಲು ಸಾಧ್ಯ ಎಂಬುದನ್ನೂ ಅವರು ವಿವರಿಸಿದ್ದರು. ಪ್ರಸಕ್ತ ಸಂಶೋಧನೆಗಾಗಿ ಸಂಶೋಧಕರು ಹವಾಯಿಯಲ್ಲಿನ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್ ಟೆಲಿಸ್ಕೋಪ್ ಮತ್ತು ಚಿಲಿಯಲ್ಲಿರುವ ಅಟಕಾಮಾ ಲಾರ್ಜ್ ಮಿಲಿಮೀಟರ್ ಅರೇ ವೀಕ್ಷಣಾಲಯವನ್ನು ಬಳಸಿಕೊಂಡು ಮಾಹಿತಿಯನ್ನು ಪತ್ತೆ ಮಾಡಿದರು.

ಎಂಐಟಿ ತಂಡವು ಶುಕ್ರನ ಕಠಿಣವಾದ ಪರಿಸರದಲ್ಲಿ ಸಲ್ಫ್ಯೂರಿಕ್ ಹೊರತುಪಡಿಸಿ ಬೇರೆ ಯಾವುದಾದರೂ ಫಾಸ್ಫೈನ್ ಅನ್ನು ಉತ್ಪಾದಿಸಬಹುದೇ ಎಂದು ನೋಡಲು ಸಮಗ್ರ ವಿಶ್ಲೇಷಣೆಯೊಂದಿಗೆ ಹೊಸ ವೀಕ್ಷಣೆಯನ್ನು ಅನುಸರಿಸಿತು. ಅವರು ಪರಿಗಣಿಸಿದ ಅನೇಕ ಸನ್ನಿವೇಶಗಳ ಆಧಾರದ ಮೇಲೆ, ಶುಕ್ರದ ಮೋಡಗಳಲ್ಲಿ ಪತ್ತೆಯಾದ ಫಾಸ್ಫೈನ್‌ಗೆ ಜೀವದ ಉಪಸ್ಥಿತಿಯನ್ನು ಹೊರತುಪಡಿಸಿ ಯಾವುದೇ ವಿವರಣೆಯಿಲ್ಲ ಎಂದು ತಂಡವು ತೀರ್ಮಾನಿಸಿದೆ.

‘‘ಶುಕ್ರನಲ್ಲಿ ಜೀವವಿಲ್ಲ ಎಂಬ ಋಣಾತ್ಮಕತೆಯನ್ನು ಸಾಬೀತುಪಡಿಸು ವುದು ತುಂಬಾ ಕಷ್ಟ’’ ಎಂದು ಭೂ ವಾತಾವರಣ ಮತ್ತು ಗ್ರಹ ವಿಜ್ಞಾನಗಳ ಸಂಶೋಧನಾ ವಿಜ್ಞಾನಿ ಕ್ಲಾರಾ ಸೌಸಾ ಸಿಲ್ವಾ ಹೇಳುತ್ತಾರೆ. ಹಾಗಾಗಿ ಪ್ರಸಕ್ತ ಮಾಹಿತಿ ಆಧಾರದ ಮೇಲೆ ಖಗೋಳಶಾಸ್ತ್ರಜ್ಞರು ಜೀವವಿಲ್ಲದೆ ಫಾಸ್ಫೈನ್ ಅನ್ನು ಸಮರ್ಥಿಸುವ ಎಲ್ಲಾ ಮಾರ್ಗಗಳ ಬಗ್ಗೆ ಯೋಚಿಸುತ್ತಿದ್ದಾರೆ. ಫಾಸ್ಫೈನ್ ಅನ್ನು ತಯಾರಿಸುವ ಅಜೀವಕ ಪ್ರಕ್ರಿಯೆಗಳನ್ನು ತೋರಿಸಲು ಅವರ ಪ್ರಯತ್ನಗಳು ಮುಂದುವರಿದಿವೆ.

ಶುಕ್ರನನ್ನು ಸಾಮಾನ್ಯವಾಗಿ ಭೂಮಿಯ ಅವಳಿ ಎಂದು ಕರೆಯಲಾಗುತ್ತದೆ. ಏಕೆಂದರೆ ನೆರೆಯ ಗ್ರಹವಾದ ಶುಕ್ರವು ಅನೇಕ ರೀತಿಯಲ್ಲಿ ಭೂಮಿಯನ್ನು ಹೋಲುತ್ತದೆ. ಇವೆರಡೂ ಗ್ರಹಗಳು ಗಮನಾರ್ಹವಾದ ವಾತಾವರಣವನ್ನು ಹೊಂದಿವೆ. ಆದರೂ ಹೋಲಿಕೆಗಳಿಗೆ ಒಂದು ಮಿತಿಯಿದೆ. ಭೂಮಿಯು ಸಮಶೀತೋಷ್ಣ ಸಾಗರ ಮತ್ತು ಸರೋವರಗಳ ವಾಸಯೋಗ್ಯ ಜಗತ್ತಾಗಿದ್ದರೆ, ಶುಕ್ರದ ಮೇಲ್ಮೈಯು ಕುದಿಯುವ ಬಿಸಿಯಾದ ಭೂದೃಶ್ಯವಾಗಿದೆ. ಅಲ್ಲಿನ ತಾಪಮಾನವು 900 ಡಿಗ್ರಿ ಫ್ಯಾರನ್‌ಹೀಟ್‌ಗೆ ತಲುಪುತ್ತದೆ ಮತ್ತು ಭೂಮಿಯ ಮೇಲಿನ ಒಣ ಸ್ಥಳಗಳಿಗಿಂತ ಶುಷ್ಕವಾದ ಗಾಳಿಯಿದೆ. ಶುಕ್ರಗ್ರಹದ ಹೆಚ್ಚಿನ ವಾತಾವರಣವು ಸಾಕಷ್ಟು ನಿರಾಶ್ರಿತವಾಗಿದೆ. ಸಲ್ಫ್ಯೂರಿಕ್ ಆಮ್ಲದ ದಟ್ಟವಾದ ಮೋಡಗಳು, ಭೂಮಿಯ ಮೇಲಿನ ಅತ್ಯಂತ ಆಮ್ಲೀಯ ವಾತಾವರಣಕ್ಕಿಂತ ಶತಕೋಟಿ ಪಟ್ಟು ಹೆಚ್ಚು ಆಮ್ಲೀಯವಾಗಿರುವ ಮೋಡದ ಹನಿಗಳಿಂದ ಕೂಡಿದೆ. ಗ್ರಹದ ಮೇಲ್ಮೈ ವಾತಾವರಣದಲ್ಲಿ ಹೇರಳವಾಗಿರುವ ಪೋಷಕಾಂಶಗಳು ಲಭ್ಯವಿಲ್ಲ.

ಶುಕ್ರವು ಯಾವುದೇ ರೀತಿಯ ಜೀವನಕ್ಕೆ ತುಂಬಾ ಸವಾಲಿನ ವಾತಾವರಣ ಹೊಂದಿದೆ ಎಂಬುದು ಖಗೋಳಶಾಸ್ತ್ರಜ್ಞರ ಅಭಿಮತ.  ಆದಾಗ್ಯೂ ಮೇಲ್ಮೈಯಿಂದ 48 ರಿಂದ 60 ಕಿಲೋಮೀಟರ್‌ಗಳ ನಡುವೆ ಶುಕ್ರನ ವಾತಾವರಣದಲ್ಲಿ ಕಿರಿದಾದ, ಸಮಶೀತೋಷ್ಣ ಪಟ್ಟಿ ಇದೆ. ಅಲ್ಲಿ ತಾಪಮಾನವು ೩೦ರಿಂದ ೨೦೦ ಡಿಗ್ರಿ ಫ್ಯಾರನ್‌ಹೀಟ್‌ನಷ್ಟಿರುತ್ತದೆ. ಶುಕ್ರಗ್ರಹದಲ್ಲಿ ಜೀವವು ಅಸ್ತಿತ್ವದಲ್ಲಿದ್ದರೆ, ಕ್ಲೌಡ್ ಡೆಕ್ ಎಂದು ಕರೆಯುವ ವಾತಾವರಣದ ಈ ಪದರದಲ್ಲಿ ಮಾತ್ರ ಎಂದು ವಿಜ್ಞಾನಿಗಳು ಸಾಕಷ್ಟು ವಾದವಿವಾದಗಳೊಂದಿಗೆ ಊಹಿಸಿದ್ದಾರೆ. ಪ್ರಸಕ್ತ ಸಂಶೋಧನಾ ತಂಡವು ಈ ಕ್ಲೌಡ್ ಡೆಕ್ ಪದರದಲ್ಲಿ ಫಾಸ್ಫೈನ್ ಸಂಕೇತಗಳನ್ನು ಗಮನಿಸಿದ್ದಾರೆ. ‘‘ಈ ಪ್ರದೇಶವು ವಾಸಯೋಗ್ಯವಾಗಿದೆ ಎಂದು ಇತರರು ಊಹಿಸಿರುವ ಸ್ಥಳದಲ್ಲಿ ಈ ಫಾಸ್ಫೈನ್ ಸಿಗ್ನಲ್ ಸಂಪೂರ್ಣವಾಗಿ ಸ್ಥಾನದಲ್ಲಿದೆ’’ ಎಂದು ತಂಡದ ಸದಸ್ಯ ಪೆಟ್ಕೋವಿಸ್ಕಿ ಹೇಳುತ್ತಾರೆ.

ಗ್ರೀವ್ಸ್ ಮತ್ತು ಅವರ ತಂಡವು ಮೊದಲು ಫಾಸ್ಫೈನ್ ಪತ್ತೆಹಚ್ಚುವಿಕೆಯನ್ನು ಮಾಡಿತು. ಫಾಸ್ಫೈನ್ ಇರುವಿಕೆಯನ್ನು ಸೂಚಿಸುವ ಮಾದರಿಯನ್ನು ಗಮನಿಸಿದಾಗ ಬೇರೆ ಬೇರೆ ತಂತ್ರಜ್ಞರು ಮತ್ತು ತಜ್ಞರೊಂದಿಗೆ ಚರ್ಚೆ ಶುರುವಾಯಿತು. ಆರಂಭದಲ್ಲಿ ಫಾಸ್ಫೈನ್ ಅನ್ನು ಹೆಚ್ಚು ದೂರದಲ್ಲಿರುವ ಗ್ರಹಗಳಲ್ಲಿ ಜೈವಿಕ ಮಾದರಿಯಾಗಿ ಹುಡುಕಬಹುದು ಎಂದು ಖಗೋಳಶಾಸ್ತ್ರಜ್ಞರು ಊಹಿಸಿದರು. ನಂತರ ಗ್ರೀವ್ಸ್ ತಂಡವು ಗಮನಿಸಿದ ಬೆಳಕಿನ ಮಾದರಿಯು ಶುಕ್ರದ ಯಾವ ಮೋಡಗಳೊಳಗೆ ಫಾಸ್ಫೈನ್ ಅನಿಲವನ್ನು ಹೊರಸೂಸುತ್ತದೆ ಎಂಬುದನ್ನು ದೃಢಪಡಿಸಿತು. ಆನಂತರದಲ್ಲಿ ಸಂಶೋಧಕರು ಕ್ಯೋಟೋ ಸಾಂಗ್ಯೋ ವಿಶ್ವವಿದ್ಯಾನಿಲಯದ ಹಿಡಿಯೊ ಸಾಗವಾ ಅಭಿವೃದ್ಧಿಪಡಿಸಿದ ಶುಕ್ರ ವಾತಾವರಣದ ಮಾದರಿ ಸಂಗ್ರಹಿಸಿದ ಮಾಹಿತಿಗಳನ್ನು ಅರ್ಥೈಸಲು ಬಳಸಿದರು. ಶುಕ್ರನ ಮೇಲಿನ ಫಾಸ್ಫೈನ್ ಒಂದು ಸಣ್ಣ ಅನಿಲವಾಗಿದ್ದು, ವಾತಾವರಣದಲ್ಲಿರುವ ಪ್ರತೀ ಶತಕೋಟಿ ಅಣುಗಳಲ್ಲಿ ಸುಮಾರು ೨೦ರಷ್ಟು ಸಾಂದ್ರತೆಯಲ್ಲಿದೆ ಎಂದು ಅವರು ಕಂಡುಕೊಂಡರು. ಆ ಸಾಂದ್ರತೆಯು ಕಡಿಮೆಯಾದರೂ, ಭೂಮಿಯ ಮೇಲಿನ ಜೀವದಿಂದ ಉತ್ಪತ್ತಿಯಾಗುವ ಫಾಸ್ಫೈನ್ ವಾತಾವರಣದಲ್ಲಿ ಇನ್ನೂ ಕಡಿಮೆ ಸಾಂದ್ರತೆಗಳಲ್ಲಿ ಕಂಡುಬರುತ್ತದೆ ಎಂದು ಸಂಶೋಧಕರು ಸೂಚಿಸುತ್ತಾರೆ.

ಬೈನ್ಸ್ ಮತ್ತು ಪೆಟ್ಕೊವಿಸ್ಕಿ ನೇತೃತ್ವದ ಸಂಶೋಧನಾ ತಂಡವು, ಶುಕ್ರನ ಕಠಿಣ ಪರಿಸರದಲ್ಲಿ ಫಾಸ್ಫೈನ್ ಅನ್ನು ಉತ್ಪಾದಿಸುವ ಜೀವಕ್ಕೆ ಸಂಬಂಧಿಸದ ಎಲ್ಲಾ ಸಂಭಾವ್ಯ ರಾಸಾಯನಿಕ ಮತ್ತು ಭೌತಿಕ ಮಾರ್ಗಗಳನ್ನು ಅನ್ವೇಷಿಸಲು ಕಂಪ್ಯೂಟರ್ ಮಾದರಿಗಳನ್ನು ಬಳಸಿತು. ಸೂರ್ಯನ ಬೆಳಕು, ಮೇಲ್ಮೈ ಖನಿಜಗಳು, ಜ್ವಾಲಾಮುಖಿ ಚಟುವಟಿಕೆ, ಉಲ್ಕಾಪಾತ ಮತ್ತು ಮಿಂಚು ಮುಂತಾದ ಫಾಸ್ಫೈನ್ ಅನ್ನು ಉತ್ಪಾದಿಸುವ ವಿವಿಧ ಸನ್ನಿವೇಶಗಳನ್ನು ಬೈನ್ಸ್ ಪರಿಗಣಿಸಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಪಾಲ್ ರಿಮ್ಮರ್ ಜೊತೆಗೆ ರಂಜನ್ ಅವರು ಈ ಕಾರ್ಯವಿಧಾನಗಳ ಮೂಲಕ ಉತ್ಪತ್ತಿಯಾಗುವ ಫಾಸ್ಫೈನ್ ಶುಕ್ರದ ಮೋಡಗಳಲ್ಲಿ ಹೇಗೆ ಶೇಖರಗೊಳ್ಳಬಹುದು ಎಂಬುದನ್ನು ನಿರೂಪಿಸಿದರು. ಅವರು ಪರಿಗಣಿಸಿದ ಪ್ರತಿಯೊಂದು ಸನ್ನಿವೇಶದಲ್ಲೂ, ಹೊಸ ಅವಲೋಕನಗಳ ಸಹಾಯದಿಂದ ಶುಕ್ರನ ಮೋಡಗಳ ಮೇಲೆ ಉತ್ಪತ್ತಿಯಾಗುವ ಒಂದು ಸಣ್ಣ ಭಾಗದಲ್ಲಿ ಮಾತ್ರ ಫಾಸ್ಫೈನ್ ಅಲ್ಪಪ್ರಮಾಣವನ್ನು ಹೊಂದಿದೆ ಎಂಬುದನ್ನು ತಿಳಿದುಕೊಂಡರು. ನಾವು ನಿಜವಾಗಿಯೂ ಶಿಲಾ ಗ್ರಹವಾದ ಶುಕ್ರನಲ್ಲಿ ಫಾಸ್ಫೈನ್ ಅನ್ನು ಉತ್ಪಾದಿಸುವ ಎಲ್ಲಾ ಸಂಭಾವ್ಯ ಮಾರ್ಗಗಳ ಮೂಲಕ ಸಂಶೋಧನೆ ಮಾಡಿದೆವು. ‘‘ಇದು ಜೀವಿಗಳ ಕುರುಹು ಅಲ್ಲದಿದ್ದರೆ, ಶಿಲಾ ಗ್ರಹಗಳ ಬಗ್ಗೆ ನಮ್ಮ ತಿಳುವಳಿಕೆಯಲ್ಲಿ ತೀವ್ರವಾಗಿ ಕೊರತೆಯಿದೆ ಎಂದರ್ಥ’’ ಎಂದು ಪೆಟ್ಕೋವಿಸ್ಕಿ ಹೇಳುತ್ತಾರೆ. ಹೌದು ಇಂತಹ ಸುಳಿವುಗಳು ಸಿಕ್ಕಾಗಲೂ ನಿಖರವಾದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗಿದ್ದರೆ ಅದು ನಮ್ಮ ತಿಳುವಳಿಕೆಯ ಕೊರತೆಯಲ್ಲವೇ?

ಬಹಳ ಹಿಂದೆ, ಶುಕ್ರವು ಸಾಗರಗಳನ್ನು ಹೊಂದಿತ್ತು ಎಂದು ಭಾವಿಸಲಾಗಿದೆ. ಬಹುಶಃ ಆಗ ಅದು ಭೂಮಿಯಂತೆ ವಾಸಯೋಗ್ಯವಾಗಿರಬಹುದು ಎಂಬ ಅನುಮಾನವೂ ಕಾಡುತ್ತಿದೆ. ಶುಕ್ರನಲ್ಲಿ ದ್ರವ ಮಾಧ್ಯಮವಿದೆ. ಆದರೆ ಅದು ಭೂಮಿಯಲ್ಲಿರುವಂತೆ ನೀರಲ್ಲ. ಹೀಗೆ ಕೆಲವು ಅನಿಶ್ಚಿತ ಸಂಗತಿಗಳು ಅಲ್ಲಿ ಜೀವಿ ಹಾಗೂ ಜೀವನದ ಕುರಿತ ನಿರ್ಧಾರ ಕೈಗೊಳ್ಳಲು ಅಡ್ಡಿಗಳಾಗಿವೆ. ಆದಾಗ್ಯೂ ಸಂಶೋಧನಾ ತಂಡದ ಸೌಸಾ ಸಿಲ್ವಾ ಅವರು ಇತರ ದೂರದರ್ಶಕಗಳೊಂದಿಗೆ ಫಾಸ್ಫೈನ್ ಪತ್ತೆಯನ್ನು ದೃಢೀಕರಿಸಲು ಮತ್ತಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಜೀವನಕ್ಕೆ ಸಂಬಂಧಿಸಿದ ಚಟುವಟಿಕೆಯನ್ನು ಸೂಚಿಸುವ ಸಂಕೇತದಲ್ಲಿ ದೈನಂದಿನ ಅಥವಾ ಕಾಲೋಚಿತ ವ್ಯತ್ಯಾಸಗಳಿವೆಯೇ ಎಂದು ನೋಡಲು ಶುಕ್ರನ ವಾತಾವರಣದಾದ್ಯಂತ ಫಾಸ್ಫೈನ್ ಅಣುವಿನ ಉಪಸ್ಥಿತಿಯನ್ನು ನಕ್ಷೆ ಮಾಡಲು ಅವರು ಆಶಿಸುತ್ತಿದ್ದಾರೆ.

‘‘ತಾಂತ್ರಿಕವಾಗಿ, ಜೈವಿಕ ಅಣುಗಳು ಮೊದಲು ಶುಕ್ರನ ವಾತಾವರಣದಲ್ಲಿ ಕಂಡುಬಂದಿವೆ. ಆದರೆ ಈ ಅಣುಗಳು ಜೀವಕ್ಕಿಂತ ಸಾವಿರ ಸಂಗತಿಗಳೊಂದಿಗೆ ಸಂಬಂಧ ಹೊಂದಿವೆ. ಜೀವವಿಲ್ಲದೆ ಶಿಲಾ ಗ್ರಹಗಳಲ್ಲಿ ಫಾಸ್ಫೈನ್ ಅನ್ನು ತಯಾರಿಸುವುದು ತುಂಬಾ ಕಷ್ಟ. ನಾವು ಫಾಸ್ಫೈನ್ ಅನ್ನು ಕಂಡುಕೊಂಡ ಭೂಮಿಯ ಏಕೈಕ ಗ್ರಹವಾಗಿದೆ. ಏಕೆಂದರೆ ಇಲ್ಲಿ ಇಲ್ಲಿಯವರೆಗೂ ಜೀವವಿದೆ. ಅದರಂತೆ ಶುಕ್ರನಲ್ಲಿ ಸಹ ಫಾಸ್ಫೈನ್ ಕಂಡು ಬಂದಿರುವುದರಿಂದ ಈ ಹಿಂದೆ ಅಲ್ಲಿಯೂ ಜೀವಿಗಳು ಇರಬಹುದು ಎಂಬ ಕಲ್ಪನೆಗೆ ಕಿಡಿಯನ್ನು ಹೊತ್ತಿಸಿದೆ’’ ಎಂದು ಸೌಸಾ ಸಿಲ್ವಾ ಹೇಳುತ್ತಾರೆ.

ಶುಕ್ರಗ್ರಹದಲ್ಲಿ ಮೂಲ ಫಾಸ್ಫೈನ್ ಪತ್ತೆಗಾಗಿ ಗ್ರೀವ್ಸ್ ಮತ್ತು ಅವರ 18 ಸಹ ಲೇಖಕರು ಎರಡು ದೂರದರ್ಶಕಗಳ ಫಲಿತಾಂಶಗಳನ್ನು ಸೇರಿಸಿದ್ದಾರೆ. ೨೦೧೭ರಲ್ಲಿ ಹವಾಯಿಯ ಮೌನಾಕಿಯಾದಲ್ಲಿರುವ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್ ಟೆಲಿಸ್ಕೋಪ್ ಮೂಲಕ ಶುಕ್ರವನ್ನು ವೀಕ್ಷಿಸಿದ್ದರು. ನಂತರ ೨೦೧೯ರಲ್ಲಿ ಉತ್ತರ ಚಿಲಿಯ ಅಟಕಾಮಾ ಲಾರ್ಜ್ ಮಿಲಿಮೀಟರ್/ಸಬ್‌ಮಿಲಿಮೀಟರ್ ಅರೇಯಲ್ಲಿನ ರೇಡಿಯೊ ಟೆಲಿಸ್ಕೋಪ್ ಸಿಸ್ಟಮ್‌ನ ಮಾಹಿತಿಯನ್ನು ಸಂಗ್ರಹಿಸಿದೆ.

೨೦೨೦ರ ಬೇಸಿಗೆಯಲ್ಲಿ ಜೇಮ್ಸ್ ಕ್ಲಾರ್ಕ್ ಮ್ಯಾಕ್‌ವೆಲ್ ಟೆಲಿಸ್ಕೋಪ್ ಮೂಲಕ ಮತ್ತೊಮ್ಮೆ ಫಾಸ್ಫೈನ್ ಅನ್ನು ನೋಡಿರುವ ಬಗ್ಗೆ ಗ್ರೀವ್ಸ್ ತಂಡ ವರದಿ ಮಾಡಿದೆ. ಅದು ದೂರದರ್ಶಕದಲ್ಲಿ ವಿಭಿನ್ನ ವಿಜ್ಞಾನ ಉಪಕರಣವನ್ನು ಬಳಸಿ ಪರಿಶೀಲನೆ ಮಾಡಿದೆ. ಅಂದರೆ ಎರಡು ವಿಭಿನ್ನ ವೀಕ್ಷಣಾಲಯಗಳಲ್ಲಿ ಮೂರು ವಿಭಿನ್ನ ದೂರದರ್ಶಕ ಉಪಕರಣಗಳನ್ನು ಬಳಸಿಕೊಂಡು ಮೂರು ವಿಭಿನ್ನ ಹಂತಗಳಲ್ಲಿ ಫಾಸ್ಫೈನ್ ಅನ್ನು ನೋಡಲಾಗಿದೆ.

ಗ್ರೀವ್ಸ್ ಅವರು ತಮ್ಮ ಸಹೋದ್ಯೋಗಿಗಳಿಗೆ 2022 ಮತ್ತು 2023ರಲ್ಲಿ ಶುಕ್ರವನ್ನು ಜೇಮ್ಸ್ ಕ್ಲಾರ್ಕ್ ಮ್ಯಾಕ್‌ವೆಲ್ ಟೆಲಿಸ್ಕೋಪ್ ಮೂಲಕ ವೀಕ್ಷಿಸಲು 200 ಗಂಟೆಗಳ ಕಾಲ ಸಮಯವನ್ನು ನೀಡಿದ್ದಾರೆ. ಈ ಅವಧಿಯಲ್ಲಿ ಅವರು ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಸೂರ್ಯ ಮತ್ತು ಚಂದ್ರನ ನಂತರ ಶುಕ್ರವು ಆಕಾಶದಲ್ಲಿ ಪ್ರಕಾಶಮಾನವಾದ ವಸ್ತುವಾಗಿದೆ. ಫಾಸ್ಫೈನ್‌ನಂತಹ ಮಸುಕಾದ ಸಂಕೇತವನ್ನು ಟೆಲಿಸ್ಕೋಪ್ ಮೂಲಕ ಹುಡುಕುವುದು ಸೂರ್ಯನ ಮುಂದೆ ಮಿಂಚುಹುಳವನ್ನು ಹುಡುಕುವಂತಿದೆ. ಇದು ಮೂಲ ಫಾಸ್ಫೈನ್ ಸಂಶೋಧನೆಗಳಿಗೆ ಸಂಕ್ಷಿಪ್ತ ಕಾರ್ಯಾಚರಣೆಯಾಗಿದೆ. ವಿಶ್ಲೇಷಣಾ ಮಾಹಿತಿಯನ್ನು ಮರುಮಾಪನ ಮಾಡಬೇಕಾಗಿತ್ತು. ಏಕೆಂದರೆ ದೂರದರ್ಶಕವನ್ನು ಅಂತಹ ಪ್ರಕಾಶಮಾನವಾದ ವಸ್ತುಗಳನ್ನು ನೋಡಲು ಬಳಸಲಾಗುವುದಿಲ್ಲ. ಎಚ್ಚರಿಕೆಯ ದತ್ತಾಂಶ ಸಂಸ್ಕರಣೆಯೊಂದಿಗೆ ಮಾತ್ರ ಫಾಸ್ಫೈನ್ ಸಿಗ್ನಲ್ ಹೊರಹೊಮ್ಮುತ್ತದೆ ಮತ್ತು ವಿಜ್ಞಾನಿಗಳು ತಾವು ನೋಡುತ್ತಿರುವುದು ನಿಜವೇ ಎಂದು ಪರಿಶೀಲಿಸಲು ಜಾಗರೂಕರಾಗಿರಬೇಕು.

ಮತ್ತೊಂದು ಸಂಭಾವ್ಯ ಸಮಸ್ಯೆಯೆಂದರೆ ಸಲ್ಫರ್ ಡೈಆಕ್ಸೈಡ್‌ನಂತಹ ಕೆಲವು ಅಣುಗಳು ಫಾಸ್ಫೈನ್‌ನಂತೆ ಕಾಣುವ ಸಂಕೇತಗಳನ್ನು ಹೊಂದಿರುತ್ತವೆ. ಈ ಕಾರಣಕ್ಕಾಗಿ ಗ್ರೀವ್ಸ್ ಮತ್ತು ಅವರ ತಂಡವು ತಮ್ಮ ಮಾಹಿತಿಯನ್ನು ಮರು ವಿಶ್ಲೇಷಿಸಿದ್ದಾರೆ. ಸಲ್ಫರ್ ಡೈಆಕ್ಸೈಡ್ ಫಾಸ್ಫೈನ್ ಸಿಗ್ನಲ್ ಅನ್ನು ವರ್ಧಿಸುತ್ತದೆಯಾದರೂ, ಅವರು ನಿಜವಾಗಿ ಗಮನಿಸಿದ ಪರಿಣಾಮಕ್ಕೆ ಹೋಲಿಸಿದರೆ ಪರಿಣಾಮವು ಚಿಕ್ಕದಾಗಿದೆ ಎಂದು ಕಂಡುಹಿಡಿದಿದೆ.

ಅದೇನೇ ಇರಲಿ. ಶುಕ್ರ ಗ್ರಹದಲ್ಲಿನ ಫಾಸ್ಫೈನ್‌ನ್ನು ಪತ್ತೆ ಹಚ್ಚಲು ಅನೇಕ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಅದರಲ್ಲಿ ಈಗಾಗಲೇ ನಭಕ್ಕೆ ಹಾರಿದ ಜೇಮ್ಸ್ ವೆಬ್ ಸ್ಪೇಸ್ ಸೆಟಲೈಟ್ ಇತರ ಗ್ರಹಗಳಲ್ಲಿ ನೀರು, ಮಿಥೇನ್ ಮತ್ತು ಫಾಸ್ಫೈನ್ ಹುಡುಕಾಟದಲ್ಲಿದೆ. ಇದಲ್ಲದೆ  ಭವಿಷ್ಯದಲ್ಲಿ ಇನ್ನಿತರ ನೌಕೆಗಳು ಶುಕ್ರನಲ್ಲಿ ಫಾಸ್ಫೈನ್‌ನ್ನು ಹುಡುಕಲಿವೆ.

ರಾಕೆಟ್ ಲ್ಯಾಬ್ ಉಡಾವಣಾ ವಾಹನ ಸಂಸ್ಥೆಯು 2023 ರಲ್ಲಿ ಫಾಸ್ಫೈನ್ ಅನ್ನು ಹುಡುಕಲು ಶುಕ್ರಗ್ರಹಕ್ಕೆ ಮೊದಲ ಖಾಸಗಿ ಕಾರ್ಯಾಚರಣೆ ನಡೆಸಲು ಯೋಜಿಸಿದೆ. ಈ ಹುಡುಕಾಟದಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಭಾರತವು 2024ರಲ್ಲಿ ಶುಕ್ರಯಾನ್-೧ ಅನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಅದು ಶುಕ್ರನಲ್ಲಿನ ಫಾಸ್ಫೈನ್ ಅನ್ನು ಪತ್ತೆಹಚ್ಚಲು ಸಾಧ್ಯವಾಗುವ ಸಾಧನವನ್ನು ಒಳಗೊಂಡಿರುತ್ತದೆ.  2028ರ ಆರಂಭದಲ್ಲಿ ನಾಸಾವು DAVINCIಪ್ರಾರಂಭಿಸಲಿದೆ. ಅದು ಶುಕ್ರನ ವಾತಾವರಣವನ್ನು ಅನ್ವೇಷಿಸುತ್ತದೆ. 2028ರಲ್ಲಿ ನಾಸಾವು VERITAS ಯೋಜನೆಯನ್ನು  ಪ್ರಾರಂಭಿಸಲಿದೆ. ಇದು ಶುಕ್ರನ ಮೇಲ್ಮೈಯನ್ನು ನಕ್ಷೆ ಮಾಡಲು ರಾಡಾರ್ ಅನ್ನು ಬಳಸುತ್ತದೆ. ಫಾಸ್ಫೈನ್ ಅನ್ನು ನೇರವಾಗಿ ಹುಡುಕುವ ನಿರೀಕ್ಷೆಯಿಲ್ಲದಿದ್ದರೂ, ಬಾಹ್ಯಾಕಾಶ ನೌಕೆಯು ವಿಜ್ಞಾನಿಗಳಿಗೆ ಗ್ರಹದ ಜ್ವಾಲಾಮುಖಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ೨೦೨೮ರಲ್ಲಿ ಯುಎಇಯ ಬಹು ಕ್ಷುದ್ರಗ್ರಹ ಮಿಷನ್ ಉಡಾವಣೆಯಾಗಲಿದೆ. ಅದು ಶುಕ್ರನ ಫ್ಲೈಬೈ ಅನ್ನು ಒಳಗೊಂಡಿದೆ. ಆದರೆ ಈ ಬಾಹ್ಯಾಕಾಶ ನೌಕೆಯು ಫಾಸ್ಫೈನ್ ಇರುವಿಕೆಯನ್ನು ಪತ್ತೆಹಚ್ಚಬಹುದೇ ಎಂಬುದು ಸ್ಪಷ್ಟವಾಗಿಲ್ಲ. ೨೦೩೧ಕ್ಕಿಂತ ಮುಂಚೆ ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಎನ್‌ವಿಷನ್ ಮಿಷನ್ ಶುಕ್ರನ ವಾತಾವರಣ ಮತ್ತು ಗ್ರಹದ ಒಟ್ಟಾರೆ ರಚನೆಯನ್ನು ತನಿಖೆ ಮಾಡಲಿದೆ. ಇದು ಶುಕ್ರನ ಜ್ವಾಲಾಮುಖಿಗಳನ್ನು ಮ್ಯಾಪಿಂಗ್ ಮಾಡುವ ಮೂಲಕ ಫಾಸ್ಫೈನ್ ಹುಡುಕಾಟಕ್ಕೆ ಸಹಾಯ ಮಾಡುತ್ತದೆ. ಹೀಗೆ ವಿವಿಧ ಸಂಶೋಧನೆಗಳ ಮೂಲಕ ಶುಕ್ರಗ್ರಹದಲ್ಲಿ ಜೀವಿಗಳು ಹಾಗೂ ಜೀವನದ ಕುರುಹುಗಳ ಬಗ್ಗೆ ಇನ್ನಷ್ಟು ಮಾಹಿತಿಗಳು ಲಭ್ಯವಾಗುತ್ತವೆ. ಮಾಹಿತಿ ಲಭ್ಯವಾಗುವವರೆಗೂ ಭವಿಷ್ಯಕ್ಕಾಗಿ ನೆಲೆಯ ಹುಡುಕಾಟ ಪ್ರಕ್ರಿಯೆಗಳು ನಿಲ್ಲದಿರಲಿ. ಅಲ್ಲವೇ?

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News