ನ್ಯಾಯಾಧೀಶರ ಕುರಿತಂತೆ ಹೀಗೊಂದು ಅಧ್ಯಯನ
ಕಳೆದ 25 ವರ್ಷಗಳಲ್ಲಿ ಶೇ.8ಕ್ಕೂ ಕಡಿಮೆ ಹೈಕೋರ್ಟ್ ನ್ಯಾಯಾಧೀಶರು ಮಹಿಳೆಯರಾಗಿದ್ದಾರೆ,ಭಾರತದಲ್ಲಿ ಅರ್ಧಕ್ಕೂ ಅಧಿಕ ಹೈಕೋರ್ಟ್‌ಗಳು ಮಹಿಳಾ ನ್ಯಾಯಾಧೀಶರನ್ನು ಹೊಂದಿರಲಿಲ್ಲ ಮತ್ತು ಇದೇ ಅವಧಿಯಲ್ಲಿ ಕೇವಲ ನಾಲ್ವರು ಹೈಕೋರ್ಟ್ ಮಹಿಳಾ ನ್ಯಾಯಾಧೀಶರು ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡಿದ್ದಾರೆ ಎನ್ನುವುದನ್ನು ದೇಶದಲ್ಲಿಯ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರ ಕುರಿತು ನಡೆಸಲಾದ ಅಧ್ಯಯನವೊಂದು ತೋರಿಸಿದೆ.
ನ್ಯಾಯಾಧೀಶರ ಜಾತಿ ಮತ್ತು ಧರ್ಮಗಳ ಕುರಿತು ಮಾಹಿತಿ ಲಭ್ಯವಾಗಿಲ್ಲ.
ಅಗಾಮಿ, ಸಿವಿಕ್‌ಡಾಟಾಲ್ಯಾಬ್‌ನಂತಹ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ‘ನಿಮ್ಮ ಹೈಕೋರ್ಟ್ ನ್ಯಾಯಾಧೀಶರನ್ನು ತಿಳಿದುಕೊಳ್ಳಿ’ ಎಂಬ ಅಧ್ಯಯನ ವರದಿಯನ್ನು ಇತ್ತೀಚೆಗೆ ಒಡಿಶಾದ ಕಟಕ್‌ನ ನ್ಯಾಷನಲ್ ಲಾ ಯುನಿವರ್ಸಿಟಿಯ ಘಟಿಕೋತ್ಸವದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಯು.ಯು. ಲಲಿತ್ ಅವರು ಬಿಡುಗಡೆಗೊಳಿಸಿದ್ದಾರೆ.
ಅಧ್ಯಯನಕ್ಕಾಗಿ ಮಾಹಿತಿಗಳನ್ನು ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯ ಹಾಗೂ ನ್ಯಾಯಮಂಡಳಿಗಳು ಸೇರಿದಂತೆ ಇತರ ನ್ಯಾಯಾಂಗ ಸಂಸ್ಥೆಗಳ ವೆಬ್‌ಸೈಟ್‌ಗಳಿಂದ ಸಂಗ್ರಹಿಸಲಾಗಿತ್ತು. 1993ರಲ್ಲಿ ಕೊಲಿಜಿಯಂ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ನಂತರ ನೇಮಕಗೊಂಡ ನ್ಯಾಯಾಧೀಶರನ್ನು ಮಾತ್ರ ಅಧ್ಯಯನಕ್ಕೆ ಪರಿಗಣಿಸಲಾಗಿತ್ತು. ಹಿನ್ನೆಲೆಯ ಮಾಹಿತಿ, ಶೈಕ್ಷಣಿಕ ಮಾಹಿತಿ, ನ್ಯಾಯಾಂಗ ನೇಮಕಾತಿಯ ಮೊದಲಿನ ಅನುಭವ ಮತ್ತು ನ್ಯಾಯಾಂಗ ನೇಮಕಾತಿಗಳು; ಈ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಗಮನವನ್ನು ಕೇಂದ್ರೀಕರಿಸಲಾಗಿತ್ತು.
ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದವರು ಮತ್ತು ಬಾರ್ (ವಕೀಲರ ಸಂಘ) ಸದಸ್ಯರಾದ ಹಿರಿಯ ವಕೀಲರನ್ನು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಲಾಗುತ್ತದೆ ಮತ್ತು ಈ ಎರಡೂ ವರ್ಗಗಳಿಗೆ ಸೇರಿದವರನ್ನು ಸಮಾನ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗುತ್ತದೆ.
ಆದಾಗ್ಯೂ ಈ ನ್ಯಾಯಾಧೀಶರ ಪದೋನ್ನತಿಯ ವಿಷಯದಲ್ಲಿ ಇದು ಬದಲಾಗುತ್ತದೆ. ಅಧೀನ ನ್ಯಾಯಾಂಗದಿಂದ ಬಂದವರಿಗಿಂತ ಬಾರ್ ಮೂಲಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ಹಿರಿಯ ವಕೀಲರು ಮುಖ್ಯ ನ್ಯಾಯಾಧೀಶರ ಹುದ್ದೆಗೆ ಏರುವ ಸಾಧ್ಯತೆಗಳು ಹೆಚ್ಚು. ದತ್ತಾಂಶಗಳು ಲಭ್ಯವಿರುವ, ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡ 64 ಹೈಕೋರ್ಟ್ ನ್ಯಾಯಾಧೀಶರ ಪೈಕಿ ಕೇವಲ ಇಬ್ಬರು ಅಧೀನ ನ್ಯಾಯಾಂಗದಿಂದ ಭಡ್ತಿ ಪಡೆದವರಾಗಿದ್ದಾರೆ.
ಬಾರ್‌ನಿಂದ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡವರು ಅಧೀನ ನ್ಯಾಯಾಂಗದ ಮೂಲಕ ನೇಮಕಗೊಂಡವರಿಗಿಂತ ಕಿರಿಯ ವಯಸ್ಸಿನವರಾಗಿರುತ್ತಾರೆ ಎನ್ನುವುದು ಇದಕ್ಕೆ ಕಾರಣವಾಗಿರಬಹುದು. ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳ್ಳುವಾಗ ಅಧೀನ ನ್ಯಾಯಾಂಗದಿಂದ ಬಂದವರ ಸರಾಸರಿ ವಯಸ್ಸು 50 ವರ್ಷವಾಗಿದ್ದರೆ, ಎರಡನೇ ವರ್ಗದಲ್ಲಿ ಅದು ಸರಾಸರಿ 57 ವರ್ಷವಾಗಿರುತ್ತದೆ. ಹೀಗಾಗಿ ಬಾರ್‌ನಿಂದ ನೇಮಕಗೊಂಡವರು ಉನ್ನತ ಹುದ್ದೆಗಳಿಗೇರಲು ಹೆಚ್ಚಿನ ಸೇವಾವಧಿಯನ್ನು ಹೊಂದಿರುತ್ತಾರೆ.
ಹೈಕೋರ್ಟ್‌ಗಳಿಗೆ ನೇಮಕಗೊಂಡ ನ್ಯಾಯಾಧೀಶರ ಪೈಕಿ ಮೂರನೇ ಒಂದು ಭಾಗ ಸರಕಾರಿ ವಕೀಲರಾಗಿ ಸೇವೆ ಸಲ್ಲಿಸಿರುತ್ತಾರೆ ಮತ್ತು ಉನ್ನತ ಹುದ್ದೆಗಳಲ್ಲಿ ಅವರ ಪ್ರಾತಿನಿಧ್ಯ ಹೆಚ್ಚು. ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡ ಅಥವಾ ಸರ್ವೋಚ್ಚ ನ್ಯಾಯಾಲಯಕ್ಕೆ ಪದೋನ್ನತಿಗೊಂಡವರಲ್ಲಿ ಮೂರನೇ ಎರಡಷ್ಟು ಜನರು ಸರಕಾರಿ ವಕೀಲರಾಗಿ ಅಥವಾ ಸಾರ್ವಜನಿಕ ಕ್ಷೇತ್ರಗಳ ಉದ್ಯಮಗಳ ಅಥವಾ ಶಾಸನಬದ್ಧ ಸಂಸ್ಥೆಗಳ ವಕೀಲರಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ. ಹೈಕೋರ್ಟ್‌ಗೆ ನೇಮಕಗೊಂಡ ಕನಿಷ್ಠ 80 ನ್ಯಾಯಾಧೀಶರು ವಕೀಲರಾಗಿ ತಮ್ಮ ವೃತ್ತಿ ಜೀವನದಲ್ಲಿ ಖಾಸಗಿ ಕಂಪನಿಗಳನ್ನು ನ್ಯಾಯಾಲಯಗಳಲ್ಲಿ ಪ್ರತಿನಿಧಿಸಿದ್ದರು ಎನ್ನುವುದನ್ನು ಅಧ್ಯಯನವು ತೋರಿಸಿದೆ.