ಸುಭಾಶ್ಚಂದ್ರ ಬೋಸ್‌ರ ಸಿದ್ದಾಂತದ ತಪ್ಪು ಪ್ರತಿಪಾದನೆ
ನಾವೊಂದು ವಿಚಿತ್ರ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಅಧಿಕಾರದಲ್ಲಿರುವ ಜನರು ಇಂದು ಯಾರ ಸಿದ್ಧಾಂತಗಳು ಮತ್ತು ವೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೋ, ಅದೇ ವ್ಯಕ್ತಿಗಳನ್ನು ಬಳಸಿಕೊಂಡು ತಮಗೆ ಮಾನ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬೋಸ್‌ರ ನೆನಪನ್ನು ಜೀವಂತವಾಗಿಡಲು ನೆಹರೂ ಏನೂ ಮಾಡಲಿಲ್ಲ ಎಂಬುದಾಗಿ ಬಿಂಬಿಸುವುದು ಹಸಿ ಹಸಿ ಸುಳ್ಳಾಗಿದೆ.
ಹೊಸದಿಲ್ಲಿಯಲ್ಲಿ ಸೆಪ್ಟಂಬರ್ 8ರಂದು ನೇತಾಜಿ ಸುಭಾಶ್ಚಂದ್ರ ಬೋಸ್‌ರ ಪುತ್ಥಳಿಯನ್ನು ಅನಾವರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ಬೋಸ್ ತೋರಿದ ದಾರಿಯಲ್ಲಿ ಭಾರತ ನಡೆದಿದ್ದರೆ ದೇಶವಿಂದು ತುಂಬಾ ಹೆಚ್ಚು ಅಭಿವೃದ್ಧಿ ಸಾಧಿಸುತ್ತಿತ್ತು ಎಂದು ಹೇಳಿದ್ದಾರೆ. ಆದರೆ ಅವರನ್ನು ಮರೆತು ಬಿಡಲಾಗಿದೆ; ಇಂದು (ಮೋದಿ ಆಡಳಿತದಲ್ಲಿ) ಅವರ ಚಿಂತನೆಗಳನ್ನು ಮರಳಿ ತರಲಾಗುತ್ತಿದೆ ಎಂದು ಅವರು ಹೇಳಿದರು. ತನ್ನ ಸರಕಾರವು ನೇತಾಜಿಯ ನೀತಿಗಳನ್ನು ಅನುಸರಿಸುತ್ತಿದೆ ಎಂದು ಮೋದಿ ಹೇಳಿಕೊಂಡರು.
ಹಾಗಾದರೆ, ಆರ್ಥಿಕ ಬೆಳವಣಿಗೆಯ ವಿಷಯದಲ್ಲಿ ನೇತಾಜಿ ಯವರ ಕಲ್ಪನೆ ಏನಿತ್ತು ನೋಡೋಣ. ಅವರು ಸಮಾಜವಾದಿ ಯಾಗಿದ್ದರು ಹಾಗೂ ಯೋಜನೆಯು ದೇಶದ ಸಮೃದ್ಧಿಯ ಅಡಿಗಲ್ಲು ಎಂಬುದಾಗಿ ನಂಬಿದ್ದರು. ಅವರು 1938ರಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ನ ಅಧ್ಯಕ್ಷರಾದ ಬಳಿಕ ತೆಗೆದುಕೊಂಡ ಪ್ರಮುಖ ನಿರ್ಧಾರಗಳ ಪೈಕಿ, ಆರ್ಥಿಕ ನೀತಿಗಳಿಗೆ ಮಹತ್ವ ನೀಡುವ ನಿರ್ಧಾರವೂ ಒಂದಾಗಿತ್ತು. ಪ್ರಸ್ತಾವಿತ ರಾಷ್ಟ್ರೀಯ ಯೋಜನಾ ಸಮಿತಿಯ ಮುಖ್ಯಸ್ಥ ಹುದ್ದೆಯನ್ನು ಅವರು ಜವಾಹರಲಾಲ್ ನೆಹರೂಗೆ ನೀಡಿದರು ಹಾಗೂ ಹುದ್ದೆ ಯನ್ನು ಸ್ವೀಕರಿಸುವಂತೆ ಕೋರಿ ಅವರಿಗೆ ಪತ್ರವೊಂದನ್ನು ಬರೆದರು. ‘‘ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ನೀವು ಸ್ವೀಕರಿಸುತ್ತೀರಿ ಎಂದು ನಾನು ಆಶಿಸುತ್ತೇನೆ. ಅದು ಯಶಸ್ವಿಯಾಗಬೇಕಾದರೆ ನೀವು ಅದನ್ನು ವಹಿಸಿಕೊಳ್ಳಲೇಬೇಕು’’ ಎಂಬುದಾಗಿ ಆ ಪತ್ರದಲ್ಲಿ ಬರೆಯಲಾಗಿತ್ತು. ತನ್ನದೇ ಸಿದ್ಧಾಂತ ಹೊಂದಿರುವ ಸ್ನೇಹಿತನಿಂದ ಬಂದ ಕೊಡುಗೆಯನ್ನು ನೆಹರೂ ಸ್ವೀಕರಿಸಿದರು ಮಾತ್ರವಲ್ಲ, ಸ್ವತಂತ್ರ ಭಾರತದಲ್ಲೂ ಅದನ್ನು ಮುಂದುವರಿಸಿದರು.
ಇದೇ ಮಾದರಿಯಲ್ಲಿ ನೆಹರೂ ಯೋಜನಾ ಆಯೋಗವನ್ನು ಸ್ಥಾಪಿಸಿದರು. ಅದು ದೇಶದ ಆರ್ಥಿಕ ಅಭಿವೃದ್ಧಿಯನ್ನು ಮುನ್ನಡೆಸಿತು. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕವಷ್ಟೇ ಯೋಜನಾ ಆಯೋಗವನ್ನು ರದ್ದುಗೊಳಿಸಲಾಯಿತು ಹಾಗೂ ಅದರ ಸ್ಥಾನಕ್ಕೆ ನೀತಿ ಆಯೋಗವನ್ನು ತರಲಾಯಿತು. ನೀತಿ ಆಯೋಗಕ್ಕೆ ಬೇರೆಯದೇ ಆದ ಗುರಿಗಳನ್ನು ನೀಡಲಾಯಿತು. ಆರ್ಥಿಕ ಯೋಜನೆಯ ಮಟ್ಟಿಗೆ ಹೇಳುವುದಾದರೆ, ಬೋಸ್‌ರ ಕಲ್ಪನೆಯನ್ನು ಮುನ್ನಡೆಸಿಕೊಂಡು ಬಂದವರು ನೆಹರೂ. ಅದನ್ನು ನಿಲ್ಲಿಸಿದವರು ಮೋದಿ.
ನಮ್ಮ ಆರ್ಥಿಕ ಸಮೃದ್ಧಿಯನ್ನು ರೂಪಿಸುವಲ್ಲಿ ಸಾರ್ವಜನಿಕ ರಂಗದ ಉದ್ಯಮಗಳು ಪಾತ್ರ ವಹಿಸುತ್ತವೆ ಎನ್ನುವುದನ್ನು ಮನಗಂಡಿದ್ದು ಬೋಸ್ ಮತ್ತು ನೆಹರೂ. ಆದರೆ, ಈಗ ಅವುಗಳನ್ನು ಒಂದೊಂದಾಗಿ ಖಾಸಗಿಯವರಿಗೆ ವಹಿಸಲಾಗುತ್ತಿದೆ.
ಬ್ರಿಟಿಷ್ ವಿರೋಧಿ ಹೋರಾಟಕ್ಕೆ ಸಂಬಂಧಿಸಿ ಬೋಸ್ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರ ನಡುವೆ ಭಿನ್ನಾಭಿಪ್ರಾಯ ಗಳಿದ್ದವು. ‘ಶತ್ರುವಿನ ಶತ್ರು ನಮ್ಮ ಮಿತ್ರ’ ಎಂಬ ತತ್ವದಂತೆ ಜರ್ಮನಿ- ಜಪಾನ್ ಮಿತ್ರಕೂಟದೊಂದಿಗೆ ಮೈತ್ರಿ ಏರ್ಪಡಿಸಲು ಬೋಸ್ ಬಯಸಿದ್ದರು. ಆದರೆ, ಗಾಂಧೀಜಿ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖ ನಾಯಕರು ಬ್ರಿಟಿಷ್ ವಿರೋಧಿ ಚಳವಳಿಯನ್ನು ಆರಂಭಿಸಲು ಬಯಸಿದ್ದರು. ಒಂದು ರೀತಿಯಲ್ಲಿ, ಜಪಾನೀಯರ ಬೆಂಬಲವನ್ನು ಕೋರುವ ಬೋಸ್‌ರ ಇಚ್ಛೆಯು ವಿಪತ್ತುಕಾರಕ ವಾಗಿತ್ತು. ಎರಡನೇ ಮಹಾಯುದ್ಧದಲ್ಲಿ ಜರ್ಮನಿ-ಜಪಾನ್ ಮಿತ್ರಕೂಟ ಗೆದ್ದಿದ್ದರೆ, ಭಾರತವು ಜಪಾನ್‌ನ ಗುಲಾಮನಾಗುವುದು ಅನಿವಾರ್ಯವಾಗುತ್ತಿತ್ತು.
ಬೋಸ್ ಬಹುತ್ವದಲ್ಲಿ ನಂಬಿಕೆಯನ್ನು ಹೊಂದಿದ್ದರು
ಭಾರತದ ಸಮೃದ್ಧ ಬಹುತ್ವ ಪರಂಪರೆಯಂತೆ, ಗಾಂಧೀಜಿ ಓರ್ವ ಶ್ರೇಷ್ಠ ಹಿಂದೂವಾಗಿ, ಎಲ್ಲಾ ಧರ್ಮಗಳನ್ನು ಭಾರತೀಯ ಧರ್ಮಗಳಾಗಿ ನೋಡಿದರು ಹಾಗೂ ಆ ಧರ್ಮಗಳ ನೈತಿಕ ವೌಲ್ಯಗಳನ್ನು ಸ್ವೀಕರಿಸಿದರು. ನೆಹರೂ ತನ್ನದೇ ರೀತಿಯಲ್ಲಿ, ಗಂಗಾ-ಜಮುನಿ ತೆಹ್ಜೀಬ್ (ಸಂಗಮ ಸಂಸ್ಕೃತಿ)ನ್ನು ಎತ್ತಿಹಿಡಿದರು ಹಾಗೂ ತನ್ನ ಪ್ರಮುಖ ಕೃತಿ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಇದೇ ವಿಷಯವನ್ನು ಕೇಂದ್ರೀಯ ವಸ್ತುವಾಗಿಸಿದರು. ಆ ಪುಸ್ತಕವನ್ನು ಬಳಿಕ ಶ್ಯಾಮ್ ಬೆನಗಲ್ ‘ಭಾರತ್ ಏಕ್ ಖೋಜ್’ ಎಂಬ ಹೆಸರಿನಲ್ಲಿ ಟಿವಿ ಧಾರಾವಾಹಿ ಮಾಡಿದರು.
ಬೋಸ್ ಭಾರತೀಯ ಸಂಸ್ಕೃತಿಯ ಬಹುತ್ವದ ಪ್ರಬಲ ಪ್ರತಿಪಾದಕರಾಗಿದ್ದರು. ‘‘ಇಸ್ಲಾಮ್ ಧರ್ಮದ ಸ್ಥಾಪನೆಯೊಂದಿಗೆ, ಹೊಸ ಸಂಯೋಜನೆಯೊಂದು ಹಂತ ಹಂತವಾಗಿ ರೂಪು ಗೊಂಡಿತು. ಅವರು ಹಿಂದೂಗಳ ಧರ್ಮವನ್ನು ಸ್ವೀಕರಿಸದಿದ್ದರೂ, ಅವರು ಭಾರತವನ್ನು ತಮ್ಮ ಮನೆಯನ್ನಾಗಿ ಮಾಡಿದರು ಹಾಗೂ ಜನರ ಸಾಮಾಜಿಕ ಜೀವನದಲ್ಲಿ, ಅವರ ಸುಖ-ದುಃಖಗಳಲ್ಲಿ ಬೆರೆತರು. ಪರಸ್ಪರ ಸಹಕಾರದ ಮೂಲಕ ಹೊಸ ಕಲೆ ಮತ್ತು ಹೊಸ ಸಂಸ್ಕೃತಿಯೊಂದು ವಿಕಸನಗೊಂಡಿತು....’’ ಎಂಬುದಾಗಿ ಬೋಸ್ ತನ್ನ ‘ಫ್ರೀ ಇಂಡಿಯಾ ಆ್ಯಂಡ್ ಹರ್ ಪ್ರಾಬ್ಲೆಮ್ಸ್’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ‘‘ಭಾರತೀಯ ಮುಸ್ಲಿಮರು ದೇಶದ ಸ್ವಾತಂತ್ರಕ್ಕಾಗಿ ನಿರಂತರವಾಗಿ ಹೋರಾಡಿದ್ದಾರೆ’’ ಎಂಬು ದಾಗಿಯೂ ಅವರು ಬರೆದಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿ, ವ್ಯಕ್ತಿಗಳು ಮತ್ತು ಗುಂಪುಗಳಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರವನ್ನು ಖಾತರಿಪಡಿಸುವ ನೂತನ ದೇಶವೊಂದರ ಕಲ್ಪನೆಯನ್ನೂ ಅವರು ಹೊಂದಿದ್ದರು ಹಾಗೂ ಸರಕಾರಕ್ಕೆ ಧರ್ಮ ಇರಬಾರದು ಎಂದು ಹೇಳಿದ್ದರು.
ಆದರೆ, ಆಡಳಿತಾರೂಢ ಹಿಂದುತ್ವ ಸಿದ್ಧಾಂತವು ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳನ್ನು ‘ವಿದೇಶಿ ಧರ್ಮ’ಗಳಾಗಿ ನೋಡುತ್ತದೆ ಹಾಗೂ ಇಸ್ಲಾಮ್ ಮತ್ತು ಕ್ರೈಸ್ತ ಧರ್ಮಗಳನ್ನು ದ್ವೇಷಿಸಬೇಕೆನ್ನುತ್ತದೆ. ಆದರೆ, ವಿವಿಧ ಧರ್ಮಗಳನ್ನು ದೇಶಕ್ಕೆ ಶಕ್ತಿ ತುಂಬುವ ಅಂಶಗಳಾಗಿ ಗಾಂಧೀಜಿ, ನೆಹರೂ, ಬೋಸ್ ಮತ್ತು ಸ್ವಾತಂತ್ರ ಚಳವಳಿಯ ಹೆಚ್ಚಿನ ನಾಯಕರು ಪರಿಗಣಿಸಿದ್ದರು.
ಬೋಸ್‌ರ ಕೃತ್ಯಗಳೂ ಅವರ ಸಿದ್ಧಾಂತಗಳಿಗೆ ಪೂರಕವಾಗಿದ್ದವು. ತನ್ನ ಸೇನೆಗೆ ಹೆಸರಿಡುವಾಗ, ಅವರು ‘ಆಝಾದ್ ಹಿಂದ್ ಫೌಝ್’ ಎಂಬ ಉರ್ದು ಹೆಸರನ್ನು ಬಳಸಿದರು. ಇದಕ್ಕಾಗಿ ಅವರು ಯಾವುದೇ ಸಂಸ್ಕೃತ ಪದವನ್ನು ಬಳಸಲಿಲ್ಲ. ಇದು ಗಾಂಧೀಜಿಯ ಚಿಂತನೆಗಳಿಗೆ ಅತ್ಯಂತ ಸಮೀಪವಾಗಿದೆ. ಆಝಾದ್ ಹಿಂದ್ ಫೌಝ್‌ನಲ್ಲಿ ಯಾರಿದ್ದರು ಎಂದು ನೋಡಿದಾಗ, ಈ ಅಂಶವು ಇನ್ನಷ್ಟು ಮನದಟ್ಟಾಗುತ್ತದೆ. ಅವರ ಸೇನೆಯಲ್ಲಿ ಲಕ್ಷ್ಮಿ ಸೆಹಗಲ್ ನೇತೃತ್ವದ ರಾಣಿ ಝಾನ್ಸಿ ರೆಜಿಮೆಂಟ್ ಇದ್ದಂತೆಯೇ, ವಿವಿಧ ಧರ್ಮಗಳಿಂದ ಬಂದ ಶಾನವಾಝ್ ಖಾನ್ ಮತ್ತು ದಿಲ್ಲೋನ್ ಕೂಡ ಇದ್ದರು. ಜಾತ್ಯತೀತ ತತ್ವದಲ್ಲಿ ಹೆಚ್ಚಿನ ನಂಬಿಕೆ ಹೊಂದಿದ್ದ ಬೋಸ್ ತನ್ನ ಸೇನೆಯನ್ನು ಅದೇ ಮಾದರಿಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಕಟ್ಟಿದರು.
ನೇತಾಜಿ ಬಗ್ಗೆ ನೆಹರೂ ಗೌರವ
ಸುಭಾಶ್ಚಂದ್ರ ಬೋಸ್ ಸ್ಥಾಪಿಸಿದ ದೇಶಭ್ರಷ್ಟ ಸರಕಾರಕ್ಕೂ ಅರ್ಝಿ ಹುಕೂಮತ್ ಆಝಾದೆ ಹಿಂದ್ ಎಂಬ ಹೆಸರಿಡಲಾಗಿತ್ತು. ಮುಹಮ್ಮದ್ ಝಮನ್ ಕಿಯಾನಿ ಮತ್ತು ಶೌಕತ್ ಅಲಿ, ಬೋಸ್‌ರ ಬಲಗೈ ಬಂಟರಾಗಿದ್ದರು. ಸಿರಿಲ್ ಸ್ಟ್ರಾಸಿ, ಅವರ ಇನ್ನೋರ್ವ ನಂಬಿಗಸ್ತರಾಗಿದ್ದರು.
ಅಲ್ಲಿ ಭ್ರಾತೃತ್ವಕ್ಕೆ ನೀರು ಹಾಕಿ ಪೋಷಿಸಲಾಗಿತ್ತು. ಆದರೆ ಈಗ ಅದನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲಾ ಗುತ್ತಿದೆ. ಧರ್ಮಗಳ ನಡುವಿನ ಸಂವಹನಗಳಿಗೆ ಪೆಟ್ಟು ಹಾಕಲಾಗುತ್ತಿದೆ. ಅಲ್ಪಸಂಖ್ಯಾತ ವಿರೋಧಿ ಕೃತ್ಯಗಳು ಮತ್ತು ಹೇಳಿಕೆಗಳು ಮುನ್ನೆಲೆಗೆ ಬಂದಿವೆ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು-ಮುಸ್ಲಿಮರು ಮಾತ್ರವಲ್ಲ ಕ್ರೈಸ್ತರನ್ನೂ ದ್ವಿತೀಯ ದರ್ಜೆಯ ಪ್ರಜೆಗಳ ಮಟ್ಟಕ್ಕೆ ಇಳಿಸಲಾಗಿದೆ.
ಮುನ್ನಡೆಯಬೇಕಾದ ಹಾದಿಗೆ ಸಂಬಂಧಿಸಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‌ನೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ, ಅವರು ಕ್ವಿಟ್ ಇಂಡಿಯಾ ಚಳವಳಿ ಬಗ್ಗೆ ತುಂಬಾ ಗೌರವ ಹೊಂದಿದ್ದರು. ಆ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಸಾವರ್ಕರ್ ಮತ್ತು ಮುಹಮ್ಮದ್ ಅಲಿ ಜಿನ್ನಾರಿಗೆ ಅವರು ಕರೆ ನೀಡಿದರು. ಆದರೆ, ಇಂದಿನ ಸರಕಾರದ ಮುಖ್ಯಸ್ಥರ ಸೈದ್ಧಾಂತಿಕ ಮಾರ್ಗದರ್ಶಿಗಳಾಗಿರುವ ಸಾವರ್ಕರ್ ಮತ್ತು ಗೋಳ್ವಾಲ್ಕರ್, ಕ್ವಿಟ್ ಇಂಡಿಯಾ ಚಳವಳಿಯನ್ನು ವಿರೋಧಿಸಿದ್ದು ಮಾತ್ರವಲ್ಲ, ಬ್ರಿಟಿಷರಿಗೆ ತಲೆಬಾಗಿ ಅವರಿಗೆ ಸಹಾಯ ಮಾಡಿದರು.
ನಾವೊಂದು ವಿಚಿತ್ರ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ಅಧಿಕಾರದಲ್ಲಿರುವ ಜನರು ಇಂದು ಯಾರ ಸಿದ್ಧಾಂತಗಳು ಮತ್ತು ವೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೋ, ಅದೇ ವ್ಯಕ್ತಿಗಳನ್ನು ಬಳಸಿಕೊಂಡು ತಮಗೆ ಮಾನ್ಯತೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬೋಸ್‌ರ ನೆನಪನ್ನು ಜೀವಂತವಾಗಿಡಲು ನೆಹರೂ ಏನೂ ಮಾಡಲಿಲ್ಲ ಎಂಬುದಾಗಿ ಬಿಂಬಿಸುವುದು ಹಸಿ ಹಸಿ ಸುಳ್ಳಾಗಿದೆ. ನೇತಾಜಿಯ ಇಂಡಿಯನ್ ನ್ಯಾಶನಲ್ ಆರ್ಮಿ (ಐಎನ್‌ಎ)ಗೆ ಸೇರಿದ ಯುದ್ಧಕೈದಿಗಳ ಪರವಾಗಿ ನೆಹರೂ ವಕೀಲರಾಗಿ ನ್ಯಾಯಾಲಯಗಳಲ್ಲಿ ವಾದಿಸಿದರು. ಅಷ್ಟೇ ಅಲ್ಲದೆ, ವಿದೇಶದಲ್ಲಿ ವಾಸಿಸುತ್ತಿದ್ದ ಬೋಸ್‌ರ ಮಗಳಿಗೆ ನಿಯಮಿತವಾಗಿ ನೆರವು ನೀಡುತ್ತಿದ್ದರು. ಇವುಗಳನ್ನು ತನ್ನ ಶ್ರೇಷ್ಠ ಗೆಳೆಯ ಹಾಗೂ ಕಾಮ್ರೇಡ್ ನೇತಾಜಿ ಸುಭಾಶ್ಚಂದ್ರ ಬೋಸ್‌ಗಾಗಿ ನೆಹರೂ ಹೊಂದಿದ್ದ ಗೌರವ ಮತ್ತು ಅಭಿಮಾನದ ದ್ಯೋತಕಗಳನ್ನಾಗಿ ಪರಿಗಣಿಸಬೇಕಾಗಿದೆ.