ಕ್ಷುದ್ರಗ್ರಹಗಳ ಕಕ್ಷಾಪಥ ಬದಲಿಸುವ ಡಾರ್ಟ್

Update: 2022-09-25 05:01 GMT

ಡಾರ್ಟ್‌ನ್ನು ಚಲನ ಪ್ರಭಾವಕ ಎಂದು ಕರೆಯಲಾಗುತ್ತದೆ. ಏಕೆಂದರೆ ಅದು ತನ್ನ ಪ್ರಭಾವದಿಂದ ಅದರ ಆವೇಗ ಮತ್ತು ಚಲನ ಶಕ್ತಿಯನ್ನು ಡೈಮೋರ್ಫೋಸ್‌ಗೆ ವರ್ಗಾಯಿಸುತ್ತದೆ. ಪ್ರತಿಯಾಗಿ ಕ್ಷುದ್ರಗ್ರಹದ ಕಕ್ಷೆಯನ್ನು ಬದಲಾಯಿ ಸುತ್ತದೆ. ಇಲ್ಲಿ ನ್ಯೂಟನ್‌ನ ಚಲನೆಯ ನಿಯಮಗಳು ಬಳಕೆಯಾಗಿರುವುದು ಗಮನಾರ್ಹ.

‘ಅಂತರಿಕ್ಷದ ಅಲೆಮಾರಿಗಳು’ ಎಂದೇ ಬಿಂಬಿತವಾದ ಕ್ಷುದ್ರಗಳು ಮಂಗಳ ಮತ್ತು ಗುರುಗ್ರಹಗಳ ಮಧ್ಯದಲ್ಲಿವೆ. ಆದರೆ ಕೆಲವು ವೇಳೆ ಇವು ಅಂಡಲೆಯುತ್ತಾ ಭೂಮಿಯ ಕಡೆಗೂ ಧಾವಿಸುತ್ತವೆ. ಕೆಲವು ಗಾತ್ರದಲ್ಲಿ 10 ಮೀಟರ್‌ಗಳಿಂದ 1,000 ಕಿ.ಮೀ. ಅಗಲ ಹೊಂದಿವೆ. 1801ರಲ್ಲಿ ಮೊತ್ತಮೊದಲಿಗೆ ಇಟಲಿಯ ಪಿಯಜಿ ಎಂಬ ಖಗೋಳಶಾಸ್ತ್ರಜ್ಞನು ಸಿರಿಸ್ ಎಂಬ ಕ್ಷುದ್ರಗ್ರಹವನ್ನು ಕಂಡುಹಿಡಿದನು. ಇದು ಕ್ಷುದ್ರಗ್ರಹಗಳಲ್ಲೇ ಅತ್ಯಂತ ದೊಡ್ಡ ಕ್ಷುದ್ರಗ್ರಹ. ಸುಮಾರು 40,000ಕ್ಕಿಂತ ಹೆಚ್ಚು ಕ್ಷುದ್ರಗಳು ನಮ್ಮ ಸೌರವ್ಯೆಹದಲ್ಲಿವೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಉಂಡಾಡಿ ಗುಂಡನಂತೆ ಸ್ವತಂತ್ರವಾಗಿ ತಿರುಗಾಡಿಕೊಂಡಿರುವ ಕ್ಷುದ್ರಗ್ರಹಗಳಿಗೆ ಗ್ರಹಗಳಂತೆ ನಿರ್ದಿಷ್ಟ ಕಕ್ಷೆಯಿಲ್ಲ. ಎಲ್ಲೆಂದರಲ್ಲಿ ಅಂಡಲೆಯುವ ಅಲೆಮಾರಿ ಕ್ಷುದ್ರಗ್ರಹಗಳು ಯಾವ ಆಕಾಶಕಾಯ ವನ್ನಾದರೂ ಢಿಕ್ಕಿ ಹೊಡೆಯಬಹುದು. ಹಾಗೆಯೇ ಭೂಮಿಗೂ ಢಿಕ್ಕಿ ಹೊಡೆಯುವ ಸಂಭವ ಇಲ್ಲ ಎನ್ನುವಂತಿಲ್ಲ. ಸೌರವ್ಯೆಹ ನಿರ್ಮಾಣಗೊಂಡಾಗಿನಿಂದ ಇಂದಿನವರೆಗೂ ಕ್ಷುದ್ರಗ್ರಹಗಳು ಭೂಮಿಗೆ ಢಿಕ್ಕಿ ಹೊಡೆಯುತ್ತಲೇ ಇವೆ. ಲಕ್ಷಾಂತರ ವರ್ಷಗಳ ಹಿಂದೆ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಿದ್ದರಿಂದ ಡೈನೋಸಾರ್‌ಗಳ ನಾಶವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಜೂನ್ 30, 1908ರಲ್ಲಿ ಸೈಬೀರಿಯಾದ ತುಂಗಸ್ಕಾ ಪ್ರದೇಶದಲ್ಲಿ 40 ಮೀಟರ್ ವಿಸ್ತಾರದ ಕ್ಷುದ್ರಗ್ರಹವೊಂದು ಅಪ್ಪಳಿಸಿತು. ಇದರ ಪ್ರಭಾವ ಎಷ್ಟಿತ್ತೆಂದರೆ ಲಂಡನ್ ನಗರದಷ್ಟು ಕಾಡು ಪ್ರದೇಶವು ನಾಶವಾಯಿತು.

ಬಹುಪಾಲು ಕ್ಷುದ್ರಗ್ರಹ ಮತ್ತು ಧೂಮಕೇತುಗಳು ಅಪಾಯಕಾರಿ ಅಲ್ಲ. ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು 100-165 ಅಡಿಗಳು (30-50 ಮೀಟರ್) ದೊಡ್ಡದಾಗಿದ್ದರೆ ಮತ್ತು ಸೂರ್ಯನ ಸುತ್ತ ಅವುಗಳ ಕಕ್ಷೆಯು ಭೂಮಿಯ ಕಕ್ಷೆಯಿಂದ ಐದು ಮಿಲಿಯನ್ ಮೈಲುಗಳ (ಎಂಟು ಮಿಲಿಯನ್ ಕಿಲೋಮೀಟರ್) ಒಳಗೆ ಬಂದರೆ, ಅವುಗಳನ್ನು ಸಂಭಾವ್ಯ ಅಪಾಯಕಾರಿ ವಸ್ತುಗಳು ಎಂದು ಪರಿಗಣಿಸಲಾಗುತ್ತದೆ. ನಾಸಾದ ಗ್ರಹಗಳ ರಕ್ಷಣಾ ಕಾರ್ಯತಂತ್ರವು ನೆಲದ ಮೇಲೆ ಮತ್ತು ಬಾಹ್ಯಾಕಾಶದಲ್ಲಿ ದೂರದರ್ಶಕಗಳನ್ನು ಬಳಸಿಕೊಂಡು ಈ ವಸ್ತುಗಳನ್ನು ಪತ್ತೆಹಚ್ಚುವುದು ಮತ್ತು ಟ್ರ್ಯಾಕ್ ಮಾಡುವುದು ಒಳಗೊಂಡಿರುತ್ತದೆ.

ಕ್ಷುದ್ರಗ್ರಹದ ದ್ರವ್ಯರಾಶಿಯನ್ನು ಆಧರಿಸಿ ವೇಗದಲ್ಲಿ ಬದಲಾವಣೆಗಳಿರುತ್ತವೆ. ಕ್ಷುದ್ರಗ್ರಹಗಳು ಭೂ ವಾತಾವರಣದಲ್ಲಿ ಗಂಟೆಗೆ ಸುಮಾರು 30,000 ಕಿ.ಮೀ. ವೇಗದಲ್ಲಿ ಭೂಮಿಯನ್ನು ಅಪ್ಪಳಿಸುತ್ತವೆ. ಇದು ಒಂದು ಮಿಲಿಯನ್ ಮೆಗಾಟನ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ. ಒಂದು ಮಿಲಿಯನ್ ಮೆಗಾಟನ್ ಊಹಿಸಿಕೊಳ್ಳುವುದು ಕಷ್ಟ. ಒಂದು ಸಣ್ಣ ಉದಾಹರಣೆ ಮೂಲಕ ಅದನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡೋಣ. ಒಂದು ಸಾಮಾನ್ಯ ಮನೆಯ(2ಬಿಎಚ್‌ಕೆ) ಗಾತ್ರದ ಕ್ಷುದ್ರಗ್ರಹವು ಗಂಟೆಗೆ 30,000 ಕಿ.ಮೀ. ವೇಗದಲ್ಲಿ ಭೂಮಿಗೆ ಅಪ್ಪಳಿಸಿದರೆ 1945ರಲ್ಲಿ ಹಿರೋಶಿಮಾದ ಮೇಲೆ ಬಿದ್ದ ಲಿಟ್ಲ್‌ಬಾಯ್ ಬಾಂಬ್‌ನ ಶಕ್ತಿಗೆ ಸಮನಾಗಿರುತ್ತದೆ. ಅಂದಾಜು 20ಕಿಲೋಟನ್‌ಗಳು. ಕ್ಷುದ್ರಗ್ರಹವು ಇಷ್ಟೊಂದು ವೇಗದಲ್ಲಿ ಭೂಮಿಗೆ ಅಪ್ಪಳಿಸಿದರೆ ಭೂಮಿಯ ಮೇಲೆ ಏನಾದರೂ ಉಳಿದೀತೇ?. ಆಧುನಿಕ ಅಭೇದ್ಯ ಕೋಟೆಗಳೆನಿಸಿದ ನೂರಾರು ಗಗನಚುಂಬಿ ಕಟ್ಟಡಗಳನ್ನು ನೆಲಸಮ ಮಾಡುವಷ್ಟು ಶಕ್ತಿ ಒಂದು ಕ್ಷುದ್ರಗ್ರಹಕ್ಕಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಕ್ಷುದ್ರಗ್ರಹಗಳ ಚಲನೆಯ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಕ್ಷುದ್ರಗ್ರಹ ಅಧ್ಯಯನ ಒಂದು ಶಾಖೆಯಾಗಿ ಬೆಳೆದಿದೆ. ಹವ್ಯಾಸಿಗಳೇ ಹೆಚ್ಚಾಗಿ ಪಾಲ್ಗೊಳ್ಳುತ್ತಿರುವ ಈ ಚಟುವಟಿಕೆಯಲ್ಲಿ ತಾಳ್ಮೆಯಿಂದ ಸೂಕ್ಷ್ಮಕಾಯಗಳನ್ನೂ ಅಭ್ಯಸಿಸಲಾಗುತ್ತದೆ. ಇದಕ್ಕೆ ‘ನೀಟ್’ (NEAT-ನಿಯರ್ ಅರ್ತ್ ಆಸ್ಟರಾಯ್ಡ ಟ್ರಾಕಿಂಗ್) ಎಂಬ ಹೆಸರಿದೆ. ಇಂದಿನ ಸುಧಾರಿತ ತಂತ್ರಜ್ಞಾನದಿಂದ ಕ್ಷುದ್ರಗ್ರಹಗಳು ಭೂಮಿಯನ್ನು ಅಪ್ಪಳಿಸದಂತೆ ಮಾಡುವುದೇ ಈ ಕಾರ್ಯಾಚರಣೆಯ ಉದ್ದೇಶ. ಇಂತಹ ಕಾರ್ಯಾಚರಣೆಯ ಮುಂದುವರಿದ ಭಾಗವೇ ನಾಸಾದ ಡಾರ್ಟ್ (DART-Double Asteroid Redirection Test)ಕ್ಷುದ್ರಗ್ರಹಗಳ ಕಕ್ಷಾಮಾರ್ಗವನ್ನು ತಿರುಗಿಸುವ ಪರೀಕ್ಷೆಯಾಗಿದೆ.

ಸದ್ಯಕ್ಕೆ ಭೂಮಿಯತ್ತ ವೇಗವಾಗಿ ಧಾವಿಸುತ್ತಿರುವ ಡೈಡಿಮೋಸ್ ಮತ್ತು ಡೈಮೋರ್ಫೋಸ್ ಹೆಸರಿನ ಅವಳಿ ಕ್ಷುದ್ರಗ್ರಹಗಳನ್ನು ಡಾರ್ಟ್ ಅಂತರಿಕ್ಷ ರೋಬಾಟ್ ನೌಕೆಯೊಂದು ಸಮೀಪಿಸಲಿದೆ. ಅಮೆರಿಕದ ನಾಸಾ ಸಂಸ್ಥೆಯು ಡಾರ್ಟ್ ನೌಕೆಯನ್ನು ಕಳೆದ ನವೆಂಬರ್ ಅಂತ್ಯದಲ್ಲಿ ಉಡ್ಡಯನ ಮಾಡಿತ್ತು. ಇದು 1,210 ಪೌಂಡ್(550 ಕಿ.ಗ್ರಾಂ) ತೂಕ ಹೊಂದಿದೆ. ಈ ನೌಕೆ ಭೂಮಿಯಿಂದ ಒಂದು ಕೋಟಿ ಮೀಟರ್‌ಗಿಂತ ಹೆಚ್ಚು ದೂರ ಅಂತರಿಕ್ಷ ಪ್ರಯಾಣ ಮಾಡಿ, ಡೈಡಿಮೋಸ್ ಮತ್ತು ಡೈಮೋರ್ಫೋಸ್ ಜೋಡಿ ಕ್ಷುದ್ರಗಳನ್ನು ಸಮೀಪಿಸಿದೆ. ಡೈಡಿಮೋಸ್ ಮೂಲ ಕ್ಷುದ್ರಗ್ರಹವಾಗಿದ್ದು, ಡೈಮೋರ್ಫೋಸ್‌ಅದರ ಉಪಕ್ಷುದ್ರಗ್ರಹವಾಗಿದೆ. ಭೂಮಿಯನ್ನು ಚಂದ್ರ ಸುತ್ತುವಂತೆ ಡೈಡಿಮೋಸ್‌ನ್ನು ಡೈಮೋರ್ಫೋಸ್ ಸುತ್ತುತ್ತಿದೆ. ಡೈಡಿಮೋಸ್ 800 ಮೀಟರ್ ಅಗಲವಿದೆ ಮತ್ತು ಡೈಮೋರ್ಫೋಸ್ 170 ಮೀಟರ್ ಅಗಲವಿದೆ.

ಡಾರ್ಟ್ ನೌಕೆಯು ಗಾತ್ರದಲ್ಲಿ ಒಂದು ಮಿನಿ ಕಾರ್‌ನಷ್ಟಿದೆ. ಇದರಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದೆ. ಇದರಲ್ಲಿ ಸ್ವಯಂಚಾಲಿತವಾದ ಎರಡು ಸೌರಫಲಕಗಳ ಸುರುಳಿ ಇದೆ. ಉಡಾವಣಾ ವೇಳೆ ಸುರುಳಿಯಂತಿದ್ದ ಸೌರ ಫಲಕಗಳು ಅಂತರಿಕ್ಷಕ್ಕೆ ತೆರಳಿದ ನಂತರ 28 ಅಡಿ ದೂರ ಹರಡಿಕೊಂಡು ನೌಕೆಗೆ ಅಗತ್ಯವಾದ ವಿದ್ಯುತ್ತನ್ನು ಉತ್ಪಾದಿಸುತ್ತವೆ. ಇದರಲ್ಲಿ ಇನ್ನೊಂದು ವಿಶೇಷ ಎಂದರೆ ಸ್ವತಂತ್ರ ಯಾನ ನಿರ್ವಹಣಾ ವ್ಯವಸ್ಥೆ. ಅಂದರೆ ಯಾರ ಸಹಾಯವಿಲ್ಲದೆ, ಯಾರ ನಿರ್ದೇಶನವಿಲ್ಲದೆ, ತನ್ನ ಗುರಿಯತ್ತ ತಾನೇ ಸ್ವತಂತ್ರಯಾನ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಹಾಗಾಗಿ ನೌಕೆಯು ತಾನೇ ನಿರ್ಧಾರಗಳನ್ನು ತೆಗೆದುಕೊಂಡು ಡೈಮೋರ್ಫೋಸ್‌ಗೆ ಅಪ್ಪಳಿಸಲಿದೆ. ಡಾರ್ಟ್ ಒಂದು ರೀತಿಯ ಸ್ವಯಂ ಆತ್ಮಾಹುತಿ ಬಾಂಬ್ ಇದ್ದಂತೆ. ಬಾಹ್ಯಾಕಾಶ ನೌಕೆಯ NEXT-C ಅಯಾನ್ ಪ್ರೊಪಲ್ಷನ್ ಸಿಸ್ಟಮ್ ಹೊಂದಿದೆ. ಸಾಂಪ್ರದಾಯಿಕ ರಾಸಾಯನಿಕ ಪ್ರೊಪಲ್ಷನ್ ಅನ್ನು ಬಳಸುವುದಕ್ಕಿಂತ ಹೆಚ್ಚಾಗಿ, ಡಾರ್ಟ್‌ನ್ನು ಅದರ ಇಂಜಿನ್‌ನಿಂದ ತಳ್ಳಲಾದ ಕ್ಸೆನಾನ್ನ ಚಾರ್ಜ್ಡ್ ಕಣಗಳಿಂದ ಮುಂದೂಡಲಾಗುತ್ತದೆ. ಡಾನ್ ಮತ್ತು ಡೀಪ್ ಸ್ಪೇಸ್-1 ಸೇರಿದಂತೆ ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳಿಗೆ ಇತರ ಕಾರ್ಯಾಚರಣೆಗಳಲ್ಲಿ ಅಯಾನ್ ಪ್ರೊಪಲ್ಷನ್ ಅನ್ನು ಬಳಸಲಾಗಿದೆ, ಆದರೆ NEXT-Cನ ಅಯಾನ್ ಥ್ರಸ್ಟರ್‌ಗಳು ಹೆಚ್ಚಿನ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹೊಂದಿವೆ.

ಡಾರ್ಟ್ ನೌಕೆಯ ಜೊತೆಗೆ ಲಿಸಿಯಾ ಕ್ಯೂಬ್ ಎಂಬ ಮೈಕ್ರೋ ಉಪಗ್ರಹವೂ ಸಹ ಅಂತರಿಕ್ಷ ತಲುಪಿದೆ. ಇದು ಕೇವಲ 14 ಕಿ.ಗ್ರಾಂ ತೂಕ ಹೊಂದಿದೆ. ಇದು ಡಾರ್ಟ್‌ನಿಂದ ಬೇರ್ಪಟ್ಟು ಸುಮಾರು ಒಂದು ಸಾವಿರ ಕಿ.ಮೀ. ದೂರದಿಂದ ಡೈಮೋರ್ಫೋಸ್‌ಗೆ ಅಪ್ಪಳಿಸುವುದನ್ನು ವೀಕ್ಷಿಸಿ ವರದಿ ಮಾಡಲಿದೆ. ನಂತರ ಡೈಮೋರ್ಫೋಸ್‌ನಿಂದ 55 ಕಿ.ಮೀ. ಸಮೀಪದಲ್ಲಿ ಹಾದು ಹೋಗುವ ಮೂಲಕ ಅಪ್ಪಳಿಸುವಿಕೆಯ ನಂತರ ಆದ ಕದಲಿಕೆಗಳನ್ನು, ಉಂಟಾದ ಕುಳಿಗಳನ್ನು ಮತ್ತು ಚಿಮ್ಮಲ್ಪಟ್ಟ ವಸ್ತುಗಳನ್ನು ಹಾಗೂ ಇನ್ನಿತರ ಪರಿಣಾಮಗಳನ್ನು ವಿವರವಾಗಿ ಅಧ್ಯಯನ ಮಾಡಲಿದೆ. ಡಾರ್ಟ್‌ನ ಅಪ್ಪಳಿಸುವಿಕೆಯನ್ನು ಭೂಮಿಯ ಮೇಲಿನ ಟೆಲಿಸ್ಕೋಪ್ ಗಳ ಮೂಲಕ ನೋಡಲು ಸಾಧ್ಯವಿಲ್ಲ. ಇಂತಹ ಸೂಕ್ಷ್ಮತೆಗಳನ್ನು ಲಿಸಿಯಾ ಕ್ಯೂಬ್ ಗ್ರಹಿಸಲಿದೆ.

ಸದ್ಯಕ್ಕೆ ಇಡೀ ಜಗತ್ತಿನ ಖಗೋಳಶಾಸ್ತ್ರಜ್ಞರು ಹಾಗೂ ಆಕಾಶಕಾಯ ವೀಕ್ಷಕರ ಕಣ್ಣುಗಳು ಡಾರ್ಟ್ ನೌಕೆಯ ಮೇಲೆ ಕೇಂದ್ರೀಕೃತವಾಗಿವೆ. ನಿಗದಿತ ಯೋಜನೆಯಂತೆ ಸೆಪ್ಟಂಬರ್ 26 (ಭಾರತೀಯ ಕಾಲಮಾನದಂತೆ ಸೆಪ್ಟಂಬರ್ 27ರ ಬೆಳಗಿನ ಜಾವ)ರಂದು ಡೈಡಿಮೋಸ್‌ನ್ನು ಸುತ್ತುತ್ತಿರುವ ಡೈಮೋರ್ಫೋಸ್‌ನ್ನು ಅಪ್ಪಳಿಸಲಿದೆ. ಅಪ್ಪಳಿಸುವಿಕೆಯಿಂದ ಡೈಮೋರ್ಫೋಸ್ ನಜ್ಜುಗುಜ್ಜಾಗಬಹುದು ಅಥವಾ ಅದರ ಕಕ್ಷಾಪಥ ಬದಲಾಗಬಹುದು. ಇದರಲ್ಲಿ ಯಾವುದೇಪರಿಣಾಮ ಸಂಭವಿಸಿದರೂ ಸರಿಯೇ. ನಜ್ಜುಗುಜ್ಜಾದರೆ ಅದು ಪುಡಿಪುಡಿಯಾಗಿ ಅದರ ತುಂಡುಗಳು ಅಂತರಿಕ್ಷದಲ್ಲಿ ಹರಡಿಕೊಳ್ಳ ಬಹುದು. ಇಲ್ಲವೇ ಅದರ ಕಕ್ಷಾಪಥ ಸ್ವಲ್ಪ ಬದಲಾದರೂ ಭೂಮಿಯ ಕಡೆ ಬರುವ ಮಾರ್ಗವಂತೂ ಬದಲಾಗುತ್ತದೆ.

ಪ್ರಸಕ್ತ ಭೂಮಿಯ ಕಡೆಗೆ ಬರುತ್ತಿರುವ ಕ್ಷುದ್ರಗ್ರಹಗಳಾದ ಡೈಡಿಮೋಸ್ ಮತ್ತು ಡೈಮೋರ್ಫೋಸ್‌ಗಳಿಂದ ನಮ್ಮ ಗ್ರಹಕ್ಕೆ ಯಾವುದೇ ಅಪಾಯವಿಲ್ಲ. ಆದರೆ ಕ್ಷುದ್ರಗ್ರಹಗಳ ಕಕ್ಷಾಪಥವನ್ನು ಮರುನಿರ್ದೇಶನ ಮಾಡುವ ಪ್ರಯೋಗದ ಭಾಗವಾಗಿ ಡಾರ್ಟ್ ನ ಪರೀಕ್ಷೆಯು ಮಹತ್ವದ್ದಾಗಿದೆ. ಡಾರ್ಟ್‌ನ ಪ್ರಭಾವದ ಸಮಯದಲ್ಲಿ, ಕ್ಷುದ್ರಗ್ರಹ ಜೋಡಿಯು ಸೂರ್ಯನ ಸುತ್ತ ತಮ್ಮ ಕಕ್ಷೆಯಲ್ಲಿ ಪ್ರಯಾಣಿಸುವಾಗ ಭೂಮಿಯಿಂದ 6.8 ಮಿಲಿಯನ್ ಮೈಲುಗಳು (11 ಮಿಲಿಯನ್ ಕಿಲೋಮೀಟರ್) ದೂರದಲ್ಲಿರುತ್ತದೆ. ಡೈಮೋರ್ಫೋಸ್‌ನ ಕಕ್ಷೆಯನ್ನು ಡಾರ್ಟ್ ಸ್ವಲ್ಪ ಬದಲಿಸಿದರೆ ಸಾಕು ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ಅಪಾಯವಾಗುವುದಿಲ್ಲ.

ಡಾರ್ಟ್‌ನ್ನು ಚಲನ ಪ್ರಭಾವಕ ಎಂದು ಕರೆಯಲಾಗುತ್ತದೆ. ಏಕೆಂದರೆ ಅದು ತನ್ನ ಪ್ರಭಾವದಿಂದ ಅದರ ಆವೇಗ ಮತ್ತು ಚಲನ ಶಕ್ತಿಯನ್ನು ಡೈಮೋರ್ಫೋಸ್‌ಗೆ ವರ್ಗಾಯಿಸುತ್ತದೆ. ಪ್ರತಿಯಾಗಿ ಕ್ಷುದ್ರಗ್ರಹದ ಕಕ್ಷೆಯನ್ನು ಬದಲಾಯಿಸುತ್ತದೆ. ಇಲ್ಲಿ ನ್ಯೂಟನ್‌ನ ಚಲನೆಯ ನಿಯಮಗಳು ಬಳಕೆಯಾಗಿರುವುದು ಗಮನಾರ್ಹ. ನ್ಯೂಟನ್‌ನ ಮೊದಲ ನಿಯಮದ ಪ್ರಕಾರ ಕ್ಷುದ್ರಗ್ರಹದ ಕಕ್ಷೆಯು ಅದರ ಮೇಲೆ ಏನಾದರೂ ಕಾರ್ಯನಿರ್ವಹಿಸುವವರೆಗೆ ಬದಲಾಗದೆ ಉಳಿಯುತ್ತದೆ. ರೇಖೀಯ ಆವೇಗದ ಸೂತ್ರವನ್ನು ಬಳಸಿ (p = m X v), ಪ್ರಭಾವದ ಸಮಯದಲ್ಲಿ ಸೆಕೆಂಡಿಗೆ 3.8 ಮೈಲುಗಳು (6.1 ಕಿಲೋಮೀಟರ್) ಪ್ರಯಾಣಿಸುವ ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹದ ಆವೇಗದ ಸುಮಾರು ಶೇ. 0.5ನ್ನು ಹೊಂದಿರುತ್ತದೆ ಎಂದು ನಾವು ಲೆಕ್ಕಾಚಾರ ಮಾಡಬಹುದು. ಬಾಹ್ಯಾಕಾಶ ನೌಕೆಯ ಆವೇಗವು ಚಿಕ್ಕದಾಗಿದೆ ಎಂದು ತೋರುತ್ತದೆ. ಆದರೆ ಡೈಮೋರ್ಫೋಸ್‌ನ ಕಕ್ಷೆಯ ವೇಗದಲ್ಲಿ ಗುರುತಿಸಬಹುದಾದ ಬದಲಾವಣೆಯನ್ನು ಮಾಡಲು ಇದು ಸಾಕು.

ಡಾರ್ಟ್ ಕ್ಷುದ್ರಗ್ರಹದ ಮೇಲ್ಮೈ ಮೇಲೆ ಅಪ್ಪಳಿಸಿದಾಗ, ಅದರ ಚಲನ ಶಕ್ತಿಯು 10 ಶತಕೋಟಿ ಜೂಲ್ ಆಗಿರುತ್ತದೆ. ಇದರಿಂದ ಅಲ್ಲಿ ಒಂದು ಕುಳಿ ರಚನೆಯಾಗುತ್ತದೆ ಮತ್ತು ಅಪ್ಪಳಿಸಿದ ಪರಿಣಾಮ ವಾಗಿ ಎಜೆಕ್ಟಾ ಎಂದು ಕರೆಯಲ್ಪಡುವ ವಸ್ತುವು ಸ್ಫೋಟಗೊಳ್ಳುತ್ತದೆ. ಈ ಸಂದರ್ಭದಲ್ಲಿ ಬಾಹ್ಯಾಕಾಶ ನೌಕೆಯ ದ್ರವ್ಯರಾಶಿಯ 10-100 ಪಟ್ಟು ಸಮನಾಗಿರುವ ಕ್ಷುದ್ರಗ್ರಹ ವಸ್ತುವನ್ನು ಕುಳಿಯಿಂದ ಹೊರಹಾಕಲಾಗುತ್ತದೆ. ನ್ಯೂಟನ್‌ನ ಮೂರನೇ ನಿಯಮದಂತೆ, ಈ ವಸ್ತುವನ್ನು ಹೊರಗೆ ತಳ್ಳಲು ಅಗತ್ಯವಾದ ಬಲವು ವಿರುದ್ಧ ದಿಕ್ಕಿನಲ್ಲಿ ಕ್ಷುದ್ರಗ್ರಹದ ಮೇಲೆ ತಳ್ಳುವ ಸಮಾನ ಪ್ರತಿಕ್ರಿಯೆ ಬಲದಿಂದ ಹೊಂದಿಕೆಯಾಗುತ್ತದೆ. ಎಷ್ಟು ವಸ್ತುವನ್ನು ಹೊರಹಾಕಲಾಗುತ್ತದೆ ಮತ್ತು ಅದರ ಹಿಮ್ಮೆಟ್ಟುವಿಕೆಯ ಆವೇಗವು ಎಷ್ಟಿರುತ್ತದೆ ಎಂಬುದು ಇನ್ನೂ ತಿಳಿದಿಲ್ಲ. ಈ ಪರಿಣಾಮದಿಂದ ಡೈಮೋರ್ಫೋಸ್‌ನ ಸಂಯೋಜನೆ ಯ ಬಗ್ಗೆ ತಿಳಿಯಬಹುದು.

ಇದು ವಾಸ್ತವವಾಗಿ ಅಂತರ್‌ರಾಷ್ಟ್ರೀಯ ಸಮುದಾಯ ದೊಂದಿಗಿನ ಜ್ಞಾನದ ಸ್ಥಿತಿಯನ್ನು ಭವಿಷ್ಯಕ್ಕೆ ಸಾಗಿಸಲು ಅನುವು ಮಾಡಿಕೊಡುತ್ತದೆ. ನಿಜವಾಗಿಯೂ ನಮ್ಮ ಎಲ್ಲಾ ಕಲಿಕೆಯನ್ನು ವೈಜ್ಞಾನಿಕ ಸನ್ನಿವೇಶಕ್ಕೆ ಭಾಷಾಂತರಿಸಲು ಸಹಾಯ ಮಾಡುವ ಉದ್ದೇಶವನ್ನು ಅನುಸರಿಸಲು ಈ ಯೋಜನೆ ಬಯಸುತ್ತದೆ. ಬಾಹ್ಯಾಕಾಶ ಶಿಲೆಗಳ ಸಮಸ್ಯೆಯಿಂದ ಭೂಮಿಯನ್ನು ರಕ್ಷಿಸಲು ವಿಜ್ಞಾನಿಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿರುವಾಗ, ಡಾರ್ಟ್ ಮಿಷನ್ ಕ್ಷುದ್ರಗ್ರಹಗಳ ನಿಜವಾದ ಬೆದರಿಕೆಯ ಬಗ್ಗೆ ಯೋಚಿಸುವಲ್ಲಿ ನಮ್ಮ ದೃಷ್ಟಿಕೋನವನ್ನು ಬದಲಿಸಲಿದೆ. ಮಿಷನ್ ಯೋಜಿಸಿದಂತೆ ಕೆಲಸ ಮಾಡಿದರೆ ಮಾನವರ ಕಾರ್ಯಸಾಧ್ಯತೆಯ ವಿಶ್ವಾಸವನ್ನು ಮೂಡಿಸುತ್ತದೆ. ದಶಕಗಳಿಂದಲೂ ಕ್ಷುದ್ರಗ್ರಹಗಳ ಕಾಟ ತಪ್ಪಿಸಲು ಹೆಣಗಾಡಿದ ಮಾನವರ ಶ್ರಮಕ್ಕೆ ಡಾರ್ಟ್ ಉತ್ತರ ನೀಡಲಿದೆ. ಆ ಮೂಲಕ ಮುಂಬರುವ ದಿನಗಳಲ್ಲಿ ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸುವ ಕಾರ್ಯಕ್ಕೆ ಯಶಸ್ಸು ದೊರೆಯುತ್ತದೆ. ಒಂದು ವೇಳೆ ಡಾರ್ಟ್ ಯಶಸ್ವಿಯಾಗಿದ್ದರೆ, ಅಪಾಯಕಾರಿ ಕ್ಷುದ್ರಗ್ರಹಗಳಿಂದ ಭೂಮಿಯನ್ನು ಹೇಗೆ ರಕ್ಷಿಸಬೇಕು ಎಂಬ ನಮ್ಮ ಕಲಿಕೆಯ ಪ್ರಯತ್ನಗಳು ಪ್ರಾರಂಭವಾದಂತಾಗುತ್ತದೆ. ಭವಿಷ್ಯದಲ್ಲಿ ಎಂತಹ ಭೀಕರ ಅಪಾಯದ ಕ್ಷುದ್ರಗ್ರಹವು ಕೂಡಾ ಭೂಮಿಯ ಕಡೆಗೆ ಬಂದರೆ ಅದರ ಕಕ್ಷಾಪಥವನ್ನು ತಪ್ಪಿಸುವ ಮೂಲಕ ಅದರಿಂದ ಭೂಮಿಗೆ ಆಗಬಹುದಾದ ಅಪಾಯಗಳನ್ನು ತಪ್ಪಿಸಬಹುದು. ಕ್ಷುದ್ರಗ್ರಹ ಅಪ್ಪಳಿಸುವಿಕೆಯಿಂದ ಭೂಮಿಯ ಮೇಲಾಗುವ ಅನಾಹುತಗಳನ್ನು ತಪ್ಪಿಸಿ ಜೀವಜಾಲವನ್ನು ಕಾಪಾಡಬಹುದು. ಇದೇ 27ರ ಬೆಳಗಿನಜಾವ ನಡೆಯುವ ಡಾರ್ಟ್‌ನ ಕಾರ್ಯಸ್ವರೂಪದ ಆಧಾರದ ಮೇಲೆ ಭೂಮಿಯಡೆಗೆ ಬರುವ ಮುಂದಿನ ಕ್ಷುದ್ರಗಳ ಅಳಿವು ಉಳಿವು ಅಡಗಿದೆ.

Writer - ಆರ್. ಬಿ. ಗುರುಬಸವರಾಜ

contributor

Editor - ಆರ್. ಬಿ. ಗುರುಬಸವರಾಜ

contributor

Similar News