ಪಾತ್ರಧಾರಿ

Update: 2022-09-25 06:52 GMT

ಯಾವುದೇ ವ್ಯಕ್ತಿ ವರ್ತಿಸುವ ರೀತಿಯಲ್ಲಿ ಆತನ ವೈಯಕ್ತಿಕ ಒಲವು ಮತ್ತು ನಿಲುವುಗಳು ಪ್ರಕಟಗೊಳ್ಳುತ್ತವೆ. ವ್ಯಕ್ತಿಯ ವರ್ತನೆಗಳಿಗೆ ಕಾರಣ ಅವನಲ್ಲಿ ಉಂಟಾಗುವ ಭಾವನೆಗಳು ಮತ್ತು ಮೂಡುವ ಆಲೋಚನೆಗಳು. ಏಕೆಂದರೆ ಅವೇ ಮನೋಭಾವ ಗಳಾಗುವವು. ಅಂತಹ ಮನೋಭಾವಗಳು ದೀರ್ಘಕಾಲ ಪುನರಾವರ್ತಿತವಾಗುತ್ತಿದ್ದರೆ ಅದು ವ್ಯಕ್ತಿಯ ಮನಸ್ಥಿತಿಯಾಗುತ್ತದೆ. ಮನಸ್ಥಿತಿಯು ತಾನೇ ಮಾಡಿಕೊಂಡಿರುವ ಅಥವಾ ಕುಟುಂಬ ಹಾಗೂ ಸಮಾಜವು ಮಾಡಿಸಿರುವ ರೂಢಿಯೊಳಗೆ ಬಹಳ ಸರಾಗವಾಗಿ ತನ್ನನ್ನು ತಾನು ಒಗ್ಗಿಸಿಕೊಂಡಿರುತ್ತದೆ. ಇಂತಹ ರೂಢಿಯೊಳಗಾಗಿರುವ ಮನಸ್ಥಿತಿಯೇ ವ್ಯಕ್ತಿಯೋರ್ವರ ವ್ಯಕ್ತಿತ್ವ ಎಂದು ಕರೆಯಲಾಗುತ್ತದೆ.

ವ್ಯಕ್ತಿಯು ತನ್ನ ವ್ಯಕ್ತಿತ್ವದ ಪ್ರಕಾರವೇ ತನ್ನ ವರ್ತನೆಗಳನ್ನು ತೋರುತ್ತಿರುತ್ತಾನೆ. ಅದರ ಪ್ರಕಾರ ಆ ವ್ಯಕ್ತಿಯ ಜೊತೆಗೆ ಒಡನಾಡುವವರು ಈ ವ್ಯಕ್ತಿ ಹೀಗೆ, ಹಾಗೆ ಎಂದು ಗ್ರಹಿಸುತ್ತಾರೆ. ಅವರು ಗ್ರಹಿಸುವ ಪ್ರಕಾರ ಆ ವ್ಯಕ್ತಿಗೊಂದು ಹಣೆಪಟ್ಟಿ ಕೊಡುತ್ತಾರೆ. ಆ ಹಣೆಪಟ್ಟಿಗೊಂದು ಮಾನ ದಂಡವಿದ್ದು ಇತರರು ಆ ವ್ಯಕ್ತಿಯನ್ನು ಒಳ್ಳೆಯ ಅಥವಾ ಕೆಟ್ಟ ಎಂದು ತೀರ್ಮಾನಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ ಆ ತೀರ್ಮಾನವನ್ನೇ ಒಂದು ದೃಷ್ಟಿಕೋನವನ್ನಾಗಿಸಿಕೊಂಡು ಅದರ ಪ್ರಕಾರವೇ ಆ ವ್ಯಕ್ತಿಯನ್ನು ಚಿತ್ರಿಸಿಕೊಳ್ಳುತ್ತಿರುತ್ತಾರೆ. ಒಂದು ವೇಳೆ ಆ ವ್ಯಕ್ತಿಯೇನಾದರೂ ತನ್ನಲ್ಲಿ ಬದಲಾವಣೆಯನ್ನು ಬಯಸಿ, ಹೊಸ ರೂಢಿಯನ್ನು ಮಾಡಿಕೊಂಡಿದ್ದೇ ಆದರೆ, ನೋಡುಗರು ಆ ಬದಲಾವಣೆಯನ್ನೂ ಕೂಡಾ ತಮ್ಮ ಹಳೆಯ ದೃಷ್ಟಿಕೋನದ ಪ್ರಕಾರವೇ ನೋಡುತ್ತಾರೆ. ಒಂದು ವೇಳೆ ತಾವೇ ಕೊಟ್ಟಿರುವ ಹಣೆಪಟ್ಟಿಯ ಮಾನದಂಡದಲ್ಲಿ ಅದು ಹೊಂದಿಕೆಯಾಗದಿದ್ದರೆ, ಅವನ ಬದಲಾವಣೆಗೆ ಒಂದು ಕಾರಣವನ್ನು ತಾವೇ ಕೊಡುತ್ತಾರೆ. ಆತನಲ್ಲಿ ಉಂಟಾಗಿರುವ ಬದಲಾವಣೆಯನ್ನು ಇವರೇ ಒಪ್ಪಿಕೊಳ್ಳಲು ಸಿದ್ಧವಿಲ್ಲದೆ ಆತನನ್ನು ಅನುಮಾನಿಸುತ್ತಾರೆ. ಈ ಅನುಮಾನವು ಏಕೆಂದರೆ, ಒಂದು ವೇಳೆ ಆ ವ್ಯಕ್ತಿಯ ಬದಲಾವಣೆಯನ್ನು ಒಪ್ಪಿಕೊಂಡುಬಿಟ್ಟರೆ, ಇವರು ತಮ್ಮ ಹಿಂದಿನ ಘೋಷಿತ ವಾಕ್ಯಗಳನ್ನು ಸುಳ್ಳಾಗಿಸಬೇಕಾಗುತ್ತದೆ. ತಾವು ಆತನನ್ನು ವಿಶ್ಲೇಷಿಸುವುದರಲ್ಲಿ ತಪ್ಪಿದ್ದೆವು ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ತಾವು ತಪ್ಪಿದ್ದೆವು ಎಂದು ಒಪ್ಪಿಕೊಳ್ಳುವುದು ಸೋಲನ್ನು ಒಪ್ಪಿಕೊಂಡಂತೆಯೇ ಆಗುತ್ತದೆ.

ಮನುಷ್ಯನ ಮನಸ್ಸು ಯಾವಾಗಲೂ ತಾನು ಗೆಲ್ಲಲೆಂದೇ ಹಪಹಪಿಸುತ್ತಿರುತ್ತದೆ. ಏಕೆಂದರೆ ಮನಸ್ಸು ಸ್ವಕೇಂದ್ರಿತ ಅಥವಾ ಹೀಗೂ ಹೇಳಬಹುದು, ಪರಮ ಅಹಂಕಾರಿ. ಅಹಂಕಾರವು ತಾನು ಮಣಿಯಲು ಎಂದಿಗೂ ಸಿದ್ಧವಿರುವುದಿಲ್ಲ.
ಎದುರಿನ ವ್ಯಕ್ತಿಗಿಂತ ತಾನು ಮೇಲೆ ಎಂಬುದನ್ನು ಅದೆಷ್ಟು ಸಾಧ್ಯವಾಗುತ್ತದೋ ಅಷ್ಟೂ ತನ್ನತನದ ಪ್ರದರ್ಶನ ಮಾಡಲು ಯತ್ನಿಸುತ್ತಿರುತ್ತದೆ. ಆದ್ದರಿಂದಲೇ ಒಬ್ಬನನ್ನು ತಮ್ಮ ಪೂರ್ವಾಗ್ರಹದ ಮಾನದಂಡಗಳಿಂದ ಅಳೆಯುವುದು. ತಾವು ಒಂದು ಮಾನದಂಡ ಮಾಡಿಕೊಂಡಿರುತ್ತಾರಲ್ಲಾ, ಅದರಲ್ಲಿ ಆ ವ್ಯಕ್ತಿಯು ಇಲ್ಲದೇ ಇರಲಿ ಎಂದೇ ಮನಸ್ಸಿನ ಆಸೆಯಾಗಿರುತ್ತದೆ.
ಒಂದೇ ಒಂದು ಕ್ಷಣ ನಮ್ಮ ಎದುರಿನ ವ್ಯಕ್ತಿ, ನಾವು ಯಾರನ್ನು ಇಂತಹ ಮನುಷ್ಯ ಎಂದು ಆತನ ವರ್ತನೆಗಳ ಅನುಸಾರವಾಗಿ ಹೇಳುವಂತಹ ವ್ಯಕ್ತಿಯು ತನ್ನದೇ ಆದಂತಹ ಬಾಲ್ಯದ ಅನುಭವಗಳನ್ನು ಹೊಂದಿರುತ್ತಾನೆ, ಯಾರ್ಯಾರಿಂದಲೋ, ಯಾವುದ್ಯಾವುದರಿಂದಲೋ ಪಡೆದಿರುವ ಜ್ಞಾನವನ್ನು, ವಿದ್ಯಾಭ್ಯಾಸವನ್ನು, ವ್ಯಕ್ತಿತ್ವವನ್ನು, ಸ್ವಯಂಚಿತ್ರಣವನ್ನು, ವಿವಿಧ ಪರಿಸರಗಳ ಪ್ರಭಾವವನ್ನು, ತನ್ನದೇ ಮನಸ್ಸಿನ ಮೇಲೆ ಹೊಂದಬೇಕಾಗಿರುವ ನಿಯಂತ್ರಣದ ಸಾಮರ್ಥ್ಯವನ್ನು, ಮೌಲ್ಯಗಳನ್ನು, ರಾಜಕೀಯ ಚಿಂತನೆಗಳನ್ನು, ವಿಶ್ವದೃಷ್ಟಿಯನ್ನು, ಆಲೋಚನಾ ಕ್ರಮವನ್ನು, ಜವಾಬ್ದಾರಿಗಳನ್ನು, ಗುರಿಗಳನ್ನು, ಆ ವ್ಯಕ್ತಿಗಿರುವ ಸ್ಥಾನಮಾನಗಳನ್ನು (ಕೌಟುಂಬಿಕ ಮತ್ತು ಸಾಮಾಜಿಕ), ವಯಸ್ಸನ್ನು, ಲಿಂಗವನ್ನು, ಆಸಕ್ತಿಗಳನ್ನು; ಹೀಗೆ ಹಲವಾರು ಅಂಶಗಳನ್ನು ಹೊಂದಿರುತ್ತಾನೆ. ಹಾಗೆಯೇ ಸಾಮಾಜಿಕ ಪ್ರಭಾವಗಳಾದ ಧರ್ಮದ, ಪಟ್ಟಣದ ಅಥವಾ ಗ್ರಾಮದ, ಸಾಮಾಜಿಕ ನಡವಳಿಕೆಗಳ ಪ್ರಭಾವವನ್ನು ಕೂಡಾ ಹೊಂದಿರುತ್ತಾನೆ.
ಒಬ್ಬ ವ್ಯಕ್ತಿಯ ವರ್ತನೆ ಎಂದರೆ ಅದು ಅವನೊಬ್ಬನ ನಿರ್ಧಾರ ಅಲ್ಲ. ಯಾವುದೇ ವ್ಯಕ್ತಿಯ ವರ್ತನೆಗಳು, ವಿಚಾರಗಳು ಮತ್ತು ಮಾತುಗಳು ಪ್ರಭಾವಿತವಾಗಿರದೆ ಖಂಡಿತ ಅವನೊಬ್ಬನದೇ ಆಗಿರುವುದಿಲ್ಲ. ಹಾಗಾಗಿಯೇ ವ್ಯಕ್ತಿಯೊಬ್ಬನ ಮಾತುಗಳಿಂದ, ಅವನ ಒಂದೆರಡು ಕೃತ್ಯಗಳಿಂದ ಆತನ ಇಡೀ ಜೀವನವನ್ನೇ ತೀರ್ಪುಗೀಡು ಮಾಡುವಂತಹದ್ದು ಅತಿರೇಕತನ.
ನಮ್ಮ ಕಣ್ಣೆದುರು ಯಾವುದೋ ಪಾತ್ರವನ್ನು ನಿರ್ವಹಿಸುತ್ತಿ ರುವ ವ್ಯಕ್ತಿಯು ನಿಜಕ್ಕೂ ಪಾತ್ರಧಾರಿಯೇ ಹೌದು. ಅವನು ವರ್ತಿಸುವಂತೆ ಸೂತ್ರಗಳು ಅಲ್ಲೆಲ್ಲೋ ಇರುತ್ತವೆ. ನೂರಾರು ಕೈಗಳಲ್ಲಿ, ನೂರಾರು ಸಂಗತಿಗಳಲ್ಲಿ, ನೂರಾರು, ಸಾವಿರಾರು ವರ್ಷಗಳ ಹಿಂದೆ, ಭದ್ರವಾಗಿ ಹಿಡಿಯಲ್ಪಟ್ಟಿರುತ್ತವೆ.
ವ್ಯಕ್ತಿಯನ್ನು ಸೂಕ್ಷ್ಮವಾಗಿಯೂ ನೋಡಲು ಸಾಧ್ಯವಾಗ ಬೇಕು, ಕರುಣೆಯಿಂದಲೂ ನೋಡಲಾಗಬೇಕು. ಆಗಲೇ ನಾವು ಹೋರಾಡಬೇಕಾಗಿರುವುದು ರೋಗದ ವಿರುದ್ಧವೇ ಹೊರತು ರೋಗಿಯ ವಿರುದ್ಧ ಅಲ್ಲ ಎಂದು ಅರ್ಥವಾಗುತ್ತದೆ. ಆಗ ಅವನಿಗೂ ತನ್ನ ವೇಷಕ್ಕೆ ಹೆಣೆದುಕೊಂಡಿರುವ ಸೂತ್ರಗಳನ್ನು ಒಂದೊಂದಾಗಿ ಬಿಡಿಸಿಕೊಂಡು ಅಗತ್ಯವಿರುವ ಹೆಣಿಗೆಗಳನ್ನು ಮಾತ್ರ ಹಾಕಿಕೊಳ್ಳಬಹುದಾಗಿರುತ್ತದೆ. ಅದಕ್ಕೆ ಬೇಕಾಗಿರುವುದು ಕರುಣಾಭಾವ, ಮೈತ್ರಿಭಾವ ಹೊಂದಿರುವಂತಹ ಸೂಕ್ಷ್ಮಮತಿ; ನೋಡುಗರಿಗೂ, ನೋಡಲ್ಪಡುವವರಿಗೂ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News