ಮುಟ್ಟಲೊಲ್ಲದವರ ವ್ಯಸನವೂ ಮುಟ್ಟಿಸಿಕೊಂಡವರ ಬವಣೆಯೂ

Update: 2022-09-27 06:12 GMT

ನಮ್ಮನ್ನು ನಾವು ಯಾವ ಸಾಪೇಕ್ಷ ನೆಲೆಯಲ್ಲಿ ಗುರುತಿಸಿಕೊಳ್ಳುತ್ತೇವೆ ಎಂಬ ಜಟಿಲ ಪ್ರಶ್ನೆ ಎದುರಾದಾಗ ರಾಷ್ಟ್ರೀಯ, ಮತಧಾರ್ಮಿಕ, ಜಾತೀಯ, ಭಾಷಿಕ, ಪ್ರಾದೇಶಿಕ, ಭೌಗೋಳಿಕ, ಆಧ್ಯಾತ್ಮಿಕ ಮತ್ತು ಸೈದ್ಧಾಂತಿಕ ಅಸ್ಮಿತೆಗಳು ನಮ್ಮ ಉಸಿರುಗಟ್ಟಿಸುತ್ತವೆ. ಏಕೆಂದರೆ ಈ ಎಲ್ಲ ಅಸ್ಮಿತೆಗಳನ್ನೂ ನಾವು ಸಾಪೇಕ್ಷವಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಲೇ ಬಂದಿದ್ದೇವೆ. ಆಯಾ ಸಂದರ್ಭಗಳಿಗೆ ತಕ್ಕಂತೆ ನಮ್ಮ ಧಾರ್ಮಿಕ/ಸೈದ್ಧಾಂತಿಕ ಅಸ್ಮಿತೆಗಳೂ ಸಾಪೇಕ್ಷತೆಗೊಳಗಾಗಿ ಯಾವುದೋ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಸಿಲುಕಿಬಿಡುತ್ತದೆ. ಜಾತಿ ದೌರ್ಜನ್ಯಗಳು ಮತ್ತು ಮಹಿಳಾ ದೌರ್ಜನ್ಯಗಳ ಬಗ್ಗೆ ಆಧುನಿಕ ಬೌದ್ಧಿಕವಲಯದ ಸ್ಪಂದನೆ ಮತ್ತು ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಂಶ ಮತ್ತಷ್ಟು ಸ್ಪಷ್ಟವಾಗುತ್ತದೆ.


 
ನಾಗರಿಕತೆಯು ಮುಂದುವರಿದಂತೆಲ್ಲಾ ಮನುಜ ಸಮಾಜ ತನ್ನ ಪ್ರಾಚೀನ ಬೇರುಗಳನ್ನು ಸಡಿಲಿಸಿಕೊಂಡು, ಹೊಸ ದಿಗಂತದತ್ತ ಹೆಜ್ಜೆ ಇಡುತ್ತಾ, ತನ್ನ ಒಡಲೊಳಗಿನ ಕಲ್ಮಷಗಳನ್ನು, ಬಾಹ್ಯರೂಪದ ಮಾಲಿನ್ಯಗಳನ್ನು ತೊಡೆದುಹಾಕಿಕೊಂಡು, ಒಂದು ಉದಾತ್ತ ಮಾನವೀಯ ಪರಿಸರವನ್ನು ಸೃಷ್ಟಿಸಿಕೊಳ್ಳುವುದು ಯಾವುದೇ ಸಂಯಮಶೀಲ ಮನಸಿನ ಅಪೇಕ್ಷೆಯಾಗಿರುತ್ತದೆ. ಪ್ರಾಚೀನ ಎಂಬುದೆಲ್ಲವೂ ವ್ಯರ್ಜ್ಯವಾಗಲು ಸಾಧ್ಯವಿಲ್ಲ ಹಾಗೆಯೇ ಪ್ರಾಚೀನತೆಯ ಪಳೆಯುಳಿಕೆಗಳೆಲ್ಲವೂ ಶ್ರೇಷ್ಠ ಅಥವಾ ಪವಿತ್ರ ಎಂದೂ ಭಾವಿಸಬೇಕಿಲ್ಲ. ಮಾನವನ ಅಭ್ಯುದಯದ ಹಾದಿಯಲ್ಲಿ ಬೌದ್ಧಿಕವಾಗಿ ಮುಂದುವರಿದ ಸಮಾಜಗಳಲ್ಲೂ ಶಿಲಾಯುಗದ ಅಮಾನುಷತೆ ಮತ್ತು ಕ್ರೌರ್ಯ ಸಾಮಾಜಿಕ-ಸಾಂಸ್ಕೃತಿಕ ನೆಲೆಗಳಲ್ಲಿ ವ್ಯಕ್ತವಾಗುತ್ತಿರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. 16ನೇ ಶತಮಾನದ ರಾಜಪ್ರಭುತ್ವ ಮತ್ತು ಊಳಿಗಮಾನ್ಯ ವ್ಯವಸ್ಥೆಯಲ್ಲಿ ಕಾಣಬಹುದಾದ ಅತಿರೇಕದ ಅಮಾನುಷತೆಯನ್ನು ಹಿಟ್ಲರ್‌ನ ಗ್ಯಾಸ್ ಚೇಂಬರ್‌ಗಳಲ್ಲೂ, ನಾಝಿಗಳ ಯಾತನಾ ಶಿಬಿರಗಳಲ್ಲೂ ಕಂಡಿದ್ದೇವೆ. ಹಾಗೆಯೇ ಸಾಮಾನ್ಯ ಜನರ ಪ್ರತಿರೋಧಗಳನ್ನು ಹತ್ತಿಕ್ಕುವ ಚರಿತ್ರೆಯ ಹೆಜ್ಜೆಗಳನ್ನು ಇಂದಿಗೂ ಕಾಣುತ್ತಲೇ ಬಂದಿದ್ದೇವೆ. ಭಾರತದ ಸಂದರ್ಭದಲ್ಲಿ ಹೇಳುವುದಾದರೆ, ಶತಮಾನಗಳ ಹಿಂದಿನ ತಾರತಮ್ಯ ಮತ್ತು ದೌರ್ಜನ್ಯಗಳನ್ನು 21ನೇ ಶತಮಾನದಲ್ಲೂ ಹೊಸ ಸ್ವರೂಪದೊಂದಿಗೆ ಕಾಣುತ್ತಿದ್ದೇವೆ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳನ್ನು ಕಿತ್ತೊಗೆಯುವುದಿರಲಿ, ಸಡಿಲಿಸಲೂ ಆಧುನಿಕ ಸಮಾಜದಿಂದ ಸಾಧ್ಯವಾಗಿಲ್ಲ ಎನ್ನುವುದು ದುರಂತವಾದರೂ ಸತ್ಯ. ಇದನ್ನು ಪದೇ ಪದೇ ನೆನಪಿಸುವಂತೆಯೇ ಭಾರತೀಯ ಸಮಾಜದಲ್ಲಿ ಜಾತಿ ಶ್ರೇಷ್ಠತೆಯ ವ್ಯಸನ ಎಲ್ಲ ಜಾತಿ ಸಮುದಾಯಗಳನ್ನೂ ಆಕ್ರಮಿಸಿದ್ದು, ಸಾಮಾಜಿಕ ಶ್ರೇಣಿಯಲ್ಲಿ ಮೇಲು-ಕೀಳುಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿಕೊಂಡು ಬರಲಾಗಿದೆ.

ಈ ಶ್ರೇಷ್ಠತೆಯ ವ್ಯಸನವೇ ಭಾರತದ ಮಹಿಳಾ ಸಮೂಹವನ್ನೂ ನಿಕೃಷ್ಟವಾಗಿ ಕಾಣುವಂತಹ ಬೌದ್ಧಿಕ ವಾತಾವರಣವನ್ನು ವ್ಯವಸ್ಥಿತವಾಗಿ ಸೃಷ್ಟಿಸುತ್ತಾ ಬಂದಿದೆ. ಆರ್ಥಿಕ ಅಭಿವೃದ್ಧಿಯಾಗಲೀ, ಆಧುನಿಕತೆಯಾಗಲೀ, ನಗರೀಕರಣದ ವಾತಾವರಣವಾಗಲೀ ಭಾರತೀಯ ಸಮಾಜದ ಅಂತಃಸತ್ವ ಎನ್ನಬಹುದಾದ ಪಿತೃಪ್ರಾಧಾನ್ಯತೆ, ಲಿಂಗ ತಾರತಮ್ಯ, ದೌರ್ಜನ್ಯ ಮತ್ತು ಸ್ಪೃಶ್ಯಾಸ್ಪೃಶ್ಯತೆಯ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಾಗಿಲ್ಲ ಎನ್ನುವುದನ್ನು, ಆಧುನಿಕ ನಾಗರಿಕತೆ ಪದೆ ಪದೇ ನೆನಪಿಸುತ್ತಲೇ ಇದೆ. ಈ ಮನಸ್ಥಿತಿ ಅಥವಾ ಧೋರಣೆ ಬದಲಾಗಿದೆ ಎಂದು ಬೆನ್ನುತಟ್ಟಿಕೊಳ್ಳುವ ಮುನ್ನ ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ಅಸ್ತಿತ್ವವನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಮ್ಮನ್ನು ನಾವು ಯಾವ ಸಾಪೇಕ್ಷ ನೆಲೆಯಲ್ಲಿ ಗುರುತಿಸಿಕೊಳ್ಳುತ್ತೇವೆ ಎಂಬ ಜಟಿಲ ಪ್ರಶ್ನೆ ಎದುರಾದಾಗ ರಾಷ್ಟ್ರೀಯ, ಮತಧಾರ್ಮಿಕ, ಜಾತೀಯ, ಭಾಷಿಕ, ಪ್ರಾದೇಶಿಕ, ಭೌಗೋಳಿಕ, ಆಧ್ಯಾತ್ಮಿಕ ಮತ್ತು ಸೈದ್ಧಾಂತಿಕ ಅಸ್ಮಿತೆಗಳು ನಮ್ಮ ಉಸಿರುಗಟ್ಟಿಸುತ್ತವೆ. ಏಕೆಂದರೆ ಈ ಎಲ್ಲ ಅಸ್ಮಿತೆಗಳನ್ನೂ ನಾವು ಸಾಪೇಕ್ಷವಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುತ್ತಲೇ ಬಂದಿದ್ದೇವೆ. ಆಯಾ ಸಂದರ್ಭಗಳಿಗೆ ತಕ್ಕಂತೆ ನಮ್ಮ ಧಾರ್ಮಿಕ/ಸೈದ್ಧಾಂತಿಕ ಅಸ್ಮಿತೆಗಳೂ ಸಾಪೇಕ್ಷತೆಗೊಳಗಾಗಿ ಯಾವುದೋ ಒಂದು ನಿರ್ದಿಷ್ಟ ಚೌಕಟ್ಟಿನೊಳಗೆ ಸಿಲುಕಿಬಿಡುತ್ತದೆ. ಜಾತಿ ದೌರ್ಜನ್ಯಗಳು ಮತ್ತು ಮಹಿಳಾ ದೌರ್ಜನ್ಯಗಳ ಬಗ್ಗೆ ಆಧುನಿಕ ಬೌದ್ಧಿಕವಲಯದ ಸ್ಪಂದನೆ ಮತ್ತು ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ಅಂಶ ಮತ್ತಷ್ಟು ಸ್ಪಷ್ಟವಾಗುತ್ತದೆ.

ಜೀವನ ಮತ್ತು ಜೀವನೋಪಾಯದ ಕಾರಣಗಳಿಗಾಗಿ ತನ್ನ ಆಂತರಿಕ ಮತಭೇದಗಳನ್ನು ಮರೆಮಾಚಿಕೊಳ್ಳುವ ಸುಶಿಕ್ಷಿತ ಸಮಾಜವೂ ಆಂತರಿಕವಾಗಿ ಸ್ಪೃಶ್ಯಾಸ್ಪೃಶ್ಯತೆಯ ಧಾತುಗಳನ್ನು ಕಾಪಾಡಿಕೊಂಡೇ ಬಂದಿರುತ್ತದೆ. ಹಾಗಾಗಿಯೇ ಸುತ್ತಲಿನ ಸಮಾಜದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅತ್ಯಾಚಾರ, ಕೊಲೆ, ಹತ್ಯೆ, ಅಸ್ಪೃಶ್ಯತೆ ಮತ್ತಿತರ ಜಾತಿ-ಲಿಂಗತ್ವ ದೌರ್ಜನ್ಯ-ತಾರತಮ್ಯಗಳೂ ಸಾರ್ವಜನಿಕ ಸಂಕಥನದಲ್ಲಿ ಸಾಪೇಕ್ಷತೆಯನ್ನು ಪಡೆದುಕೊಳ್ಳುತ್ತವೆ. ಈ ದೌರ್ಜನ್ಯಕ್ಕೊಳಗಾಗುವ ಜೀವಗಳನ್ನು ಶ್ರೇಣೀಕರಣಗೊಳಿಸುವ ಮೂಲಕ ಸಂತ್ರಸ್ತರಿಗೆ ಸ್ಪಂದಿಸುವ ಮನಸ್ಸುಗಳು ಸಹ ವಿಘಟಿತವಾಗಿ ಪಾತಕಿಗಳು ವಿಜೃಂಭಿಸಲ್ಪಡುತ್ತಾರೆ. ಇದನ್ನು ಇತ್ತೀಚಿನ ಮಠವೊಂದರ ಪ್ರಕರಣದಲ್ಲಿ, ಬಿಲ್ಕಿಸ್ ಬಾನು ಘಟನೆಯಲ್ಲಿ, ಹಾಥರಸ್ ಪ್ರಕರಣದಲ್ಲಿ ಮತ್ತು ಇತ್ತೀಚಿನ ಉಲ್ಲೇರಹಳ್ಳಿ ಘಟನೆಯಲ್ಲಿ ಸಹ ಕಾಣುತ್ತಿದ್ದೇವೆ. ಯಾವುದೇ ರೀತಿಯ ಮನುಜ ವಿರೋಧಿ ಪಾತಕ ಕೃತ್ಯವನ್ನು ಖಂಡಿಸುವ ಒಂದು ಸಂವೇದನಾಶೀಲ ಸಮಾಜವನ್ನು ರೂಪಿಸಲು ನಮ್ಮಿಂದ ಸಾಧ್ಯವಾಗಿಲ್ಲ ಎಂಬ ಸುಡು ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಿದೆ. ಇದಕ್ಕೆ ಕಾರಣಗಳೂ ನಮ್ಮ ಸಾಮಾಜಿಕ-ಸಾಂಸ್ಕೃತಿಕ ಒಡಲಲ್ಲೇ ಇರುವುದನ್ನೂ ಸಹ ಮರೆಯಕೂಡದು. ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಎಂದು ಅಧಿಕೃತವಾಗಿ ಘೋಷಿಸಿಕೊಂಡು ನೂರೈವತ್ತು ವರ್ಷಗಳೇ ಸಂದಿವೆ. 12ನೇ ಶತಮಾನದ ವಚನಕಾರರಿಂದ ಮಹಾತ್ಮ ಫುಲೆ-ಅಂಬೇಡ್ಕರ್‌ವರೆಗೆ ಸಮಾಜ ಸುಧಾರಕರು ಈ ಪಿಡುಗನ್ನು ಹೋಗಲಾಡಿಸಲು ತಾತ್ವಿಕ- ಸೈದ್ಧಾಂತಿಕ-ಆಧ್ಯಾತ್ಮಿಕ-ರಾಜಕೀಯ ನೆಲೆಗಳಲ್ಲಿ ಪ್ರಯತ್ನಿಸಿದ್ದಾರೆ. ಆದರೆ ಜಾತಿ ಭೇದಗಳ ಬೇಲಿಗಳನ್ನು ಲಿಂಗತ್ವದ ಗೋಡೆಗಳನ್ನು ಭಗ್ನಗೊಳಿಸಿ ಒಂಭತ್ತು ಶತಮಾನಗಳು ಕಳೆದರೂ, ಆಧುನಿಕ-ಸುಧಾರಿತ-ಸುಶಿಕ್ಷಿತ- ಮುಂದುವರಿದ ಸಮಾಜದಲ್ಲಿ ಉಲ್ಲೇರಹಳ್ಳಿ ಪ್ರಕರಣ ನಡೆಯುತ್ತದೆ.

ಅಧ್ಯಾತ್ಮದ ನೆಲೆಯಲ್ಲಿ ಅಪ್ರಾಪ್ತ ವಯಸ್ಕರು ದೌರ್ಜನ್ಯ, ಅತ್ಯಾಚಾರಕ್ಕೊಳಗಾಗುತ್ತಾರೆ. ಈ ಅನಾಗರಿಕತೆಗೆ ಪ್ರತಿಕ್ರಿಯಿಸಲೂ ಅದೇ ಸಾಂಸ್ಕೃತಿಕ ಗೋಡೆಗಳು ಅಡ್ಡಿಯಾಗುತ್ತವೆ. ಭಾರತೀಯ ಸಮಾಜದ ಅಸ್ಪೃಶ್ಯತೆಯ ಮೂಲವನ್ನು ವ್ಯವಸ್ಥೆಯ ಬಾಹ್ಯ ಸ್ವರೂಪದಲ್ಲಿ ಶೋಧಿಸುತ್ತಿರುವ ನಾವು ಆಂತರಿಕವಾಗಿ ಪ್ರತಿಯೊಂದು ಕುಟುಂಬದಲ್ಲೂ ಅಂತರ್ಗತವಾಗಿರುವ ಸ್ಪೃಶ್ಯಾಸ್ಪೃಶ್ಯತೆಯ ಮೂಲ ಧಾತುಗಳನ್ನು ಗುರುತಿಸಲು ವಿಫಲರಾಗುತ್ತಿದ್ದೇವೆ. ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಅಸ್ಪೃಶ್ಯತೆಯ ಮೊದಲ ಅನುಭವವಾಗುವುದು ಹೆಣ್ಣುಮಕ್ಕಳಿಗೇ. ಹುಟ್ಟಿನಿಂದಲೇ ಜೈವಿಕ ಪ್ರಕ್ರಿಯೆಗಳ ಕಾರಣಕ್ಕಾಗಿ ಪ್ರತ್ಯೇಕತೆಗೊಳಗಾಗುವ ಹೆಣ್ಣು ಜೀವನವಿಡೀ ಅನುಭವಿಸುವ ಅಸ್ಪೃಶ್ಯತೆಗೆ ನಾವು ಆಚರಣೆಗಳ ನೆಲೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹೊದಿಕೆಗಳನ್ನು ತೊಡಿಸಿಬಿಡುತ್ತೇವೆ. ತನ್ನ ಆಂತರಿಕ ಕ್ರೌರ್ಯವನ್ನು ಮರೆಮಾಚಲು ಸಾಂಪ್ರದಾಯಿಕ ಸಮಾಜ ಈ ಪ್ರತ್ಯೇಕತೆ ಮತ್ತು ಅಸ್ಪೃಶ್ಯತೆಗೆ ‘ವೈಜ್ಞಾನಿಕ’ ಹೊದಿಕೆಗಳನ್ನೂ ತೊಡಿಸುತ್ತದೆ. ಸಾಂಪ್ರದಾಯಿಕತೆ, ಮಡಿವಂತಿಕೆ ಮತ್ತು ಆಚರಣಾತ್ಮಕ ವಿಧಿವಿಧಾನಗಳ ಮೂಲಕ ವ್ಯಕ್ತವಾಗುವ ಈ ಪ್ರತ್ಯೇಕತೆ ಮತ್ತು ಅಸ್ಪೃಶ್ಯತೆಗೆ ಜಾತಿಯ ಸೋಂಕು ತಗಲಿದಾಗ ಸ್ಪೃಶ್ಯಾಸ್ಪೃಶ್ಯತೆಯ ಮೂಲ ಧಾತುಗಳೆಲ್ಲವೂ ಒಮ್ಮೆಲೆ ಪ್ರಕಟವಾಗುತ್ತವೆ. ತನ್ನ ಕುಟುಂಬದೊಳಗೇ ಅಸ್ಪೃಶ್ಯಳಾಗುವ ಮೇಲ್ಜಾತಿಯ ಮಹಿಳೆಯೂ ಬಾಹ್ಯ ಸಮಾಜದಲ್ಲಿ ಶ್ರೇಷ್ಠತೆಯ ವ್ಯಸನಕ್ಕೆ ಬಲಿಯಾಗಿ ಮುಟ್ಟಬಾರದ ‘ಅನ್ಯರನ್ನು’ ಸೃಷ್ಟಿಕೊಳ್ಳುತ್ತಾಳೆ. ಸ್ವತಃ ತಮ್ಮನ್ನು ಸ್ಪರ್ಶಾತೀತರನ್ನಾಗಿ ಪರಿಭಾವಿಸಿಕೊಳ್ಳಲು ಶ್ರೇಷ್ಠತೆಯ ವ್ಯಸನ ನೆರವಾಗುತ್ತದೆ. ಈ ವ್ಯಸನವೇ ಒಂದು ಗೀಳಾಗಿ ಪರಿಣಮಿಸಿದಾಗ ಸ್ಪರ್ಶ ಎನ್ನುವುದೇ ಸಾಪೇಕ್ಷವಾಗಿಬಿಡುತ್ತದೆ. ಸ್ಪರ್ಶಾನುಭವಕ್ಕೆ ಅರ್ಹರಲ್ಲದ ಒಂದು ಸಮಾಜವನ್ನು ಸೃಷ್ಟಿಸುವ ಮೂಲಕ ‘ಅಸ್ಪೃಶ್ಯತೆಯನ್ನು’ ಸಹಜ-ನೈಸರ್ಗಿಕ ನಿಯಮ ಎನ್ನುವಂತೆ ಸ್ವೀಕರಿಸಿಬಿಡುತ್ತೇವೆ. ಹಾಗಾಗಿಯೇ ಹಾಥರಸ್‌ನಲ್ಲಿ ಸುಟ್ಟುಹೋದ ದೇಹ ಸಮಾಜದ ಒಂದು ವರ್ಗದ ದೃಷ್ಟಿಯಲ್ಲಿ ಯಾವುದೋ ಒಂದು ಅಸ್ಮಿತೆಗೆ ಸಿಲುಕಿದ ಅನಪೇಕ್ಷಿತ ಜೀವದಂತೆ ಮಾತ್ರ ಕಾಣುತ್ತದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಹೆಣ್ಣುಮಕ್ಕಳು ಮತ್ತೊಂದು ಶ್ರೇಷ್ಠತೆಯ ಪರದೆಯ ಹಿಂದೆ ಮರೆಯಾಗಿಬಿಡುತ್ತಾರೆ.

ಅಸ್ಪೃಶ್ಯತೆಯ ಈ ಮೂಲಧಾತುವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಮಗೆ ಉಲ್ಲೇರಹಳ್ಳಿಯಲ್ಲಿ ಬಹಿಷ್ಕೃತರಾದ ‘ಅಸ್ಪೃಶ್ಯರ’ ಒಡಲಾಳದ ಬೇಗೆ ಅರ್ಥವಾಗಲು ಸಾಧ್ಯ. ಉಲ್ಲೇರಹಳ್ಳಿಯಲ್ಲಿ ನಡೆಯುವ ಗ್ರಾಮೀಣ ದೇವತೆ ಭೂತಮ್ಮನ ಮೂರ್ತಿಯ ಉತ್ಸವದ ಸಂದರ್ಭದಲ್ಲಿ, ದೇವತೆಯನ್ನು ಹೊರುವ ಗುಜ್ಜುಕೋಲು ಸಹ ಪಾವಿತ್ರ್ಯತೆಯನ್ನು ಪಡೆಯುತ್ತದೆ. ಸಮಾಜದ ಸಮಸ್ತರ ಒಳಿತು ಬಯಸಿ ನಡೆಸಲಾಗುವ ದೇವತಾರಾಧನೆಯ ಸಂದರ್ಭದಲ್ಲಿ ದೇವತೆಯ ಮೂರ್ತಿಯನ್ನು ಹೊರುವ ಒಂದು ಗುಜ್ಜುಕೋಲು ಸಹ ಸ್ಪೃಶ್ಯಾಸ್ಪೃಶ್ಯತೆಯ ನಿಷ್ಕರ್ಷೆಗೊಳಗಾಗುವುದರಿಂದ, ದೇವತೆಯ ಮೂರ್ತಿಯೊಂದಿಗೆ ಅದೂ ಸ್ಪರ್ಶಾತೀತವಾಗುತ್ತದೆ. ಈ ಕೋಲನ್ನು ಮುಟ್ಟಿದ 15 ವರ್ಷದ ದಲಿತ/ಅಸ್ಪೃಶ್ಯ ಬಾಲಕ ಅಪರಾಧಿಯಾಗಿಬಿಡುತ್ತಾನೆ. ಅವನ ನಿಸ್ಪೃಹ ಕೃತ್ಯವೂ ಸಮಾಜದ ದೃಷ್ಟಿಯಲ್ಲಿ ಪಾತಲ ಕೃತ್ಯದಂತೆ ಕಾಣಲು ಕಾರಣ, ಆ ಬಾಲಕನ ಜಾತಿಮೂಲ ಮತ್ತು ಈ ಜಾತಿಮೂಲದಿಂದಲೇ ಉದ್ಭವಿಸುವ ಅಸ್ಪೃಶ್ಯತೆಯ ಪಿಡುಗು. ತನ್ನ ಸುತ್ತಲಿನ ಸಮಾಜವನ್ನು ಅರಿಯುವ ವಯಸ್ಸನ್ನೂ ದಾಟದ ಒಬ್ಬ ಬಾಲಕನಿಗೆ ನಮ್ಮ ಸಮಾಜದ ಆಂತರ್ಯದಲ್ಲಿರುವ ಜಾತಿ ಕ್ರೌರ್ಯ 60 ಸಾವಿರ ರೂ. ದಂಡ ಮತ್ತು ಸಾಮಾಜಿಕ ಬಹಿಷ್ಕಾರದ ಮೂಲಕ ಪರಿಚಯವಾಗುತ್ತದೆ.

ನವಶತಮಾನದ ಪೀಳಿಗೆಯನ್ನು (Millinneum generation) ಪ್ರತಿನಿಧಿಸುವ ಈ ಬಾಲಕನಿಗೆ ನಮ್ಮ ಆಧುನಿಕ ಸಮಾಜ ಯಾವ ಸಂದೇಶವನ್ನು ನೀಡುತ್ತಿದೆ? ಈ ಅಮಾನುಷ ಘಟನೆಯ ಬಗ್ಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳು ಯಾವ ಸಂದೇಶವನ್ನು ನೀಡುತ್ತಿವೆ? ಸಹಜವಾಗಿಯೇ ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಎಡಪಕ್ಷಗಳು ಈ ಘಟನೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿವೆ. ಇನ್ನುಳಿದಂತೆ ನಾಗರಿಕತೆಯನ್ನು ಮೈಗೂಡಿಸಿಕೊಂಡ ಒಂದು ಮೇಲ್ವರ್ಗದ ಆಧುನಿಕ ಸಮಾಜ ಈ ಘಟನೆಯನ್ನು ‘ಮತ್ತೊಂದು ಪ್ರಕರಣ’ ಅಥವಾ ‘ಸಹಜ ಪ್ರಕ್ರಿಯೆ’ ಎಂದು ಭಾವಿಸಿ ತನ್ನಷ್ಟಕ್ಕೆ ತಾನು ಮೌನ ವಹಿಸುತ್ತದೆ. ಮಠದ ಪ್ರಕರಣದಲ್ಲೂ ಇದೇ ಧೋರಣೆಯನ್ನು ಕಂಡಿದ್ದೇವೆ. ಅಂದರೆ ಅಸ್ಪಶ್ಯತೆಯಾಗಲೀ, ಮಹಿಳಾ ದೌರ್ಜನ್ಯ ಮತ್ತು ಅತ್ಯಾಚಾರವಾಗಲೀ ನಮ್ಮ ನಾಗರಿಕ ಪ್ರಜ್ಞೆಯನ್ನು ಕಲಕುವುದು ನಾವು ಪರಿಭಾವಿಸಿಕೊಂಡ ಮತ್ತು ಮೈಗೂಡಿಸಿಕೊಂಡ ಜಾತಿಯ ನೆಲೆಯಲ್ಲಿ ಮಾತ್ರ. ಇಲ್ಲಿ ಪ್ರಕಟಗೊಳ್ಳುವ ಶ್ರೇಷ್ಠತೆಯ ಅಹಮಿಕೆ ಮತ್ತು ನಿಕೃಷ್ಟತೆಯ ಭಾವನೆಗಳೇ ನಮ್ಮ ಪ್ರತಿಸ್ಪಂದನೆಯನ್ನೂ ನಿರ್ಧರಿಸುತ್ತವೆ. ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ಮೇಲ್ ಶ್ರೇಣಿಯ ಅಹಮಿಕೆ ಭಾರತದ ಸಾಮಾಜಿಕ ಪ್ರಜ್ಞೆಯನ್ನು ಬೌದ್ಧಿಕವಾಗಿ-ಸಾಂಸ್ಕೃತಿಕವಾಗಿ ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತಿದೆ. ಸಾಮಾಜಿಕ ವಲಯದಲ್ಲಿ ಲಿಂಗ ಸೂಕ್ಷ್ಮತೆ, ಸ್ತ್ರೀ ಸಂವೇದನೆಯನ್ನು ಕಳೆದುಕೊಂಡಿರುವ ಸಮಾಜವೇ ಮತ್ತೊಂದೆಡೆ ಜಾತಿ ವ್ಯವಸ್ಥೆಯನ್ನು ಸಂರಕ್ಷಿಸುತ್ತಾ ಮನುಜ ಸೂಕ್ಷ್ಮತೆ-ಸಂವೇದನೆಗಳನ್ನೂ ಕಳೆದುಕೊಳ್ಳುತ್ತಿರುವುದಕ್ಕೆ ಇತ್ತೀಚಿನ ಈ ಎರಡು ಪ್ರಕರಣಗಳೇ ಸಾಕ್ಷಿಯಾಗಿವೆ. ಅಸ್ಪೃಶ್ಯತೆಯನ್ನು ವಿರೋಧಿಸುವ ಸಂದರ್ಭದಲ್ಲಿ ಜಾತಿ ಗೋಡೆಗಳನ್ನು ದಾಟಿ, ಲಿಂಗತ್ವದ ನೆಲೆಯಲ್ಲಿ ನಿಂತಾಗ, ಜಾತಿ ಪ್ರಣೀತ ಅಸ್ಪೃಶ್ಯತೆಯ ಪ್ರತಿರೋಧದ ನಡುವೆಯೇ ಪ್ರತೀ ಕುಟುಂಬದಲ್ಲೂ ಲಿಂಗ ಪ್ರಣೀತ ಅಸ್ಪೃಶ್ಯತೆ ಢಾಳಾಗಿ ಕಾಣಿಸಬೇಕಲ್ಲವೇ? ಜಾತಿ ಶ್ರೇಣಿಯಲ್ಲಿ ತಳಮಟ್ಟದ ಸಮುದಾಯಗಳು ಇಡೀ ಸಮಾಜದಿಂದ ಹುಟ್ಟಿದ ಕಾರಣಕ್ಕಾಗಿ ಸ್ಪರ್ಶಭೇದವನ್ನು ಅನುಭವಿಸಿದರೆ, ಇದೇ ಸಮುದಾಯಗಳ ಒಳಗೂ ಸೇರಿದಂತೆ, ಇಡೀ ಸಮಾಜದಲ್ಲಿ ಮಹಿಳಾ ಸಮೂಹವೂ ಹುಟ್ಟಿನ ಕಾರಣಕ್ಕಾಗಿ, ಜೈವಿಕ-ವೈವಾಹಿಕ-ಸಾಂಪ್ರದಾಯಿಕ-ಧಾರ್ಮಿಕ- ಆಧ್ಯಾತ್ಮಿಕ ಕಾರಣಗಳಿಗಾಗಿ ಸ್ಪರ್ಶಭೇದವನ್ನು ಸಾಂದರ್ಭಿಕ ಅಸ್ಪೃಶ್ಯತೆಯನ್ನು ಅನುಭವಿಸುತ್ತಿದೆ. ಮಹಿಳೆಯರ ನೆಲೆಯಲ್ಲಿ ನಿಂತು ನೋಡಿದಾಗ ಅಸ್ಪೃಶ್ಯ ಸಮುದಾಯಗಳನ್ನೂ ಸೇರಿದಂತೆ ಇಡೀ ಪುರುಷ ಸಮಾಜ ಇಲ್ಲಿ ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತದೆ.

ಎರಡೂ ಸಮೂಹಗಳು ಎದುರಿಸುತ್ತಿರುವ ಸ್ಪೃಶ್ಯಾಸ್ಪೃಶ್ಯತೆಯ ತಾರತಮ್ಯಗಳಿಗೆ ಮೂಲ ಕಾರಣ ನಮ್ಮ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳಲ್ಲಿದೆ. ಈ ಜಾತಿ ವ್ಯವಸ್ಥೆಯೇ ಪಿತೃಪ್ರಧಾನ ಮೌಲ್ಯಗಳನ್ನೂ ಪೋಷಿಸಿ, ಬೆಳೆಸುತ್ತದೆ. ಪಿತೃಪ್ರಧಾನ ಮೌಲ್ಯಗಳನ್ನು ಬಂಡವಾಳಶಾಹಿ ಅರ್ಥವ್ಯವಸ್ಥೆ, ಮಾರುಕಟ್ಟೆ ಕಾರ್ಯತಂತ್ರಗಳ ಮೂಲಕ ತನ್ನದೇ ಆದ ನೆಲೆಗಳಲ್ಲಿ ಕಾಪಾಡಿಕೊಂಡು, ಸಂರಕ್ಷಿಸುತ್ತದೆ. ಹಾಗಾಗಿಯೇ ಈ ವ್ಯವಸ್ಥೆಯಲ್ಲಿ ಉಗಮಿಸುವ ಶೈಕ್ಷಣಿಕ ಕ್ಷೇತ್ರ ಮತ್ತು ಬೌದ್ಧಿಕ ವಲಯವೂ ಲಿಂಗ ಸೂಕ್ಷ್ಮತೆ-ಮನುಜ ಸೂಕ್ಷ್ಮತೆಯನ್ನು ಬೆಳೆಸಲು ಮುಂದಾಗುವುದಿಲ್ಲ. ಮನುಕುಲದ ಅಭ್ಯುದಯದ ಹಾದಿಯಲ್ಲಿ ಈ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನು ಸಮಾಜದ ವಿಭಿನ್ನ ಸ್ತರಗಳಲ್ಲಿ ಸೃಷ್ಟಿಸಬಹುದಾದ ಸೃಜನಶೀಲ ಅಭಿವ್ಯಕ್ತಿಯನ್ನೂ ಹಂತಹಂತವಾಗಿ ಕೊನೆಗೊಳಿಸಲು, ಮತೀಯ-ಸಾಂಸ್ಕೃತಿಕ ರಾಜಕಾರಣವು ಶ್ರಮಿಸುತ್ತದೆ. ಸದಾ ಮತಾಂಧತೆಯ ತೂಗುಗತ್ತಿಯ ನೆರಳಿನಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಾದ ಸೃಜನಶೀಲತೆಯ ಸಾಹಿತ್ಯಕ ಅಭಿವ್ಯಕ್ತಿ, ಕಲಾಭಿವ್ಯಕ್ತಿ ಮತ್ತು ಮಾನವೀಯ ಮೌಲ್ಯಗಳ ನೆಲೆಗಳು ಕ್ರಮೇಣ ಶಿಥಿಲವಾಗುತ್ತಿರುವ ಹೊತ್ತಿನಲ್ಲಿ ಭಾರತೀಯ ಸಮಾಜ ತನ್ನನ್ನು ತಾನು ಮರುಶೋಧಿಸಿಕೊಳ್ಳಬೇಕಿದೆ. 21ನೆಯ ಶತಮಾನದ ಮೂರನೆಯ ದಶಕದಲ್ಲಿ ಭಾರತ ತನ್ನ ಸ್ವಾತಂತ್ರ್ಯದ ಅಮೃತ ಕಾಲದತ್ತ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲೂ ನಮ್ಮ ಸಮಾಜ ತನ್ನ ಪ್ರಾಚೀನ ಸಾಂಪ್ರದಾಯಿಕತೆಯಿಂದ ವಿಮೋಚನೆ ಪಡೆದಿಲ್ಲ ಎನ್ನುವುದನ್ನು ಉಲ್ಲೇರಹಳ್ಳಿಯಂತಹ ಪ್ರಕರಣಗಳು ಪದೇ ಪದೇ ನಿರೂಪಿಸುತ್ತಲೇ ಇವೆ. ಹಾಗೆಯೇ ಡಿಜಿಟಲ್ ಯುಗದ ಪರಿವರ್ತಕ ಮಾರ್ಗದಲ್ಲಿರುವ ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದು ಚಂದ್ರಯಾನಕ್ಕೆ ಸಿದ್ಧವಾಗುತ್ತಿದ್ದರೂ, ಮಠವೊಂದರಲ್ಲಾದಂತಹ ಘಟನೆಗಳು, ಹಾಥರಸ್‌ನಂತಹ ದುರಂತಗಳು ನಡೆಯುತ್ತಿವೆ. ಅಂದರೆ ಭೌತಿಕವಾಗಿ ನಾವು ಮುಂದುವರಿದಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವ ನಾವು ಬೌದ್ಧಿಕವಾಗಿ-ಸಾಂಸ್ಕೃತಿಕವಾಗಿ ತಲೆತಗ್ಗಿಸಿ ನಿಲ್ಲಬೇಕಿದೆ. ಬೌದ್ಧಿಕ ನೆಲೆಗಳು ಅಧಿಕಾರ ರಾಜಕಾರಣ ಮತ್ತು ಜಾತಿ-ಮತಗಳ ವಿಭಿನ್ನ ಪ್ರಭೇದಗಳಿಗೆ ಶರಣಾಗಿ ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತಿರುವಂತೆಯೇ, ಪ್ರತಿರೋಧದ ನೆಲೆಗಳು ವಿಘಟಿತಗೊಂಡು ಅಸ್ಮಿತೆಗಳ ಚೌಕಟ್ಟುಗಳಲ್ಲಿ ಬಂದಿಯಾಗುತ್ತಿವೆ.

ಈ ಜಟಿಲ ಸನ್ನಿವೇಶದಲ್ಲಿ ಉಲ್ಲೇರಹಳ್ಳಿಯ ಬಹಿಷ್ಕೃತ ಬಾಲಕ ಮತ್ತು ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ವಯಸ್ಕ ಬಾಲಕಿಯರು ನವ ಭಾರತದ ಬೌದ್ಧಿಕ ವಿಶ್ವಾಸಾರ್ಹತೆಗೆ, ಸಾಂಸ್ಕೃತಿಕ ನಿಷ್ಠೆಗೆ ಸವಾಲಾಗಿ ನಿಲ್ಲುತ್ತಾರೆ. ಅಸ್ಪೃಶ್ಯತೆಯ ವಿರುದ್ಧ ಮೂಡುವ ಪ್ರತಿರೋಧದ ದನಿಗಳಲ್ಲಿ ಲಿಂಗ ಸೂಕ್ಷ್ಮತೆಯ ಪರಿವೆಯೂ ಇರುವುದಾದರೆ, ನಾವು ಭಾರತದ ಜಾತಿ ವ್ಯವಸ್ಥೆಗೆ ಮತ್ತು ಲಿಂಗತ್ವ ಅಸಮಾನತೆಗಳಿಗೆ ಮೂಲ ಕಾರಣವನ್ನು ಸ್ಪರ್ಶಾತೀತತೆ ಮತ್ತು ಸ್ಪರ್ಶಭೇದಗಳ ನೆಲೆಯಲ್ಲಿ ಗುರುತಿಸಲು ಸಾಧ್ಯ. ಪ್ರತೀ ವ್ಯಕ್ತಿಯ ಆಂತರ್ಯದಲ್ಲೂ ಅಡಗಿರಬಹುದಾದ ಮುಟ್ಟುವ-ಮುಟ್ಟಿಸಿಕೊಳ್ಳುವ-ಮುಟ್ಟಲಾರದ- ಮುಟ್ಟಬಾರದ ಪ್ರಜ್ಞೆಯನ್ನು ಮರುವಿಮರ್ಶೆಗೊಳಪಡಿಸುವುದರಿಂದ ಮಾತ್ರವೇ ಭಾರತವನ್ನು ಸಂವೇದನಾಶೀಲ ಸಮಾಜವಾಗಿ ರೂಪಿಸಲು ಸಾಧ್ಯ. ಇದೊಂದು ತಾತ್ವಿಕ ಜಿಜ್ಞಾಸೆ ಎನಿಸಿದರೆ ಮತ್ತೆ ಮತ್ತೆ ಯೋಚಿಸೋಣ. ಅಲ್ಲವೇ

Writer - ನಾ. ದಿವಾಕರ

contributor

Editor - ನಾ. ದಿವಾಕರ

contributor

Similar News