ದುಬೈ ಜೆಬೆಲ್ ಅಲಿ ಪ್ರಾರ್ಥನಾ ಗ್ರಾಮದಲ್ಲೊಂದು ಹೊಸ ಹಿಂದೂ ದೇವಾಲಯ ಉದ್ಘಾಟನೆ
ದುಬೈ: ಸಹಿಷ್ಣುತೆ, ಶಾಂತಿ ಮತ್ತು ಸಾಮರಸ್ಯದ ಪ್ರಬಲ ಸಂದೇಶ ರವಾನಿಸುವ, ವಿವಿಧ ಧರ್ಮಗಳ ಅನುಯಾಯಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನವಾಗಿ ಇಲ್ಲಿ ನಿರ್ಮಿಸಲಾಗಿರುವ ಹಿಂದೂ ದೇವಾಲಯ ಮಂಗಳವಾರ ಉದ್ಘಾಟನೆಗೊಂಡಿತು.
ಎಮಿರೇಟ್ಸ್‌ನ 'ಪ್ರಾರ್ಥನಾ ಗ್ರಾಮ'ದಲ್ಲಿ ಹಿಂದೂ ದೇವಾಯದ ಅಧಿಕೃತ ಉದ್ಘಾಟನೆ ಅ.4ರಂದು ನಡೆದಿದ್ದು, ಇದು ಯುಎಇನ ಎಲ್ಲೆಡೆ ಇರುವ ಭಕ್ತರಿಗೆ ದ್ವಾರ ತೆರೆಯಲಿದೆ.
ಜೆಬೆಲ್ ಅಲಿಯಲ್ಲಿ ನಿರ್ಮಿಸಲಾಗಿರುವ ಪ್ರಾರ್ಥನಾ ಗ್ರಾಮದಲ್ಲಿ ಒಂಬತ್ತು ಧಾರ್ಮಿಕ ಮಂದಿರಗಳಿದ್ದು, ಇದರಲ್ಲಿ ಏಳು ಚರ್ಚ್‍ಗಳು, ಒಂದು ಗುರುನಾನಕ್ ದರ್ಬಾರ್ ಸಿಖ್ ಗುರುದ್ವಾರ ಹಾಗೂ ಒಂದು ಹೊಚ್ಚ ಹೊಸ ಹಿಂದೂ ದೇವಾಲಯ ಇರುತ್ತದೆ.
ಸಹಿಷ್ಣುತೆ ಮತ್ತು ಸಹಬಾಳ್ವೆ ಖಾತೆ ಸಚಿವ ಶೇಕ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ನೆಲಮಹಡಿಯಲ್ಲಿ ಈ ವಿವಿಧೋದ್ದೇಶ ಸಭಾಗೃಹವನ್ನು ಉದ್ಘಾಟಿಸಿದರು.
ರಿಬ್ಬನ್ ಕತ್ತರಿಸುವ ಕಾರ್ಯಕ್ರಮ ಮುಖ್ಯ ಪ್ರಾರ್ಥನಾ ಮಂದಿರದಲ್ಲಿ ನಡೆಯಿತು. ಯುಎಇಯಲ್ಲಿ ಭಾರತದ ರಾಯಭಾರಿಯಾಗಿರುವ ಸಂಜಯ್ ಸುಧೀರ್, ಸಮುದಾಯ ಅಭಿವೃದ್ಧಿ ಪ್ರಾಧಿಕಾರದ ಸಾಮಾಜಿಕ ನಿಯಂತ್ರಣ ಮತ್ತು ಲೈಸೆನ್ಸಿಂಗ್ ಸಿಇಒ ಡಾ.ಒಮರ್ ಅಲ್ ಮುಥಾನಾ, ದುಬೈ ಹಿಂದೂ ದೇವಾಲಯದ ಟ್ರಸ್ಟಿ ರಾಜು ಶ್ರಾಫ್, ಸಮುದಾಯ ಅಭಿವೃದ್ಧಿ ಪ್ರಾಧಿಕಾರದ ಮಹಾ ನಿರ್ದೇಶಕ ಅಹ್ಮದ್ ಅಬ್ದುಲ್ ಕರೀಂ ಜುಲ್ಫರ್ ಉಪಸ್ಥಿತರಿದ್ದರು.
200ಕ್ಕೂ ಹೆಚ್ಚು ಮಂದಿ ಗಣ್ಯರು, ಧಾರ್ಮಿಕ ಮುಖಂಡರು, ರಾಜತಾಂತ್ರಿಕ ಅಧಿಕಾರಿಗಳು, ಉದ್ಯಮಿಗಳು ಹಾಗೂ ಭಾರತೀಯ ಸಮುದಾಯದ ಸದಸ್ಯರು ಉಪಸ್ಥಿತರಿದ್ದರು. ಈ ಬಗ್ಗೆ khaleejtimes.com ವರದಿ ಮಾಡಿದೆ.