ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವುದಕ್ಕೆ ಸಿಪಿಐ ವಿರೋಧ: ಮೇಯರ್ ಗೆ ಮನವಿ
ಮಂಗಳೂರು, ಅ.8: ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವುದಕ್ಕೆ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಮಂಡಳಿ ವಿರೋಧ ವ್ಯಕ್ತಪಡಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಕ್ರಮವನ್ನು ಖಂಡಿಸಿದೆ.
ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಿರುವ ಸಿಪಿಐ ನಿಯೋಗವು, ಭಾರತದ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿಯಾಗಿರುವ ಪ್ರಮುಖ ವ್ಯಕ್ತಿಗಳ, ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ಪಾಲ್ಗೊಂಡಿರುವ ಸ್ಥಳೀಯರ ಅಥವಾ ಖ್ಯಾತ ಸಾಹಿತಿ, ಕ್ರೀಡೆ, ಕಲೆ ಮುಂತಾದ ಕ್ಷೇತ್ರಗಳಲ್ಲಿನ ಸಾಧಕರ ಹೆಸರನ್ನು ಸ್ಥಳೀಯ ರಸ್ತೆ - ವೃತ್ತಗಳಿಗೆ ಇಡುವುದು ಸಾಮಾನ್ಯ ಕ್ರಮವಾಗಿದೆ. ಆದರೆ ತನ್ನನ್ನು ತಾನೇ 'ವೀರ' ಎಂದು ಕರೆದುಕೊಂಡಿರುವ, ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದ್ದ ಸಮಯದಲ್ಲಿ ಬ್ರಿಟಿಷ್ ಸರಕಾರಕ್ಕೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಅವರಿಂದ ಪಿಂಚಣಿ ಪಡೆಯುತ್ತಿದ್ದ ಹಿಂದುತ್ವವಾದಿ ವ್ಯಕ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಕೆಲವರು ಬಿಂಬಿಸಿದರೆ ಅದು ಅವರಿಗಷ್ಟೇ ಸೀಮಿತವಾಗುತ್ತದೆಯೇ ಹೊರತು ದೇಶಕ್ಕಲ್ಲ. ಆದ್ದರಿಂದ ಸಾವರ್ಕರ್ ಹೆಸರನ್ನು ಸುರತ್ಕಲ್ ವೃತ್ತಕ್ಕೆ ಇಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಸಾವರ್ಕರ್ ಬದಲಾಗಿ ಸುರತ್ಕಲ್ ವೃತ್ತಕ್ಕೆ ಮೇಲೆ ಪ್ರಸ್ತಾಪಿಸಿದ ಯಾವುದೇ ವ್ಯಕ್ತಿಯ ಹೆಸರಿಡುವಂತೆ ಸಿಪಿಎಂ ಮನವಿಯಲ್ಲಿ ಒತ್ತಾಯಿಸಿದೆ.
ಮನವಿ ಸಲ್ಲಿಸಿದ ನಿಯೋಗದಲ್ಲಿ CPI ದ.ಕ. ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಮಾಜಿ ಕಾರ್ಯದರ್ಶಿ ವಿ.ಕುಕ್ಯಾನ್, ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, AIYFನ ಮಂಗಳೂರಿನ ಕೃಷ್ಣಪ್ಪ ವಾಮಂಜೂರು ಹಾಗೂ ಮಂಗಳೂರು ತಾಲೂಕು ಕಾರ್ಯದರ್ಶಿ ಎಂ.ಕರುಣಾಕರ ಉಪಸ್ಥಿತರಿದ್ದರು.