ಮುಲ್ಕಿ: ಮೀಲಾದುನ್ನಬೀ ಪ್ರಯುಕ್ತ ಮದರಸ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಮುಲ್ಕಿ, ಅ.8: ಮುಹಿಯುದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ವತಿಯಿಂದ ಮೀಲಾದುನ್ನಬೀ ಪ್ರಯುಕ್ತ ಜಮಾಅತ್ ಸಮಿತಿಗೆ ಒಳಪಡುವ ವಿವಿಧ ಮದರಸ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಶುಕ್ರವಾರ ರಾತ್ರಿ ಜುಮಾಮಸೀದಿಯ ವಠಾರದಲ್ಲಿ ನಡೆಯಿತು.
ಸಮಾರಂಭದಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮೀತಿಯ ಅಧ್ಯಕ್ಷರಾದ ಅಬ್ದುಲ್ ನಾಸೀರ್ ಲಕ್ಕಿಸ್ಟಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯವಕರು ಅಮಲು ಪದಾರ್ಥಗಳ ಬೆನ್ನು ಬಿದ್ದು ದಾರಿ ತಪ್ಪುತ್ತಿದ್ದಾರೆ. ಹಾಗಾಗಿ ಪ್ರತೀ ಮೊಹಲ್ಲಾ, ಜಮಾಅತ್ ಸಮಿತಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಮುದಾಯದ ಯುವಕರಲ್ಲಿ ಮಾದಕ ವ್ಯಸನಗಳ ಕುರಿತು ಕಾರ್ಯಾಗಾರಗಳನ್ನು ನಡೆಸುವ ಮೂಲಕ ದಾರಿ ತಪ್ಪಿದವರನ್ನು ಸರಿದಾರಿಗೆ ತರುವ ಜೊತೆಗೆ ದಾರಿ ತಪ್ಪದಂತೆ ಮಾಡುವ ಜವಾಬ್ದಾರಿ ಪ್ರತೀ ಜಮಾಅತ್ ಗಳ ಮೇಲಿದೆ ಎಂದು ನುಡಿದರು.
ಸಮಾರಂಭವನ್ನು ಶೈಖುನಾ ಬೊಳ್ಳೂರು ಉಸ್ತಾದ್ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಟಿ.ಎಚ್. ಅಬ್ದುಲ್ ರೆಹಮಾನ್ ವಹಿಸಿದ್ದರು. ಸಮಾರಂಭದಲ್ಲಿ ಜಮಾಅತ್ ಸಮಿತಿಯ ಶಂಸುದ್ದೀನ್, ಸುಲೈಮಾನ್ ಕೊಪ್ಪಳ, ಅಬ್ದಿಲ್ ಕರೀಮ್, ಬಿ.ಎಂ. ಸುಲೈಮಾನ್, ಶೇಖ್ ಅಬ್ದುಲ್ಲಾ ಕಲ್ಲಾಪು, ಹಮೀದ್ ಎಂ.ಸಿ.ಎಫ್., ಆರೀಫ್ ಬಾಖವಿ ಮುರ್ರಿಸ್ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.