ಮೌಲ್ಯಗಳು ಮತ್ತು ಒಡಂಬಡಿಕೆಗಳು

Update: 2022-10-08 19:30 GMT

ವ್ಯಕ್ತಿಯೊಬ್ಬನ ಅಮಲೇರುವಂತಹ ಅಸ್ವಾಭಾವಿಕ ಆಲೋಚನೆಗಳು, ಸಹಜ ಪಶು ಪ್ರವೃತ್ತಿಗಳು, ವೈವಿಧ್ಯದ ಚಿಂತನಾ ಕ್ರಮಗಳು, ತಮ್ಮ ಕಾಲಕ್ಕೆ, ನೆಲಕ್ಕೆ, ಆ ನೆಲದ ಮೇಲಾಗುವ ಚಳಿ, ಮಳೆ, ಬೆಳೆ, ಬಿಸಿಲು, ಗಾಳಿಗೆ ಅನುಗುಣವಾಗಿ ಕಟ್ಟಿಕೊಂಡಿರುವ ಸಾಂಸ್ಕೃತಿಕ ನೆಲೆಗಳು, ಎದುರಿಸಿದ ಕಷ್ಟ, ಸಮಸ್ಯೆ, ಸಂಘರ್ಷಗಳಿಗೆ ಅನುಗುಣವಾಗಿ ಹುಟ್ಟಿದ ಸಿದ್ಧಾಂತಗಳು, ತಮ್ಮ ಅಗತ್ಯ ಮತ್ತು ಅನಿವಾರ್ಯತೆಗಳ ನಿರ್ವಹಣೆಗೆ ಮಾಡಿಕೊಂಡಿರುವ ವ್ಯವಸ್ಥೆಗಳು, ಈ ಎಲ್ಲಾ ವ್ಯವಸ್ಥೆಗಳ ಅಧೀನವಾಗಿ ನಡೆಯದಿದ್ದರೆ ಸಿಗುವಂತಹ ಶಿಕ್ಷೆಗಳು, ಕಾನೂನಿನ ಕ್ರಮಗಳು ಅಥವಾ ಯಶಸ್ಸು ಲಭಿಸಿದರೆ ಸಿಗುವ ಪುರಸ್ಕಾರಗಳು; ಇವೆಲ್ಲಾ ಸಮಾಜದ ಮೂಲಕ ವ್ಯಕ್ತಿಗಳಿಗೆ ಕಡಿಮೆ ಹುಚ್ಚು ಹಿಡಿಸುವುದೇನಲ್ಲ. ನಿಜ ಹೇಳಬೇಕೆಂದರೆ ಕಟ್ಟುಪಾಡುಗಳೊಳಗೆ ತನ್ನತನವನ್ನು ಬಲಿಗೊಟ್ಟು ನಡೆದರೆ ಪುರಸ್ಕಾರವೇನೂ ಸಿಗುವುದಿಲ್ಲ. ಆದರೆ ತನ್ನತನಕ್ಕೆ ಬದ್ಧನಾದರೆ ತಿರಸ್ಕಾರವಂತೂ ಕಟ್ಟಿಟ್ಟದ್ದು. ಸಮಾಜದ ಎಲ್ಲಾ ಕಟ್ಟಳೆಗಳನ್ನು ಆಂತರಿಕವಾಗಿ ತಿರಸ್ಕರಿಸುವಂತಹ ಮಾನಸಿಕ ಒತ್ತಡವಿದ್ದರೂ ವ್ಯಕ್ತಿಯು ತಾನು ಸಮಾಜದ ತಿರಸ್ಕಾರಕ್ಕೆ ಒಳಗಾಗದಿರುವಂತೆ ತನ್ನನ್ನು ತಾನು ನೋಡಿಕೊಳ್ಳಬೇಕು.

ಇಲ್ಲಿರುವ ಬಹುದೊಡ್ಡ ವ್ಯಂಗ್ಯವನ್ನು ಗಮನಿಸಿ. ಮನುಷ್ಯನ ಮೂಲಭೂತ ಆಶಯವೇ ಉಳಿಯುವುದು, ಆ ಉಳಿವಿಗಾಗಿ ಅಗತ್ಯವಿರುವ ಶಕ್ತಿ ಸಂವರ್ಧನೆ ಮಾಡಿಕೊಳ್ಳುವುದು, ತಾನು ದೀರ್ಘಕಾಲ ಬಾಳುವುದು, ತನ್ನ ಸಂತಾನದ ಮೂಲಕ ಮುಂದಿನ ಪೀಳಿಗೆಗಳಲ್ಲಿಯೂ ತಾನು ಬದುಕುವುದು, ಇರುವಷ್ಟು ಕಾಲ ತನ್ನ ಭದ್ರತೆ ಅಥವಾ ರಕ್ಷಣೆ ಮಾಡಿಕೊಳ್ಳುವುದು ಅಲ್ಲವೇ? ಆದರೆ ಅವನ ಆ ಮೂಲ ಪ್ರವೃತ್ತಿಯ (ಬೇಸಿಕ್ ಇನ್‌ಸ್ಟಿಂಕ್ಟ್) ಆಶಯವನ್ನು ತಾವು ನೆರವೇರಿಸುವುದಾಗಿ ಸಾಮಾಜಿಕ ಕಟ್ಟುಪಾಡುಗಳು ವಾಗ್ದಾನ ಮಾಡುತ್ತವೆ. ಮನುಷ್ಯರೆಲ್ಲರಿಗೂ ಆ ಪ್ರವೃತ್ತಿಯೇ ಇದ್ದು ಎಲ್ಲರೂ ಅದನ್ನು ಸಾಧಿಸಬೇಕು. ಹಾಗಾಗಿ ನಿನ್ನ ಪ್ರವೃತ್ತಿಗೆ ಅನುಗುಣವಾಗಿ ನಿನ್ನಿಷ್ಟಕ್ಕೆ ನೀನು ನಡೆದುಕೊಳ್ಳಬಾರದು ಎಂದು ಕಟ್ಟಳೆಗಳು ಸೂಚಿಸುತ್ತವೆ. ನಿನ್ನ ಇಷ್ಟದ ತಿಂಡಿಯನ್ನು ನಾವು ಕೊಡುತ್ತೇವೆ. ಆದರೆ ನೀನೇ ಇಷ್ಟಪಡಬೇಡ; ಇದು ಸಾಮಾಜಿಕ ಕಟ್ಟುಪಾಡಿನ ವ್ಯಂಗ್ಯ. ಮನಸ್ಸಿನ ತನ್ನತನದ ದೃಷ್ಟಿಯಲ್ಲಿ ತಾನೇ ಜಗತ್ತಿನ ಕೇಂದ್ರ. ತಾನೇ ಎಲ್ಲರಿಗಿಂತ ಮೇಲಿದ್ದು ಸ್ವಾಮಿತ್ವವನ್ನು ಸ್ಥಾಪಿಸಬೇಕಾಗಿರುವುದು.

ಎಲ್ಲವೂ ತನ್ನ ಅಧೀನದಲ್ಲಿರಬೇಕು ಎಂಬುದು. ತಾನು ಎಲ್ಲರಿಗಿಂತ ಮುಂದೆ ಹೋಗಿ ತನಗೆ ಬೇಕಾದ್ದನ್ನು ಪಡೆಯದಿದ್ದರೆ ತಾನು ಉಳಿಯಲಾರೇನೋ ಎಂಬ ಭಯ. ಏಕೆಂದರೆ ಅವನು ಪ್ರಾರಂಭಿಕ ಕಾಲದಲ್ಲಿ ಬೇಟೆಯಾಡುತ್ತಿದ್ದಾಗ ಹಾಗೇ ಇದ್ದದ್ದು. ಮನುಷ್ಯ ತಾನು ಉಳಿಯಬೇಕೆಂದರೆ ಬೇಟೆಯಾಡಿ ತಿನ್ನಬೇಕಿತ್ತು. ಅದಕ್ಕಾಗಿ ಹೊಡೆದಾಡಬೇಕಿತ್ತು. ಆ ಹೊಡೆದಾಟದಿಂದಾಗಿಯೇ ತನ್ನ ಉಳಿಯುವ ಆಶಯಕ್ಕೆ ಧಕ್ಕೆ ಬರುವುದನ್ನು ಗಮನಿಸಿಕೊಂಡು ಹಂಚಿಕೊಳ್ಳುವ ಅನಿವಾರ್ಯತೆಯನ್ನು ಕಂಡುಕೊಂಡ. ಹಂಚಿಕೊಂಡು ಉಣ್ಣುವುದು ಹೀಗೆ ಒಂದು ಮೌಲ್ಯವಾಗಿದ್ದು ಬಲಾಬಲಗಳ ಸಂಘರ್ಷದಿಂದ ಉಂಟಾಗುವ ಅನಾಹುತವನ್ನು ತಪ್ಪಿಸುವ ಅನಿವಾರ್ಯತೆಯಿಂದ. ಇಂದು ಯಾವುದನ್ನು ನಾವು ಮೌಲ್ಯವೆಂದು ಕರೆಯುತ್ತೇವೆಯೋ ಅವೆಲ್ಲವೂ ಅನಿವಾರ್ಯತೆಗಳೇ. ಸೌಹಾರ್ದ, ಸಹಬಾಳ್ವೆ, ಸಹಿಷ್ಣುತೆ ಇವೆಲ್ಲವೂ ಅನಿವಾರ್ಯಗಳೇ. ಕರುಣೆ ಎಂಬುದೋ, ಔದಾರ್ಯ ಎಂಬುದೋ, ಸಮಾನತೆ ಎಂಬುದೋ, ಸಾಮಾಜಿಕ ನ್ಯಾಯ ಎಂಬುದೋ; ಇವುಗಳೆಲ್ಲಾ ಮೌಲ್ಯವೆಂದು ನಾವು ಆನಂದದಿಂದ ಸ್ವೀಕರಿಸಿದ್ದಲ್ಲ. ಅನಿವಾರ್ಯವಾಗಿ ಒಪ್ಪಿಕೊಂಡಿದ್ದು. ಉಳಿಯುವಿಕೆಯ ಆಶಯವನ್ನು ಪೂರೈಸಿಕೊಳ್ಳಲು ಅಗತ್ಯವಿರುವ ಅನಿವಾರ್ಯಗಳು.

ದಾಂಪತ್ಯವೆಂಬುದು ಕೂಡಾ ಅನಿವಾರ್ಯತೆಯ ಕೂಸು. ಹೆಣ್ಣನ್ನು ತನ್ನ ವಶವಾಗಿಸಿಕೊಳ್ಳಲು ಬಲಶಾಲಿಯು ದುರ್ಬಲನ ಮೇಲೆ ಮಾಡುವ ದೌರ್ಜನ್ಯವನ್ನು ದಮನಿಸಲು ವಿವಾಹ, ದಾಂಪತ್ಯವೆಂಬ ವ್ಯವಸ್ಥೆಯನ್ನು ರೂಢಿಸಿಕೊಳ್ಳಲಾಯಿತು. ಬಲಶಾಲಿಗಳ ಆಕ್ರಮಣವನ್ನು ಮತ್ತು ಅತಿಕ್ರಮಣವನ್ನು ನೈತಿಕತೆಯ ಚೌಕಟ್ಟಿನಲ್ಲಿ ನಿರ್ಬಂಧಿಸಲಾಯಿತು. ಅದೇ ಮದುವೆ. ಈ ಅನಿವಾರ್ಯಗಳನ್ನು ಕಂಡುಕೊಳ್ಳುವ ಮೊದಲು ಹೋರಾಟ ಅಥವಾ ಪೈಪೋಟಿ ಎಂಬುದೇ ಸಹಜವಾಗಿದ್ದದ್ದು. ನಡೆಯುವ ಹೋರಾಟಗಳಲ್ಲೆಲ್ಲಾ ಸದಾ ಜಯಗಳಿಸುವಷ್ಟು ಶಕ್ತಿಶಾಲಿಯಾದವನು ಯಾವ ಸಂಧಾನ ಅಥವಾ ರಾಜಿಗಳಿಗೆ ಸಮ್ಮತಿಸುತ್ತಾನೆ? ಅವನಿಗೆ ತನಗಿಂತ ಬಲಹೀನನಾದವನ ಜೊತೆಗೆ ಸಂಧಾನ ಮಾಡಿಕೊಳ್ಳುವ ಅಗತ್ಯವೇನಿದೆ? ಆದರೆ ತನ್ನ ಬಲವೂ ಇತರರ ಬಲದ ಮುಂದೆ ಸೋಲುವ ಸಂದರ್ಭಗಳು ಒದಗಿದಾಗ ಸಾಮರಸ್ಯ, ಸೌಹಾರ್ದ, ಸಹಬಾಳ್ವೆ ಎಂಬ ಸಂಧಾನದ ಅನಿವಾರ್ಯತೆ ಒದಗುತ್ತದೆ. ಈ ಸಂಧಾನವೋ ಪರಮ ಮುಕ್ತವೂ, ಪೂರ್ಣ ಸ್ವಾತಂತ್ರ್ಯವನ್ನೂ ಎಂದಿಗೂ ಕೊಡದು. ನಿಬಂಧನೆಗಳಿರುತ್ತವೆ. ಯಾಕೆಂದರೆ ಈಗ ನನ್ನ ಸ್ವಾಮಿತ್ವದ ಆಸೆ ಸೋತರೂ ಉಳಿಯುವ ಆಸೆ ಸಾಯಬಾರದಲ್ಲಾ! ಒಂದು ಆಸೆಯನ್ನು ಉಳಿಸಿಕೊಳ್ಳಲು ಮತ್ತೊಂದು ಆಸೆಯನ್ನು ಬಲಿಗೊಡುವುದು ಅನಿವಾರ್ಯವಾದಾಗಲೇ ಮೌಲ್ಯಗಳು ಹುಟ್ಟಿದವು. ನಮ್ಮ ಆಸೆಗಳ ಪಟ್ಟಿಯಲ್ಲಿ ಆದ್ಯತೆಯನ್ನೂ ಮತ್ತು ಪ್ರಾಮುಖ್ಯತೆಯನ್ನೂ ಅನುಸರಿಸಬೇಕಾದ ಅನಿವಾರ್ಯತೆ ಇದೆ. ಈ ಆಸೆ ಸದ್ಯಕ್ಕೆ ಹಿನ್ನೆಲೆಗೆ ಹೋಗಲಿ, ಈ ಆಸೆ ಮುನ್ನೆಲೆಗೆ ಬರಲಿ. ಇಂದು ಉಳಿದಿದ್ದರೆ ನಾಳೆ ನನ್ನ ಸ್ವಾಮಿತ್ವವನ್ನು ಅಥವಾ ಆಧಿಪತ್ಯವನ್ನು ಹೇಗಾದರೂ ಸಂಪಾದಿಸಿಯೇನು ಎಂಬ ಭರವಸೆ. ಮನುಷ್ಯನ ಮನಸ್ಸಿನ ತನ್ನತನಕ್ಕೆ ನಿಬಂಧನೆಗಳಿಲ್ಲದೇ ಮುಕ್ತವಾಗಿ ಅಥವಾ ಸ್ವತಂತ್ರವಾಗಿ ಎಲ್ಲರಿಗಿಂತ ಮೇಲಿರಬೇಕೆಂಬ ಬಯಕೆ. ಆದರೆ ತನ್ನದೇ ಬಲಾಬಲಗಳ ಏರುಪೇರುಗಳಿಂದಾಗಿ ನಿಬಂಧನೆಗೆ ಒಳಗಾಗಿ ಕಟ್ಟುಪಾಡುಗಳಲ್ಲಿ ಇರಬೇಕಾದ ಅನಿವಾರ್ಯತೆ. ಇಲ್ಲಿ ಮತ್ತೆ ಮುಕ್ತತೆ ಮತ್ತು ಅನಿವಾರ್ಯತೆಗಳಿಂದಾಗಿ ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ಸಂಘರ್ಷ. ಇದು ಉಂಟು ಮಾಡುವ ನಿರಾಶೆ ಕಡಿಮೆ ಪ್ರಮಾಣದ್ದಲ್ಲ. ಮನಸ್ಸಿನ ನಿರಾಶೆ, ಹತಾಶೆಗಳು ಒಳಗೇ ಬಚ್ಚಿಟ್ಟುಕೊಂಡು ಸಂಚು ಹೂಡುತ್ತಾ ಸೇಡು ಸಾಧಿಸುವ ಕೇಡಿಗಳು. ಆಕ್ರಮಣಕಾರಿಗಳು. ಅವುಗಳು ಯಾವಾಗಾದರೂ ತಮ್ಮ ಬಲದ ಪ್ರದರ್ಶನಕ್ಕೆ ಸಜ್ಜಾಗುತ್ತವೆ. ತಮ್ಮ ಸ್ವಾಮಿತ್ವ ಅಥವಾ ಆಧಿಪತ್ಯವನ್ನು ಸ್ಥಾಪಿಸಲು ನುಗ್ಗುತ್ತವೆ. ಅದೋ ಅದಮ್ಯ ಬಯಕೆ. ಮನುಷ್ಯನ ಮನಸ್ಸಿನ ಅದಮ್ಯ ಬಯಕೆಯನ್ನು ದಮನಿಸುವ ಅಗತ್ಯವಿರುವ ಕಾರಣದಿಂದಲೇ ನಿಬಂಧನೆಗಳನ್ನು ರೂಪಿಸುವ ಕಾರಣವೂ ಇರುವುದು. ಒಟ್ಟಾರೆ ವಿಷಯ ಇಷ್ಟೇ ನಮ್ಮ ಉಳಿವಿಗೆ ಅಗತ್ಯವಿರುವುದನ್ನು ಅಳವಡಿಸಿ ಕೊಳ್ಳಬೇಕು. ಬೇಡದಿರುವುದನ್ನು ಬಿಡಬೇಕು. ಪರಿಸರದ ಜೊತೆಗೆ, ಕಾಲದ ಜೊತೆಗೆ, ದೇಶ ಮತ್ತು ಕಾಲಗಳ ಉಪಲಬ್ಧಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳಬೇಕು, ರೂಪಾಂತರಗೊಳ್ಳಬೇಕು. ವಿಕಾಸವಾದದಲ್ಲಿ ಇದನ್ನೇ ಅಡಾಪ್ಟೇಶನ್ ಎಂದು ಕರೆದಿರುವುದು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News