ದಿನದಿಂದ ದಿನಕ್ಕೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿರುವ ಮೈಸೂರು ದಸರಾ ಉತ್ಸವ
ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಒಂದು ನಾಡಹಬ್ಬದಲ್ಲಿ ಸಂಸ್ಕೃತಿಯ ಪರಿಚಾರಕರ ಉಪಸ್ಥಿತಿಯೇ ಇಲ್ಲದಿರುವುದು ಏನನ್ನು ಸೂಚಿಸುತ್ತದೆ? ಸ್ತಬ್ಧ ಚಿತ್ರಗಳ ಮೂಲಕ ಬಿಂಬಿಸಲಾಗುವ ನಾಡ ಸಂಸ್ಕೃತಿಯ ಹಿಂದೆ ಈ ಪರಿಚಾರಕರ ಒಂದು ದೊಡ್ಡ ಪರಂಪರೆಯೇ ಇರುವುದನ್ನು ಹೇಗೆ ಅಲ್ಲಗಳೆಯಲು ಸಾಧ್ಯ? ಸಾಂಸ್ಕೃತಿಕ ಲೋಕದ ಅಭಿವ್ಯಕ್ತಿಯ ಮಾರ್ಗಗಳೂ ಕ್ರಮೇಣ ದಸರಾ ಸ್ತಬ್ಧಚಿತ್ರಗಳಂತೆಯೇ ಸೂತ್ರಧಾರಿಗಳ ಕೈವಶವಾಗುತ್ತಿರುವ ಸಂದರ್ಭದಲ್ಲಿ ಈ ಪ್ರಶ್ನೆಗಳು ಸಹಜವಾಗಿಯೇ ಕಾಡಬೇಕಿದೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದ ಕಾರಣ ತನ್ನ ವೈಭವವನ್ನು ಕಳೆದುಕೊಂಡಿದ್ದ ಪ್ರತಿಷ್ಠಿತ ಮೈಸೂರು ದಸರಾ ಈ ಬಾರಿ ತನ್ನೆಲ್ಲಾ ವೈಭವವನ್ನು ಮರಳಿ ಪಡೆದು, ಹಲವು ಕೊರತೆ, ನ್ಯೂನತೆ ಮತ್ತು ಅಪವಾದಗಳ ಹೊರತಾಗಿಯೂ, ಯಶಸ್ವಿಯಾಗಿ ಸಂಪನ್ನಗೊಂಡಿದೆ. ದಸರಾದ ಯಶಸ್ಸನ್ನು ಆಡಳಿತ ವ್ಯವಸ್ಥೆಯ ದೃಷ್ಟಿಯಿಂದ ನೋಡಿದಾಗ, ನೆರೆದು ಸವಿದು ಆನಂದಿಸಿದ ಜನರ ಸಂಖ್ಯೆ, ಮೈಸೂರಿನ ಪ್ರವಾಸಿ ಆಕರ್ಷಣೆಯ ಕೇಂದ್ರಗಳಿಗೆ ಭೇಟಿ ನೀಡಿದವರ ಸಂಖ್ಯೆ, ಪ್ರವಾಸೋದ್ಯಮದ ಆದಾಯ ಮತ್ತು ದಸರಾ ಪ್ರಯುಕ್ತ ಸಾಂಸ್ಕೃತಿಕ ನಗರಿಯನ್ನು ಅಲಂಕರಿಸಿದ ಪರಿ ಇವೆಲ್ಲವೂ ಮುಖ್ಯವಾಗುತ್ತದೆ. ಆದರೆ ಇಡೀ ಜಗತ್ತು ವೀಕ್ಷಿಸುವ ದಸರಾ ಪಾರಂಪರಿಕವಾಗಿ ಒಂದು ಸಾಂಸ್ಕೃತಿಕ ಉತ್ಸವವಾಗಿಯೇ ನಡೆದುಕೊಂಡುಬಂದಿದ್ದು ‘ನಾಡಹಬ್ಬ’ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ನಾಡು ಎಂದರೆ ಕನ್ನಡ ನಾಡು, ಅಂದರೆ ಜಾತಿ, ಮತ, ಧರ್ಮ, ಭಾಷೆಗಳ ಎಲ್ಲೆಯನ್ನು ಮೀರಿ ಕರ್ನಾಟಕದ ಸಮಸ್ತ ಜನತೆಯನ್ನು ಒಳಗೊಳ್ಳುವಂತಹ ಒಂದು ಸಾಂಸ್ಕೃತಿಕ ಉತ್ಸವವಾಗಿ ದಸರಾ ನಡೆಯಬೇಕಾಗುತ್ತದೆ. ಕೆಲವು ಅಪವಾದಗಳೊಂದಿಗೆ, ಒಂದು ಮಟ್ಟಿಗೆ ಹಾಗೆಯೇ ನಡೆದುಕೊಂಡು ಬಂದಿದೆ.
ಪ್ರಪ್ರಥಮ ಬಾರಿಗೆ ರಾಷ್ಟ್ರಪತಿಗಳಿಂದ ಉದ್ಘಾಟನೆಯಾದ ಕೀರ್ತಿಯೊಂದಿಗೇ ಈ ಬಾರಿ ದಸರಾ ಉತ್ಸವವು ಹಲವು ಕಾರಣಗಳಿಗಾಗಿ ಗಮನ ಸೆಳೆದಿದೆ. ಅತಿ ಹೆಚ್ಚು ದೀಪಾಲಂಕಾರ, ಹೆಚ್ಚಿನ ಸಂಖ್ಯೆಯ ಸ್ತಬ್ಧ ಚಿತ್ರಗಳೂ ಈ ವರ್ಷದ ದಸರಾ ಉತ್ಸವದ ವಿಶೇಷ. ಒಂದೆಡೆ ರಾಜಪ್ರಭುತ್ವದ ಪಳೆಯುಳಿಕೆಗಳನ್ನು ಸಂರಕ್ಷಿಸುವ ಸಾಂಪ್ರದಾಯಿಕ ಸಮಾಜದ ಪ್ರಯತ್ನಗಳು ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಿರುವುದು ಕಂಡುಬಂದರೆ ಮತ್ತೊಂದೆಡೆ ಇಡೀ ಉತ್ಸವವನ್ನು ಅಧಿಕಾರಸ್ಥ ರಾಜಕಾರಣ ಮತ್ತು ಆಡಳಿತ ವ್ಯವಸ್ಥೆಯೇ ಆವರಿಸುತ್ತಿರುವುದೂ ಕಂಡುಬರುತ್ತಿದೆ. ‘ನಾಡಹಬ್ಬ’ ಎಂದರೆ ನಾಡನ್ನು ಪ್ರತಿನಿಧಿಸುವಂತಿರಬೇಕು. ಇಲ್ಲಿ ನಾಡು ಎಂದರೆ ಅದು ಭೌಗೋಳಿಕ ಕರ್ನಾಟಕ ಅಲ್ಲ, ಇದನ್ನೂ ಮೀರಿದ ಒಂದು ನಾಡು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಮ್ಮ ನಡುವೆ ಜೀವಂತವಾಗಿದೆ. ಕೋಲಾರದಿಂದ ಬೀದರ್‌ವರೆಗಿನ ಸಾಂಸ್ಕೃತಿಕ ನೆಲೆಗಳು, ಕರಾವಳಿ ಮತ್ತು ಮಲೆನಾಡಿನ ವಿಶಿಷ್ಟ ಸಂಸ್ಕೃತಿಗಳು, ನೂರಾರು ಭಾಷೆ-ಅರೆಭಾಷೆಗಳು, ಸಾಮುದಾಯಿಕ ವೈಶಿಷ್ಟ್ಯಗಳು ಇವೆಲ್ಲವೂ ‘ನಾಡು’ ಎಂಬ ಪರಿಕಲ್ಪನೆಯಲ್ಲಿ ಒಳಗೊಳ್ಳುತ್ತವೆ.
ನಾಡ ಹಬ್ಬ ಎಂದೇ ಆಚರಿಸಲಾಗುತ್ತಿರುವ ದಸರಾ ಉತ್ಸವದಲ್ಲಿ ‘ನಾಡು’ ಎಂಬ ಪದದ ವಿಶೇಷತೆಯನ್ನೂ ಗುರುತಿಸಬೇಕಿದೆ. ನಾಡು, ನುಡಿ ಮತ್ತು ಸಂಸ್ಕೃತಿ ಈ ಮೂರೂ ಪದಗಳನ್ನು ಒಟ್ಟಿಗೆ ಬಳಸುವುದರ ಹಿಂದೆ ಒಂದು ಚಾರಿತ್ರಿಕ ಮತ್ತು ಪಾರಂಪರಿಕ ಅರ್ಥವೂ ಇದೆ. ಒಂದು ನಾಡಹಬ್ಬ ಸಾಮಾನ್ಯವಾಗಿ ನಾಡಿನ ಸಾಂಸ್ಕೃತಿಕ ನೆಲೆಗಳನ್ನು ಪ್ರಧಾನವಾಗಿ ಬಿಂಬಿಸುವಂತಹ ಜನಸಾಮಾನ್ಯರ ಹಬ್ಬವಾಗಿ ಸಂಪನ್ನಗೊಂಡರೆ ಅರ್ಥಪೂರ್ಣವಾಗುತ್ತದೆ. ವರ್ತಮಾನದ ವಾತಾವರಣದಲ್ಲಿ, ಸಾಂಸ್ಕೃತಿಕ ಮತ್ತು ಧಾರ್ಮಿಕ ಈ ಎರಡು ವಿದ್ಯಮಾನಗಳ ನಡುವಿನ ತೆಳುಗೆರೆಗಳು ಕ್ರಮೇಣ ಅಳಿಸಿಹೋಗುತ್ತಿರುವುದರಿಂದ ಮೈಸೂರು ದಸರಾ ತನ್ನ ಸಾಂಸ್ಕೃತಿಕ ಸ್ವರೂಪವನ್ನು ಉಳಿಸಿಕೊಳ್ಳಲು ಶ್ರಮಿಸಬೇಕಿದೆ. ಸಂಸ್ಕೃತಿ ಮತ್ತು ಧರ್ಮ ಈ ಎರಡೂ ವಿದ್ಯಮಾನಗಳನ್ನು ಸಮೀಕರಿಸುವ ಪ್ರಯತ್ನಗಳು ಹೆಚ್ಚಾಗುತ್ತಿರುವುದರಿಂದ ಸಾಂಸ್ಕೃತಿಕ ಚೌಕಟ್ಟು ಸಂಕುಚಿತವಾಗುತ್ತಿದ್ದು, ಧಾರ್ಮಿಕ ಆಚರಣೆಗಳಲ್ಲಿ ಲೀನವಾಗುತ್ತಿದೆ. ಧರ್ಮ ಅಥವಾ ಧಾರ್ಮಿಕ ನೆಲೆಗಳು ಸಂಸ್ಕೃತಿಯನ್ನು ಆವರಿಸಿಕೊಂಡಷ್ಟೂ ಮೂಲ ಜನಸಾಂಸ್ಕೃತಿಕ ನೆಲೆಗಳು ಶಿಥಿಲವಾಗುತ್ತಾ ಹೋಗುತ್ತವೆ.
ಈ ನೆಲೆಗಳಲ್ಲಿ ಉಗಮಿಸುವ ಎಲ್ಲ ರೀತಿಯ ಅಭಿವ್ಯಕ್ತಿಗಳೂ ಸ್ಥಾಪಿತ ಅಥವಾ ಆರೋಪಿತ ಧರ್ಮದ ಪ್ರಭಾವಕ್ಕೊಳಗಾಗಿ ತಮ್ಮ ಅಂತಃಸತ್ವವನ್ನು ಕಳೆದುಕೊಳ್ಳುತ್ತವೆ. ಜನಸಾಂಸ್ಕೃತಿಕ ನೆಲೆಗಳ ಒಳಪದರಗಳಲ್ಲಿ ಧಾರ್ಮಿಕ ಸಂಹಿತೆಗಳು ಸೃಷ್ಟಿಸುವ ಒಳಬಿರುಕುಗಳು ಮಾನವ ಸಮಾಜದ ಸೇತುವೆಗಳನ್ನು ಭಗ್ನಗೊಳಿಸುವುದನ್ನು ಇತಿಹಾಸವೇ ನಿರೂಪಿಸಿದೆ. ಈ ನಿಟ್ಟಿನಲ್ಲಿ ದಸರಾ ಒಂದು ಸಾಂಸ್ಕೃತಿಕ ನಾಡಹಬ್ಬವಾಗಿ ತನ್ನ ಹಿರಿಮೆಯನ್ನು ಕಾಪಾಡಿಕೊಂಡು ಬರಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ದಸರಾ ಒಂದು ಆಡಳಿತ ಕೇಂದ್ರಿತ ಸರಕಾರಿ ಉತ್ಸವದಂತಾಗುತ್ತಿರುವುದನ್ನೂ ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಗಮನಿಸಬೇಕಿದೆ. ರಾಜ್ಯಾದ್ಯಂತ ವರ್ಷದುದ್ದಕ್ಕೂ ನಡೆಯುವ ಜಾತ್ರೆ-ಪರಿಷೆಗಳಂತೆಯೇ ದಸರಾ ಸಹ ಸರಕಾರಿ ಪ್ರಾಯೋಜಿತ ಉತ್ಸವವಾಗುತ್ತಿದ್ದು, ಇಲ್ಲಿ ಸಂಸ್ಕೃತಿಯೂ ಆಡಳಿತಾರೂಢ ರಾಜಕೀಯ ಪಕ್ಷದ ಚೌಕಟ್ಟಿನೊಳಗೇ ನಿಷ್ಕರ್ಷೆಗೊಳಗಾಗುತ್ತದೆ.
ದಸರಾ ಅಭೂತಪೂರ್ವ ಯಶಸ್ಸು ಕಂಡಿದೆ ಎಂದರೆ, ಅತಿ ಹೆಚ್ಚು ಜನರು ವೀಕ್ಷಿಸಿದ್ದಾರೆ, ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚು ಆದಾಯ ಸಂದಿದೆ, ಪ್ರವಾಸೋದ್ಯಮ ವಲಯವು ಹೆಚ್ಚಿನ ಲಾಭ ಗಳಿಸಿದೆ ಎಂದೇ ಅರ್ಥವಾಗುವುದೇ ಹೊರತು, ಈ ಯಶಸ್ಸನ್ನು ಸಾಂಸ್ಕೃತಿಕ ನೆಲೆಯಲ್ಲಿ ನಿಷ್ಕರ್ಷೆಮಾಡಲಾಗುವುದಿಲ್ಲ. ಇಲ್ಲಿ ಗಮನಿಸಬೇಕಾದ ಸೂಕ್ಷ್ಮ ಸಂಗತಿ ಎಂದರೆ ದಸರಾ ‘ನಾಡಹಬ್ಬ’ದ ಸಂದರ್ಭದಲ್ಲಿ ಕಾಣದೆ ಹೋಗುವ ‘ನಾಡಿನ ಸಾಂಸ್ಕೃತಿಕ ಪ್ರತಿನಿಧಿತ್ವ’. ದಸರಾ ಉತ್ಸವದಲ್ಲಿ ಬಿಂಬಿತವಾಗಬೇಕಾದ ಸಾಂಸ್ಕೃತಿಕ ಭೂಮಿಕೆಯಲ್ಲಿ ಅಧಿಕಾರ ರಾಜಕಾರಣ ಮತ್ತು ಆಡಳಿತಶಾಹಿಯ ಛಾಯೆ ಆವರಿಸುವ ಒಂದು ವಿದ್ಯಮಾನವನ್ನು ಹಲವು ವರ್ಷಗಳಿಂದ ಗಮನಿಸುತ್ತಲೇ ಬಂದಿದ್ದೇವೆ. ದಸರಾ ಉಸ್ತುವಾರಿ ಹೊತ್ತಿರುವ ಮಂತ್ರಿವರೇಣ್ಯರ ರಾಜಕೀಯ ಆಕಾಂಕ್ಷೆಗಳೊಂದೆಡೆಯಾದರೆ ಮತ್ತೊಂದೆಡೆ ಆಡಳಿತಾರೂಢ ಪಕ್ಷದ ಮೇಲರಿಮೆಯೂ ಇಲ್ಲಿ ಮುಖ್ಯವಾಗಿಬಿಡುತ್ತದೆ.
ಹಾಗಾಗಿ ವಿಭಿನ್ನ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸುವ ಸಂದರ್ಭದಲ್ಲೂ ರಾಜಕೀಯ ಹಸ್ತಕ್ಷೇಪ ಮತ್ತು ಅಧಿಕಾರಸ್ಥರ ಪ್ರವೇಶದಿಂದ ಕವಿಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗುಂದಿದಂತಾಗುತ್ತವೆ. ಬಹಳ ಮುಖ್ಯವಾಗಿ ನೋಡಬೇಕಿರುವ ಸಂಗತಿ ಎಂದರೆ ವಿಜಯದಶಮಿಯಂದು, ದಸರಾ ಉತ್ಸವ ಸಂಪನ್ನವಾಗುವ ಹೊತ್ತಿನಲ್ಲಿ ನಡೆಯುವ ವಿಶ್ವವಿಖ್ಯಾತ ಜಂಬೂ ಸವಾರಿ ಮತ್ತು ಅದರ ಸುತ್ತಲಿನ ವಿದ್ಯಮಾನಗಳು. ಈ ಬಾರಿ ಜಂಬೂ ಸವಾರಿಯ ಸಂದರ್ಭದಲ್ಲಿ ನಡೆದ ಕೆಲವು ಪ್ರಮಾದಗಳನ್ನು ಬದಿಗಿಟ್ಟು ನೋಡುವುದಾದರೂ, ಇಡೀ ದಸರಾ ಉತ್ಸವದ ಸತ್ವವನ್ನು ಹೊರಸೂಸುವ ಈ ಸಮಾರಂಭದಲ್ಲಿ ‘ನಾಡಹಬ್ಬ’ದ ಸೊಗಡು ಕಾಣಲಾಗುವುದೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಜಂಬೂಸವಾರಿಯ ಸಂದರ್ಭದಲ್ಲಿ ಪ್ರಧಾನವಾಗಿ ಉಪಸ್ಥಿತರಿರುವ ಗಣ್ಯರ ಪೈಕಿ ಸಾಂಸ್ಕೃತಿಕ ಲೋಕದ ಪ್ರತಿನಿಧಿತ್ವ ಎಷ್ಟಿದೆ ಎಂದು ನೋಡಿದಾಗ ನಿರಾಸೆಯಾಗುತ್ತದೆ.
ಸರಕಾರಿ ಪ್ರಾಯೋಜಿತ ಕಾರ್ಯಕ್ರಮವಾದ್ದರಿಂದ ವೇದಿಕೆಯನ್ನಲಂಕರಿಸಲು ರಾಜಕೀಯ ‘ಗಣ್ಯರ’ ಶಿಷ್ಟಾಚಾರಗಳು ಅಡ್ಡಬರುವುದು ಸಹಜ. ಹಾಗಾಗಿ ಜಂಬೂ ಸವಾರಿಯ ಸಂದರ್ಭದಲ್ಲಿ, ಅರಮನೆಯ ಕಾರ್ಯಕ್ರಮಗಳಲ್ಲಿ ವೇದಿಕೆಯ ಹಂಬಲ ಕೇವಲ ಅಧಿಕಾರಸ್ಥರಿಗೆ ಮೀಸಲಾಗಿಬಿಡುತ್ತದೆ. ಇದನ್ನು ಹೊರಗಿಟ್ಟು ನೋಡಿದಾಗ, ಜಂಬೂ ಸವಾರಿಯ ಸಂದರ್ಭದಲ್ಲಾದರೂ ‘ನಾಡಿನ’ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಂದು ಛಾಯೆ ಕಾಣಬೇಕಿತ್ತಲ್ಲವೇ? ಸಾಂಸ್ಕೃತಿಕ ನೆಲೆಗಳಿಂದ ವಿಮುಖವಾದಾಗ ನಾಡು ಎಂಬ ಪದವೇ ತನ್ನ ಅರ್ಥ ಕಳೆದುಕೊಳ್ಳುತ್ತದೆ.
ಜಂಬೂ ಸವಾರಿಯ ಜೊತೆಗೆ ಮೆರವಣಿಗೆಯಲ್ಲಿ ಸಾಗುವ ಸ್ತಬ್ಧ ಚಿತ್ರಗಳು ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸು ವಂತಿದ್ದರೆ ಅದರ ಹಿಂದೆ ಈ ಸಂಸ್ಕೃತಿಯನ್ನು ಸಂರಕ್ಷಿಸುವ ಶ್ರಮಿಕ ಜಗತ್ತು ಇರುತ್ತದೆ ಮತ್ತು ಬೌದ್ಧಿಕವಾಗಿ ಸಾಂಸ್ಕೃತಿಕ ನೆಲೆಗಳನ್ನು ಕಾಪಾಡುವ ಅಭಿವ್ಯಕ್ತಿಯ ಚೇತನಗಳೂ ಇರುತ್ತವೆ. ಸ್ತಬ್ಧ ಚಿತ್ರಗಳು ಪ್ರತಿನಿಧಿಸುವ ಸಾಂಸ್ಕೃತಿಕ ಲಾಂಛನಗಳ ಹಿಂದೆ ಕರ್ನಾಟಕದ ಸಾಂಸ್ಕೃತಿಕ ಲೋಕದ ಪರಿಚಾರಕರೂ ಇರುತ್ತಾರೆ. ಈ ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳು ಜಂಬೂ ಸವಾರಿಯ ನಡುವೆ ಇರಬೇಕಿತ್ತಲ್ಲವೇ? ಸಾಹಿತ್ಯ, ಸಂಗೀತ, ಕಲೆ, ಚಿತ್ರಕಲೆ, ನಾಟಕ, ಗಾಯನ, ಜಾನಪದ, ಶಿಲ್ಪಕಲೆ ಹೀಗೆ ಜನಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಪ್ರತಿನಿಧಿಸುವ ಮೈಸೂರಿನ/ನಾಡಿನ ಹಿರಿಯ ಚೇತನಗಳಲ್ಲಿ ಕೆಲವರಾದರೂ ದಸರಾ ಉತ್ಸವದ ಪ್ರಮುಖ ಘಟ್ಟ ಜಂಬೂಸವಾರಿಯ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿರಬೇಕಿತ್ತು. ಈ ಬೌದ್ಧಿಕ ಪರಿಚಾರಕರು ಇಲ್ಲದೆಯೇ ಜನಸಂಸ್ಕೃತಿ ಉಸಿರಾಡುವುದಿಲ್ಲ.
ಮೈಸೂರು ಸಾಂಸ್ಕೃತಿಕ ನಗರಿ ಎಂದೇ ಕರೆಯಲ್ಪಡುತ್ತದೆ. ಈ ನಗರಿಯ ಒಂದು ಪ್ರತ್ಯಕ್ಷ ದರ್ಶನವನ್ನು ದಸರಾ ಸಂದರ್ಭದಲ್ಲಿ ನೀಡಬೇಕೆಂದರೆ, ಸಂಸ್ಕೃತಿಯನ್ನು ಪೋಷಿಸಿ, ಬೆಳೆಸುವ ಬೌದ್ಧಿಕ, ತಾತ್ವಿಕ ಪರಿಚಾರಕರು ಅಲ್ಲಿ ಉಪಸ್ಥಿತರಿರಬೇಕು. ಸಾಹಿತ್ಯ, ಕಲೆ, ಶಿಲ್ಪಕಲೆ, ನಾಟಕ, ಜಾನಪದ, ನೃತ್ಯ ಹೀಗೆ ವಿಭಿನ್ನ ಪ್ರಕಾರಗಳ ಸಾಂಸ್ಕೃತಿಕ ಪ್ರತಿನಿಧಿಗಳಿಗೆ ಜಂಬೂ ಸವಾರಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ದೊರೆತಲ್ಲಿ ‘ನಾಡಹಬ್ಬ’ ಎನ್ನುವ ಪದಬಳಕೆಯೂ ಅರ್ಥಪೂರ್ಣ ವಾಗುತ್ತದೆ. ಕಳೆದ ಹಲವು ವರ್ಷಗಳಿಂದ ಮೈಸೂರು ದಸರಾ ಉತ್ಸವದಲ್ಲಿ ಇದು ಕಾಣಲು ಸಾಧ್ಯವಾಗುತ್ತಿಲ್ಲ.
ಇನ್ನೂ ಮುಖ್ಯವಾದ ಸಂಗತಿ ಎಂದರೆ 75ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇದು ಸ್ವತಂತ್ರ ಭಾರತದ 75ನೆಯ ದಸರಾ ನಾಡಹಬ್ಬವೂ ಆಗಿದೆಯಲ್ಲವೇ? ಸಾಂಸ್ಕೃತಿಕವಾಗಿ ಕರ್ನಾಟಕ ವಿಶ್ವಮಾನ್ಯತೆಯನ್ನು ಪಡೆದಿದೆ, ಮೈಸೂರು ಸಾಂಸ್ಕೃತಿಕ ನಗರಿ ಎಂದು ಇನ್ನೂ ತನ್ನ ಹೆಸರನ್ನು ಉಳಿಸಿಕೊಂಡಿದೆ ಎನ್ನುವುದನ್ನು ಸ್ಮರಿಸುವಂತಹ ಒಂದೇ ಒಂದು ಕಾರ್ಯಕ್ರಮವೂ ದಸರಾ ಸಂದರ್ಭದಲ್ಲಿ ಕಂಡುಬರಲಿಲ್ಲ. ಹಾಗೆಯೇ ಸ್ವತಂತ್ರ ಭಾರತದ 75ನೇ ದಸರಾ ಉತ್ಸವದಲ್ಲಿ ಮೈಸೂರಿನಲ್ಲಿ ಸ್ವಾತಂತ್ರ್ಯ ಸಂಗ್ರಾಮವನ್ನು ಪ್ರತಿನಿಧಿಸುವ ಮುತ್ಸದ್ದಿಗಳು ಇರುವುದನ್ನೂ ದಸರಾ ಉತ್ಸವ ಸಮಿತಿ ಗಮನಿಸಬೇಕಿತ್ತಲ್ಲವೇ ? ಉದ್ಘಾಟನೆ, ಪುಷ್ಪಾರ್ಚನೆ ಮುಂತಾದ ಆಚರಣಾತ್ಮಕ ವಿಧಿವಿಧಾನಗಳು ರಾಜಕೀಯ ಶಿಷ್ಟಾಚಾರಗಳಿಗೊಳಪಡುವುದರಿಂದ ಇದರಿಂದಾಚೆಗಿನ ಸಂಭ್ರಮದಲ್ಲಿ ಜೀವಂತವಾಗಿರುವ ನಾಡಿನ, ಹಿರಿಯ ಸ್ವಾತಂತ್ರ್ಯ ಸಂಗ್ರಾಮಿಗಳು ಏಕೆ ನಿರ್ಲಕ್ಷಿಸಲ್ಪಟ್ಟರು? ಮೈಸೂರಿನಲ್ಲೇ ಇರುವ ಸ್ವಾತಂತ್ರ್ಯ ಸಂಗ್ರಾಮಿಗಳಾದರೂ ಆಡಳಿತ ವ್ಯವಸ್ಥೆಗೆ, ದಸರಾ ಉಸ್ತುವಾರಿ ಸಮಿತಿಗೆ ನೆನಪಾಗಬೇಕಿತ್ತಲ್ಲವೇ? ಸ್ವಾತಂತ್ರ್ಯದ 75ನೆಯ ವರ್ಷದ ಸಂಭ್ರಮದಲ್ಲಿ ಸ್ವಾತಂತ್ರ್ಯ ಸಂಗ್ರಾಮಿಯೊಬ್ಬರಿಗೆ ಈ ಸಮ್ಮಾನವನ್ನು ನೀಡಲು ಏನು ಅಡ್ಡಿಯಾಗಿತ್ತು? ಈ ಪ್ರಶ್ನೆಗಳು ಬಹುಶಃ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ.
ಹಾಗೆಯೇ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಒಂದು ನಾಡಹಬ್ಬದಲ್ಲಿ ಸಂಸ್ಕೃತಿಯ ಪರಿಚಾರಕರ ಉಪಸ್ಥಿತಿಯೇ ಇಲ್ಲದಿರುವುದು ಏನನ್ನು ಸೂಚಿಸುತ್ತದೆ? ಸ್ತಬ್ಧ ಚಿತ್ರಗಳ ಮೂಲಕ ಬಿಂಬಿಸಲಾಗುವ ನಾಡ ಸಂಸ್ಕೃತಿಯ ಹಿಂದೆ ಈ ಪರಿಚಾರಕರ ಒಂದು ದೊಡ್ಡ ಪರಂಪರೆಯೇ ಇರುವುದನ್ನು ಹೇಗೆ ಅಲ್ಲಗಳೆಯಲು ಸಾಧ್ಯ? ಸಾಂಸ್ಕೃತಿಕ ಲೋಕದ ಅಭಿವ್ಯಕ್ತಿಯ ಮಾರ್ಗಗಳೂ ಕ್ರಮೇಣ ದಸರಾ ಸ್ತಬ್ಧಚಿತ್ರಗಳಂತೆಯೇ ಸೂತ್ರಧಾರಿಗಳ ಕೈವಶವಾಗುತ್ತಿರುವ ಸಂದರ್ಭದಲ್ಲಿ ಈ ಪ್ರಶ್ನೆಗಳು ಸಹಜವಾಗಿಯೇ ಕಾಡಬೇಕಿದೆ.