ಉಳ್ಳಾಲ ದರ್ಗಾ ವತಿಯಿಂದ ಮಿಲಾದುನ್ನಬಿ ಪ್ರಯುಕ್ತ ಪ್ರವಾದಿ ಸಂದೇಶ ಜಾಥಾ
ಉಳ್ಳಾಲ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ಮಿಲಾದುನ್ನಬಿ ಕಾರ್ಯಕ್ರಮ ಉಳ್ಳಾಲ ದರ್ಗಾದಲ್ಲಿ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಧ್ವಜಾರೋಹಣ ನೆರವೇರಿಸಿದರು. ಕೇಂದ್ರ ಜುಮಾ ಮಸೀದಿಯ ಖತೀಬ್ ಅನ್ವರ್ ಅಲಿ ದಾರಿಮಿ ದುಆ ನೆರವೇರಿಸಿದರು.
ಬಳಿಕ ಉಳ್ಳಾಲ ಜುಮಾ ಮಸೀದಿ, ಸೆಯ್ಯದ್ ಮದನಿ ದರ್ಗಾ, ಸೆಯ್ಯದ್ ಮದನಿ ಅರೆಬಿಕ್ ಎಜುಕೇಶನಲ್ ಟ್ರಸ್ಟ್, ಸೆಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ನೇತೃತ್ವದಲ್ಲಿ ಕೋಟೆಪುರದಿಂದ ಕೋಡಿ, ಅಬ್ಬಕ್ಕ ಸರ್ಕಲ್, ಮುಕಚೇರಿ ರಸ್ತೆಯಾಗಿ ಉಳ್ಳಾಲ ದರ್ಗಾಕ್ಕೆ ಮೀಲಾದ್ ಜಾಥಾ ನಡೆಯಿತು. ಕೋಟೆಪುರ ಮಸೀದಿ ಖತೀಬ್ ಇರ್ಶಾದ್ ಸಖಾಫಿ ದುಆ ಮೂಲಕ ಚಾಲನೆ ನೀಡಿದರು.
ಬಳಿಕ ದರ್ಗಾ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರು, ಪ್ರವಾದಿಯವರ ಸಂದೇಶವನ್ನು ಪಾಲಿಸಿಕೊಂಡು ಉತ್ತಮ ಜೀವನ ಮಾಡಬೇಕು. ಒಗ್ಗಟ್ಟಿನ ಜೀವನ ನಮ್ಮದಾಗಬೇಕು ಎಂದು ಕರೆ ನೀಡಿದರು.
ಶಾಸಕ ಯುಟಿ ಖಾದರ್ ಮಾತನಾಡಿ, ತಾಳ್ಮೆಯಿಂದ ಸಂದೇಶ ನೀಡಿದ ಗುರು ಪ್ರವಾದಿಯವರ ಜೀವನ ಹಾದಿ ನಮ್ಮದಾಗಬೇಕು. ಎಲ್ಲದಕ್ಕೂ ತಾಳ್ಮೆ ಮುಖ್ಯ. ತಾಳ್ಮೆ ಇಲ್ಲದಿದ್ದರೆ ಐಕ್ಯತೆಯ ಬದುಕು ಸಾಧ್ಯವಿಲ್ಲ. ಸಮಾಜದಲ್ಲಿ ಏಕತೆ ನಾವು ಕಾಪಾಡಿಕೊಂಡು ಬರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಸೆಯ್ಯದ್ ಮದನಿ ಅರೆಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್, ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಉಪಾಧ್ಯಕ್ಷ ಯುಕೆ ಮೋನು, ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಫಾರೂಕ್ ಉಳ್ಳಾಲ್, ಅಲಿಮೋನು, ಎಂ.ಎಚ್ ಇಬ್ರಾಹಿಂ, ಸಲಾಂ ಮದನಿ,ಇಬ್ರಾಹಿಂ ಅಹ್ಸನಿ, ಮತ್ತಿತರರು ಉಪಸ್ಥಿತರಿದ್ದರು.
ಅರೆಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ ವಂದಿಸಿದರು.