9 ಮಂದಿಯನ್ನು ಕೊಂದ ನರಭಕ್ಷಕ ಹುಲಿಯನ್ನು ಕೊಂದ ಅರಣ್ಯಾಧಿಕಾರಿಗಳು: ವರದಿ
ಬಗಾಹಾ: ಕಳೆದ ಕೆಲವು ದಿನಗಳಿಂದ ಒಂಬತ್ತು ಜನರನ್ನು ಕೊಂದ ನರಭಕ್ಷಕ ಹುಲಿಯನ್ನು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್ ಮತ್ತು ಪಾಟ್ನಾದಿಂದ ಕರೆಸಲಾದ ಅರಣ್ಯ ಸಿಬ್ಬಂದಿಯ ತಂಡವು ಬಗಾಹಾದ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ವಿಟಿಆರ್) ಹುಲಿಯನ್ನು ಹೊಡೆದುರುಳಿಸಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಪ್ರಭಾತ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
"ವಿಟಿಆರ್ ಪ್ರದೇಶದಿಂದ ಹೊರಗು ಬಂದ ಹುಲಿಯನ್ನು ಬೋನಿನಲ್ಲಿ ಹಿಡಿಯಲು ಅರಣ್ಯ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಹುಲಿ ಜನವಸತಿಯಲ್ಲಿ ವಾಸಿಸಲು ಒಗ್ಗಿಕೊಂಡಿರುವುದು ಕಂಡುಬಂದಾಗ ಕಾರ್ಯವಿಧಾನದ ಪ್ರಕಾರ ಹತ್ಯೆಗೆ ಆದೇಶ ನೀಡಲಾಗಿದೆ" ಎಂದು ಅವರು ಹೇಳಿದರು.
ಕಳೆದ ಕೆಲವು ದಿನಗಳಿಂದ ಹುಲಿ ಒಂಬತ್ತು ಜನರನ್ನು ಕೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಬಗಾಹಿ ಪಂಚಾಯತ್‌ನ 36 ವರ್ಷದ ಸಂಜಯ್ ಮಹತೋ ಹುಲಿ ಸಂರಕ್ಷಿತ ಪ್ರದೇಶದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಅದಕ್ಕೂ ಮುನ್ನ ಸಿಗಡಿ ಗ್ರಾಮದ 12 ವರ್ಷದ ಬಗಾದಿ ಕುಮಾರಿಯನ್ನು ಹುಲಿ ಕೊಂದು ಹಾಕಿತ್ತು ಎಂದು ವರದಿಯಾಗಿದೆ.
ಹುಲಿಯ ಮೃತದೇಹವನ್ನು ವಿಧಿವಿಧಾನಗಳ ಪ್ರಕಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಜಿಲ್ಲಾ ಅರಣ್ಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಬಾಲಿವುಡ್ ನಟ ರಣದೀಪ್ ಹೂಡಾ, ಅಧಿಕಾರಿಗಳು ಪ್ರಮಾಣಿತ ಪ್ರೋಟೋಕಾಲ್ ಅನ್ನು ಉಲ್ಲಂಘಿಸಿದ್ದಾರೆ ಮತ್ತು ಹುಲಿಯನ್ನು ಗುಂಡಿಕ್ಕಿದ ನಂತರ ಜನರು ಅದನ್ನು ಎಳೆದಾಡಿದ್ದಾರೆ ಎಂದು ಟೀಕಿಸಿದ್ದಾರೆ. ಗಾಯಗೊಂಡ ಹುಲಿಯ ಮೀಸೆಯನ್ನು ಜನರು ತುಳಿದು ಎಳೆದಾಡುತ್ತಿರುವ ಘಟನೆಯ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ನಿಗದಿಪಡಿಸಿದ ಪ್ರೋಟೋಕಾಲ್‌ಗೆ ವಿರುದ್ಧವಾಗಿ ಹುಲಿಯನ್ನು ಬೇಟೆಯಾಡಲು ಬಿಹಾರ ಅರಣ್ಯ ಇಲಾಖೆಯು ಖಾಸಗಿ ಬೇಟೆಗಾರನನ್ನು ನಿಯೋಜಿಸಿದೆ ಎಂದು ಅವರು ಆರೋಪಿಸಿದ್ದಾರೆ.
Firstly the Bihar forest dept chooses to deploy private hunter to kill a problem tiger ignoring @ntca_india‘s SOP and then in complete disregard to the set protocols and death, people can be seen stomping and pulling its whiskers. Is this a way to treat the national animal? pic.twitter.com/K2gE5X21ps
— Randeep Hooda (@RandeepHooda) October 9, 2022