ಕಲ್ಯಾಣ ಕರ್ನಾಟಕದ ಸೌಹಾರ್ದ ಪರಂಪರೆಗೆ ಎದುರಾದ ಅಪಾಯ

Update: 2022-10-10 05:30 GMT

ಕೋಮುವಾದಿ ಶಕ್ತಿಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಎಂದೂ ಜನರ ಬಳಿ ಹೋಗುವುದಿಲ್ಲ. ಅವರದೇನಿದ್ದರೂ ಜನ ವಿಭಜಕ ಕಾರ್ಯಸೂಚಿ. ತಮ್ಮ ಈ ಕಾರ್ಯಸೂಚಿಯ ಜಾರಿಗಾಗಿ ಮಠ, ಮಂದಿರಗಳನ್ನು, ಗುಡಿ, ಗುಂಡಾರಗಳನ್ನು ಹಾಗೂ ಹಬ್ಬ ಹುಣ್ಣಿಮೆ, ಜಾತ್ರೆ, ಸಂತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಮಠ, ಮಂದಿರ, ಪೂಜಾ ಸ್ಥಳಗಳನ್ನು ಶಾಂತಿಯನ್ನು ಕದಡುವ ಶಕ್ತಿಗಳಿಂದ ಮುಕ್ತ ಗೊಳಿಸುವುದು ಇಂದಿನ ಅಗತ್ಯವಾಗಿದೆ.


ದಕ್ಷಿಣ ಭಾರತದಲ್ಲಿ ಗೆಲ್ಲಲು ಅವಕಾಶವಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಖಾತ್ರಿ ಮಾಡಿಕೊಂಡ ಕೋಮುವಾದಿ ಶಕ್ತಿಗಳು ಈ ರಾಜ್ಯದಲ್ಲೂ ಎಂದೂ ಸಂಪೂರ್ಣ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ಆಪರೇಷನ್ ಕಮಲ ಎಂಬ ಅಕ್ರಮ ಮಾರ್ಗದ ಮೂಲಕ ಅಧಿಕಾರಕ್ಕೆ ಬಂದಾಗಲೂ ದಕ್ಷ, ಪಾರದರ್ಶಕ ಆಡಳಿತ ನೀಡಲಿಲ್ಲ. ಅಧಿಕಾರಕ್ಕೆ ಬಂದಾಗಲೆಲ್ಲ ನಾನಾ ಹಗರಣಗಳ ಹೊಲಸನ್ನು ಮೈಗೆ ಮೆತ್ತಿಕೊಂಡು ಜನರ ನಂಬಿಕೆಯನ್ನು ಕಳೆದುಕೊಂಡ ಇತಿಹಾಸ ಇವರದು.

ಹೀಗೆ ಜನರ ನಂಬಿಕೆ ಕಳೆದುಕೊಂಡಾಗೆಲ್ಲ ಇವರು ಅನುಸರಿಸುವ ತಂತ್ರ ಕೋಮು ಮತ್ತು ಜಾತಿ ಆಧಾರದಲ್ಲಿ ಜನರನ್ನು ವಿಭಜಿಸುವುದು. ಅಧಿಕಾರದಲ್ಲಿರುವ ಯಾವುದೇ ಪಕ್ಷ ತನ್ನ ಸಾಧನೆಗಳ ಪಟ್ಟಿಯೊಂದಿಗೆ ಮತದಾರರ ಮನೆ ಬಾಗಿಲಿಗೆ ಹೋಗುವುದು ಪ್ರಜಾಪ್ರಭುತ್ವದ ಪರಂಪರೆ. ಆದರೆ, ಜನತಂತ್ರದ ಮೂಲತತ್ವದಲ್ಲೇ ವಿಶ್ವಾಸವಿಲ್ಲದ ಇವರು ಜನಸಾಮಾನ್ಯರ ನಡುವೆ ವೈಷಮ್ಯದ ವಿಷಬೀಜ ಬಿತ್ತಿ ತಮ್ಮದೇ ಓಟ್ ಬ್ಯಾಂಕ್ ನಿರ್ಮಿಸಿಕೊಂಡು ಕೆಲ ಸ್ಥಾನಗಳನ್ನು ಗೆಲ್ಲುತ್ತ ಬಂದಿದ್ದಾರೆ. ಬಹುಮತ ಮಾಡಿಕೊಳ್ಳಲು ಕೆಲ ಶಾಸಕರನ್ನು ಖರೀದಿಸುತ್ತಾರೆ. ಇನ್ನು ಕೆಲವರಿಗೆ ತನಿಖಾ ಸಂಸ್ಥೆಗಳ ಹೆದರಿಕೆ ಹಾಕುತ್ತಾರೆ.

ಸೌಹಾರ್ದದ ಬಹುದೊಡ್ಡ ಪರಂಪರೆಯಿರುವ ಕರ್ನಾಟಕದಲ್ಲಿ ಕೂಡ ಇವರು ಮತೀಯ ಭಾವನೆಗಳನ್ನು ಕೆರಳಿಸಿ ನೆಲೆ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಕರಾವಳಿ ಪ್ರದೇಶದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಇವರು ಕಬಳಿಸಿದ್ದಾರೆ. ಉತ್ತರ ಕನ್ನಡ ಅಂದರೆ ಕಾರವಾರ ಜಿಲ್ಲೆಯಲ್ಲೂ ಕಾಲೂರಿದ್ದಾರೆ. ಹಿಂದಿನ ಮುಂಬೈ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಈದ್ಗಾ ಮೈದಾನ ವಿವಾದ ಸೃಷ್ಟಿಸಿ ಬೇರು ಬಿಟ್ಟರು. ಧಾರವಾಡದ ನಂತರ ಬೆಳಗಾವಿ, ಅವಿಭಜಿತ ಬಿಜಾಪುರ, ಗದಗ, ಹಾವೇರಿಯಲ್ಲಿ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ವೀರಶೈವ ಲಿಂಗಾಯತರ ಮತಗಳಿಗೆ ಹಾಗೂ ಕುರುಬರನ್ನು ಹೊರತು ಪಡಿಸಿ ಇತರ ಹಿಂದುಳಿದ ವರ್ಗಗಳ ಮತಗಳಿಗೆ ಲಗ್ಗೆ ಹಾಕಿದರು. ಆದರೆ, ಬಹುಮತ ಗಳಿಸುವಷ್ಟು ಸಂಖ್ಯೆ ತಲುಪಲು ಸಾಧ್ಯವಾಗಲಿಲ್ಲ.

ರಾಜ್ಯದ ಬಿಜೆಪಿ ಸರಕಾರದಲ್ಲಿ ಅಶೋಕ್ ಎಂಬ ಕಂದಾಯ ಸಚಿವರಿದ್ದಾರೆ. ಅವರು ಮಾಡುವ ಕೆಲಸಗಳು ಬೇಕಾದಷ್ಟಿವೆ. ಅವುಗಳನ್ನು ಬಿಟ್ಟು ಚರಿತ್ರೆಯ ಪುಟ ಸೇರಿದ ಟಿಪ್ಪು ಸುಲ್ತಾನ್ ಮೇಲೆ ವಾಗ್ದಾಳಿ ಆರಂಭಿಸಿದ್ದಾರೆ.

ಅವರ ಪ್ರಕಾರ, ದೇವನಹಳ್ಳಿಯಲ್ಲಿ ಹುಟ್ಟಿದ ಟಿಪ್ಪುಸುಲ್ತಾನ್ ಕನ್ನಡದವನಲ್ಲ ಹಾಗೂ ಶೃಂಗೇರಿಯಲ್ಲಿ ಸಲಾಂ ಆರತಿ ನಿಲ್ಲಿಸುವುದಾಗಿ ಅಶೋಕ್ ಹೇಳಿದ್ದಾರೆ. ಇಂಥ ಅವಿವೇಕಿ ಹೇಳಿಕೆ ನೀಡಿದರೆ ಜನರ ಅಪಹಾಸ್ಯಕ್ಕೆ ಒಳಗಾಗುತ್ತೇನೆ ಎಂಬ ಅರಿವೂ ಅವರಿಗಿಲ್ಲ. ದೇವನಹಳ್ಳಿಯಲ್ಲಿ ಜನಿಸಿ, ಶ್ರೀರಂಗಪಟ್ಟಣದಲ್ಲಿ ಆಡಳಿತ ನಡೆಸಿದ ಟಿಪ್ಪು ಕನ್ನಡದವನಲ್ಲ ಎಂದಾದರೆ ನಿರ್ಮಲಾ ಸೀತಾರಾಮನ್ ಕನ್ನಡದವರಾ? ಅವರನ್ನೇಕೆ ಕರ್ನಾಟಕದಿಂದ ರಾಜ್ಯಸಭೆಗೆ ಕಳಿಸಿದಿರಿ? ದೇವನಹಳ್ಳಿಯಲ್ಲಿ ಹುಟ್ಟಿದ ಟಿಪ್ಪು ಕನ್ನಡಿಗನಲ್ಲವಾದರೆ ಆಂಧ್ರದಲ್ಲಿ ಹುಟ್ಟಿದ ನಿರ್ಮಲಾ, ವೆಂಕಯ್ಯ ನಾಯ್ಡು ಕನ್ನಡದವರಾ? ಓಟಿಗಾಗಿ ಇಂಥ ಚಿಲ್ಲರೆ ರಾಜಕಾರಣ ಮಾಡಬೇಡಿ. ಅಶೋಕ್ ಅವರೇ, ಹಿರಿಯ ಸಚಿವರಾಡುವ ಮಾತು ಇದಲ್ಲ. ನಿಮ್ಮ ಬಾಯಿಯಿಂದ ಇಂಥ ಮಾತು ಬರಬಾರದು.

ಕೋಮುವಾದಿ ಶಕ್ತಿಗಳು ಜನರ ತಿರಸ್ಕಾರಕ್ಕೆ ಗುರಿಯಾದಾಗಲೆಲ್ಲ ಬಾಬಾ ಬುಡನಗಿರಿ, ಈದ್ಗಾ ಮೈದಾನ, ಟಿಪ್ಪು ಸುಲ್ತಾನ್, ಮತಾಂತರ, ಗೋ ಹತ್ಯೆಯಂಥ ಸಮಸ್ಯೆಗಳನ್ನು ಸೃಷ್ಟಿಸಿ ನೆಲೆ ಹುಡುಕಾಟ ಆರಂಭಿಸುತ್ತಾರೆ.

ಈಗ ಮೈಸೂರು-ಬೆಂಗಳೂರು ರೈಲಿನ ಟಿಪ್ಪು ಹೆಸರನ್ನು ಬದಲಿಸಿ ಒಡೆಯರ ಹೆಸರನ್ನು ಇಟ್ಟಿದ್ದು ಒಡೆಯರ ಮೇಲಿನ ಪ್ರೀತಿಯಿಂದಲ್ಲ. ಹೆಸರು ಬದಲಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಹೊಸ ರೈಲನ್ನು ಓಡಿಸುವ, ಕರ್ನಾಟಕದ ರೈಲು ಸೌಕರ್ಯಗಳನ್ನು ಸುಧಾರಿಸುವ ಇಚ್ಛೆ ಮತ್ತು ಸಾಮರ್ಥ್ಯವಿಲ್ಲದ ಇವರು ಈಗಾಗಲೇ ಓಡುತ್ತಿರುವ ರೈಲುಗಳ ಹೆಸರು ಬದಲಿಸಿ ಅದನ್ನೇ ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಾರೆ.

ಪೇಶ್ವೆಗಳ ದಾಳಿಯಿಂದ ಹಾಳಾದ ಶೃಂಗೇರಿ ಮಠಕ್ಕೆ ಟಿಪ್ಪು ನೆರವು ನೀಡಿದ ದಾಖಲೆಗಳಿವೆ. ಅಂತಲೇ, ಈ ಮಠದಲ್ಲಿ ಟಿಪ್ಪು ಹೆಸರಿನಲ್ಲಿ ಸಲಾಂ ಆರತಿ ನಡೆಯುತ್ತದೆ. ಇದನ್ನು ನಿಲ್ಲಿಸುವ ಸಚಿವ ಅಶೋಕ್ ಮಾತು ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ. ಈಗಾಗಲೇ ಶೃಂಗೇರಿ ಮಠದ ಆಡಳಿತಾಧಿಕಾರಿ ವಿ.ಆರ್.ಗೌರಿ ಶಂಕರ ಅವರು ಸಚಿವ ಅಶೋಕ್ ಹೇಳಿಕೆಗೂ ಮಠಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ಟಿಪ್ಪು ಹೆಸರನ್ನು ಅಳಿಸಲು ಹೊರಟರೆ ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಟಿಪ್ಪು ನೀಡಿದ ಮೂರ್ತಿಯನ್ನು ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ. ಟಿಪ್ಪು ಮೈಸೂರಿಗೆ ಪರಿಚಯಿಸಿದನೆಂದು ರೇಷ್ಮೆ ಕೃಷಿ ಮತ್ತು ಬಟ್ಟೆಗಳ ಮೇಲೆ ನಿರ್ಬಂಧ ವಿಧಿಸುತ್ತೀರಾ? ಚರಿತ್ರೆಯ ಗೋರಿಗಳನ್ನು ಎಷ್ಟು ಕಾಲ ಕೆದಕುತ್ತೀರಿ?

ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಮುಂಬಯಿ ಕರ್ನಾಟಕದ ಬಹುಭಾಗದಲ್ಲಿ ನಾನಾ ಕಸರತ್ತುಗಳ ಮೂಲಕ ನೆಲೆಯನ್ನು ವಿಸ್ತರಿಸಿಕೊಂಡ ಕೋಮುವಾದಿ ಶಕ್ತಿಗಳು ಈಗ ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲ್ಪಡುತ್ತಿದ್ದ ಕಲ್ಯಾಣ ಕರ್ನಾಟಕದ ಮೇಲೆ ಕಣ್ಣು ಹಾಕಿವೆ.

ಕೋಮುವಾದಿ ಶಕ್ತಿಗಳಿಗೆ ನುಂಗಲಾಗದ ತುತ್ತಾಗಿರುವುದು ಶರಣ, ಸೂಫಿಗಳ ಬಸವನ ನಾಡು ಕಲ್ಯಾಣ ಕರ್ನಾಟಕ. ಏನೇ ಹರ ಸಾಹಸ ಮಾಡಿದರೂ ಹಿಂದೆ ಹೈದರಾಬಾದ್ ಎಂದು ಕರೆಯಲ್ಪಡುವ ಕಲ್ಯಾಣ ಕರ್ನಾಟಕದಲ್ಲಿ ನೆಲೆಯೂರಲು ಇವರಿಗೆ ಸಾಧ್ಯವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದ ಒಡನಾಟ ಹೊಂದಿರುವ ನನಗೆ ಈ ಮಣ್ಣಿನ ಬಹುತ್ವದ ಗುಣ ಪರಿಚಯವಾಯಿತು. ಬಸವಣ್ಣನವರ ಹನ್ನೆರಡನೇ ಶತಮಾನದ ಸಾಮಾಜಿಕ ಹೋರಾಟ, ಬಂದೇ ನವಾಜರ ಸೂಫಿ ಪ್ರಭಾವ ಮಾತ್ರವಲ್ಲ, ಬೌದ್ಧ ಧರ್ಮದ ಜೀವ ಸೆಲೆಗಳು ಮತ್ತು ಸ್ವಾತಂತ್ರ ನಂತರ ದಲಿತ ಮತ್ತು ಎಡಪಂಥೀಯ ಸಂಘಟನೆಗಳ ನಿರಂತರ ಚಟುವಟಿಕೆಗಳು, ವೀರೇಂದ್ರ ಪಾಟೀಲ, ಕೊಲ್ಲೂರು ಮಲ್ಲಪ್ಪ, ಕಮ್ಯುನಿಸ್ಟ್ ನಾಯಕರಾದ ಶ್ರೀನಿವಾಸ ಗುಡಿ, ಗಂಗಾಧರ ನಮೋಶಿ, ವಿ.ಎನ್.ಪಾಟೀಲ ಹಾಗೂ ಎಪ್ಪತ್ತರ ದಶಕದ ನಂತರ ಮಲ್ಲಿಕಾರ್ಜುನ ಖರ್ಗೆ, ಧರಮ್‌ಸಿಂಗ್ ಅವರಂಥ ಸಮರ್ಥ ನಾಯಕತ್ವ ಇವೆಲ್ಲವೂ ಸೇರಿ ಕಲ್ಯಾಣ ಕರ್ನಾಟಕ ಕೋಮುವಾದಿ ಶಕ್ತಿಗಳ ಪಾಲಿಗೆ ದೂರದ ಬೆಟ್ಟವಾಗಿದೆ.

ಹಾಗೆಂದು ಅವರೇನೂ ಸುಮ್ಮನಿಲ್ಲ. ಆರ್ಥಿಕ ಸಾಮಾಜಿಕ ರಾಜಕೀಯ ಕಾರ್ಯಕ್ರಮಗಳಿಲ್ಲದ ಕೋಮುವಾದಿ ಶಕ್ತಿಗಳು ಜನರ ಬಳಿ ಹೋಗುವುದು ಅವರನ್ನು ಜೊತೆಗೂಡಿಸಲು ಅಲ್ಲ. ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಓಟಿನ ಬೆಳೆ ತೆಗೆಯಲು. ಅದಕ್ಕಾಗಿ ಇವರು ಅನೈತಿಕವಾಗಿ ಬಳಸಿಕೊಳ್ಳುವುದು ದೇವರು, ಧರ್ಮ ಮತ್ತು ಹಬ್ಬಗಳನ್ನು ಮತ್ತು ಪೂಜಾ ಸ್ಥಳಗಳನ್ನು. ಅದರ ಜೊತೆಗೆ ಸಮಾಜ ವಿರೋಧಿ ಶಕ್ತಿಗಳನ್ನು. ವಿಶೇಷವಾಗಿ ಈ ಭಾಗದಲ್ಲಿ ಪ್ರಬಲವಾಗಿರುವ ಲಿಂಗಾಯತರಿಗೆ ಬಲೆ ಬೀಸಲು ಮಸಲತ್ತು ಮಾಡುತ್ತಲೇ ಇದ್ದಾರೆ. ಆದರೆ, ಇಲ್ಲಿನ ಬಹುತೇಕ ಲಿಂಗಾಯತರು ಇವರನ್ನು ನಂಬುವುದಿಲ್ಲ. ಇದರರ್ಥ ಅವರಿಗೆ ಕೋಮು ಕಲಹ ಬೇಕಾಗಿಲ್ಲ.

ಇದರಿಂದ ಹತಾಶರಾದ ಕೋಮುವಾದಿ ಕಿಡಿಗೇಡಿಗಳು ಬೀದರ್ ಜಿಲ್ಲೆಯಲ್ಲಿ ಬಾಲ ಬಿಚ್ಚಿದರು. ಅಲ್ಲಿನ ಸೌಹಾರ್ದದ ತಾಣವಾದ ಮುಹಮ್ಮದ್ ಗವಾನ್ ಮದ್ರಸದಲ್ಲಿ ದಸರಾ ದಿವಸ ಅಕ್ರಮ ಪ್ರವೇಶ ಮಾಡಿ ಕೋಲಾಹಲದ ವಾತಾವರಣ ನಿರ್ಮಿಸಿದರು. ಭಾರತೀಯ ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಈ ಮದ್ರಸ ಪ್ರದೇಶದಲ್ಲಿ ಕೋಮುವಾದಿಗಳು ಅಕ್ರಮ ಪ್ರವೇಶ ಮಾಡಿದ ಬಗ್ಗೆ ಸದರಿ ಇಲಾಖೆಯವರು ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ. ಕೋಮುವಾದಿ ಕಿಡಿಗೇಡಿಗಳು ಅಕ್ರಮ ಪ್ರವೇಶ ಮಾಡಿದ್ದು ಮಾತ್ರವಲ್ಲ ಒಳಗೆ ನುಗ್ಗಿ ಕುಂಕುಮ ಹಚ್ಚಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ್ದಾರೆ.

ಕಳೆದ ವರ್ಷ ಆಳಂದದಲ್ಲಿ ದರ್ಗಾ ವಿವಾದವನ್ನು ಕೆರಳಿಸಲು ಯತ್ನಿಸಿದರು. ಈ ವರ್ಷ ದುರ್ಗಾಷ್ಟಮಿ ದಿವಸ ಕಲಬುರಗಿಯಲ್ಲಿ ರಾವಣ ದಹನ ಎಂಬ ಉತ್ತರ ಭಾರತದ ಹೊಸ ಪ್ರಹಸನ ನಡೆಸಲು ಹೊರಟರು. ಅದಕ್ಕಾಗಿ ಅಂದರೆ ಶಿವಭಕ್ತ ರಾವಣನ ಪ್ರತಿಕೃತಿ ದಹನಕ್ಕಾಗಿ ಇವರು ಆಯ್ಕೆ ಮಾಡಿಕೊಂಡ ಜಾಗ ಶರಣ ಬಸವೇಶ್ವರ ದೇವಾಲಯದ ಮುಂದಿನ ಮೈದಾನ. ಆದರೆ ಕಲಬುರಗಿ ನಾಗರಿಕರು ಜಾಗೃತರಾದರು. ರಾವಣ ದಹನಕ್ಕೆ ಅವಕಾಶ ನೀಡಿದರೆ ಸುಮ್ಮನಿರುವುದಿಲ್ಲ ಎಂದು ಸೌಹಾರ್ದ ದಸರಾವನ್ನು ಆಚರಿಸಿ ಸರಕಾರಕ್ಕೆ ಎಚ್ಚರಿಕೆ ನೀಡಿದರು. ಹೀಗಾಗಿ ಕಲಬುರಗಿ ಪೊಲೀಸರು ರಾವಣ ದಹನಕ್ಕೆ ಅವಕಾಶ ನೀಡಲಿಲ್ಲ.

ಸುಮಾರು 700 ವರ್ಷಗಳ ಇತಿಹಾಸ ವಿರುವ ಮುಹಮ್ಮದ್ ಗವಾನ್ ನಿರ್ಮಿಸಿದ ಈ ಮದ್ರಸ ಆ ಕಾಲದಲ್ಲಿ ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ಪಡೆದ ಅತ್ಯಂತ ಶ್ರೇಷ್ಠ ವಿಶ್ವವಿದ್ಯಾನಿಲಯವಾಗಿತ್ತು.

ಬೀದರ್ ನಗರದ ಹದಿನಾಲ್ಕನೇ ಶತಮಾನದ ಸ್ಮಾರಕವಾಗಿರುವ ಮುಹಮ್ಮದ್ ಗವಾನ್ ಮದ್ರಸವನ್ನು ಇರಾನ್‌ನಿಂದ ವ್ಯಾಪಾರ ಮಾಡಲು ಬೀದರ್‌ಗೆ ಬಂದಿದ್ದ ಮುಹಮ್ಮದ್ ಗವಾನ್ ತನ್ನ ಸ್ವಂತ ದುಡ್ಡಿನಿಂದ ನಿರ್ಮಿಸಿದ ಶಿಕ್ಷಣ ಸಂಸ್ಥೆಯಾಗಿದೆ. ಈ ಭಾಗದಲ್ಲಿ ಶೈಕ್ಷಣಿಕ ಸುಧಾರಣೆಯ ಅಗತ್ಯವನ್ನು ಮನಗಂಡ ಮುಹಮ್ಮದ್ ಗವಾನ್ ಬದ್ಧತೆಯನ್ನು ಗಮನಿಸಿದ ಅಂದಿನ ಬಹಮನಿ ಸುಲ್ತಾನರು ತಮ್ಮ ಆಸ್ಥಾನದಲ್ಲಿ ಗವಾನ್‌ಗೆ ಆಶ್ರಯ ನೀಡಿದರು. ನಂತರ ತಮ್ಮ ಸಾಮ್ರಾಜ್ಯದ ಪ್ರಧಾನಿಯನ್ನಾಗಿ ನೇಮಕ ಮಾಡಿಕೊಂಡರು. ಮುಹಮ್ಮದ್ ಗವಾನ್ ತಮ್ಮ ಹಣದಿಂದ ಸ್ಥಾಪಿಸಿದ ಮದ್ರಸವನ್ನು ಆ ಕಾಲದ ವಿಶ್ವವಿದ್ಯಾನಿಲಯ ಎಂದು ಕರೆಯಲಾಗುತ್ತಿತ್ತು.

242 ಅಡಿ ಉದ್ದದ, 222 ಅಡಿ ಅಗಲದ, 56 ಅಡಿ ಎತ್ತರದ ಈ ಮದ್ರಸದಲ್ಲಿ ನಮಾಝ್ ಮಾಡಲು ಮಸೀದಿ, ಹಲವಾರು ಉಪನ್ಯಾಸ ಕೊಠಡಿಗಳು, 36 ತರಗತಿ ಕೊಠಡಿಗಳು, ಮೂರು ಸಾವಿರಕ್ಕೂ ಮಿಕ್ಕಿದ ಹಸ್ತಪ್ರತಿಗಳನ್ನು ಹೊಂದಿರುವ ವಿಶಾಲ ಗ್ರಂಥಾಲಯಗಳನ್ನು ಒಳಗೊಂಡಿದೆ. ಇದನ್ನು ದಕ್ಷಿಣ ಭಾರತದ ಮೊದಲ ಮದ್ರಸ ಎಂದು ಹೇಳಲಾಗುತ್ತದೆ.

ಗವಾನ್ ನಿರ್ಮಿಸಿದ ಈ ಮದ್ರಸ ಕಟ್ಟಡ 1427ರಲ್ಲಿ ಪೂರ್ಣ ಗೊಂಡಿತು. 1696ರಲ್ಲಿ ಔರಂಗಜೇಬ್ ಈ ಭಾಗದ ಮೇಲೆ ದಾಳಿ ಮಾಡಿದಾಗ ಈ ಮದ್ರಸ ಕಟ್ಟಡದ ಮುಕ್ಕಾಲು ಭಾಗ ನೆಲಸಮಗೊಂಡಿತು. ನಂತರ 1920ರಲ್ಲಿ ಹೈದರಾಬಾದ್‌ನ ನಿಜಾಮ ಸರಕಾರ ನೆಲಸಮಗೊಂಡ ಈ ಕಟ್ಟಡವನ್ನು ದುರಸ್ತಿ ಮಾಡಿಸಿತು. ಇಂಥ ಕಟ್ಟಡದಲ್ಲಿ ದಸರಾ ದಿವಸ ಕೋಮುವಾದಿ ಕಿಡಿಗೇಡಿಗಳು ದಾಂಧಲೆ ಮಾಡಿದ್ದಾರೆ. ಅವರು ಏನೇ ಮಾಡಲಿ ಎಷ್ಟೇ ಪ್ರಚೋದಿಸಲಿ ಕಲ್ಯಾಣ ಕರ್ನಾಟಕದ ಎಲ್ಲಾ ಸಮುದಾಯಗಳ ಜನ ತಮ್ಮ ಸೌಹಾರ್ದ ಸಂಬಂಧಕ್ಕೆ ಧಕ್ಕೆಯಾಗದಂತೆ ಎಚ್ಚರ ವಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಸೇರಿ ಏಳು ಜಿಲ್ಲೆಗಳಿವೆ. ಈ ಜಿಲ್ಲೆಗಳಲ್ಲಿ ಕಾಲೂರಲು ಕೋಮುವಾದಿ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ.

ಕೋಮುವಾದಿ ಶಕ್ತಿಗಳು ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಟ್ಟುಕೊಂಡು ಎಂದೂ ಜನರ ಬಳಿ ಹೋಗುವುದಿಲ್ಲ. ಅವರದೇನಿದ್ದರೂ ಜನ ವಿಭಜಕ ಕಾರ್ಯಸೂಚಿ. ತಮ್ಮ ಈ ಕಾರ್ಯಸೂಚಿಯ ಜಾರಿಗಾಗಿ ಮಠ, ಮಂದಿರಗಳನ್ನು, ಗುಡಿ, ಗುಂಡಾರಗಳನ್ನು ಹಾಗೂ ಹಬ್ಬ ಹುಣ್ಣಿಮೆ, ಜಾತ್ರೆ, ಸಂತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಮಠ, ಮಂದಿರ, ಪೂಜಾ ಸ್ಥಳಗಳನ್ನು ಶಾಂತಿಯನ್ನು ಕದಡುವ ಶಕ್ತಿಗಳಿಂದ ಮುಕ್ತ ಗೊಳಿಸುವುದು ಇಂದಿನ ಅಗತ್ಯವಾಗಿದೆ.

ಈ ನಿಟ್ಟಿನಲ್ಲಿ ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯಲ್ಲಿ ನಂಬಿಕೆ ಇರುವ ವ್ಯಕ್ತಿ, ಶಕ್ತಿಗಳು ಒಂದೇ ವೇದಿಕೆಗೆ ಬಂದು ಒಂದೇ ಧ್ವನಿಯಲ್ಲಿ ಮಾತಾಡಬೇಕಾಗಿದೆ.

Writer - ಸನತ್ ಕುಮಾರ ಬೆಳಗಲಿ

contributor

Editor - ಸನತ್ ಕುಮಾರ ಬೆಳಗಲಿ

contributor

Similar News