108ರ ವೃದ್ಧೆಯ ಕಾಲುಂಗರ ಕದಿಯಲು ಪಾದವನ್ನೇ ಕತ್ತರಿಸಿದ ದರೋಡೆಕೋರರು !
ಜೈಪುರ: 108 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಧರಿಸಿದ್ದ ಕಾಲುಂಗುರ ಕದಿಯುವ ಸಲುವಾಗಿ ದರೋಡೆಕೋರರು ವೃದ್ಧೆಯ ಪಾದವನ್ನೇ ಕತ್ತರಿಸಿದ ಹೃದಯ ವಿದ್ರಾವಕ ಘಟನೆ ಜೈಪುರದಲ್ಲಿ ನಡೆದಿದೆ.
ಜಮುನಾ ದೇವಿ ಎಂಬ ಮಹಿಳೆಯನ್ನು ರವಿವಾರ ನಸುಕಿನಲ್ಲಿ ಮನೆಯಿಂದ ಹೊರಕ್ಕೆ ಎಳೆದು ಹರಿತವಾದ ಆಯುಧದಿಂದ ಪಾದ ಕತ್ತರಿಸಿ ಕಾಲುಂಗುರದೊಂದಿಗೆ ದರೋಡೆಕೋರರು ಪರಾರಿಯಾಗಿದ್ದಾರೆ ಎಂದು ಗಲ್ಟಾ ಗೇಟ್ ಪೊಲೀಸ್ ಠಾಣಾಧಿಕಾರಿ ಮಖೇಶ್ ಕುಮಾರ್ ವಿವರ ನೀಡಿದ್ದಾರೆ. ಮನೆಯ ಹೊರಗೆ ನಿರ್ಮಿಸಲಾಗಿದ್ದ ಬಾತ್‍ರೂಂನಲ್ಲಿ ರಕ್ತದ ಮಡುವಿನಲ್ಲಿ ವೃದ್ಧೆ ಬಿದ್ದಿದ್ದರು.
ಮಗಳು ಮಮತಾ ಈ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದ್ದಾಗಿ ಸಂತ್ರಸ್ತೆಯ ಮಗಳು ಗೋವಿಂದಿ ದೇವಿ (45) ಹೇಳಿದ್ದಾರೆ.
"ವೃದ್ಧ ತಾಯಿ ಮನೆಯ ಹೊರಗೆ ನೋವಿನಿಂದ ನರಳುತ್ತಿದ್ದುದು ಕೇಳಿಸಿತು ಎಂದು ಪುತ್ರಿ ಹೇಳಿದ್ದಾಳೆ. ಆ ವೇಳೆಗಾಗಲೇ ಭಾರಿ ರಕ್ತಸ್ರಾವ ಆಗಿತ್ತು. ತಕ್ಷಣ ಸವಾಯಿ ಮಾನ್‍ಸಿಂಗ್ ಆಸ್ಪತ್ರೆಗೆ ದಾಖಲಿಸಿದ್ದೇವೆ. ಅವರ ಸ್ಥಿತಿ ಚಿಂತಾಜನಕವಾಗಿದೆ" ಎಂದು ವಿವರಿಸಿದ್ದಾರೆ.
ಎಲ್ಲರೂ ನಿದ್ರಿಸುತ್ತಿದ್ದಾಗ ಮುಂಜಾನೆ 5 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ವಯಸ್ಸಿನ ಕಾರಣದಿಂದಾಗಿ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಕುಟುಂಬ ಸದಸ್ಯರಿಗೂ ಅವರು ಮಾತನಾಡುವುದು ಕೇಳಿಸುವುದಿಲ್ಲ" ಎಂದು ಅಳಿಯ ಗೋಪಾಲ್ ಮೀನಾ ಹೇಳಿದ್ದಾರೆ.
ಮುಂಜಾನೆ 6ರ ಸುಮಾರಿಗೆ ಅಜ್ಜಿ ಹಾಸಿಗೆಯಲ್ಲಿ ಇಲ್ಲ ಎನ್ನುವುದು ಮಮತಾ ಅವರ ಗಮನಕ್ಕೆ ಬಂತು. ಹೊರಬಂದು ನೋಡಿದಾಗ ಪಾದವನ್ನು ಕತ್ತರಿಸಿದ ಸ್ಥಿತಿಯಲ್ಲಿ ಅವರು ಬಿದ್ದಿದ್ದರು ಎಂದು ತಿಳಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.