ದಂಪತಿಗೆ ತಂಡದಿಂದ ಹಲ್ಲೆ: ಪ್ರಕರಣ ದಾಖಲು
ಉಳ್ಳಾಲ: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಕನೀರ್ ತೋಟ ಬಳಿ ನಡೆದಿದೆ.
ಹಲ್ಲೆಗೊಳಗಾದವರನ್ನು ಕನೀರ್ ತೋಟ ನಿವಾಸಿ ವಿಜಯಾ ಲಕ್ಷ್ಮಿ ಎಂದು ಗುರುತಿಸಲಾಗಿದೆ.
ಘಟನೆ ವಿವರ: ರವಿವಾರ ರಾತ್ರಿ ವಿಜಯಲಕ್ಷ್ಮಿ ಅವರು ತಮ್ಮ ಮನೆಯ ಸಾಕು ನಾಯಿಗೆ ಅನ್ನ ಹಾಕುತ್ತಿದ್ದರು. ಈ ವೇಳೆ ಮನೆಯಂಗಳದ ಹೊರಗೆ ಸ್ಕೂಟರಲ್ಲಿ ತೆರಳುತ್ತಿದ್ದ ಶೇಖರ್ ಎಂಬಾತ ವಿನಾ ಕಾರಣ ಹಾರ್ನ್ ಹೊಡೆದಿದ್ದಾನೆ ಎನ್ನಲಾಗಿದೆ. ಈ ವಿಚಾರವನ್ನು ವಿಜಯಲಕ್ಷ್ಮಿ ಅವರು ಶೇಖರನಲ್ಲಿ ಪ್ರಶ್ನಿಸಿದ್ದಾರೆ. ಇದರಿಂದ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ಕಾರಣದಿಂದ ಆಕ್ರೋಶಗೊಂಡ ಶೇಖರ್ ತನ್ನ ಸ್ನೇಹಿತರಾದ ಹರೀಶ್, ನೂತನ್, ಯಶ್ ರಾಜ್ ಜೊತೆ ರವಿವಾರ ರಾತ್ರಿ ವಿಜಯ ಲಕ್ಷ್ಮಿ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ್ದು, ಈ ವೇಳೆ ತಡೆಯಲು ಬಂದ ಅವರ ಪತಿ ತೇಜ್ ಪಾಲ್, ಮಕ್ಕಳಾದ ಹಿತೇಶ್ ಮತ್ತು ಹರ್ಷ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಜಯಲಕ್ಷ್ಮಿ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಘಟನೆಯಿಂದ ಗಾಯಗೊಂಡಿರುವ ವಿಜಯಲಕ್ಷ್ಮಿ ಅವರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ವಿಜಯ ಲಕ್ಷ್ಮಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.