ಉಮ್ರಾ ನಿರ್ವಹಿಸಲು ಬಯಸುವ ಮಹಿಳೆಯರಿಗೆ ʼಮಹ್ರಂʼ ಕಡ್ಡಾಯವಿಲ್ಲ: ಸೌದಿ ಅರೇಬಿಯಾ ಘೋಷಣೆ

Update: 2022-10-11 13:02 GMT

ಜಿದ್ದಾ: ಪ್ರಪಂಚದ ಯಾವುದೇ ಭಾಗದಿಂದ ಉಮ್ರಾ ನಿರ್ವಹಿಸಲು ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಬಯಸುವ ಮಹಿಳಾ ಯಾತ್ರಿಕರೊಂದಿಗೆ ಪುರುಷ ಮೇಲ್ವಿಚಾರಕ ಅಥವಾ ಮಹ್ರಮ್ ಇನ್ನು ಮುಂದೆ ಅಗತ್ಯವಿಲ್ಲ ಎಂದು ಸೌದಿ ಅರೇಬಿಯಾ ಘೋಷಿಸಿದೆ.

ಕೈರೋದಲ್ಲಿರುವ ಸೌದಿ ರಾಯಭಾರ ಕಚೇರಿಯಲ್ಲಿ ಮಾತನಾಡಿದ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫಿಕ್ ಅಲ್ ರಬಿಯಾ ಅವರು ರಾಜ ಸಲ್ಮಾನ್ ಅವರ ನಿರ್ದೇಶನದ ಮೇರೆಗೆ ಈಜಿಪ್ಟ್ ಉಮ್ರಾ ಯಾತ್ರಿಕರಿಗೆ ರಾಜ್ಯವು ಎಲ್ಲಾ ಆರೋಗ್ಯ ನಿರ್ಬಂಧಗಳನ್ನು ತೆಗೆದುಹಾಕುತ್ತಿದೆ ಎಂದೂ ಘೋಷಿಸಿದರು.

ಪ್ರಪಂಚದಾದ್ಯಂತದ ಮುಸ್ಲಿಮರಿಗೆ ನೀಡಲಾಗುವ ಉಮ್ರಾ ವೀಸಾಗಳ ಸಂಖ್ಯೆಗೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅವರು ಹೇಳಿದರು. "ಯಾವುದೇ ರೀತಿಯ ವೀಸಾದೊಂದಿಗೆ ರಾಜ್ಯಕ್ಕೆ ಬರುವ ಯಾವುದೇ ಮುಸ್ಲಿಂ ಉಮ್ರಾ ಮಾಡಬಹುದು" ಎಂದು ಸೌದಿ ಗೆಜೆಟ್ ವರದಿ ಮಾಡಿದೆ.

ಎರಡು ಪವಿತ್ರ ಮಸೀದಿಗಳಿಗೆ ಭೇಟಿ ನೀಡಲು ಬಯಸುವವರಿಗೆ ಆಧುನಿಕ ತಂತ್ರಜ್ಞಾನಗಳ ಪರಿಚಯ ಮತ್ತು ಬಳಕೆ ಹಾಗೂ ಸೇವೆಗಳ ಡಿಜಿಟಲೀಕರಣದ ಬಗ್ಗೆ ರಾಜ್ಯವು ಮಾಡಿದ ಪ್ರಯತ್ನಗಳನ್ನು ಸಚಿವರು ಉಲ್ಲೇಖಿಸಿದ್ದಾರೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ.

ಯಾತ್ರಾರ್ಥಿಗಳಿಗೆ ಕೆಲವು ಸೇವೆಗಳನ್ನು ಒದಗಿಸಲು ರೋಬೋಟ್‌ಗಳನ್ನು ಬಳಸುವುದರ ಜೊತೆಗೆ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡುವವರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುವ ನಸ್ಕ್ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸುವುದು ಇದರಲ್ಲಿ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News