ಬಿಜೆಪಿಯ ಅಮಿತ್ ಮಾಳವೀಯ ನಿಮ್ಮ ಪೋಸ್ಟ್ ರಿಪೋರ್ಟ್‌ ಮಾಡಿದರೆ ಇನ್ಸ್ಟಾಗ್ರಾಂ ಕೂಡಲೇ ಅದನ್ನು ತೆಗೆದುಹಾಕುತ್ತದೆ !

Update: 2022-10-11 19:15 GMT

 ಹೊಸದಿಲ್ಲಿ,ಅ.11: ಬಿಜೆಪಿಯ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯ ತನ್ನ ಪಕ್ಷಕ್ಕೆ ಮತ್ತು ಸರಕಾರಕ್ಕೆ ಅಪಥ್ಯವಾದ ಯಾವುದೇ ಪೋಸ್ಟ್ ನ ಕುರಿತು ವರದಿ ಮಾಡಿದರೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಅತ್ಯಂತ ವಿಧೇಯವಾಗಿ ಅದನ್ನು ತೆಗೆದುಹಾಕುತ್ತದೆ, ಯಾವುದೇ ಪ್ರಶ್ನೆಯನ್ನು ಅದು ಕೇಳುವುದಿಲ್ಲ. ಸುದ್ದಿ ಜಾಲತಾಣ (thewire.in) ತನ್ನ ವಿಶೇಷ ವರದಿಯಲ್ಲಿ ಇದನ್ನು ಬಹಿರಂಗಗೊಳಿಸಿದೆ.

ಇತ್ತೀಚಿಗೆ ವಿಡಂಬನಾತ್ಮಕ ಅನಾಮಧೇಯ ಖಾತೆ ('Superhumans of Cringetopia')ಪೋಸ್ಟ್ ಮಾಡಿದ್ದ ಉತ್ತರಪ್ರದೇಶದ ನಿವಾಸಿ ಪ್ರಭಾಕರ ಮೌರ್ಯ ಎಂಬಾತ ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥರ ಪ್ರತಿಮೆಯನ್ನು ಪೂಜಿಸುತ್ತಿರುವ ವೀಡಿಯೊವನ್ನು ತೆಗೆದುಹಾಕಿದ ಇನ್ಸ್ಟಾಗ್ರಾಂ,ಈ ಪೋಸ್ಟ್ ತನ್ನ ‘ನಗ್ನತೆ ಮತ್ತು ಲೈಂಗಿಕ ವಿಷಯ ’ ಮಾರ್ಗಸೂಚಿಗಳನ್ನು ಉಲ್ಲಂಘಿಸಿತ್ತು ಎಂದು ಸಮಜಾಯಿಷಿ ನೀಡಿತ್ತು. ಈ ಸಮಜಾಯಿಷಿ ವಿಚಿತ್ರವಾಗಿತ್ತು; ಮೌರ್ಯ ಮತ್ತು ಪ್ರತಿಮೆ ಎರಡೂ ಸಂಪೂರ್ಣ ಉಡುಪನ್ನು ಧರಿಸಿದ್ದು,ಗೋಚರವಾಗುವಂಥ ಯಾವುದೇ ಲೈಂಗಿಕ ಅರ್ಥ ವೀಡಿಯೊದಲ್ಲಿರಲಿಲ್ಲ.

ಆ ಸಮಯದಲ್ಲಿ ತಮ್ಮನ್ನು ಶಿಕ್ಷಣತಜ್ಞರು ಮತ್ತು ಪತ್ರಕರ್ತರ ಗುಂಪು ಎಂದು ಕರೆದುಕೊಳ್ಳುವ (@cringearchivist) ಹ್ಯಾಂಡಲ್ ನ ಅಡ್ಮಿನ್ಗಳು ಇನ್ಸ್ಟಾಗ್ರಾಮ್ ನ ಕೃತಕ ಬುದ್ಧಿಮತ್ತೆ ಚಾಲಿತ ಮೇಲ್ವಿಚಾರಣೆ ವ್ಯವಸ್ಥೆಯಲ್ಲಿ ದೋಷವಿದೆ ಮತ್ತು ಅದು ಪೋಸ್ಟ್ ನಗ್ನತೆಯನ್ನು ತೋರಿಸುತ್ತಿದೆ ಎಂದು ತಪ್ಪಾಗಿ ಬಿಂಬಿಸಿತ್ತು ಎಂದು ಭಾವಿಸಿದ್ದರು.
ಕುತೂಹಲದ ವಿಷಯವೆಂದರೆ ವೀಡಿಯೊವನ್ನು ಪೋಸ್ಟ್ ಮಾಡಿದ್ದ ಎರಡೇ ನಿಮಿಷಗಳಲ್ಲಿ ಅದನ್ನು ತೆಗೆದುಹಾಕಲಾಗಿತ್ತು.

ಈ ವಿಷಯದ ಬೆನ್ನತ್ತಿದ thewire.in  ವಾಸ್ತವದಲ್ಲಿ ಅದು ಅಲ್ಗಾರಿದಮ್ ದೋಷವಾಗಿರಲಿಲ್ಲ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರ (@amitmalviya) ಪೋಸ್ಟ್ ಅನ್ನು ವರದಿ ಮಾಡಿದ್ದರಿಂದಲೇ,ಅದೂ ಕೇವಲ ಎರಡು ನಿಮಿಷಗಳಲ್ಲಿ ಅದನ್ನು ತೆಗೆದುಹಾಕಲಾಗಿತ್ತು ಎನ್ನುವುದನ್ನು ಮೆಟಾದಲ್ಲಿಯ ಮೂಲದಿಂದ ತಿಳಿದುಕೊಂಡಿತ್ತು. ಈ ಹ್ಯಾಂಡಲ್ ಬಿಜೆಪಿಯ ಕುಖ್ಯಾತ ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಳವೀಯಗೆ ಸೇರಿದ್ದಾಗಿದೆ. 

thewire.in ಗೆ ಲಭ್ಯವಾಗಿರುವ ಆಂತರಿಕ ಇನ್ಸ್ಟಾಗ್ರಾಂ ವರದಿಯು ಕಂಪನಿಯ ಮಾಡರೇಟರ್ಗಳು ಪೋಸ್ಟ್ ಅನ್ನು ಪರಿಶೀಲಿಸದೆ ಕೇವಲ ಹ್ಯಾಂಡಲ್ ನ (ಮಾಳವೀಯ) ಗುರುತಿನ ಆಧಾರದಲ್ಲಿ ಅದನ್ನು ತಕ್ಷಣವೇ ತೆಗೆದುಹಾಕಲಾಗಿತ್ತು ಎನ್ನುವುದನ್ನು ತೋರಿಸಿದೆ. ವಾಸ್ತವದಲ್ಲಿ ಮಾಳವೀಯ ವರದಿ ಮಾಡುವ ಯಾವುದೇ ಪೋಸ್ಟ್ ಇದೇ ರೀತಿಯಲ್ಲಿ ಪರಿಗಣಿಸಲಾಗುತ್ತದೆ, ಯಾವುದೇ ಪ್ರಶ್ನೆಯನ್ನು ಕೇಳದೇ ಅದನ್ನು ತಕ್ಷಣ ಇನ್ಸ್ಟಾಗ್ರಾಮ್ನಿಂದ ಕಿತ್ತುಹಾಕಲಾಗುತ್ತದೆ. ಸೆಪ್ಟಂಬರ್ ತಿಂಗಳೊಂದರಲ್ಲೇ ಮಾಳವೀಯ ಇನ್ಸ್ಟಾಗ್ರಾಮ್ ನಲ್ಲಿಯ 705 ಪೋಸ್ಟ್ ಗಳ ಕುರಿತು ವರದಿ ಮಾಡಿದ್ದರು ಮತ್ತು ಅವೆಲ್ಲವನ್ನೂ ತೆಗೆಯಲಾಗಿತ್ತು ಎಂದು ಮೆಟಾದಲ್ಲಿಯ ಮೂಲವು thewire.inಗೆ ತಿಳಿಸಿದೆ.

ಕೃಪೆ: Thewire.in

Writer - ಜಾಹ್ನವಿ ಸೇನ್

contributor

Editor - ಜಾಹ್ನವಿ ಸೇನ್

contributor

Similar News