ತುಂಬೆ ಪ.ಪೂ. ಕಾಲೇಜು ಬಳಿ ಕೆಎಸ್ಸಾರ್ಟಿಸಿ ಲಿಮಿಟೆಡ್ ಸಾರಿಗೆ ಬಸ್ಸಿಗೆ ನಿಲುಗಡೆ ಆದೇಶ
ಮಂಗಳೂರು: ತುಂಬೆ ಪದವಿ ಪೂರ್ವ ಕಾಲೇಜು ಬಳಿ ಶಟಲ್ ಬಸ್ಸುಗಳಿಗೆ ಮಾತ್ರವೇ ನಿಲುಗಡೆಗೆ ಆದೇಶವಿದ್ದು, ಇತ್ತೀಚೆಗೆ ಶಟಲ್ ಬಸ್ಸುಗಳು ಕೂಡ ಸೀಮಿತ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಸುಮಾರು ಒಂದು ಗಂಟೆ ಬಸ್ಸಿಗೆ ಕಾಯುವ ಪರಿಸ್ಥಿತಿ ಉಂಟಾದ್ದರಿಂದ, ದ. ಕ. ಜಿಲ್ಲಾಧಿಕಾರಿಯವರು, ಸಾರ್ವಜನಿಕರ ಕುಂದು ಕೊರತೆ ಆಲಿಸಲು, ಬಂಟ್ವಾಳ ತಾಲೂಕು ಕಚೇರಿಗೆ ಇತ್ತೀಚೆಗೆ ಬಂದ ಸಂದರ್ಭದಲ್ಲಿ ಕಾಲೇಜಿನ ನಿಯೋಗವು ಬಸ್ಸು ನಿಲುಗಡೆಯ ಸಮಸ್ಯೆಯನ್ನು ತಿಳಿಸಿದಾಗ, ಜಿಲ್ಲಾಧಿಕಾರಿಯವರು ತಕ್ಷಣವೇ ಸ್ಪಂದಿಸಿ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಮಸ್ಯೆಯ ಗಂಭೀರತೆಯನ್ನು ತಿಳಿಸಿ, ಆದಷ್ಟು ಶೀಘ್ರದಲ್ಲೇ ಬಸ್ಸು ನಿಲುಗಡೆ ಮಾಡಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸಲು ತಿಳಿಸಿದರು.
ಇದಕ್ಕೆ ಪೂರಕವಾಗಿ ಮಂಗಳೂರು ಮತ್ತು ಪುತ್ತೂರು ವಿಭಾಗದ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಮಂಗಳೂರು ಮತ್ತು ಬಿಸಿರೋಡು ಕಡೆಗೆ ಚಲಿಸುವ ಎಲ್ಲಾ ಲಿಮಿಟೆಡ್ ಸಾರಿಗೆ ಬಸ್ಸುಗಳನ್ನು ತುಂಬೆ ಪದವಿ ಪೂರ್ವ ಕಾಲೇಜು ಬಳಿ ನಿಲುಗಡೆಗೊಳಿಸಲು ಆದೇಶ ನೀಡಿರುತ್ತಾರೆ. ಈ ಆದೇಶಕ್ಕೆ ಕಾರಣೀಕರ್ತರಾದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕುಮಾರ್ ಹಾಗೂ ಸಹಕರಿಸಿದ ಮಂಗಳೂರು ಕೆ.ಎಸ್.ಆರ್.ಟಿ.ಸಿ. ವಿಭಾಗದ ಹಿರಿಯ ನಿಯಂತ್ರಣ ಅಧಿಕಾರಿ ರಾಜೇಶ್ ಶೆಟ್ಟಿ ಮತ್ತು ಪುತ್ತೂರು ವಿಭಾಗದ ನಿಯಂತ್ರಣ ಅಧಿಕಾರಿ ಜಯಕರ ಶೆಟ್ಟಿ ಇವರಿಗೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಬಿ. ಅಬ್ದುಲ್ ಸಲಾಂ ಹಾಗೂ ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.