ಯು.ಟಿ. ಖಾದರ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ ಸುಧಾ
ಮಂಗಳೂರು, ಅ.12: ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್‌ರ ಹುಟ್ಟುಹಬ್ಬಕ್ಕೆ ಕೊಣಾಜೆ ಸಮೀಪದ ಅಸೈಗೋಳಿಯ ಅಭಯಾಶ್ರಮದ ಸುಧಾ ಎಂಬವರು ವಿಶೇಷವಾಗಿ ಶುಭ ಕೋರಿ ಗಮನ ಸೆಳೆದಿದ್ದಾರೆ.
ಯು.ಟಿ.ಖಾದರ್ ತನ್ನ ಹುಟ್ಟುಹಬ್ಬದಂದು ಪ್ರತೀ ವರ್ಷದಂತೆ ಈ ಬಾರಿಯೂ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಭಾವಿಸಿದ್ದ ಅಭಯಾಶ್ರಮದ ಹಿರಿಯ ಸದಸ್ಯೆ ಸುಧಾ ಅವರು ಖಾದರ್‌ರೊಂದಿಗೆ ತಾನಿರುವ ಫೋಟೋ ವನ್ನು ಕಾರ್ಡ್ ರೂಪ ಮಾಡಿಸಿ ಕಾದು ಕುಳಿತಿದ್ದರು.
ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ, ಪಕ್ಷದ ಮುಖಂಡರು, ಅಭಿಮಾನಿಗಳು ಅಭಯ ಆಶ್ರಮಕ್ಕೆ ಆಹಾರ ವಿತರಿಸಲು ತೆರಳಿದ್ದರು. ಈ ಸಂದರ್ಭ ಆಶ್ರಮದ ಹಿರಿಯ ಸದಸ್ಯೆ ಸುಧಾ ಸ್ವತಃ ಯು.ಟಿ.ಖಾದರ್ ಬರುತ್ತಾರೆಂದು ಭಾವಿಸಿ ಅವರ ಜೊತೆ ತೆಗೆಸಿದ್ದ ತನ್ನ ಹಳೆಯ ಫೋಟೊವನ್ನು ಮುದ್ರಿಸಿ ಹುಟ್ಟುಹಬ್ಬದ ಶುಭಾಶಯ ಕೋರಲು ಕಾಯುತ್ತಿದ್ದರು. ಆದರೆ ಯು.ಟಿ.ಖಾದರ್ ‘ಭಾರತ್ ಜೋಡೊ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಿಂದ ಅಸೈಗೋಳಿಯ ಅಭಯಾಶ್ರಮಕ್ಕೆ ಭೇಟಿ ನೀಡಿರಲಿಲ್ಲ. ಇದರಿಂದ ಸುಧಾ ಅವರಿಗೆ ತೀವ್ರ ನಿರಾಸೆಯಾಗಿತ್ತು.
ಈ ಬಗ್ಗೆ ಕಾರ್ಯಕರ್ತರಿಂದ ಮಾಹಿತಿ ಪಡೆದ ಯು.ಟಿ.ಖಾದರ್ ತಕ್ಷಣ ದೂರವಾಣಿ ಮೂಲಕ ಸುಧಾ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿ ಆಶೀರ್ವಾದ ಪಡೆದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸುಧಾ ‘ದೇವರು ಖಾದರ್ ಅವರನ್ನು ಚೆನ್ನಾಗಿಟ್ಟಿರಲಿ. ನನ್ನಂತಹ ಹಲವಾರು ಹಿರಿಯರ ಆಶೀರ್ವಾದ ಅವರ ಮೇಲಿದೆ’ ಎನ್ನುತ್ತಾ ಭಾವುಕರಾದರು.
ಯು.ಟಿ.ಖಾದರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಲು ಪ್ರತೀ ವರ್ಷ ತನ್ನ ಕೈಯಿಂದಲೇ ಸುಧಾ ಅವರು ಗ್ರೀಟಿಂಗ್ ಕಾರ್ಡ್ ರಚಿಸುತ್ತಿದ್ದಾರೆ.