ಬಂಟ್ವಾಳ: ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವು; ದೂರು ದಾಖಲು

Update: 2022-10-13 09:16 GMT

ಬಂಟ್ವಾಳ, ಅ.13: ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಲಕ್ಷಾಂತರ ರೂ‌. ಮೌಲ್ಯದ ಚಿನ್ನದ ಸರ ಕಳವಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಭಂಡಾರಿಬೆಟ್ಟು ನಿವಾಸಿ ಮೀನಾಕ್ಷಿ ಎಂಬವರ ಕುತ್ತಿಗೆಯಿಂದ ಸುಮಾರು 1.50 ಲಕ್ಷ ಮೌಲ್ಯದ ಚಿನ್ನದ ಸರ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೀನಾಕ್ಷಿ ಅವರು ಬುಧವಾರ ಸಂಜೆ ಬಿ.ಸಿ.ರೋಡಿನಲ್ಲಿ ಮನೆ ಕೆಲಸ ಮುಗಿಸಿ ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ‌ ಸರ ಕಳವಾಗಿದೆ ಎಂದು ದೂರಲಾಗಿದೆ.

ಕಳ್ಳಿಮಾರ್ ಅಂಗಡಿಯೊಂದರಿಂದ ಸಾಮಗ್ರಿ ಖರೀದಿಸಿದ ಬಳಿಕ ಬಂಟ್ವಾಳಕ್ಕೆ ತೆರಳುವ ಸರ್ವೀಸ್ ರಿಕ್ಷಾದಲ್ಲಿ ಅವರು ತೆರಳಿದ್ದು, ಆ ರಿಕ್ಷಾದಲ್ಲಿ ಹೊರ ಜಿಲ್ಲೆಯ ಅಪರಿಚಿತ ಮೂವರು ಮಹಿಳೆಯರಿದ್ದರು. ರಿಕ್ಷಾದಲ್ಲಿ ಕುಳಿತುಕೊಳ್ಳುವ ಮುನ್ನ ಓರ್ವ ಮಹಿಳೆ ರಿಕ್ಷಾದಿಂದ ಇಳಿದು ಮೀನಾಕ್ಷಿ ಅವರನ್ನು ಮಧ್ಯದಲ್ಲಿ ಕೂರಲು ಸೂಚಿಸಿದ ಹಿನ್ನೆಲೆಯಲ್ಲಿ ಅವರು ಮಧ್ಯದಲ್ಲಿ ಕುಳಿತಿದ್ದರು. ಬಳಿಕ ಮೀನಾಕ್ಷಿ ಅವರು ಭಂಡಾರಿಬೆಟ್ಟು ಮನೆಯ ಸಮೀಪ ಇಳಿದಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಾಣೆಯಾಗಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ರಿಕ್ಷಾವನ್ನು ಫಾಲೋ ಮಾಡಿ ಹೋಗಿ ರಿಕ್ಷಾ ಚಾಲಕನನ್ನು ಕೇಳಿದಾಗ ರಿಕ್ಷಾದಲ್ಲಿ ಬಂಗಾರ ಪತ್ತೆಯಾಗಿಲ್ಲ‌ ಎಂದು ತಿಳಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ರಿಕ್ಷಾದಲ್ಲಿದ್ದ ಮೂವರು ಮಹಿಳೆಯರು ಬೈಪಾಸ್ ನಲ್ಲಿ ಇಳಿದು ಕಾರ್ಕಳಕ್ಕೆ ತೆರಳುವ ಬಸ್ ನಲ್ಲಿ ಹೋಗಿದ್ದಾರೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News