ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗದ ಅಂಗಡಿಯಿಂದಲೇ 50 ಸಾವಿರ ರೂ. ದೋಚಿದ ದುಷ್ಕರ್ಮಿಗಳು
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣೆಯ ಎದುರಿನಲ್ಲಿರುವ ಹಾರ್ಡ್‍ವೇರ್ ಅಂಗಡಿ ಸಹಿತ ಉಪ್ಪಿನಂಗಡಿ ಪೇಟೆಯ ಮೂರು ಅಂಗಡಿಗಳಿಗೆ ದುಷ್ಕರ್ಮಿಗಳು ನುಗ್ಗಿ ಕಳವು ಮಾಡಿರುವ ಘಟನೆ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇದರಲ್ಲಿ ಎರಡು ಅಂಗಡಿಗಳಲ್ಲಿ ನಗದು ದೋಚಿದ್ದು, ಮತ್ತೊಂದು ಅಂಗಡಿಯಲ್ಲಿ ಹಣವಿಲ್ಲದ ಕಾರಣ ಬರಿ ಕೈಯಲ್ಲಿ ಮರಳಿದ್ದಾರೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರುಗಡೆ ಇರುವ ಲಕ್ಷ್ಮೀ ಸ್ಟೋರ್ ಹಾರ್ಡ್‍ವೇರ್ ಅಂಗಡಿಯ ಶಟರ್ ಬೀಗವನ್ನು ಮುರುದು ಒಳನುಗ್ಗಿದ ದುಷ್ಕರ್ಮಿಗಳು ಅಂಗಡಿಯ ಡ್ರಾಯರ್‍ನಲ್ಲಿದ್ದ ಸುಮಾರು 50 ಸಾವಿರ ರೂ. ನಗದು ದೋಚಿದ್ದಾರೆ. ಡ್ರಾಯರ್ ಪಕ್ಕದಲ್ಲಿ ಇದ್ದ 5 ರೂಪಾಯಿ ಮುಖಬೆಲೆಯ ಸುಮಾರು 500ರಷ್ಟು ಮೌಲ್ಯದ ನಾಣ್ಯದ ಕಟ್ಟು ಅಂಗಡಿಯ ಹೊರಗೆ ಬಿದ್ದುಕೊಂಡಿದ್ದು, ದುಷ್ಕರ್ಮಿಗಳು ದೋಚಿ ಓಡುವ ಸಂದರ್ಭದಲ್ಲಿ ಅದು ಕೆಳಗೆ ಬಿದ್ದಿರುವ ಸಾಧ್ಯತೆಯಿದೆ. ಇದೇ ಅಂಗಡಿಯ ಹೊರಗಡೆ ದುಷ್ಕರ್ಮಿಗಳು ಬನಿಯನ್ ಮತ್ತು ಟವೆಲ್ ಒಂದನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಅಂಗಡಿಯ ಮಾಲಕ ಗಣೇಶ್ ನಾಯಕ್ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಉಪ್ಪಿನಂಗಡಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗ್ರಾ.ಪಂ.ನ ವಾಣಿಜ್ಯ ಸಂಕೀರ್ಣದಲ್ಲಿರುವ ಸಲಾವುದ್ದೀನ್ ಎಂಬವರಿಗೆ ಸೇರಿದ ಸೆಲ್ ಸೈಟ್ ಮೊಬೈಲ್ ಅಂಗಡಿಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಅಲ್ಲಿ ಡ್ರಾಯರ್‍ನಲ್ಲಿದ್ದ ಸುಮಾರು 5 ಸಾವಿರ ರೂಪಾಯಿ ನಗದನ್ನು ದೋಚಿದ್ದಾನೆ. ಈ ಬಗ್ಗೆಯೂ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ಸಿಂಡಿಕೇಟ್ ಬ್ಯಾಂಕ್ ರಸ್ತೆಯಲ್ಲಿರುವ ಕಾಮತ್ ಕೋಲ್ಡ್ ಹೌಸ್‍ಗೆ ನುಗ್ಗಿ ಅಲ್ಲಿ ಹಣಕ್ಕಾಗಿ ಡ್ರಾವರ್‍ನಲ್ಲಿ ಜಾಲಾಡಿದ್ದು, ಹಣ ಸಿಗದಿದ್ದಾಗ ಅಲ್ಲಿಂದ ಬರಿಗೈಯಲ್ಲಿ ವಾಪಸಾಗಿದ್ದಾರೆ. ಬುಧವಾರ ಮಧ್ಯರಾತ್ರಿಯ ಬಳಿಕದಿಂದ ಗುರುವಾರ ನಸುಕಿನ ಜಾವದ ನಡುವಿನಲ್ಲಿ ಈ ಕೃತ್ಯಗಳು ನಡೆದಿರುವ ಸಾಧ್ಯತೆ ಇದೆ. ಉಪ್ಪಿನಂಗಡಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ.
`ಹಣವೂ ಇಡುವುದಿಲ್ಲ, ಬೀಗವೂ ಹಾಕುವುದಿಲ್ಲ!
ಕಳ್ಳತನ ಯತ್ನದ ಬಗ್ಗೆ ಕಾಮತ್ ಕೋಲ್ಡ್ ಹೌಸ್‍ನ ಸಂತೋಷ್ ಕಾಮತ್ ಪ್ರತಿಕ್ರಿಯಿಸಿ, "ನಮ್ಮಲ್ಲಿಂದ ಈ ಹಿಂದೆ 2 ಬಾರಿ ಕಳವು ಆಗಿತ್ತು. ಪೊಲೀಸ್ ದೂರು ಕೊಟ್ಟಿದ್ದೆ. ಏನೂ ಪ್ರಯೋಜನ ಆಗಿಲ್ಲ, ಬದಲಾಗಿ ಮುರಿದ ಬೀಗ ಹೊಸದಾಗಿ ಹಾಕಲು, ಶೆಟರ್ ಮತ್ತು ಡ್ರಾಯರ್ ಸರಿ ಪಡಿಸಲು 3 ರಿಂದ 5 ಸಾವಿರ ರೂಪಾಯಿ ಖರ್ಚು ಆಗಿದೆ. ಹೀಗಾಗಿ ಇದೀಗ ಡ್ರಾಯರ್‍ನಲ್ಲಿ ಹಣವೂ ಇಡುವುದಿಲ್ಲ, ಅದಕ್ಕೆ ಬೀಗವೂ ಹಾಕುವುದಿಲ್ಲ". ಇಂದಿನ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಿಲ್ಲ ಎಂದು ತಿಳಿಸಿದರಲ್ಲದೆ, ದೂರು ನೀಡಬೇಕಾದರೆ ದಿನ ಇಡೀ ಠಾಣೆಯಲ್ಲಿ ಕಾಯಬೇಕು, ಆಗಾಗ್ಗೆ ಕರೆದಾಗಲೆಲ್ಲ ನಮ್ಮ ಕೆಲಸ ಬಿಟ್ಟು ಹೋಗಬೇಕು. ಹೋದರೂ ಏನೂ ಪ್ರಯೋಜನ ಆಗುವುದಿಲ್ಲ ಎಂದು ಇನ್ನು ಠಾಣೆಯ ಎದುರಿನಲ್ಲೇ ರಾಜಾರೋಷವಾಗಿ ಕಳವು ಮಾಡಿ ಹೋಗಿದ್ದಾರೆ. ವ್ಯವಸ್ಥೆಯೇ ಸರಿ ಇಲ್ಲದ ಮೇಲೆ ದೂರು ನೀಡಿಯಾದರೂ ಏನು ಪ್ರಯೋಜನ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.