15 ದಿನದೊಳಗೆ ಸುರತ್ಕಲ್ ಟೋಲ್‌ಗೇಟ್ ಸಮಸ್ಯೆಗೆ ಪರಿಹಾರ: ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಭರವಸೆ

Update: 2022-10-13 15:46 GMT

ಮಂಗಳೂರು, ಅ.13: ಸುರತ್ಕಲ್ ಟೋಲ್‌ಗೇಟ್ ಸಮಸ್ಯೆಗೆ ಮುಂದಿನ 15 ದಿನಗಳೊಗೆ ಸಂಪೂರ್ಣವಾಗಿ ಪರಿಹಾರ ಸಿಗಲಿದೆ ಎಂದು ಭಾರತೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ. ವತಾರೆ ಭರವಸೆ ನೀಡಿದರು.

ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣ ಹಾಗೂ ನಿರ್ವಹಣೆಗಳಿಗೆ ಸಂಬಂಧಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಧ್ಯಕ್ಷತೆಯಲ್ಲಿ ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಬಹುದಿನಗಳಿಂದ ಇತ್ಯರ್ಥಪಡಿಸಲು ಯತ್ನಿಸುತ್ತಿದ್ದ ಸಮಸ್ಯೆ 15 ದಿನಗಳಲ್ಲಿ ಬಗೆಹರಿಯಲಿದೆ. ಅದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವತಾರೆ ಹೇಳಿದರು.

ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ಎನ್‌ಐಟಿಕೆ ಸುರತ್ಕಲ್‌ನಿಂದ ನಂತೂರಿನವರೆಗೆ ರಸ್ತೆಗುಂಡಿಯಿಂದಾಗಿ ಅಪಘಾತಗಳು ಸಂಭವಿಸಿದರೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭಾರತೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಲಿಂಗೇಗೌಡ ಮಾತನಾಡಿ, ಮುಂದಿನ  ಏಳು ದಿನದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು, ತಪ್ಪಿದಲ್ಲಿ ಪ್ರಾಧಿಕಾರ ದಿಂದಲೇ ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಸುರತ್ಕಲ್‌ನಿಂದ ಎನ್‌ಐಟಿಕೆ ಜಂಕ್ಷನ್‌ವರೆಗೆ ರಸ್ತೆಯನ್ನು ಮಹಾನಗರ ಪಾಲಿಕೆ ಆಯುಕ್ತರ ಸಹಿತ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಏಳು ದಿನಗಳೊಳಗೆ ದುರಸ್ತಿ ಪಡಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.

ಕೂಳೂರು ಮೇಲ್ಸೆತುವೆ ದುರಸ್ತಿ ಕಾರ್ಯ ಶೀಘ್ರದಲ್ಲಿ ಆಗಬೇಕು. ಮುಂದಿನ ಮಳೆಗಾಲದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಾಗಬಾರದು, ಪಂಪ್‌ವೆಲ್‌ನಿಂದ ತಲಪಾಡಿಗೆ ರಸ್ತೆ ಗುಂಡಿಗಳು ಇರದಂತೆ ಅವುಗಳನ್ನು ಮುಚ್ಚಿಸಬೇಕು, ಯಾವುದೇ ಗುತ್ತಿಗೆದಾರರು ಸರಕಾರದಿಂದ ಕಾಮಗಾರಿಗಳನ್ನು ಪಡೆದ ಮೇಲೆ ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು. ಸಮಸ್ಯೆಗಳು ಎದುರಾದಲ್ಲಿ ಅವುಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಡಿಸಿ ಗುತ್ತಿಗೆದಾರರಿಗೆ ತಿಳಿಸಿದರು.

ಸಭೆಯಲ್ಲಿ ಅಡ್ಡ ಹೊಳೆ-ಪೆರಿಯಡ್ಕ, ಬಿಕರ್ನಕಟ್ಟೆ ವ್ಯಾಪ್ತಿಯಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ, ನಗರದೊಳಗೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕೆಪಿಟಿ ಹಾಗೂ ನಂತೂರ್ ಜಂಕ್ಷನ್‌ಗಳಲ್ಲಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News