ಆಟೋಗಳ ಪ್ರಯಾಣ ದರ ಪರಿಷ್ಕರಣೆ: ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ
ಮಂಗಳೂರು, ಅ.13: ನಗರದ ಆಟೊ ರಿಕ್ಷಾಗಳ ಪ್ರಯಾಣ ದರವನ್ನು ಶೀಘ್ರ ಪರಿಷ್ಕರಣೆ ಮಾಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಆಟೊ ರಿಕ್ಷಾ ಚಾಲಕ-ಮಾಲಕರ ಕುಂದುಕೊರತೆಗಳ ಬಗ್ಗೆ ಚರ್ಚಿಸಲು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರು ವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲೆಯಂತೆ ಕನಿಷ್ಠ 40 ರೂ. ಮತ್ತು ನಂತರದ 20 ರೂ.ನಂತೆ ಇಲ್ಲೂ ದರ ಪರಿಷ್ಕರಿಸಬೇಕು ಎಂದು ಆಟೊ ಚಾಲಕರು ಆಗ್ರಹಿಸಿದರು.
ಉಡುಪಿ ನಗರಸಭೆ, ಮಂಗಳೂರು ಮಹಾನಗರ ಪಾಲಿಕೆಯಾಗಿದೆ. ಅಲ್ಲಿಯ ದರವನ್ನು ಇಲ್ಲಿ ಮಾಡಲು ಸಾಧ್ಯವಿಲ್ಲ. ಉಡುಪಿಯಂತೆ ಇಲ್ಲೂ ನಗರ-ಗ್ರಾಮಾಂತರ ನಿರ್ಬಂಧ ತೆಗೆದು ಹಾಕಿದರೆ ಮಾತ್ರ ಅಲ್ಲಿಯ ದರ ವಿಧಿಸಬಹುದು. ಆರ್ಥಿಕವಾಗಿ ಹಿಂದುಳಿದ ಜನರನ್ನು ಗಮನದಲ್ಲಿರಿಸಿಕೊಂಡು ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜತೆ ಚರ್ಚಿಸಿ ದರ ಪರಿಷ್ಕರಣೆ ಮಾಡಲಾಗುವುದು ಎಂದು ಡಾ.ರಾಜೇಂದ್ರ ಕೆ.ವಿ. ಹೇಳಿದರು.
ಇಲೆಕ್ಟ್ರಿಕ್ ಆಟೊಗಳನ್ನು ಚಲಾಯಿಸುವುದರಿಂದ ಹಳೆಯ ಆಟೊ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನುಮುಂದೆ ಇಲೆಕ್ಟ್ರಿಕ್ ಆಟೊಗಳನ್ನು ನಗರದೊಳಗೆ ಓಡಿಸಲು ಅವಕಾಶ ಕೊಡಬಾರದು ಎಂದು ಶಾಸಕ ವೇದವ್ಯಾಸ ಕಾಮತ್ ಸಲಹೆ ನೀಡಿದರು. ಇದಕ್ಕೆ ಆಟೊ ಚಾಲಕರು ದನಿಗೂಡಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಲೆಕ್ಟ್ರಿಕ್ ವಾಹನಗಳನ್ನು ಬಳಸಲು ಪ್ರೋತ್ಸಾಹಿಸುತ್ತಿದೆ. ಹಾಗಾಘಿ ಈ ಬಗ್ಗೆ ಅಧ್ಯಯನ ಮಾಡಿ, ಯಾರೊಬ್ಬರನ್ನೂ ಗುರಿಯಾಗಿಸದೆ ಇಲೆಕ್ಟ್ರಿಕ್ ವಾಹನವಲ್ಲದೆ ಇತರ ಆಟೊ, ಬಸ್‌ಗಳನ್ನೂ ನಿರ್ಬಂಧಿಸಿ ಸೂಕ್ತ ನಿಯಮ ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
ಎಲ್‌ಪಿಜಿ/ ಸಿಎನ್‌ಜಿ ಯುನಿಟ್ ಅಳವಡಿಸಲು ಹೆಚ್ಚಿನ ದರ ವಸೂಲಿ, ಸುರತ್ಕಲ್‌ನವರಿಗೆ ಮೂಡುಬಿದಿರೆಗೆ ತೆರಳಿ ಫೇರ್ ಮೀಟರ್ ಮೊಹರು ಹಾಕಲು ಆಗುವ ಸಮಸ್ಯೆ, ಆಟೊ ಫೇರ್ ಮೀಟರ್ ದುರಸ್ತಿಗೆ ಅಧಿಕ ದರ ವಸೂಲಿ, ರೆಟ್ರೋ ರಿಫ್ಲೆಕ್ಟಿವ್ ಟೇಪ್ ಮತ್ತು ರೇರ್ ಮೇಕಿಂಗ್ ಪ್ಲೇಟ್‌ನಿಂದ ಆಗುವ ಸಮಸ್ಯೆಗಳ ಬಗ್ಗೆ ಚಾಲಕರು ಸಭೆಯ ಗಮನ ಸೆಳೆದರು.
ಆ್ಯಪ್ ಆಧಾರಿತ ರ್ಯಾಪಿಡೊ, ಓಲಾ ಮತ್ತು ಉಬರ್ ಸಂಸ್ಥೆಗಳ ದ್ವಿಚಕ್ರ, ತ್ರಿಚಕ್ರ ವಾಹನಗಳನ್ನು ರದ್ದು ಮಾಡುವಂತೆ ಆಟೊ ಚಾಲಕರು ಒತ್ತಾಯಿಸಿದರು.
ಗ್ರಾಮಾಂತರ ಆಟೊಗಳು ನಗರದಲ್ಲಿ ಓಡಾಟ ನಡೆಸುವುದನ್ನು ನಿರ್ಬಂಧಿಸಲು ನಾಲ್ಕು ಇಂಚಿನ ಬಜಾಜ್ ಗ್ರೀನ್ ಸ್ಟಿಕ್ಕರ್ ಹಾಕಬೇಕು. ಅನಧಿಕೃತ ಆಟೋ ಪಾರ್ಕ್ ತೆರವುಗೊಳಿಸಿ, ನವೆಂಬರ್ ಮೊದಲ ವಾರದಲ್ಲಿ 210 ಆಟೊ ಪಾರ್ಕ್‌ಗಳಿಗೆ ಚಾಲನೆ ಕೊಡಬೇಕು ಎಂಬ ಬೇಡಿಕೆಯನ್ನು ಸಭೆಯ ಮುಂದಿಡಲಾಯಿತು.
ಆಟೊ ರಿಕ್ಷಾ ಚಾಲಕರ-ಮಾಲಕರ ಸಂಘಗಳ ಪ್ರತಿನಿಧಿಗಳಾದ ವಿಷ್ಣುಮೂರ್ತಿ, ಅರುಣ್ ಕುಮಾರ್, ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಹನುಮಂತ ಕಾಮತ್ ಮತ್ತಿತರರು ಮಾತನಾಡಿದರು.
ಮೇಯರ್ ಜಯಾನಂದ ಅಂಚನ್, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಎಸ್ಪಿ ಹೃಷಿಕೇಶ್ ಸೋನಾವಣೆ, ಉಪವಿಭಾಗಾಧಿಕಾರಿ ಮದನ್ ಮೋಹನ್, ಮಂಗಳೂರು ವಿಭಾಗದ ಹಿರಿಯ ಪ್ರಾದೇಶಿಕ ಅಧಿಕಾರಿ ರವಿಶಂಕರ್ ರಾವ್ ಉಪಸ್ಥಿತರಿದ್ದರು.