5, 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ: ಅವೈಜ್ಞಾನಿಕ, ಅನರ್ಥಕಾರಿ ಶಿಕ್ಷಣ ನೀತಿ

Update: 2022-10-14 07:08 GMT

ಸರಕಾರಿ ಶಾಲೆಗಳನ್ನು ಎಲ್ಲಾ ಬಗೆಯಲ್ಲಿ ದುರ್ಬಲಗೊಳಿಸಲಾಗಿದೆ. ಇಂತಹ ಅನನುಕೂಲ ವಾತಾವರಣದಲ್ಲಿ ಓದುವ 5 ಮತ್ತು 8ನೇ ತರಗತಿಯ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಬೇಕು ಎನ್ನುವ ಶಿಫಾರಸು ಅಮಾನವೀಯವಾಗಿದೆ. ಯಾವುದೇ ತಯಾರಿ ಇಲ್ಲದ ಮಕ್ಕಳು ಈ ಕೇಂದ್ರೀಕೃತ ಸಾಮಾನ್ಯ ಪರೀಕ್ಷೆಗಳಿಂದ ಅನಗತ್ಯವಾಗಿ ಒತ್ತಡಕ್ಕೆ ಸಿಲುಕುತ್ತಾರೆ. ಉತ್ತಮ ಗುಣಮಟ್ಟದ ವ್ಯಾಸಂಗಕ್ರಮ ರೂಪಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಆ ಮೂಲಕ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಸರಕಾರದ ಮೊದಲ ಆದ್ಯತೆಯಾಗಿರಬೇಕಿತ್ತು ಮತ್ತು ಇದನ್ನು ಕಾರ್ಯಗತಗೊಳಿಸುವುದರ ಕುರಿತು ಶಿಕ್ಷಣ ನೀತಿಯು ಒತ್ತು ನೀಡಬೇಕಿತ್ತು. ಆದರೆ ಇವೆಲ್ಲವನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಮಕ್ಕಳನ್ನು ನೇರವಾಗಿ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ತಳ್ಳುವುದು, ಅವರ ಶೈಕ್ಷಣಿಕ ಬೆಳವಣಿಗೆಯನ್ನು ರಾಷ್ಟ್ರಮಟ್ಟದಲ್ಲಿ 'ಪರಕ್' ಎನ್ನುವ ಸಂಸ್ಥೆಯ ಮೂಲಕ ಮೌಲ್ಯಮಾಪನ ಮಾಡುವುದು ಅನಾಹುತಕಾರಿ. ಇದರಿಂದ ಯಾವುದೇ ಸೌಕರ್ಯಗಳಿಲ್ಲದ, ಸಾಮಾಜಿಕ-ಆರ್ಥಿಕ ಬೆಂಬಲವಿಲ್ಲದ ತಳಸಮುದಾಯದ, ಬಡಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ.


ಇತ್ತೀಚಿನ ಬೆಳವಣಿಗೆ

ಈಗಿನ ರಾಜಕೀಯ-ಸಾಮಾಜಿಕ-ಆರ್ಥಿಕ ಬಿಕ್ಕಟ್ಟುಗಳ ಗಾಯದ ಮೇಲೆ ಬರೆ ಎಳೆದಂತೆ ಕರ್ನಾಟಕದ ಬಿಜೆಪಿ ಸರಕಾರವು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು, 10ನೇ ತರಗತಿಯಲ್ಲಿ ಮಕ್ಕಳ ಉತ್ತೀರ್ಣ ಪ್ರಮಾಣವನ್ನು ಹೆಚ್ಚಿಸಲು 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಪ್ರಾರಂಭಿಸುವುದಾಗಿ ಹೇಳಿಕೆ ನೀಡಿದೆ. ಇದನ್ನು ಎನ್‌ಇಪಿ-2020 ಶಿಫಾರಸಿನ ಅಡಿಯಲ್ಲಿ ಜಾರಿಗೊಳಿಸುವುದಾಗಿ ಹೇಳುತ್ತಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ತನ್ನ ಸ್ವಾಯತ್ತತೆಯನ್ನು ಬಲಿಗೊಟ್ಟು ಆರೆಸ್ಸೆಸ್ ಸಿದ್ಧಾಂತದ ಪರ ಒಲವುಳ್ಳ ಶಿಕ್ಷಣ ಮಂತ್ರಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಒಂದು ದುರಂತ ಅಧ್ಯಾಯ. ಈ ರೀತಿಯಾಗಿ ಬೇಕಾಬಿಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿರುವುದರ ಮೂಲಕ ಇಲ್ಲಿನ ಮಕ್ಕಳನ್ನು ಬಲಿಪಶು ಮಾಡಲಾಗುತ್ತಿದೆ. ಈ ರೀತಿಯ ನಿರ್ಧಾರದಿಂದಾಗಿ ತಳ ಸಮುದಾಯದ, ದಲಿತ, ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇವರು ಪ್ರಸ್ತಾಪಿಸುವ ಎನ್‌ಇಪಿಯು 3,5,8 ತರಗತಿಗಳಿಗೆ ಕೇಂದ್ರೀಕೃತ ಸಾಮಾನ್ಯ ಪರೀಕ್ಷೆ ನಡೆಸಬೇಕೆಂದು ಶಿಫಾರಸು ಮಾಡಿದೆ. ಮಕ್ಕಳ ಬುದ್ಧಿಮಟ್ಟ, ಶೈಕ್ಷಣಿಕ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಲು ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ 'ಪರಕ್' (Performance Assessment, Review, and Analysis of Knowledge for Holistic Development) ಸ್ಥಾಪಿಸುತ್ತದೆ.

ದುಷ್ಪರಿಣಾಮಗಳು
ಆದರೆ 8-14ನೇ ವಯಸ್ಸಿನ ಮಕ್ಕಳನ್ನು ಈ ರೀತಿಯಾಗಿ ಕೇಂದ್ರೀಕರಣದ ಮೌಲ್ಯಮಾಪನಕ್ಕೆ ಒಳಪಡಿಸುವುದು ಅವರ ಕಲಿಕೆಗೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ. ಸ್ಥಳೀಯ ಶಿಕ್ಷಕರು ಸಹ ತಮ್ಮ ಶಾಲೆಯ ಮಕ್ಕಳ ಉತ್ತರ ಪತ್ರಿಕೆಗಳನ್ನು, ಶೈಕ್ಷಣಿಕ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡಲು ಸಮರ್ಥರಾಗಿರುತ್ತಾರೆ. ಒಂದೆಡೆ ಶಿಕ್ಷಕರ ನೇಮಕಾತಿ, ತರಬೇತಿ ಕುರಿತಾಗಿ ವಿವರವಾಗಿ ಬರೆಯುವ ಈ ನೀತಿಯು ಮತ್ತೊಂದೆಡೆ ಆ ಶಿಕ್ಷಕರಿಗೆ ತಮ್ಮ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದನ್ನು ನಿರಾಕರಿಸುತ್ತದೆ. ಇದು ಬಲು ದೊಡ್ಡ ವಿರೋಧಾಭಾಸ. ಆದರೆ ವಾಸ್ತವದಲ್ಲಿ ಸರಕಾರವು ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ, ತನ್ನ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದಿಲ್ಲ, ಉತ್ತಮ ಗುಣಮಟ್ಟದ ಬೋಧನೆಗೆ ಶ್ರಮಿಸುವುದಿಲ್ಲ. ಸರಕಾರಿ ಶಾಲೆಗಳನ್ನು ಎಲ್ಲಾ ಬಗೆಯಲ್ಲಿ ದುರ್ಬಲಗೊಳಿಸಲಾಗಿದೆ.

ಇಂತಹ ಅನನುಕೂಲ ವಾತಾವರಣದಲ್ಲಿ ಓದುವ 5 ಮತ್ತು 8ನೇ ತರಗತಿಯ ಮಕ್ಕಳು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಬೇಕು ಎನ್ನುವ ಶಿಫಾರಸು ಅಮಾನವೀಯವಾಗಿದೆ. ಯಾವುದೇ ತಯಾರಿ ಇಲ್ಲದ ಮಕ್ಕಳು ಈ ಕೇಂದ್ರೀಕೃತ ಸಾಮಾನ್ಯ ಪರೀಕ್ಷೆಗಳಿಂದ ಅನಗತ್ಯವಾಗಿ ಒತ್ತಡಕ್ಕೆ ಸಿಲುಕುತ್ತಾರೆ. ಉತ್ತಮ ಗುಣಮಟ್ಟದ ವ್ಯಾಸಂಗಕ್ರಮ ರೂಪಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಿ ಆ ಮೂಲಕ ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ಸರಕಾರದ ಮೊದಲ ಆದ್ಯತೆಯಾಗಿರಬೇಕಿತ್ತು ಮತ್ತು ಇದನ್ನು ಕಾರ್ಯಗತಗೊಳಿಸುವುದರ ಕುರಿತು ಶಿಕ್ಷಣ ನೀತಿಯು ಒತ್ತು ನೀಡಬೇಕಿತ್ತು. ಆದರೆ ಇವೆಲ್ಲವನ್ನು ನಿರ್ಲಕ್ಷಿಸಿ ಏಕಪಕ್ಷೀಯವಾಗಿ ಮಕ್ಕಳನ್ನು ನೇರವಾಗಿ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗೆ ತಳ್ಳುವುದು, ಅವರ ಶೈಕ್ಷಣಿಕ ಬೆಳವಣಿಗೆಯನ್ನು ರಾಷ್ಟ್ರಮಟ್ಟದಲ್ಲಿ 'ಪರಕ್' ಎನ್ನುವ ಸಂಸ್ಥೆಯ ಮೂಲಕ ಮೌಲ್ಯಮಾಪನ ಮಾಡುವುದು ಅನಾಹುತಕಾರಿ. ಇದರಿಂದ ಯಾವುದೇ ಸೌಕರ್ಯಗಳಿಲ್ಲದ, ಸಾಮಾಜಿಕ-ಆರ್ಥಿಕ ಬೆಂಬಲವಿಲ್ಲದ ತಳಸಮುದಾಯದ, ಬಡಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಉಳ್ಳವರು, ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮಕ್ಕಳು ಮಾತ್ರ ಶಿಕ್ಷಣ ಪಡೆಯುತ್ತಾರೆ. ಶಿಕ್ಷಣ, ವ್ಯಾಸಂಗ ಕ್ರಮವೆಂದರೆ ಅದು ಪರೀಕ್ಷಾ ಪದ್ಧತಿಯನ್ನು ಆಧರಿಸಬೇಕು ಎನ್ನುವುದು ತಪ್ಪುಕಲ್ಪನೆ. ಇಲ್ಲಿ ಪರೀಕ್ಷೆ ಎನ್ನುವುದು ಒಂದು ಪ್ರಕ್ರಿಯೆ ಮಾತ್ರ. ಕಡೆಗೂ ಮುಖ್ಯವಾಗುವುದು ಮಕ್ಕಳ ಕಲಿಕಾ ಕ್ರಮ ಮತ್ತು ಶಿಕ್ಷಕರ ಬೋಧನಾ ಕ್ರಮ. ಇದರ ಕುರಿತು ಮಾತನಾಡುವ ಈ ಶಿಕ್ಷಣ ನೀತಿ ಮರಳಿ ಪರೀಕ್ಷೆಯನ್ನು ಮುಖ್ಯವಾದ ಅಂಶವೆಂದು ಅವೈಜ್ಞಾನಿಕವಾಗಿ ನಿರ್ದರಿಸುತ್ತದೆ. ಇದು ಆಪೇಕ್ಷಣೀಯವಲ್ಲ

ಸಂವಿಧಾನ ವಿರೋಧಿ 
ಅಲ್ಲದೆ ಶಿಕ್ಷಣ ಮಂತ್ರಿಗಳ ಈ ನಿರ್ಧಾರವು 54 ಪರಿಚ್ಛೇದಗಳನ್ನೊಳಗೊಂಡ 'ಮಕ್ಕಳ ಹಕ್ಕಿಗಾಗಿ ವಿಶ್ವಸಂಸ್ಥೆಯ ಸಮಾವೇಶ' (UNCRC)ದ ನೀತಿಗಳಿಗೆ ವಿರುದ್ಧವಾಗಿದೆ. ಮಕ್ಕಳು ತಮ್ಮ ಹಕ್ಕನ್ನು ಸಂಪೂರ್ಣವಾಗಿ ಅನುಭವಿಸುವಂತೆ ಸರಕಾರ ಮತ್ತು ಪೋಷಕರು ಎಲ್ಲ ಬಗೆಯ ಕಾರ್ಯವಿಧಾನಗಳನ್ನು ಜಾರಿಗೊಳಿಸಬೇಕು ಎಂಬುದು ಅದರ ನೀತಿಯಾಗಿದೆ. ಅದರ ಪರಿಚ್ಛೇದ 28ರ ಅನುಸಾರ ಪ್ರತೀ ಮಗುವಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಪರಿಚ್ಛೇದ 3ರ ಅನುಸಾರ ಮಕ್ಕಳ ಹಿತಾಸಕ್ತಿಗೆ ಮೊದಲ ಆದ್ಯತೆ ಕೊಡಬೇಕು. ಪರಿಚ್ಛೇದ 12ರ ಅನುಸಾರ ತಮಗೆ ಪರಿಣಾಮ ಬೀರುವ ವಿಷಯಗಳಲ್ಲಿ ಮಕ್ಕಳ ಅಭಿಪ್ರಾಯ, ದೃಷ್ಟಿಕೋನವನ್ನು ಪರಿಗಣಿಸಬೇಕು. ಆದರೆ ಶಿಕ್ಷಣ ಮಂತ್ರಿ ನಾಗೇಶ್ ಅವರ 5, 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ UNCRC ನೀತಿಯ ಉಲ್ಲಂಘನೆಯಾಗಿದೆ. ಜೊತೆಗೆ ಭಾರತ ಸಂವಿಧಾನದ ಪರಿಚ್ಛೇದ 45ರ ಎಲ್ಲಾ ನಾಗರಿಕರಿಗೂ ಉಚಿತ, ಕಡ್ಡಾಯ ಗುಣಮಟ್ಟದ ಶಿಕ್ಷಣ ಕೊಡಬೇಕು, ಪರಿಚ್ಛೇದ 46ರ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳ, ಪ.ಜಾತಿ ಮತ್ತು ಪ.ಪಂಗಡದ ಸಮುದಾಯಗಳಿಗೆ ವಿಶೇಷ ಸೌಲಭ್ಯ ಕಲ್ಪಿಸಲು ಪ್ರಭುತ್ವಕ್ಕೆ ಸಂಪೂರ್ಣ ಅಧಿಕಾರವಿದೆ ಮತ್ತು ಅವರನ್ನು ಸಾಮಾಜಿಕ ಅನ್ಯಾಯ ಮತ್ತು ದುರ್ಬಳಕೆಯಿಂದ ರಕ್ಷಿಸಬೇಕು, ಪರಿಚ್ಛೇದ 21ಎರ 6-14ರ ವಯಸ್ಸಿನ ಮಕ್ಕಳಿಗೆ ಉಚಿತ, ಕಡ್ಡಾಯ ಶಿಕ್ಷಣ ಕೊಡಬೇಕು ಎನ್ನುವ ಎಲ್ಲಾ ಆಶಯಗಳನ್ನೂ ಉಲ್ಲಂಘಿಸುತ್ತದೆ. ಇದು ಸಂವಿಧಾನ ವಿರೋಧಿ ನಿಲುವಾಗಿದೆ.

'ಆರ್‌ಟಿಇ 2009' ಕಾಯ್ದೆಯ ಪರಿಚ್ಛೇದ 4ರ ಅನುಸಾರ '6ನೇ ವಯಸ್ಸಿನ ನಂತರವೂ ಶಾಲೆಗೆ ದಾಖಲಾಗದ ಮಕ್ಕಳಿಗೆ ಅಥವಾ 18ನೇ ವಯಸ್ಸಿಗಿಂತ ಮೊದಲು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುವ ಮಕ್ಕಳಿಗೆ ವಿಶೇಷ ಸೌಲಭ್ಯ ಕೊಡಬೇಕು, ಅಗತ್ಯ ಕಾರ್ಯಯೋಜನೆಗಳನ್ನು ರೂಪಿಸಬೇಕು' ಎಂದು ವಿವರಿಸುತ್ತದೆ. ಆದರೆ ನಾಗೇಶ್ ಅವರ ಈ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ನಿರ್ಧಾರ ಈ ಪರಿಚ್ಛೇದ 4ರ ಆಶಯಗಳಿಗೆ ವಿರುದ್ಧವಾಗಿದೆ.

ಮುಖ್ಯವಾಗಿ ಪಬ್ಲಿಕ್ ಪರೀಕ್ಷೆಯ ಮೂಲಕ ಮಕ್ಕಳಲ್ಲಿ ಪರೀಕ್ಷೆಯ ಭಯ ವನ್ನು ನಿವಾರಿಸುತ್ತೇವೆ ಎನ್ನುವ ಹೇಳಿಕೆ ವಿವೇಚನೆರಹಿತವಾಗಿದೆ. ಪರೀಕ್ಷೆಗಳ ಮೂಲಕ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನವನ್ನು ಉತ್ತಮಪಡಿಸುವ ನಿರ್ಧಾರವು ಸಹ ಅವಿವೇಕದ ಸಂಗತಿಯಾಗಿದೆ. ಉತ್ತಮ ಬೋಧನೆ, ಗುಣಮಟ್ಟದ ಕಲಿಕೆಯನ್ನು ರೂಪಿಸದೆ, ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳದೆ, ಅತ್ಯುತ್ತಮ ಪಠ್ಯಗಳನ್ನು ಸಿದ್ಧಪಡಿಸದೆ, ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೆ ಕೇವಲ ಮೂರು ವರ್ಷಕ್ಕೊಮ್ಮೆ (7, 10, 12 ತರಗತಿ) ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದು ಬಡ ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅದು ಯಾಕೆ ಎನ್ನುವುದಕ್ಕೆ ಕೆಳಗೆ ವಿವರಿಸಲಾಗಿದೆ

ಪ್ರಸಕ್ತ ಪರಿಸ್ಥಿತಿ
20ನೇ ಶತಮಾನದ ಮಹಾನ್ ಶಿಕ್ಷಣತಜ್ಞ ಮತ್ತು ದಾರ್ಶನಿಕ ಬ್ರೆಝಿಲ್‌ನ ಪೌಲ್ ಫ್ರೈರೆ ''ಯಾವುದೇ ಬಗೆಯ 'ವ್ಯಾಸಂಗಕ್ರಮ'ವು (pedagogy) ಶೋಷಿತರನ್ನು 'ಅದೃಷ್ಟಹೀನರು' ಎಂದು ಕರೆದು ಅವರಿಂದ ದೂರವುಳಿದು ಅಥವಾ ಅವರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಿಸಿ ವಿಮೋಚನೆಯನ್ನು ಸಾಧಿಸಲು ಸಾಧ್ಯವಿಲ್ಲ. ವಿಮೋಚನೆಯ ಹೋರಾಟದಲ್ಲಿ ಶೋಷಿತರು ಸ್ವತಃ ಆ 'ವ್ಯಾಸಂಗಕ್ರಮ'ದ ಭಾಗವಾಗಿರಬೇಕು'' ಎಂದು ವಿವರಿಸಿದ. ಫ್ರೈರೆ 1972ರಲ್ಲಿ ಬರೆದ 'ಶೋಷಿತರ ವ್ಯಾಸಂಗಕ್ರಮ', 1985ರಲ್ಲಿ ಬರೆದ 'ಶಿಕ್ಷಣದ ರಾಜಕೀಯ' ಕೃತಿಗಳು ಆಧುನಿಕ ಶಿಕ್ಷಣಕ್ಕೆ, ಕಲಿಕೆಯರಿಮೆಗೆ ಅಗತ್ಯವಾದ ಹೊಸ ಬಗೆಯ ಚಿಂತನೆ ಮತ್ತು ವೈಜ್ಞಾನಿಕ, ತಾತ್ವಿಕವಾದ ಅಧ್ಯಯನವನ್ನು ವಿವರಿಸುತ್ತದೆ. ಸಂಪ್ರದಾಯ ಶಾಲಾ ಶಿಕ್ಷಣವನ್ನು ಒಡೆದು ಹಾಕಿ ಅದನ್ನು ಪುನರ್‌ರೂಪಿಸಬೇಕು (deschooling) ಎಂದು ಚಿಂತಿಸಿದ ಮತ್ತೊಬ್ಬ ಶಿಕ್ಷಣ ತಜ್ಞ ಇವಾನ್ ಇಲಿಚ್. ವಿಯೆನ್ನಾದಲ್ಲಿ ಹುಟ್ಟಿದರು. Deschooling Society, ಸಂಭ್ರಮದ ಹತಾರಗಳು, ಸಮತೆಯ ಚೈತನ್ಯ, ವೈದ್ಯಕೀಯ ಪ್ರತೀಕಾರ ಇತ್ಯಾದಿ ಪುಸ್ತಕಗಳನ್ನು ಬರೆದರು. 1973ರಲ್ಲಿ ಪ್ರಕಟವಾದ Deschooling Society ಪುಸ್ತಕದಲ್ಲಿ ''ಶಾಲೆಗಳು ಮಕ್ಕಳಿಗೆ ಅದರಲ್ಲೂ ಬಡತನದ ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕಾರ್ಯವಿಧಾನವನ್ನು, ತಿರುಳನ್ನು ಗೊಂದಲಗೊಳಿಸುವ ವಿದ್ಯಾಭ್ಯಾಸ ನೀಡುತ್ತವೆ. ಇದು ಮಸುಕಾಗುತ್ತ ಹೋದ ಹಾಗೆ 'ಮತ್ತಷ್ಟು ಇಲಾಜು ಮಾಡಿದಷ್ಟು ಉತ್ತಮ ಫಲಿತಾಂಶ ಅಥವಾ ಮೇಲಕ್ಕೇರುವುದು ಯಶಸ್ಸಿಗೆ ದಾರಿ'' ಎನ್ನುವ ತರ್ಕವನ್ನು ಮುಂದಿಡುತ್ತಾರೆ. ಮಕ್ಕಳ ಕಲ್ಪನಾಶಕ್ತಿಯನ್ನು, ಭಾವನಾಶಕ್ತಿಯನ್ನು ಶೈಕ್ಷಣಿಕ ಶಿಸ್ತಿನೊಳಗೆ ಬಂಧಿಸಿ ಮೌಲ್ಯದ ಬದಲಿಗೆ ಸೇವೆಯನ್ನು ಒಪ್ಪಿಕೊ ಎಂದು ಕಲಿಸಲಾಗುತ್ತದೆ'' ಎಂದು ವಿವರಿಸುತ್ತಾರೆ.

ಇಂಡಿಯಾದಲ್ಲಿ ಶೋಷಿತರ ಪರವಾಗಿ ಚಿಂತಿಸುವ ಫ್ರೈರೆ, ಇಲಿಚ್ ಮಾದರಿಯ ಶಿಕ್ಷಣ ತಜ್ಞರಿಲ್ಲ. ಇಂದು ಪ್ರಜಾಪ್ರಭುತ್ವದ ಅಡಿಪಾಯವಾದ ಸಾರ್ವಜನಿಕ ಶಿಕ್ಷಣವೆನ್ನುವುದು ಅವನತಿ ಹೊಂದುತ್ತಿದೆ. ಸರಕಾರ-ಖಾಸಗಿ ಶಿಕ್ಷಣ ಸಂಸ್ಥೆಗಳು-ಶಿಕ್ಷಣ ಇಲಾಖೆ ಎಂಬ ಈ ತ್ರಿವಳಿ ಅನೈತಿಕ ಸಂಬಂಧ ಸರಕಾರಿ ಶಾಲೆಗಳನ್ನು ಹಂತಹಂತವಾಗಿ ಕೊಲ್ಲುತ್ತಿವೆ. ಇದರ ವಿವರಗಳು ಸಾಕಷ್ಟು ಬಾರಿ ಚರ್ಚೆಯಾಗಿದೆ. ಆದರೆ ಎಲ್ಲರಿಗೂ ಉತ್ತಮ ಗುಣಮಟ್ಟದ ಉಚಿತ, ಕಡ್ಡಾಯ ಶಿಕ್ಷಣ ದೊರಕಬೇಕು ಎನ್ನುವ ಆಶಯದೊಂದಿಗೆ (ಸಂವಿಧಾನದ ಪರಿಚ್ಛೇದ 45, 21ಎ) 4, ಆಗಸ್ಟ್ 2009ರಂದು ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಜಾರಿಗೆ ಬಂತು. ಬಡತನ ರೇಖೆಗಿಂತ ಕೆಳಗಿರುವ ಶೇಕಡಾ 25 ಪ್ರಮಾಣದ ಕುಟುಂಬಗಳ ಮಕ್ಕಳಿಗೆ ಉಚಿತ, ಕಡ್ಡಾಯ, ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬುದು ಇದರ ಮೂಲ ಆಶಯವಾಗಿದೆ. ಆರ್‌ಟಿಇನ ಲೋಪದೋಷಗಳ ಕುರಿತು ಇಲ್ಲಿ ಚರ್ಚಿಸುವುದಿಲ್ಲ. ಅದಕ್ಕೆ ಬೇರೆಯದೇ ವೇದಿಕೆ ಬೇಕಾಗುತ್ತದೆ.

ಈ ಶಿಕ್ಷಣ ಹಕ್ಕು ಕಾಯ್ದೆಯ ಪರಿಚ್ಛೇದ 16ರ ಅನುಸಾರ detention policy' (ಫೇಲು ಮಾಡುವಂತಿಲ್ಲ) ನೀತಿಯನ್ನು ಅಳವಡಿಸಲಾಗಿದೆ. ಈ ಅನುಚ್ಛೇದದ ಪ್ರಕಾರ 8ನೇ ತರಗತಿಯವರೆಗೂ ಬಾಲಕ/ಬಾಲಕಿಯನ್ನು ನಾಪಾಸು ಮಾಡುವ ಹಾಗಿಲ್ಲ ಮತ್ತು ಶಾಲೆಯಿಂದ ಹೊರ ಹಾಕುವ ಹಾಗಿಲ್ಲ. ಇನ್ನೂ ಸರಳವಾಗಿ ಹೇಳಬೇಕೆಂದರೆ ಯಾವುದೇ ವಿದ್ಯಾರ್ಥಿಯನ್ನು ವ್ಯಾಸಂಗದಿಂದ ತಡೆಹಿಡಿಯುವ ಹಾಗಿಲ್ಲ. ಮಕ್ಕಳಿಗೆ ಅವರ 14ನೇ ವಯಸ್ಸಿನವರೆಗೂ (1-8 ತರಗತಿ) ಶಿಕ್ಷಣವು ಕಡ್ಡಾಯವಾಗಿ ದೊರಕಬೇಕು.

3 ಜನವರಿ 2019ರಂದು ರಾಜ್ಯಸಭೆಯಲ್ಲಿ ಈ "no detention policy' ಅಥವಾ no-fail ನೀತಿಯಡಿ ಆರ್‌ಟಿಇ ಕಾಯ್ದೆಯ ಪರಿಚ್ಛೇದ 16ಕ್ಕೆ ತಿದ್ದುಪಡಿ ತಂದು 5ನೇ ತರಗತಿಯಲ್ಲಿಯೇ (11ನೇ ವಯಸ್ಸಿನಲ್ಲಿ) ಮಕ್ಕಳನ್ನು ಫೇಲು ಮಾಡಬಹುದು ಎನ್ನುವ ಹೊಸ ನೀತಿಯು ಅಂಗೀಕಾರವಾಗುತ್ತದೆ ಮತ್ತು ಇದು ಎಲ್ಲಾ ರಾಜ್ಯ ಸರಕಾರಗಳ ಶಿಕ್ಷಣ ಇಲಾಖೆಗಳಿಗೂ ಅನ್ವಯಿಸುತ್ತದೆ ಮತ್ತು ಇದನ್ನು ಜಾರಿಗೊಳಿಸುವ ವಿವೇಚನೆಯನ್ನು ಆಯಾ ರಾಜ್ಯ ಸರಕಾರಗಳಿಗೆ ವಹಿಸಲಾಗಿದೆ. ಈ ತಿದ್ದುಪಡಿಯು ಈಗಾಗಲೇ ಅವಸಾನ ಹೊಂದುತ್ತಿರುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಕಡೆಯ ಮೊಳೆ ಹೊಡೆಯುತ್ತದೆ. ಈ ತಿದ್ದುಪಡಿಯನ್ನು ಪ್ರಸ್ತಾಪಿಸಿದ ಕೇಂದ್ರ ಸರಕಾರ ಮತ್ತು ಅದನ್ನು ಅನುಮೋದಿಸುವ ಸಂಸತ್ತು ಮತ್ತು ಅದನ್ನು ಜಾರಿಗೊಳಿಸುವ ರಾಜ್ಯ ಸರಕಾರಗಳು ಸ್ವತಃ ಕೈಯಾರೆ ಮುಂದೆ ನಿಂತು ಮಕ್ಕಳು ಶಾಲೆ ತೊರೆಯುವಂತೆ, ವ್ಯಾಸಂಗ ಮೊಟಕುಗೊಳಿಸುವುದಕ್ಕೆ ಕಾರಣರಾಗುತ್ತಾರೆ. ಬಡ ಮಕ್ಕಳ ಭವಿಷ್ಯ ಅತಂತ್ರವಾಗುವುದಕ್ಕೆ ಜವಾಬ್ದಾರರಾಗುತ್ತಾರೆ. ಯಾತಕ್ಕೆ "no detention policy' ಅಳವಡಿಸಿಕೊಂಡರು ಎನ್ನುವ ಪ್ರಶ್ನೆಗೆ ಉತ್ತರಿಸುವ ಮೊದಲು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಯಾವ ಕಾರಣಗಳಿಗೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ?
ಕುಟುಂಬದ ಬಡತನದ ಕಾರಣಕ್ಕೆ, ಲಿಂಗ ತಾರತಮ್ಯದ ಕಾರಣಕ್ಕೆ, ಜಾತಿ, ಧರ್ಮ ಕಾರಣಕ್ಕೆ, ಪೋಷಕರ ನಿರಾಸಕ್ತಿಯ ಕಾರಣದಿಂದ (ಗ್ರಾಮೀಣ ಭಾಗಗಳಲ್ಲಿ ಇದು ಹೆಚ್ಚು), ದುಬಾರಿ ಶುಲ್ಕದ ಕಾರಣದಿಂದ, ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ ಅಥವಾ dropout 
ಆಗುತ್ತಾರೆ. ಅಲ್ಲದೆ ತರಗತಿಯೊಳಗಿನ ಜಾತಿ, ಧರ್ಮ, ವರ್ಗ ತಾರತಮ್ಯದ ಕಾರಣಕ್ಕೆ ಮಕ್ಕಳು ಶಾಲೆಯಿಂದ ಹೊರಗುಳಿಯುತ್ತಾರೆ. ಮುಖ್ಯವಾಗಿ 5 ರಿಂದ 6ನೇ ತರಗತಿಗೆ 7ರಿಂದ 8ನೇ ತರಗತಿಗೆ ಮತ್ತು 9 ರಿಂದ 10ನೇ ತರಗತಿಗೆ ಪ್ರವೇಶಿಸುವ transition ಹಂತಗಳಲ್ಲಿನ ಗೊಂದಲಗಳು, ಶೈಕ್ಷಣಿಕ ಬಿಕ್ಕಟ್ಟುಗಳ ಕಾರಣಕ್ಕೆ ಶಾಲೆಯಿಂದ ಹೊರಗುಳಿಯುತ್ತಾರೆ.

ಮಕ್ಕಳು ಯಾವ ಕಾರಣಗಳಿಗೆ ಫೇಲಾಗುತ್ತಾರೆ?

ಗುಣಮಟ್ಟ ಬೋಧನೆಯ, ಕಲಿಕೆಯ ಕೊರತೆ ಕಾರಣದಿಂದ, ಶಿಕ್ಷಕರ ಕೊರತೆಯಿಂದ, ಏಕೋಪಾಧ್ಯಾಯ ಶಾಲೆಗಳಿಂದ, ಅವೈಜ್ಞಾನಿಕ ಪಠ್ಯಪುಸ್ತಕಗಳ ಕಾರಣದಿಂದ, ಪಠ್ಯಪುಸ್ತಕಗಳ ಕೊರತೆಯಿಂದ, ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ, ಶಿಕ್ಷಕರ ಬೇಜವಾಬ್ದಾರಿ ಕಾರಣದಿಂದ, ಅಪೌಷ್ಟಿಕತೆಯ ಕಾರಣದಿಂದ, ಕುಟುಂಬದ ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ ಇತ್ಯಾದಿಗಳ ಕಾರಣಕ್ಕೆ ಮಕ್ಕಳು ಫೇಲ್ ಆಗುತ್ತಾರೆ. ಈ ಕಾಯ್ದೆಯ ಸೆಕ್ಷನ್ 27ರ ಅನುಸಾರ ಶಿಕ್ಷಕ/ಶಿಕ್ಷಕಿಯನ್ನು ಪಾಠ ಮಾಡುವ ಜವಾಬ್ದಾರಿಯಿಂದ ಹೊರತಂದು ಬೋಧನೇತರ ಚಟುವಟಿಕೆಗಳಾದ ಜನಗಣತಿ, ಚುನಾವಣೆ, ವಿಕೋಪ ಪರಿಹಾರ ಕಾರ್ಯಗಳಲ್ಲಿ ಬಳಸಿಕೊಳ್ಳಬಾರದು ಎಂದು ಹೇಳಿದೆ. ಆದರೆ ಎಲ್ಲಾ ಸರಕಾರಿ ಶಾಲೆಗಳಲ್ಲಿ ಈ ನೀತಿಸಂಹಿತೆಯ ವಿರುದ್ಧವಾದ ನಿಯಮಗಳಿವೆ.

ಶಿಕ್ಷಕರ ಬೋಧಕೇತರ ಚಟುವಟಿಕೆಗಳು ಅವರ ದಿನದ ಬಹುಪಾಲು ಸಮಯವನ್ನು ಬೋಧನೆಯಿಂದ ವಂಚಿತಗೊಳಿಸುತ್ತದೆ. ಈ ಕಾಯ್ದೆಯು ಗುತ್ತಿಗೆ ಆಧಾರದ ಮೇಲೆ ಶಿಕ್ಷಕ/ಶಿಕ್ಷಕಿಯರ ನೇಮಕಾತಿಗೆ ಅವಕಾಶ ಮಾಡಿಕೊಡುತ್ತದೆ ಮತ್ತು ಆ ಮೂಲಕ ಗೌರವಯುತವಾದ ಸಂಬಳ ಮತ್ತು ಸೌಲಭ್ಯಗಳನ್ನು ನಿರಾಕರಿಸಲಾಗುತ್ತದೆ. ಈ ಕಾರಣಗಳಿಗಾಗಿಯೂ ಮಕ್ಕಳು ಫೇಲ್ ಆಗುತ್ತಾರೆ. ಮೇಲೆ ತಿಳಿಸಿದಂತೆ ತರಗತಿಯೊಳಗಿನ ಜಾತಿ, ಧರ್ಮ, ವರ್ಗ ತಾರತಮ್ಯದ ಕಾರಣಕ್ಕೆ, 5ರಿಂದ 6ನೇ ತರಗತಿಗೆ 7ರಿಂದ 8ನೇ ತರಗತಿಗೆ ಮತ್ತು 9ರಿಂದ 10ನೇ ತರಗತಿಗೆ ಪ್ರವೇಶಿಸುವ transition  ಹಂತಗಳಲ್ಲಿನ ಗೊಂದಲಗಳು, ಶೈಕ್ಷಣಿಕ ಬಿಕ್ಕಟ್ಟುಗಳ ಕಾರಣಕ್ಕೆ ಫೇಲಾಗುತ್ತಾರೆ. ಆದರೆ ವೈರುಧ್ಯವೆಂದರೆ ಈ ಆರ್‌ಟಿಇ ಕಾಯ್ದೆ ಜಾರಿಗಾಗಿ ಬೋಧನಾ ಮತ್ತು ಪಠ್ಯಕ್ರಮಗಳ ವಲಯದಲ್ಲಿ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳದೆ (ಉದಾಹರಣೆಗೆ ನಿಧಾನ ಕಲಿಕೆಯ ಪ್ರವೃತ್ತಿಯ ಮಕ್ಕಳಿಗಾಗಿ bridge courseಗಳನ್ನು ಪ್ರಾರಂಭಿಸುವುದು) ಈ no-fail ನೀತಿಯನ್ನು ಕುರುಡಾಗಿ ಅನುಸರಿಸಿದರೆ ಅದು ಟೊಳ್ಳುತನದ ಪ್ರದರ್ಶನವಾಗುತ್ತದೆ.

ಇಲ್ಲಿ ಕಡೆಗೆ ಮಕ್ಕಳ ಬುದ್ಧಿವಂತಿಕೆ, ಗ್ರಹಣ ಶಕ್ತಿ, ನೆನಪಿನ ಶಕ್ತಿಗಳ ನ್ಯೂನತೆ ಅವರ ಫೇಲಾಗುವುದಕ್ಕೆ ಅಂತಿಮ ಕಾರಣಗಳು. ಅವು ಪ್ರಮುಖ ಕಾರಣಗಳಲ್ಲ. ತಮಗೆ ಸಂಬಂಧಿಸಿರದ, ತಾವು ಜವಾಬ್ದಾರರಲ್ಲದ ಕಾರಣಗಳಿಗೆ ಮಕ್ಕಳು ಶಾಲೆಯಿಂದ ಹೊರಗುಳಿಯುವ, dropout ಆಗುವ, ಫೇಲ್ ಆಗುವ ಈ ಪ್ರವೃತ್ತಿಗೆ ಕಡಿವಾಣ ಹಾಕಬೇಕೆನ್ನುವುದು ಈ "no detention policy' ಅಥವಾ no-fail ನೀತಿಯ ಮೂಲ ಉದ್ದೇಶ. ಮತ್ತೊಂದು ಕಡೆ ವ್ಯಾಸಂಗದಲ್ಲಿ ದುರ್ಬಲ, ಪ್ರತಿಭೆಯ ಕೊರತೆ ಎನ್ನುವ ನೆಪವನ್ನೊಡ್ಡಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಬಡಮಕ್ಕಳ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವ ದುರುದ್ದೇಶಕ್ಕೂ ಕಡಿವಾಣ ಹಾಕಬೇಕೆನ್ನುವುದು ಇದರ ಉದ್ದೇಶ.

ಆದರೆ 8ನೇ ತರಗತಿಯವರೆಗಿನ ಈ 'no detention policy'ಯನ್ನು ವಿರೋಧಿಸುವ ಕೆಲ ಶಿಕ್ಷಣತಜ್ಞರು ''ನಂತರ 9ನೇ ತರಗತಿಯಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯು ಅತ್ಯಂತ ಕಠಿಣ ಸ್ಪರ್ಧೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಆ ಒತ್ತಡವನ್ನು ನಿಭಾಯಿಸಲು ವಿಫಲರಾಗುತ್ತಾರೆ ಮತ್ತು ನಿರಂತರವಾಗಿ ಫೇಲಾಗುತ್ತಾರೆ, ಶಾಲೆಯಿಂದ ಹೊರಗುಳಿಯುತ್ತಾರೆ'' ಎಂದು ಅಭಿಪ್ರಾಯಪಡುತ್ತಾರೆ. ಮುಂದುವರಿದು ''ಇದರ ಕಾರಣಕ್ಕಾಗಿ ಮಕ್ಕಳು ಶಿಕ್ಷಣದ ಮೇಲೆ ಆಸಕ್ತಿ ತೋರುವುದಿಲ್ಲ, ಕಲಿಕೆ ಗುಣಮಟ್ಟ ಕುಂದುತ್ತ ಹೋಗುತ್ತದೆ, ಶಿಕ್ಷಕರಿಗೆ ಉತ್ತರದಾಯಿತ್ವ ಇರುವುದಿಲ್ಲ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳ ಭವಿಷ್ಯಕ್ಕೆ ಅಂಧಕಾರ ಕವಿಯುತ್ತದೆ'' ಎಂದು ವಾದಿಸುತ್ತಾರೆ. ಆದರೆ no-fail ನೀತಿಯನ್ನು ವಿರೋಧಿಸುವವರು ಮೇಲೆ ತಿಳಿಸಿದ ಸಾರ್ವಜನಿಕ ಶಿಕ್ಷಣದ ವೈಫಲ್ಯತೆ, ಸಮಾಜೋ-ಆರ್ಥಿಕ ಕಾರಣಗಳ ದುರಂತ ಕುರಿತು ಪ್ರಶ್ನಿಸಿದಾಗ ನಿರುತ್ತರರಾಗುತ್ತಾರೆ. ಶಿಕ್ಷಣದ ಖಾಸಗೀಕರಣವೂ ಈ ದುರಂತಕ್ಕೆ ಕಾರಣವಲ್ಲವೇ ಎನ್ನುವ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ. ಅಲ್ಲದೆ ಫೇಲು ಮಾಡಿದ ನಂತರ ಅದೇ ತರಗತಿಯಲ್ಲಿ ಪುನರಾವರ್ತನೆಯಾದರೆ ಮಕ್ಕಳ ಶಿಕ್ಷಣದ ಗುಣಮಟ್ಟ ಸುಧಾರಿಸುತ್ತದೆಯೇ ಎನ್ನುವುದಕ್ಕೆ ಯಾವುದೇ ಅಂಕಿಅಂಶಗಳ ಪುರಾವೆ ಇಲ್ಲ. ಆದರೆ ಈ ಎಲ್ಲ ಈ ಕೊರತೆಗಳನ್ನು ನೀಗಿಸಲೆಂದೇ ಈ ಕಾಯ್ದೆಯ ಪರಿಚ್ಛೇದ 29(2)(ಎ) ರಲ್ಲಿ ವಿಸ್ತಾರವಾದ ಮತ್ತು ನಿರಂತರವಾದ ಮೌಲ್ಯಮಾಪನ (ಸಿಸಿಇ) ಪದ್ಧತಿಯನ್ನು ಜಾರಿಗೆ ತರಲಾಯಿತು. ಇದರ ಆಶಯವೆಂದರೆ ಶಿಕ್ಷಕ ಒಂದು ಪಠ್ಯಪುಸ್ತಕದ ಭಾಗವೊಂದನ್ನು ಮುಗಿಸಿದ ನಂತರವಷ್ಟೆ ಮೌಲ್ಯಮಾಪನವನ್ನು ಕೈಗೊಳ್ಳಬೇಕು. ಈ ಪದ್ಧತಿಯಿಂದ ಶಿಕ್ಷಕನಿಗೆ ತಾನು ಹೇಗೆ ಬೋಧಿಸಿದ್ದೇನೆ ಎಂದು ಆ ಕೂಡಲೇ ಅರಿವಾಗುತ್ತದೆ. ಒಂದು ವೇಳೆ ನಿರೀಕ್ಷಿತ ಮಟ್ಟದಲ್ಲಿ ಕಲಿಕೆ ಇಲ್ಲದಿದ್ದ ಪಕ್ಷದಲ್ಲಿ ಬದಲಾವಣೆಗೊಂಡ ಪಠ್ಯದೊಂದಿಗೆ ಆ ಭಾಗವನ್ನು ಮರಳ�

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News