ಫರಂಗಿಪೇಟೆ: ಬೆಳ್ತಂಗಡಿ ಶಾಸಕರ ಕಾರು ಅಡ್ಡಗಟ್ಟಿ ತಲವಾರು ಝಳಪಿಸಿದ ದುಷ್ಕರ್ಮಿಗಳು; ಪ್ರಕರಣ ದಾಖಲು

Update: 2022-10-14 05:25 GMT
ಹರೀಶ್ ಪೂಂಜಾ

ಬಂಟ್ವಾಳ, ಅ.14: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ತಲವಾರು ಝಳಪಿಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಸಕ ಹರೀಶ್ ಪೂಂಜಾ ಅವರ ಕಾರು ಚಾಲಕ ನವೀನ್ ಎಂಬವರು ಈ ಬಗ್ಗೆ ದೂರು ನೀಡಿದ್ದಾರೆ. ತಾಲೂಕಿನ ಫರಂಗಿಪೇಟೆ ಎಂಬಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ಹರೀಶ್ ಪೂಂಜಾ ಮಂಗಳೂರಿನಿಂದ ಬೆಳ್ತಂಗಡಿಗೆ ಗುರುವಾರ ರಾತ್ರಿ 11:30ರ ವೇಳೆ ತೆರಳುತ್ತಿದ್ದಾಗ ಬಿಳಿ ಸ್ಕಾರ್ಪಿಯೊ ಕಾರಿನಲ್ಲಿ ಪಡೀಲ್ ನಿಂದ ಫರಂಗಿಪೇಟೆ ವರೆಗೆ ಶಾಸಕರ ಕಾರನ್ನು ಬೆನ್ನತ್ತಿದ ದುಷ್ಕರ್ಮಿಗಳ ತಂಡ ತಲವಾರು ತೋರಿಸಿ ಅಡ್ಡಗಟ್ಟಲು ಪ್ರಯತ್ನಿಸಿದೆ ಎನ್ನಲಾಗಿದೆ. ಈ ಸಂದರ್ಭ ಫರಂಗಿಪೇಟೆಯಲ್ಲಿ ಚಾಲಕ ಕಾರನ್ನು ಬದಿಗೆ ಸರಿಸಿ ನಿಲ್ಲಿಸಿದ ಸಂದರ್ಭದಲ್ಲಿ ಅವಾಚ್ಯವಾಗಿ ನಿಂದಿಸಿದ ತಂಡ ತಲವಾರು ಝಳಪಿಸಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನೆ ನಡೆದ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜಾ ಕಾರಿನಲ್ಲಿ ಪ್ರಯಾಣಿಸುತ್ತಿರಲಿಲ್ಲ. ಅವರು ಸಂಬಂಧಿಕರೊಬ್ಬರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News