ಶೀಘ್ರವೇ ಸುರತ್ಕಲ್ ಟೋಲ್ ಗೇಟ್ ತೆರವು; ಹೋರಾಟ ಕೈಬಿಡಿ: ಮಂಗಳೂರು ಎಸಿ ಮದನ್ ಮೋಹನ್ ಮನವಿ
ಪಣಂಬೂರು, ಅ.14: ಅಕ್ಟೋಬರ್ 18ರ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಮುತ್ತಿಗೆ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಪರವಾಗಿ ಇಂದು ಪಣಂಬೂರು ಪೊಲೀಸ್ ಉಪ ಆಯುಕ್ತರ ಕಚೇರಿಯಲ್ಲಿ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಮದನ್ ಮೋಹನ್, ಸುರತ್ಕಲ್ ಟೋಲ್ ಗೇಟ್ ತೆರವು ಪ್ರಕ್ರಿಯೆಯ ಆಡಳಿತಾತ್ಮಕ ಕೆಲಸಗಳು ನಡೆಯುತ್ತಿವೆ. ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದ್ದರಿಂದ ಹೋರಾಟ ಕೈ ಬಿಡಬೇಕೆಂದು ಹೋರಾಟ ಸಮಿತಿಯನ್ನು ವಿನಂತಿಸಿದರು.
ಈ ವೇಳೆ ಸಭೆಯಲ್ಲಿದ್ದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಕಳೆದ ಆರು ವರ್ಷಗಳಲ್ಲಿ ಈ ರೀತಿಯ ಟೋಲ್ ಗೇಟ್ ತೆರವಿನ ಹಲವು ಭರವಸೆಗಳನ್ನು ನೀಡಲಾಗಿದೆ. ಕಳೆದ ಆರು ತಿಂಗಳಿನಲ್ಲಿ ಸರಕಾರದ ಹಲವು ವೇದಿಕೆ, ವಿಧಾನ ಸಭೆಯಲ್ಲೂ ತಿಂಗಳೊಳಗೆ ಟೋಲ್ ಗೇಟ್ ತೆರವು ಎಂಬ ಹೇಳಿಕೆಗಳು ಹೊರಬಿದ್ದಿವೆ. ಆದರೆ ಅವು ಯಾವುದೂ ಜಾರಿಗೆ ಬಂದಿಲ್ಲ. ಈಗಿನ ಭರವಸೆಯೂ ಜಾರಿಗೆ ಬರುತ್ತದೆ ಎಂಬ ವಿಶ್ವಾಸ ಜನತೆಗಿಲ್ಲ ಎಂದರು.
ದ.ಕ., ಉಡುಪಿ ಎರಡೂ ಜಿಲ್ಲೆಗಳ ನೂರಾರು ಸಂಘಟನೆಗಳು ಅ.18ರ ಮುತ್ತಿಗೆ ತೀರ್ಮಾನವನ್ನು ಬೆಂಬಲಿಸಿ ಭಾಗವಹಿಸಲಿವೆ. ಟೋಲ್ ಸಂಗ್ರಹ ಸ್ಥಗಿತಗೊಳ್ಳದೆ, ಭರವಸೆಯ ಆಧಾರದಲ್ಲಿ ಹೋರಾಟ ಮುಂದೂಡಲು ಅವರು ಸಮ್ಮತಿಸಲಾರರು. ಹೋರಾಟವನ್ನು ಒಕ್ಕೊರಲಿನಿಂದ ಬೆಂಬಲಿಸುತ್ತಿರುವ ಜನತೆ ಇದನ್ನು ಒಪ್ಪವುದಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.
ಸರಕಾರದ ಹೇಳಿಕೆಯ ಪ್ರಕಾರ ಇನ್ನು ಕೆಲವೇ ದಿನದಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವಿಗೆ ಬೇಕಾದ ಪ್ರಕ್ರಿಯೆ ಪೂರ್ಣಗೊಳ್ಳುವುದಾದರೆ, ತೀರ್ಮಾನ ಜಾರಿಯಾಗುವುದಾದರೆ ಅಲ್ಲಿಯವರಗಿನ ಒಂದಿಷ್ಟು ದಿನಗಳ ಟೋಲ್ ಸಂಗ್ರಹ ಬಿಟ್ಟುಕೊಟ್ಟರೆ ದೊಡ್ಡ ನಷ್ಟವೇನೂ ಆಗುವುದಿಲ್ಲ. ಏಳು ವರ್ಷಗಳ ಕಾಲ ಸತತವಾಗಿ ನೂರಾರು ಕೋಟಿ ರೂಪಾಯಿ ಸುರತ್ಕಲ್ ಟೋಲ್ ಗೇಟ್ ನಲ್ಲಿ ಈಗಾಗಲೆ ಸಂಗ್ರಹಿಸಲಾಗಿದೆ. ಆದುದರಿಂದ ಜನರ ಆಕ್ರೋಶ, ಆಗ್ರಹವನ್ನು ಪುರಸ್ಕರಿಸಿ ಟೋಲ್ ಸಂಗ್ರಹವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು. ಅ.18ರ ಟೋಲ್ ಗೇಟ್ ಮುತ್ತಿಗೆ ಧರಣಿಯನ್ನು ಶಾಂತಿಯುತವಾಗಿ ನಡೆಸಲಿದ್ದೇವೆ. ಟೋಲ್ ಸಂಗ್ರಹ ಸ್ಥಗಿತಗೊಂಡಿರುವುದು ಖಾತರಿಗೊಳ್ಳುವವರಗೆ ಮುತ್ತಿಗೆ ಮುಂದುವರಿಯಲಿದೆ ಎಂದು ಮುನೀರ್ ಕಾಟಿಪಳ್ಳ ಸಭೆಯಲ್ಲಿ ನುಡಿದರು.
ಇಂದಿನ ಸಭೆಯಲ್ಲಿ ಹೋರಾಟ ಸಮಿತಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಜಿಲ್ಲಾಧಿಕಾರಿಗೆ ತಲುಪಿಸಲಾಗುವುದು ಎಂದು ಎ.ಸಿ. ಭರವಸೆ ನೀಡಿದರು.
ಸಭೆಯಲ್ಲಿ ಎಸಿಪಿ ಮಹೇಶ್ ಕುಮಾರ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಲಭ್ಯ ಸುಮಾರು 30 ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಂಕ ಸಂಗ್ರಹ ಸ್ಥಗಿತಗೊಳ್ಳದೆ ಹೋರಾಟ ನಿಲ್ಲುವುದಿಲ್ಲ:
ಅಕ್ಟೋಬರ್ 18ರ ಟೋಲ್ ಗೇಟ್ ಮುತ್ತಿಗೆ ತೀರ್ಮಾನದಂತೆ ಶಾಂತಿಯುತವಾಗಿ ನಡೆಯಲಿದೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಅಂದು ಬೆಳಗ್ಗೆ 9:30ಕ್ಕೆ ಸುರತ್ಕಲ್ ಟೋಲ್ ಗೇಟ್ ಮುಂಭಾಗದಲ್ಲಿ ಸೇರಬೇಕು. ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗದೆ ಟೋಲ್ ತೆರವು ಹೋರಾಟದ ಯಶಸ್ಸಿಗೆ ಕೈ ಜೋಡಿಸಬೇಕು. ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಸ್ಥಗಿತಗೊಳ್ಳದೆ ಈ ಬಾರಿಯ ಹೋರಾಟ ಮುಗಿಯುವುದಿಲ್ಲ ಎಂದು ಸುರತ್ಕಲ್ ಟೋಲ್ ಗೇಟ್ ಹೊರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಸ್ಪಷ್ಟಪಡಿಸಿದ್ದಾರೆ.