ಟರ್ಕಿ ಗಣಿಯಲ್ಲಿ ಸ್ಫೋಟ: ಕನಿಷ್ಠ 25 ಮಂದಿ ಮೃತ್ಯು

Update: 2022-10-15 03:23 GMT

ಟರ್ಕಿ: ಉತ್ತರ ಟರ್ಕಿಯಲ್ಲಿ ಸಂಭವಿಸಿದ ಮಿಥೇನ್ ಸ್ಫೋಟದಿಂದ ಕನಿಷ್ಠ 25 ಮಂದಿ ಮೃತಪಟ್ಟಿದ್ದು, ಹತ್ತಾರು ಮಂದಿ ನೂರಾರು ಮೀಟರ್ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ಶುಕ್ರವಾರ ಮುಸ್ಸಂಜೆ ವೇಳೆಗೆ ಸಂಭವಿಸಿದ, ಟರ್ಕಿಯ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲಿ ಒಂದು ಎಂದು ಬಣ್ಣಿಸಲಾದ ಈ ಘಟನೆಯಲ್ಲಿ 11 ಮಂದಿಯನ್ನು ಜೀವಂತವಾಗಿ ಹೊರಕ್ಕೆ ತೆಗೆಯಲಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಫಹ್ರೆತ್ತೀನ್ ಖೊಕಾ (Health Minister Fahrettin Koca) ಟ್ವೀಟ್ ಮಾಡಿದ್ದಾರೆ. 

"ನಾವು ನಿಜವಾಗಿಯೂ ಅತ್ಯಂತ ವಿಷಾದನೀಯ ಸ್ಥಿತಿ ಎದುರಿಸುತ್ತಿದ್ದೇವೆ" ಎಂದು ಆಂತರಿಕ ವ್ಯವಹಾರಗಳ ಖಾತೆ ಸಚಿವ ಸುಲೈಮಾನ್ ಸೊಯಿಲು (Interior Minister Suleyman Soylu) ಹೇಳಿದ್ದಾರೆ. ಟರ್ಕಿಯ ಕಪ್ಪು ಸಮುದ್ರ ತೀರದ ಗಣಿಗಾರಿಕೆ ಪಟ್ಟಣವಾದ ಅಮಸ್ರಾದಲ್ಲಿ ಈ ದುರಂತ ಸಂಭವಿಸಿದೆ.

"ಒಟ್ಟು 110 ಮಂದಿ ಸಹೋದರರು ನೆಲದ ಅಡಿ ಕೆಲಸ ಮಾಡುತ್ತಿದ್ದರು. ಕೆಲವರು ತಾವೇ ಹೊರಬಂದಿದ್ದಾರೆ. ಮತ್ತೆ ಕೆಲವರನ್ನು ರಕ್ಷಿಸಲಾಗಿದೆ" ಎಂದು ಹೇಳಿದ್ದಾರೆ. ಸುಮಾರು 50 ಮಂದಿ 300 ಹಾಗೂ 350 ಮೀಟರ್ ಅಂತರದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ವರದಿಗಳನ್ನು ಅವರು ದೃಢಪಡಿಸಿದ್ದಾರೆ.

ಆತಂಕಿತ ಗುಂಪುಗಳು ಹಾನಿಗೀಡಾದ ಬಿಳಿಯ ಕಟ್ಟಡದ ಸುತ್ತ ಸೇರಿದ್ದು, ತಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರ ಸುದ್ದಿಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಧ್ಯಕ್ಷ ರೆಸೆಪ್ ತಯ್ಯಬ್ ಎರ್ಡೊಗಾನ್ ( Recep Tayyip Erdogan) ಅವರು ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಶನಿವಾರ ದುರಂತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News