ಕೋಸ್ಟ್‌ಗಾರ್ಡ್ ಅಕಾಡಮಿ ಸ್ಥಾಪನೆ ಕಾರ್ಯ ಚುರುಕು: ಕಮಾಂಡರ್ ಮನೋಜ್ ವಿ.ಬಾಡ್ಕರ್

Update: 2022-10-15 15:52 GMT

ಮಂಗಳೂರು, ಅ.15: ದೇಶದಲ್ಲೇ ಮೊದಲ ಕೋಸ್ಟ್‌ಗಾರ್ಡ್ ತರಬೇತಿ ಅಕಾಡಮಿ ಸ್ಥಾಪನೆ ಮಂಗಳೂರಿನಲ್ಲಿ ಚುರುಕುಗೊಂಡಿದೆ. ಭೂಸ್ವಾಧೀನ ಸೇರಿದಂತೆ ರಾಜ್ಯ ಸರಕಾರದ ಕಡೆಯಿಂದ ಪ್ರಕ್ರಿಯೆಗಳು ಪೂರ್ಣಗೊಂಡಿವೆ, ವಿಸ್ತೃತ ಯೋಜನಾ ವರದಿ ತಯಾರಿ ಕೆಲಸ ನಡೆಯಬೇಕಿದೆ ಎಂದು ಕೋಸ್ಟ್‌ಗಾರ್ಡ್ ಪಶ್ಚಿಮ ವಲಯ ಕಮಾಂಡರ್ ಮನೋಜ್ ವಿ.ಬಾಡ್ಕರ್ ಹೇಳಿದ್ದಾರೆ.

ಪಶ್ಚಿಮ ವಲಯ ಕಮಾಂಡರ್ ಆಗಿ ಅಕಾರ ವಹಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಅವರು,  ಶನಿವಾರ ಪಣಂಬೂರಿನ ಕೋಸ್ಟ್‌ಗಾರ್ಡ್ ನೌಕೆ ಐಸಿಜಿಎಸ್ ವರಾಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

159 ಎಕ್ರೆ ಜಾಗದಲ್ಲಿ ಅಕಾಡೆಮಿ ಸ್ಥಾಪನೆಯಾಗಲಿದೆ. ಈ ನಿಟ್ಟನಲ್ಲಿ ಕೇಂದ್ರ ಸರಕಾರದ ಅನುಮೋದನೆಗಳು ಪ್ರಗತಿಯಲ್ಲಿವೆ.  ಅಕಾಡಮಿಯಿಂದಾಗಿ ಕೋಸ್ಟ್‌ಗಾರ್ಡ್‌ನ ಪ್ರತ್ಯೇಕ ತರಬೇತಿ ವಿಧಾನಗಳು ಸಾಧ್ಯವಾಗಲಿವೆ. ಇದುವರೆಗೆ ನೌಕಾಪಡೆ ಅಕಾಡೆಮಿ ಹಾಗೂ ವಿದೇಶಗಳಲ್ಲಿ ಕೆಲವೊಂದು ವಿಶೇಷರೀತಿಯ ತರಬೇತಿ ನೀಡಲಾಗುತ್ತಿದೆ  ಎಂದು ಅವರು ನುಡಿದರು.

ತಣ್ಣೀರುಬಾವಿಯಲ್ಲಿದ್ದ ಎರಡು ಹೋವರ್‌ ಕ್ರಾಫ್ಟ್ ನೌಕೆಗಳನ್ನೂ ಗುಜರಾತಿಗೆ ಭಾರತ-ಪಾಕಿಸ್ತಾನದ ಗಡಿಭಾಗದ ಕಾವಲಿಗಾಗಿ ಕಳುಹಿಸಲಾಗಿದೆ. ಇಲ್ಲಿಗಿಂತಲೂ ಅಲ್ಲಿ ಅದರ ಅವಶ್ಯಕತೆ ಹೆಚ್ಚಿದೆ. ಸದ್ಯ ನಮ್ಮಲ್ಲಿ 18 ಹೋವರ್‌ ಕ್ರಾಫ್ಟ್‌ಗಳಿವೆ. ಮುಂದೆ ಸಂಖ್ಯೆ ಹೆಚ್ಚಳವಾದಾಗ ಮತ್ತೆ ಮಂಗಳೂರಿಗೆ ಬರುವ ಸಾಧ್ಯತೆ ಇದೆ ಎಂದರು.

ಮೊದಲು ಕೋಸ್ಟ್‌ಗಾರ್ಡ್‌ಗೆ ಸಿಂಗಲ್ ಎಂಜಿನ್‌ನ ಚೇತಕ್ ಹೆಲಿಕಾಪ್ಟರ್ ನೀಡಲಾಗುತ್ತಿತ್ತು. ಪ್ರಸಕ್ತ ಎಚ್‌ಎಎಲ್ ನಿರ್ಮಾಣದ ಅತ್ಯಾಧುನಿಕ ಎಲ್‌ಸಿಎಚ್ ಮಾರ್ಕ್-3 ಹೆಲಿಕಾಪ್ಟರ್ ನೀಡಲಾಗುತ್ತಿದೆ. ಇದರಿಂದಾಗಿ ಕೋಸ್ಟ್‌ಗಾರ್ಡ್ ಕಡಲಿನಲ್ಲಿ 350 ಕಿ.ಮೀ ದೂರದವರೆಗೂ ತೆರಳಿ ಜೀವರಕ್ಷಣೆಯಂತಹ ಕಾರ್ಯಾಚರಣೆ ನಡೆಸುವುದಕ್ಕೆ ಅನುಕೂಲವಾಗಿದೆ. ಕೋಸ್ಟ್‌ಗಾರ್ಡ್‌ನಲ್ಲಿ ಹಳೆಯದಾದ ನೌಕೆಗಳಿದ್ದು, ಅವುಗಳನ್ನು ಬದಲಾಯಿ ಸುವ, ಹೊಸ ನೌಕೆಗಳನ್ನು ಸೇರ್ಪಡೆಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಕೋಸ್ಟ್‌ಗಾರ್ಡ್ ವಿಮಾನಗಳಲ್ಲಿ ಪೈಲಟ್‌ಗಳಾಗಿ ಮಹಿಳೆಯರನ್ನು ನಿಯೋಜಿಸಲಾಗುತ್ತಿದೆ, ಆದರೆ ಮಹಿಳಾ ಸೈಲರ್‌ಗಳ ನೇಮಕಾತಿ ಸ್ವಲ್ಪ ಸಮಯ ಬೇಕಾಗಬಹುದು ಎಂದು ನುಡಿದರು.

ಮಂಗಳೂರು ಕೋಸ್ಟ್‌ಗಾರ್ಡ್ ಕಮಾಂಡರ್ ಅರುಣ್ ಕುಮಾರ್ ಮಿಶ್ರ ಹಾಜರಿದ್ದರು.

ಇದೇ ವೇಳೆ ಕಮಾಂಡರ್ ಅವರು ಮಂಗಳೂರಿನ ಕೋಸ್ಟ್‌ಗಾರ್ಡ್ ಅಧಿಕಾರಿ, ಸಿಬಂದಿಯೊಂದಿಗೆ  ಸಮಾಲೋಚನೆ ನಡೆಸಿ, ಮಂಗಳೂರು ಹೆಡ್‌ಕ್ವಾರ್ಟರ್ಸ್‌ನ ಕಾರ್ಯವೈಖರಿಯ ಪರಿಶೀಲನೆ ನಡೆಸಿದರು.

ಕೋಸ್ಟ್‌ಗಾರ್ಡ್ ತಂತ್ರಜ್ಞಾನದಲ್ಲಿ ಸುಧಾರಣೆ

ನಾನು ಮೂಲತಃ ಕನ್ನಡಿಗ, ಕಾರವಾರದವನು. ಹಿಂದೆ 2006ರ ಸುಮಾರಿಗೆ ಮಂಗಳೂರಿನ ಕೋಸ್ಟ್‌ಗಾರ್ಡ್ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ.  ಆಗಿನ ಅವಧಿಗೆ ಹೋಲಿಸಿದರೆ, ಕರಾವಳಿಯ ಸನ್ನಿವೇಶಗಳಲ್ಲಿ ಬಹಳಷ್ಟು ವ್ಯತ್ಯಾಸವಾಗಿದೆ. ತಂತ್ರಜ್ಞಾನದಲ್ಲಿ ಸುಧಾರಣೆಯಾಗಿದೆ.

ಮನೋಜ್ ವಿ.ಬಾಡ್ಕರ್, ಕಮಾಂಡರ್, ಕೋಸ್ಟ್‌ಗಾರ್ಡ್ ಪಶ್ಚಿಮ ವಲಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News