ನಂಬಿಕೆಯ ಭೂತ

Update: 2022-10-16 07:43 GMT

ಭೂತ ಬಿಡಿಸುವುದು ಅಂತಾರಲ್ಲಾ, ಅದು ನಿಜ. ಭೂತದಿಂದ ಬಿಡಿಸಬೇಕು, ಭೂತದಿಂದ ಬಿಡಿಸಿಕೊಳ್ಳಬೇಕು. ಆ ಹೆಣ್ಣು ಮಗಳಿಗೆ ಮೊದಲನೆಯ ಬಾಣಂತನದಲ್ಲಿ ಇದ್ದಕ್ಕಿದ್ದಂತೆ ದೆವ್ವ ಮೈ ಮೇಲೆ ಬಂದಿತು. ಮಗುವನ್ನು ಎತ್ತಿಕೊಳ್ಳಲು ಸಿದ್ಧವಿಲ್ಲ. ಇನ್ನು ಹಾಲೂಡಿಸುವುದಂತೂ ದೂರವೇ ಉಳಿಯಿತು. ಈಗ ಜೊತೆಗಿರುವ ಸಂಬಂಧಗಳನ್ನೆಲ್ಲಾ ‘‘ನೀವು ಯಾರು? ದೂರ ಹೋಗಿ’’ ಎಂದು ಕೂಗಾಡುತ್ತಾಳೆ. ನನಗೆ ಯಾರೂ ಇಲ್ಲ ಎಂದು ಭಾವಿಸುತ್ತಾಳೆ. ಮನೆಯವರಿಗೆಲ್ಲಾ ಅವಳನ್ನು ಸುಧಾರಿಸುವುದರಲ್ಲಿ ಸಾಕು ಸಾಕಾಯಿತು. ಭೂತ ಬಿಡಿಸಲು ಆ ದೇವಸ್ಥಾನ, ಈ ದರ್ಗಾ, ಆ ಪ್ರಾರ್ಥನೆ, ಈ ಪೂಜೆಗಳೆಲ್ಲಾ ಆದವು. ನಮ್ಮ ದೇಶದಲ್ಲಿ ಇವುಗಳಿಗೇ ಮೊದಲು ಹೋಗುವುದು. ನಂಬಿಕೆ ಅನ್ನೋದೇ ಪರಮ ಸದ್ಗುಣ ಮತ್ತು ಮೌಲ್ಯವೆಂದು ಭಾವಿಸಿರುವ ಜನ ತಮ್ಮ ನಂಬಿಕೆಗೆ ಅನುಸಾರವಾಗಿಯೂ ಮತ್ತು ಇತರ ನಂಬಿಕೆಗಳ ಅನುಸಾರವಾಗಿಯೂ ನಡೆದುಕೊಳ್ಳುತ್ತಾರೆ. ಇನ್ನೂ ಗಮನಿಸಿ ನೋಡಿ, ವೈಜ್ಞಾನಿಕವಾದ, ವೈದ್ಯಕೀಯವಾದ ಮತ್ತು ವೈಚಾರಿಕವಾದ ವಿಷಯಗಳಲ್ಲೂ ತಮಗಿರುವ ನಂಬಿಕೆಯ ಆಧಾರದಲ್ಲೇ ಗ್ರಹಿಸಲು ಮತ್ತು ಒಪ್ಪಲು ಸಿದ್ಧರಿರುತ್ತಾರೆ. ಆ ಡಾಕ್ಟರ್ ಕೈ ಗುಣ ತುಂಬಾ ಚೆನ್ನಾಗಿದೆ ಎಂದು ಆ ನಿರ್ದಿಷ್ಟ ವೈದ್ಯನ ಬಳಿಯೇ ಇರುವ ದೊಡ್ಡ ಸರತಿಯ ಸಾಲಿನಲ್ಲಿ ಸಣ್ಣ ಭಾಗವಾಗಿರಲು ಬಯಸುವವರು, ಈ ವಿಚಾರವಾದಿ ಅಥವಾ ಭಾಷಣಕಾರ ಪ್ರತಿಯೊಂದನ್ನೂ ಕರಾರುವಾಕ್ಕಾಗಿಯೂ ಮತ್ತು ಅಧ್ಯಯನದಿಂದಲೂ ಸತ್ಯವನ್ನೇ ಹೇಳುತ್ತಾನೆಂದು ಅವನ ರಾಜಕೀಯ ವಿಶ್ಲೇಷಣೆಗಳನ್ನು ಕೇಳುತ್ತಾ ಅವನು ಸೂಚಿಸುವ ವ್ಯಕ್ತಿಗೆ ಚುನಾವಣೆಯಲ್ಲಿ ಮತ ನೀಡುವವರೂ ಒಂದೇ ವಿಭಾಗದವರು.

ಅವರು ಆ ವ್ಯಕ್ತಿಯನ್ನು ನಂಬುವ ಕಾರಣದಿಂದ ಅವರ ಸೂಚನೆಗಳು, ಚಟುವಟಿಕೆಗಳೆಲ್ಲಾ ಸರಿಯೂ ಹೌದು, ಶ್ರೇಷ್ಠವೂ ಹೌದು ಎಂದು ಪೂರ್ವನಿರ್ಧಾರವನ್ನು ಹೊಂದಿರುತ್ತಾರೆ. ಇಂತಹ ಪೂರ್ವನಿರ್ಧಾರವು ಮುಂದೆ ಒಮ್ಮೆ ತಲೆಕೆಳಗಾದರೂ ತಮ್ಮ ನಂಬಿಕೆಯನ್ನು ಕಳೆದುಕೊಳ್ಳಲು ಸಿದ್ಧವಿರುವುದಿಲ್ಲ. ಬದಲಾಗಿ ಯಾವುದೋ ಸಾಂದರ್ಭಿಕ ಪ್ರಭಾವವನ್ನೋ, ಬೇರಿನ್ನೇನೋ ವಿಷಯಕ್ಕೆ ಕೂಡಿಸಿ ತಮ್ಮನಂಬಿಕೆಯನ್ನು ಸಮರ್ಥಿಸಿಕೊಳ್ಳಲು ಹೋಗುತ್ತಾರೆ. ಬಾಣಂತನದಲ್ಲಿ ಸಮಸ್ಯೆಗೆ ಒಳಗಾಗಿದ್ದ ಹೆಣ್ಣುಮಗು ತನ್ನ ಜೊತೆಗಿದ್ದ ಅನೇಕ ಹೆಣ್ಣುಮಕ್ಕಳ ಸಮಸ್ಯೆಗಳನ್ನು ನೋಡಿದ್ದಳು. ತನ್ನ ಬಾಲ್ಯದಲ್ಲಿ ಒಡಕಿನ ಕುಟುಂಬಗಳ ಭಾಗವಾಗಿದ್ದು ಬಾಳಿದವಳು, ಗಂಡನಿಂದ ದೌರ್ಜನ್ಯಕ್ಕೆ ಒಳಗಾದವರೇ ಅವಳ ಸಂಗಾತಿಗಳು. ಅವಳಿಗೆ ಮದುವೆ, ಗಂಡ, ಮಕ್ಕಳು, ಸಂಸಾರವೆಂದರೇನೇ ನೋವು ಸಂಕಷ್ಟಗಳೆಂಬ ಉದಾಹರಣೆಗಳು ಅವಳ ನಂಬಿಕೆಯ ಭಾಗವಾಗಿದ್ದವು. ಆಶ್ಚರ್ಯವೆಂದರೆ ಅವಳಿಗೆ ಒಳ್ಳೆಯ ಮನೆ, ಗಂಡ, ಕುಟುಂಬ ಸಿಕ್ಕರೂ ಅವಳ ನಂಬಿಕೆಯಿಂದ ಹೊರಗೆ ಬರಲು ಸಾಧ್ಯವೇ ಆಗುತ್ತಿಲ್ಲ. ಅವಳ ಮನಸ್ಸಿನ ಅಂತರಾಳದಲ್ಲಿ ಅದು ಕೂತಿದೆ. ಕೊನೆಗೆ ಅದೆಷ್ಟೋ ಆಪ್ತ ಸಮಾಲೋಚನೆಗಳಿಂದ ಅವಳಿಗೆ ಈಗಿರುವ ಸ್ಥಿತಿ ಮತ್ತು ಪರಿಸ್ಥಿತಿಯ ಅರಿವನ್ನು ಮೂಡಿಸಬೇಕಾಯಿತು. ನಂಬಿಕೆ ಮತ್ತು ವಿಶ್ವಾಸ ಎಂಬುದನ್ನು ಸಕಾರಾತ್ಮಕವಾಗಿಯೇ, ಮೌಲ್ಯವಾಗಿಯೇ ನೋಡುವ ರೂಢಿಯಲ್ಲಿ ಅವು ನಕಾರಾತ್ಮಕವಾಗಿ ಪ್ರಭಾವಗಳನ್ನು ಬೀರುತ್ತವೆ ಎಂಬುದನ್ನೂ ಕೂಡಾ ಒಪ್ಪಲು ಸಿದ್ಧವಿರುವುದಿಲ್ಲ. ಇದು ವ್ಯಕ್ತಿಗಳಾಗಿಯೂ ಹೌದು. ಸಮೂಹಗಳಾಗಿಯೂ ಹೌದು. ಹಾಗಾಗಿಯೇ ನೆಟ್ಟಗೆ ಡಾಂಬರಿನ ರಸ್ತೆಯನ್ನೇ ಕಾಣದವರು ಚಿನ್ನದ ರಸ್ತೆಯ ಭರವಸೆಯ ಕೊಟ್ಟಾಗ ನಂಬಲು ಸಾಧ್ಯವಾಗುವುದು. ನಮಗೆ, ನಮ್ಮ ದೇಶಕ್ಕೆ ಏನೋ ಮಹತ್ತರವಾದದ್ದು ಆಗುತ್ತದೆ ಎಂದು ತನಗಿರುವ ನಂಬಿಕೆಯನ್ನು ದೃಢಪಡಿಸಿಕೊಳ್ಳಲು ಯತ್ನಿಸುವುದು. ಈ ಬಗೆಯ ಭೂತಗಳು ಬೇಕಾದಷ್ಟಿವೆ ಮನುಷ್ಯನ ಮತ್ತು ಅವನ ಸಮಾಜದ ವರ್ತಮಾನ ಮತ್ತು ಭವಿಷ್ಯಗಳನ್ನು ನಿರ್ಧರಿಸಲು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News

ನಾಸ್ತಿಕ ಮದ