ಮಂಗಳೂರಿನ ಕರ್ಣಾಟಕ ಬ್ಯಾಂಕ್ ನ ಡಿಜಿಟಲ್ ಬ್ಯಾಂಕ್ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ

Update: 2022-10-16 10:47 GMT

ಮಂಗಳೂರು, ಅ.16: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಯೂನಿಟ್ ಉದ್ಘಾಟನೆಯ ಅಂಗವಾಗಿ ನಗರದ ಯೆಯ್ಯಾಡಿ ಕೊಂಚಾಡಿಯಲ್ಲಿಂದು ಕರ್ಣಾಟಕ ಬ್ಯಾಂಕ್ (Karnataka Bank)ನ ಡಿಜಿಟಲ್ ಬ್ಯಾಂಕ್ ಘಟಕ ಉದ್ಘಾಟನೆಗೊಂಡಿತು.ನೂತನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.

ಹೊಸದಿಲ್ಲಿಯ ಹಣಕಾಸು ಸಚಿವಾಲಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಜೊತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

*ಪ್ರಧಾನಿಯಿಂದ ಶುಭ ಹಾರೈಕೆ: ಬ್ಯಾಂಕ್ ವ್ಯವಹಾರದಲ್ಲಿ ವೈಜ್ಞಾನಿಕವಾಗಿ ಪಾರದರ್ಶಕತೆ ಕಾಯ್ದುಕೊಳ್ಳಲು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಂತ ಹಂತವಾಗಿ ದೇಶದ ಸಮಗ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲಾಗುವುದು. ಈ ವ್ಯವಸ್ಥೆಯಿಂದ ಸರಕಾರದ ಯೋಜನೆಗಳ ಸಹಾಯಧನ ನೇರವಾಗಿ ಜನರ ಮನೆಗೆ ತಲುಪಲು ಸಾಧ್ಯ. ಈ ಹಿಂದೆ ಜನಧನ್ ಖಾತೆ ತೆರೆಯುವ ಮೂಲಕ ಬ್ಯಾಂಕ್ ಸೇವೆಯಿಂದ ವಂಚಿತರಾದ ಸಾಕಷ್ಟು ಮಂದಿಗೆ ಬ್ಯಾಂಕ್ ಸೇವೆ ದೊರೆಯುವಂತಾಯಿತು. ಬ್ಯಾಂಕ್ ಗಳ ಸಂಯೋಜನೆಯಿಂದಲೂ ಆರ್ಥಿಕ ಕ್ಷೇತ್ರ ಕ್ಕೆ ಸಹಕಾರಿಯಾಗಿದೆ ಎಂದು ಶುಭ ಹಾರೈಸಿದರು.

ಕೊಂಚಾಡಿಯಲ್ಲಿ ಪ್ರಧಾನಿಯವರ ವೀಡಿಯೊ ಕಾನ್ಪೋರೆನ್ಸ್ ಕಾರ್ಯಕ್ರಮವನ್ನು ವೀಕ್ಷಿಸಿದ ಸಂಸದ ನಳಿನ್ ಕುಮಾರ್ ಕಟೀಲು,  ಶುಭ ಹಾರೈಸಿ ಡಿಜಿಟಲ್ ಇಂಡಿಯಾ ಪ್ರಧಾನಿಯವರ ಮಹತ್ವದ ಕನಸಿನ ಯೋಜನೆ. ಇಂದು ದೇಶದ 75 ಡಿಜಿಟಲ್ ಬ್ಯಾಂಕ್ ಘಟಕಗಳನ್ನು ಆರಂಭಿಸಿರುವುದರಲ್ಲಿ ಕರ್ನಾಟಕ ರಾಜ್ಯದ ನಾಲ್ಕು ಜಿಲ್ಲೆ ಗಳ ಘಟಕಗಳು ಸೇರಿವೆ. ಈ ಪೈಕಿ ಕರ್ಣಾಟಕ ಬ್ಯಾಂಕ್ ನ ಎರಡು ಘಟಕ ಆರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ದೇಶದಲ್ಲಿ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಡಿಜಿಟಲ್ ಬ್ಯಾಂಕ್ ಸೇವೆ ಜನರಿಗೆ ಬ್ಯಾಂಕ್ ಸೇವೆಯನ್ನು ಇನ್ನಷ್ಟು ಹತ್ತಿರವಾಗುವಂತೆ ಮಾಡಿದೆ. ಜನ ಸಾಮಾನ್ಯರಿಗೂ ಅವರ ಮನೆಗಳಲ್ಲಿ ಕುಳಿತು ಬ್ಯಾಂಕ್ ವ್ಯವಹಾರ ಮಾಡಲು ಸಾಧ್ಯವಾಗಲಿದೆ ಎಂದರು.

ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಸ್ವಾಗತಿಸಿ ಮಾತನಾಡುತ್ತಾ, ದೇಶದ ಅಮೃತ ಮ ಹೋತ್ಸವ ದ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನ ಎರಡು ಡಿಜಿಟಲ್ ಘಟಕ ಒಂದು ಮಂಗಳೂರು, ಇನ್ನೊಂದು ಮೈಸೂರಿನಲ್ಲಿ ಪ್ರಧಾನಿಯವರ ಮೂಲಕ ಇಂದು ಚಾಲನೆಗೊಂಡು ದಿನದ 24 ಗಂಟೆಯೂ ಜನರಿಗೆ ನಿರಂತರ ಸೇವೆ ನೀಡಲಿದೆ. ಮುಂದಿನ ವರ್ಷ ಕರ್ಣಾಟಕ ಬ್ಯಾಂಕ್ ಶತಮಾನೋತ್ಸವ ಆಚರಿಸಲಿದೆ. ಕರ್ಣಾಟಕ ಬ್ಯಾಂಕ್ ಈಗಾಗಲೇ ಶೇ.93ರಷ್ಟು ಬ್ಯಾಂಕ್ ವ್ಯವಹಾರವನ್ನು ಡಿಜಿಟಲ್ ಮೂಲಕ ಗ್ರಾಹಕರಿಗೆ ನೀಡುತ್ತಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಡಿಜಿಟಲ್ ಬ್ಯಾಂಕ್ ಘಟಕ ಆರಂಭಿಸಲಾ ಗುವುದು ಎಂದರು.

ಶಾಸಕ ಡಾ.ಭರತ್ ಶೆಟ್ಟಿ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News