ಪುತ್ತೂರು: ಕರ್ನಾಟಕ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘ ಉದ್ಘಾಟನೆ

Update: 2022-10-16 14:32 GMT

ಪುತ್ತೂರು: ಪ್ರಥಮ ಬಾರಿಗೆ ಸ್ಥಾಪನೆಗೊಂಡಿರುವ ದ.ಕ.ಜಿಲ್ಲೆಗೆ ಒಳಪಟ್ಟಂತೆ ಕರ್ನಾಟಕ ವಿದ್ಯುತ್ ಕಂಬ ಅಳವಡಿ ಸುವ ಕಾರ್ಮಿಕರ ಸಂಘ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ರವಿವಾರ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆಯಿತು.

ಪುತ್ತೂರು ಮೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎಂ. ಸಂಘವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಯಾವುದೇ ಸವಲತ್ತುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳುವಲ್ಲಿ ಸಂಘಟನೆಯ ಪಾತ್ರ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕರು ತಮ್ಮ ಆಶೋತ್ತರಗಳನ್ನು ನೆರವೇರಿಸಿಕೊಳ್ಳುವಲ್ಲಿ ವಿದ್ಯುತ್ ಕಂಬ ಅಳವಡಿಸುವ ಕಾರ್ಮಿಕರ ಸಂಘವನ್ನು ರಚಿಸಲಾಗಿದೆ. ಈ ಮೂಲಕ ಒಳ್ಳೆಯ ಆಶೋತ್ತರಗಳನ್ನು ಇಟ್ಟುಕೊಂಡು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಸಂಘ ನಿರಂತರ ಕೆಲಸ ಮಾಡಬೇಕು. ಲೈನ್‍ಮ್ಯಾನ್‍ಗಳ ನೇಮಕ ಆಧಾರದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವುದು ಇಲಾಖೆಯ ಮೂಲಕ ಕಷ್ಟಸಾಧ್ಯ. ಸರಕಾರದ ಮಟ್ಟದಲ್ಲಿ ಮಾನದಂಡ ಇಟ್ಟುಕೊಂಡು ಪ್ರಯತ್ನಿಸಬೇಕಾಗುತ್ತದೆ ಎಂದು  ಹೇಳಿದರು.

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ತಾಲೂಕು ಸಂಘದ ಅಧ್ಯಕ್ಷ ಹರಿಪ್ರಸಾದ್ ಪಿ.ಕೆ. ಮಾತನಾಡಿ ಸರಕಾರದಿಂದ ಕಾರ್ಮಿಕ ವರ್ಗಕ್ಕೆ ಸಿಗುವ ವಿವಿಧ ಸವಲತ್ತುಗಳ ಪಡೆಯುವಿಕೆಗಾಗಿ ಸಮಾನ ಮಸ್ಕರನ್ನೊಳಗೊಂಡು ಈ ಈ ಸಂಘವನ್ನು ರಚಿಸಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಸಂಘದ ಅಡಿಯಲ್ಲಿ ಕೆಲಸಕಾರ್ಯಗಳನ್ನು ನಿರತರಾಗಿರುವವರ ಜತೆ ನಾವಿದ್ದೇವೆ ಎಂದರು.

ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ತಾಲೂಕು ಗೌರವಾಧ್ಯಕ್ಷ ಹಾಗೂ ವಿದ್ಯುತ್ ಕಂಬ ಅಳವಡಿಸುವ ಸಂಘದ ಗೌರವಾಧ್ಯಕ್ಷ ಬಿ.ಪುರಂದರ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವ ಸಲಹೆಗಾರ ಎಂ.ಶೇಷಪ್ಪ ಕುಲಾಲ್, ಕೋಶಾಧಿಕಾರಿ ಮೋನಪ್ಪ ಕೆ., ಪ್ರಧಾನ ಕಾರ್ಯದರ್ಶಿ ಸುಂದರ ಸೇಡಿಯಾಪು ಉಪಸ್ಥಿತರಿದ್ದರು. ಸಂಘದ ಜಿಲ್ಲಾಧ್ಯಕ್ಷ ಕೆ.ಜಯರಾಮ ಕುಲಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News