ಮಲಯಾಳಂಗೆ ಲಿಪಿ ನೀಡಿರುವ ಭಾಷೆ ತುಳು ಎಂದು ಹೇಳಲು ಹೆಮ್ಮೆಯಾಗುತ್ತದೆ: ದಯಾನಂದ ಕತ್ತಲ್ ಸಾರ್

Update: 2022-10-16 15:03 GMT

ಸುರತ್ಕಲ್, ಅ.16: ಇಂದು ನಾವು ಮಲಯಾಳಂಗೆ ತುಳುಲಿಪಿಯನ್ನು ಮಾರುವ ಕಾಲ ಬಂದಿದೆ. ಆದರೆ, ಮಲಯಾಳಂಗೆ ಲಿಪಿಯನ್ನು ನೀಡಿರುವ ಭಾಷೆ ತುಳು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹೇಳಿದ್ದಾರೆ.

ವಿಶ್ವ ತುಳು ಲಿಪಿ ದಿನದ ಅಂಗವಾಗಿ ನಗರದ ಸುರತ್ಕಲ್ ನ ಗೋವಿಂದದಾಸ್ ಕಾಲೇಜು ಮುಂಭಾಗ ನಡೆದ 'ತುಳು ದಿಬ್ಬಣ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೂಜೆಗೆ ಬ್ರಾಹ್ಮಣರಿಲ್ಲದ ಕಾಲದಲ್ಲಿ ಕೇರಳದ ತಿರುವನಂತಪುರದ ರಾಜ ತುಳುನಾಡಿನ ಶಿವಳ್ಳಿ ಬ್ರಾಹ್ಮಣರನ್ನು ಕರೆಸಿಕೊಂಡ. ಶಿವಳ್ಳಿ ಬ್ರಾಹ್ಮಣರು ಸಂಸ್ಕೃತದ ಪೂಜಾದಿ ವಿಧಿವಿಧಾನಗಳನ್ನು ತುಳುಲಿಪಿಯಲ್ಲಿ ಬರೆಯುತ್ತಿದ್ದರು. ತಿರುವನಂತಪುರಂನ ರಾಜ ಶಿವಳ್ಳಿ ಬ್ರಾಹ್ಮಣರಿಂದ ತುಳುಲಿಪಿಯನ್ನು ಎರವಲು ಪಡೆದು ಮಲಯಾಳಂ ಭಾಷೆಯ ಬರವಣಿಗೆಗೆ ಬಳಸಲು ಆರಂಭಿಸಿದ. ಆತ ಅದನ್ನು ತುಳು-ಮಲಯಾಳಂ ಲಿಪಿ ಎಂದು ಬರೆದಿದ್ದಾನೆ. ಆದರೆ ನಾವು ಮಾತ್ರ ತುಳುಲಿಪಿಯನ್ನು ಬಳಕೆ ಮಾಡದೆ ಮೂಲೆಗುಂಪು ಮಾಡಿದ್ದೇವೆ. ಆದ್ದರಿಂದ ತುಳು ಲಿಪಿಯನ್ನು ಮತ್ತೆ ಬಳಕೆ ಮಾಡುವ ಕಾರ್ಯ ಆಗಬೇಕು ಎಂದು ಹೇಳಿದರು.

ಕರಾವಳಿಯ ಗುಡಿ - ಗೋಪುರ, ಮಠ - ಮಂದಿರಗಳಲ್ಲಿ ತುಳು ಲಿಪಿ ರಾರಾಜಿಸಬೇಕು. ಕರ್ನಾಟಕ ಸರಕಾರ ಪ್ರಸ್ತುತ ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಿದೆ. ಕೇಂದ್ರ ಸರಕಾರ ಪ್ರಾದೇಶಿಕ ಭಾಷೆಗೆ ಮಾನ್ಯತೆ ಕೊಡಬೇಕೆಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ಎಲ್ಲೆಡೆ ಇಂಗ್ಲಿಷ್ ಭಾಷೆಯು ಬಳಕೆಯಲ್ಲಿದೆ. ಇಂಗ್ಲಿಷ್ ಭಾಷೆಗೆ ಮಾನ್ಯತೆ ದೊರಕುವಾಗ ಸಾವಿರಾರು ವರ್ಷ ಇತಿಹಾಸ ಇರುವ ಕರಾವಳಿಯ ತುಳುವಿಗೆ ಯಾಕೆ ಅಧಿಕೃತ ರಾಜ್ಯ ಭಾಷಾ ಮಾನ್ಯತೆ ಕೊಡಲು ಸಾಧ್ಯವಿಲ್ಲ. ತುಳುವಿಗೆ ಅಧಿಕೃತ ರಾಜ್ಯ ಭಾಷೆಯ ಮಾನ್ಯತೆ ಕೊಡಲು ಯಾಕೆ ಮೀನ - ಮೇಷ ಎಣಿಸಲಾಗುತ್ತದೆ ಎಂದು ದಯಾನಂದ ಕತ್ತಲ್ ಸಾರ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News