ಏನಿದು 'ದಿ ವೈರ್ʼ ಮತ್ತು ಮೆಟಾ ನಡುವಿನ ವಿವಾದ?
ಈ ವಾರ ಸುದ್ದಿ ಜಾಲತಾಣ ವೈರ್ ಫೇಸ್ಬುಕ್,ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ಗಳ ಮಾತೃಸಂಸ್ಥೆ ಮೆಟಾದ ಕಂಟೆಂಟ್ ನಿರ್ಬಂಧ ನೀತಿಗಳ ಕುರಿತು ಖಂಡನೀಯ ವರದಿಯೊಂದನ್ನು ಪ್ರಕಟಿಸಿತ್ತು. ಈ ಹಿಂದೆ ತನ್ನ ಕಾರ್ಯ ನಿರ್ವಹಣೆ ಮತ್ತು ಕಂಟೆಂಟ್ ನಿರ್ಬಂಧದ ಬಗ್ಗೆ ದಾರಿ ತಪ್ಪಿಸಿದ್ದ ಮೆಟಾ, ವೈರ್ ನ ವರದಿಯು ಹಾದಿ ತಪ್ಪಿಸುವಂಥದ್ದಾಗಿದೆ ಮತ್ತು ಕಪೋಲಕಲ್ಪಿತವಾಗಿದೆ ಎಂದು ಉತ್ತರಿಸಿತ್ತು.
ಮೆಟಾದ ಹೇಳಿಕೆಯನ್ನು ಅಲ್ಲಗಳೆದ ವೈರ್ ತನ್ನ ಫಾಲೋ-ಅಪ್ ವರದಿಯಲ್ಲಿ ಆಂತರಿಕ ಇ-ಮೇಲ್ ಒಂದನ್ನು ಪ್ರಕಟಿಸಿತ್ತು. ನೆಟ್ಟಿಗರು ಅದರ ಹಕ್ಕು ಯಾರಿಗಿದೆ ಎಂಬ ಬಗ್ಗೆ ಅಭಿಪ್ರಾಯಿಸಲು ಆರಂಭಿಸಿದಾಗ ವಿಷಯವು ಗೋಜಲುಗೊಂಡಿತ್ತು. ಹೀಗಾಗಿ ನಿಖರವಾಗಿ ಆಗಿದ್ದಾದರೂ ಏನು?
‘ಸುಪರ್ಹ್ಯೂಮನ್ಸ್ ಆಫ್ ಕ್ರಿಂಜ್ಟೋಪಿಯಾ ’ಖಾತೆಯಿಂದ ಮಾಡಲಾಗಿದ್ದ ಹಲವಾರು ವಿಡಂಬನಾತ್ಮಕ ಇನ್ಸ್ಟಾಗ್ರಾಂ ಪೋಸ್ಟ್ಗಳನ್ನು ವೇದಿಕೆಯ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಸೆ.19ರಂದು ತೆಗೆದುಹಾಕಲಾಗಿದ್ದನ್ನು ವೈರ್ ಅ.6ರಂದು ವರದಿ ಮಾಡಿತ್ತು. ಈ ಖಾತೆಯು ಸಾಕಷ್ಟು ಸಭ್ಯಭಾಷೆಯಲ್ಲಿಯೇ ಸಾಮಾಜಿಕ ಮತ್ತು ರಾಜಕೀಯ ವಿಡಂಬನೆಗಳನ್ನು ಮಾಡುತ್ತದೆ, ಆದರೆ ಅದರ ಪೋಸ್ಟ್ಗಳು ಹೆಚ್ಚಾಗಿ ಹಿಂದುತ್ವ ಗುಂಪುಗಳು ಮತ್ತು ನರೇಂದ್ರ ಮೋದಿ ಸರಕಾರವನ್ನು ಟೀಕಿಸುತ್ತವೆ, ಕೆಲವೊಮ್ಮೆ ಮೀಮ್ ಗಳು ಹಿಂದುತ್ವವನ್ನು ನಾಝಿವಾದದೊಂದಿಗೆ ಹೋಲಿಸುತ್ತಲೂ ಇರುತ್ತವೆ.
ವೈರ್ ಪ್ರಕಟಿಸಿದ್ದ ವರದಿಯು ವಿಶೇಷವಾಗಿ, ಅಯೋಧ್ಯೆಯ ನಿವಾಸಿಯೋರ್ವ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರಿಗಾಗಿಯೇ ನಿರ್ಮಿಸಲಾದ ದೇವಸ್ಥಾನದಲ್ಲಿ ಅವರ ಪ್ರತಿಮೆಯನ್ನು ಪೂಜಿಸುತ್ತಿರುವ ವೀಡಿಯೊವನ್ನು ಗೇಲಿ ಮಾಡಿದ್ದ ಇನ್ಸ್ಟಾಗ್ರಾಂ ಪೋಸ್ಟ್ ಅನ್ನು ಕೇಂದ್ರೀಕರಿಸಿತ್ತು. ಈ ವೀಡಿಯೊವನ್ನು ಇನಸ್ಟಾಗ್ರಾಂ ತೆಗೆದುಹಾಕಿತ್ತು. ತನ್ನ ‘ಲೈಂಗಿಕ ಚಟುವಟಿಕೆ ಮತ್ತು ನಗ್ನತೆ ’ ನಿರ್ಬಂಧಗಳನ್ನು ಪೋಸ್ಟ್ ಉಲ್ಲಂಘಿಸಿತ್ತು ಎಂದು ಅದು ಕಾರಣ ನೀಡಿತ್ತು. ಆದರೆ ವೀಡಿಯೊ ನಗ್ನತೆಯನ್ನಾಗಲೀ ಲೈಂಗಿಕ ವಿಷಯವನ್ನಾಗಲೀ ತೋರಿಸಿರಲಿಲ್ಲ. ಪ್ರತಿಮೆ ಮತ್ತು ಯೋಗಿಯ ಭಕ್ತ, ಇಬ್ಬರೂ ಉಡುಪುಗಳನ್ನು ಧರಿಸಿದ್ದರು.
ವೈರ್ ನ ವರದಿಯಂತೆ ಈ ಪೋಸ್ಟ್, ಅದನ್ನು ಅಪಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಲಾಗಿತ್ತು. ನಿರ್ಬಂಧದ ಈ ಘಟನೆಯಲ್ಲಿ ಅಲ್ಗರಿದಮ್ಗಳ ಕೈವಾಡವಿತ್ತೇ ಅಥವಾ ಮಾನವ ಹಸ್ತಕ್ಷೇಪವಿತ್ತೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಮೊದಲ ಕಾರಣವಾಗಿದ್ದರೆ ಅದು ಈ ಕೃತಕ ಬುದ್ಧಿಮತ್ತೆ (ಎಐ) ಮಾಡೆಲ್ಗಳ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆಯನ್ನೆತ್ತುತ್ತದೆ.
ಟ್ವಿಟರ್ ಚಾಟ್ನಲ್ಲಿ ‘ಸುಪರ್ಹ್ಯೂಮನ್ಸ್ ಆಫ್ ಕ್ರಿಂಜ್ಟೋಪಿಯಾ ’ ಖಾತೆಯ ಹಿಂದಿರುವ, ಭಾರತೀಯ ಪ್ರಜೆಯಾಗಿರುವ ವ್ಯಕ್ತಿಯೋರ್ವರು ವೇದಿಕೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಾ.7 ಮತ್ತು ಸೆ.19ರ ನಡುವೆ ಇನ್ಸ್ಟಾಗ್ರಾಂ ತೆಗೆದುಹಾಕಿದ್ದ ಏಳು ಪೋಸ್ಟ್ ಗಳ ಸ್ಕ್ರೀನ್ ಶಾಟ್ ಗಳನ್ನು ನ್ಯೂಸ್‌ಲಾಂಡ್ರಿಗೆ ತೋರಿಸಿದರು. ಈ ಪೋಸ್ಟ್ಗಳನ್ನು ಅಪ್ಲೋಡ್ ಮಾಡಿದ ಎರಡೇ ನಿಮಿಷಗಳಲ್ಲಿ ತೆಗೆದುಹಾಕಲಾಗಿತ್ತು ಎಂದು ತಿಳಿಸಿದ ಅವರು ಇದು ಅಲ್ಗರಿದಮ್ಗಳ ಕೆಲಸವಾಗಿದೆ ಎಂದು ಅಭಿಪ್ರಾಯಿಸಿದ್ದರು.
ಇನ್ಸ್ಟಾಗ್ರಾಂ ಪೋಸ್ಟ್ಗಳನ್ನು ತೆಗೆದುಹಾಕಲಾಗಿದ್ದರ ಕುರಿತು ನ್ಯೂಸ್‌ಲಾಂಡ್ರಿಯ ಪ್ರಶ್ನೆಗುತ್ತರಿಸಿದ ಮೆಟಾ ವಕ್ತಾರರು, ‘ಕಂಟೆಂಟ್ಗಳನ್ನು ಪುನರ್ಪರಿಶೀಲಿಸುವಂತೆ ನಮ್ಮ ಸ್ವಯಂಚಾಲಿತ ವ್ಯವಸ್ಥೆಗಳು ಸೂಚಿಸಿದ್ದವು. ನಮ್ಮ ಸಮುದಾಯ ಕಾರ್ಯಾಚರಣೆಗಳ ತಂಡವು ಪುನರ್ಪರಿಶೀಲಿಸಿದ ಬಳಿಕ ವಿವಿಧ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವುಗಳನ್ನು ತೆಗೆದುಹಾಕಲಾಗಿತ್ತು ’ಎಂದು ತಿಳಿಸಿದರು.
ವೈರ್‌ನೊಂದಿಗೆ ಹಂಚಿಕೊಳ್ಳಲಾಗಿರುವ ಸ್ಕ್ರೀನ್‌ಶಾಟ್ ಗಳು ಆದಿತ್ಯನಾಥ ಕುರಿತ ಪೋಸ್ಟ್ ಅನ್ನು ಎರಡು ಸಲ ಪುನರ್ಪರಿಶೀಲನೆ ನಡೆಸಲಾಗಿತ್ತು ಎನ್ನುವುದನ್ನು ತೋರಿಸಿದೆ ಮತ್ತು ಇದು ವಿಷಯವನ್ನು ಇನ್ನಷ್ಟು ಗೋಜಲುಗೊಳಿಸಿದೆ.
ಮೆಟಾದ ಸಂವಹನ ನಿರ್ದೇಶಕ ಆ್ಯಂಡಿ ಸ್ಟೋನ್ ಅವರು ವೈರ್ ವರದಿಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದರು. ಇದಕ್ಕೆ ವೈರ್ ಇನ್ನೊಂದು ವರದಿಯ ಮೂಲಕ ಪ್ರತಿಕ್ರಿಯಿಸಿತ್ತು. ಆಂತರಿಕ ವರದಿ ಸೋರಿಕೆಯಾಗಿದ್ದು ಹೇಗೆ ಎಂದು ಸ್ಟೋನ್ ತನ್ನ ಕಚೇರಿಯ ಉದ್ಯೋಗಿಗಳನ್ನು ಪ್ರಶ್ನಿಸಿದ್ದ ಮತ್ತು ವೈರ್ ನ ವರದಿಗಾರ್ತಿ ಜಾಹ್ನವಿ ಸೇನ್ ಮತ್ತು ಸಂಪಾದಕ ಸಿದ್ಧಾರ್ಥ ರಾಜನ್ ಅವರನ್ನು ಕಣ್ಗಾವಲು ಪಟ್ಟಿಯಲ್ಲಿರಿಸುವಂತೆ ಸೂಚಿಸಿದ್ದ ಇ-ಮೇಲ್ ಅನ್ನು ಅದು ಉಲ್ಲೇಖಿಸಿತ್ತು.
ಇದರ ಬೆನ್ನಲ್ಲೇ ಮೆಟಾದ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ ಗಯ್ ರೋಸೆನ್ ಅವರು, ವೈರ್ ನ ಎರಡು ವರದಿಗಳು ಮೆಟಾದ ಕಂಟೆಂಟ್ ನಿರ್ಬಂಧ ಕಾರ್ಯಾಚರಣೆ ಮತ್ತು ಪ್ರಕ್ರಿಯೆಯ ಬಗ್ಗೆ ಸುಳ್ಳುಗಳನ್ನು ಒಳಗೊಂಡಿವೆ ಎಂದು ಟ್ವೀಟಿಸಿದ್ದರು. ವೈರ್ ಉಲ್ಲೇಖಿಸಿದ್ದ ಸ್ಟೋನ್ ಅವರ ಇ-ಮೇಲ್ ನಕಲಿಯಾಗಿತ್ತು ಎಂದೂ ಅವರು ಹೇಳಿದ್ದರು.
ಈ ಹಿಂದೆ ಫೇಸ್ಬುಕ್ ನ ಆಂತರಿಕ ದಾಖಲೆಗಳನ್ನು ಸೋರಿಕೆ ಮಾಡಿದ್ದ ಮಾಜಿ ಉದ್ಯೋಗಿ ಸೋಫಿಯಾ ಝಾಂಗ್ ಅವರು, ವೈರ್ ತನ್ನ ವರದಿಗಾಗಿ ಬಳಸಿದ್ದ ದಾಖಲೆಗಳು ನಕಲಿಯಾಗಿರುವ ಸಾಧ್ಯತೆಯಿದೆ ಮತ್ತು ಅದು ವರದಿಯನ್ನು ಹಿಂದೆಗೆದುಕೊಳ್ಳಬೇಕು ಎಂದು ಹೇಳಿದರು. ಆದಾಗ್ಯೂ ಝಾಂಗ್,ಇದು ಆಡಳಿತಾರೂಢ ಪಕ್ಷವನ್ನು ಟೀಕಿಸಿ ವರದಿ ಮಾಡುವ ದಾಖಲೆಯನ್ನು ಹೊಂದಿರುವ ವೈರ್ ನ ಹೆಸರು ಕೆಡಿಸಲು ನಡೆಸಿದ ಕುತಂತ್ರವಾಗಿರಬಹುದು ಎಂದರು.
ವೈರ್ ವರದಿಗಳ ಬಗ್ಗೆ ಹಲವಾರು ಅಮೆರಿಕನ್ ಪತ್ರಕರ್ತರು ಹಾಗೂ ಅಲೆಕ್ಸ್ ಸ್ಟಾಮೋಸ್ ಮತ್ತು ಬಿಜೆಪಿ ಟೀಕಾಕಾರ ಆಕರ್ ಪಟೇಲ್ ಸೇರಿದಂತೆ ಹಲವಾರು ಟೀಕಾಕಾರರೂ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ.
ಕೃಪೆ: Newslaundry.com