ಪಾವೂರು ಗ್ರಾಮದಲ್ಲಿ ತಹಶೀಲ್ದಾರ್ ಗ್ರಾಮ ವಾಸ್ತವ್ಯ

Update: 2022-10-17 14:13 GMT

ಕೊಣಾಜೆ: ಕಂದಾಯ ಇಲಾಖೆ ಮತ್ತು ಪಾವೂರು ಗ್ರಾಮ ಪಂಚಾಯತಿ ಇದರ ಆಶ್ರಯದಲ್ಲಿ ಸೋಮವಾರ ಪಾವೂರು  ಗ್ರಾಮದಲ್ಲಿ ಉಳ್ಳಾಲ ತಾಲ್ಲೂಕು ತಹಶಿಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಉಳ್ಳಾಲ ತಾಲ್ಲೂಕು ತಹಶೀಲ್ದಾರರಾದ ಡಿ.ಎ.ಪುಟ್ಟರಾಜು ಅವರು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಸರಕಾರದ ಜನಸ್ನೇಹಿ ಕಾರ್ಯಕ್ರಮದ ಅಂಗವಾಗಿ ತಹಶೀಲ್ದಾರರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಲಾಗುತ್ತದೆ. ಇಲಾಖೆಯ ಎಲ್ಲಾ ಯೋಜನೆಗಳನ್ನು ಅರ್ಹರಿಗೆ ಕಾಲಮಿತಿಯಲ್ಲಿ ತಲುಪಿಸುವುದು ಇದರ ಉದ್ದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ಅಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ದಿಂದ ಜನರಿಗೆ ಬಹಳಷ್ಟು ಪ್ರಯೋಜನಗಳಿದ್ದು, ಗ್ರಾಮದ ಸಮಸ್ಯೆಗಳಿಗೆ ಸ್ಪಂದನೆಯ ಜೊತೆಗೆ ಇಲಾಖಾವಾರು ಮಾಹಿತಿ ಪಡೆದುಕೊಳ್ಳಲು ಕೂಡಾ ಸಹಕಾರಿಯಾಗಿದೆ ಎಂದು  ಹೇಳಿದರು.

ಪಾವೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಕಮರುನ್ನೀಸ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಗ್ರಾಮದಲ್ಲಿರುವ ಹಲವು ಸಮಸ್ಯೆಗಳಿಗೆ ತಹಶೀಲ್ದಾರ್ ಗ್ರಾಮವಾಸ್ತವ್ಯದ ಮೂಲಕ ನೇರವಾಗಿ ಪರಿಹಾರ ಕಂಡು ಕೊಳ್ಳಲು ಸಾಧ್ಯವಿದೆ. ಹಲವು ನಿರೀಕ್ಷೆಗಳೊಂದಿಗೆ ಗ್ರಾಮಸ್ಥರು ಇಂದು ಭಾಗವಹಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಿವಿಧ ಇಲಾಖೆಗಳಿಂದ ಆದೇಶದ ಪ್ರತಿಯನ್ನು ನೀಡಲಾಯಿತು. ಅಲ್ಲದೆ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲಾಯಿತು.

ಗ್ರಾಮಸ್ಥರ ಅಹವಾಲು ಸ್ವೀಕಾರದ ಬಳಿಕ ಗ್ರಾಮದಲ್ಲಿ ಹಲೆವೆಡೆ ಭೇಟಿ ನೀಡಿದ ತಹಶೀಲ್ದಾರರು ಪಾವೂರಿನಲ್ಲಿ ರುವ ಡಿಸಿ ಮನ್ನಾ ಜಾಗಕ್ಕೆ ಭೇಟಿ ನೀಡಿ,  ಸುಮಾರು ಮೂರು ಎಕರೆ ಜಾಗವನ್ನು ಎಸ್ಸಿ ಎಸ್ಟಿ ಕಾಲನಿ ಮಾಡಿ ಅವರಿಗಾಗಿ ಮೀಸಲಿಟ್ಟು  ಅಭಿವೃದ್ಧಿ ಪಡಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಇನೋಳಿ ಕಂಬ್ಲಪದವು ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಅಕ್ಷರ ನಗರದಲ್ಲಿ ಮನೆ ನಿವೇಶನಕ್ಕೆ ಕಾದಿರಿಸಿದ ಜಮೀನಿನ ಸ್ಥಳ ತನಿಖೆ ನಡೆಸಿದರು. ಹರೇಕಳದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಣೆಕಟ್ಟು ವಿನಿಂದಾಗಿ ನೀರಿನ ಮಟ್ಟ ಏರಿಕೆಯಾಗಿ ಇಲ್ಲಿನ ಮನೆ ಹಾಗೂ ಕೃಷಿಗಳು ಹಾನಿಯಾಗುವ ಸ್ಥಿತಿ ಉಂಟಾಗಿದೆ ಎಂದು ಪಾವೂರು ಉಳಿಯ ನಿವಾಸಿಗಳು ದೂರು ನೀಡಿದ್ದು ಈ ಬಗ್ಗೆ ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭ ಕಂದಾಯ ನಿರೀಕ್ಷಕರಾದ  ಮಂಜುನಾಥ್ ಕೆ.ಎಚ್,  ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಇಸ್ಮಾಯಿಲ್, ಸರ್ವೇಯರ್ ಜಯಪ್ರಕಾಶ್ , ಅರಣ್ಯ ಇಲಾಖೆ ಉಪವಲಯಾಧಿಕಾರಿ ಮಹಾಬಲ, ಸವಿತಾ, ಹನೀಫ್ , ಮಹಿಳಾ ಮತ್ತು ಮಕ್ಕಳ ಇಲಾಖೆಯ ವೈದ್ಯಾಧಿಕಾರಿ ಡಾ.‌ಸುನೀತ, ಕೃಷಿ ಇಲಾಖೆ ಅಧಿಕಾರಿ ಮುರಳೀಧರ್, ಆಹಾರ ಇಲಾಖೆಯ ಪ್ರಮೋದ್ ಕುಮಾರ್, ಚರಣ್ ಗ್ರಾಮಕಾರಣಿಕರಾದ  ನಯನ ಜೆ, ಮುನ್ನೂರು ಗ್ರಾಮ ಕಾರಣಿಕರಾದ ರೇಷ್ಮಾ ದೇವಾಡಿಗ, ಪಾವೂರು ಗ್ರಾಮಕಾರಣಿಕ ಉಮೇಶ್, ಪಾವೂರು ಗ್ರಾ.ಪಂ ಉಪಾಧ್ಯಕ್ಷ ಮಹಮ್ಮದ್ ಅನ್ಸಾರ್ ಉಪಸ್ಥಿತರಿದ್ದರು. ಗ್ರಾ.‌ಪಂ ಕಾರ್ಯದರ್ಶಿ ಇಸ್ಮಾಯಿಲ್ ಸ್ವಾಗತಿಸಿದರು., ಗ್ರಾಮಕಾರಣಿಕರಾದ ನವ್ಯಾ ಎಸ್ ಎನ್ ರಾವ್ ನಿರೂಪಿಸಿ  ವಂದಿಸಿದರು.‌

ಪಾವೂರು ಗ್ರಾಮಕ್ಕೆ ಸರ್ಕಾರಿ ಬಸ್ಸು ಬೇಕು ಎಂದು ಹಲವು ವರ್ಷದಿಂದ ಬೇಡಿಕೆ ಇಡುತ್ತಾ ಬಂದಿದ್ದೇವೆ. ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬಸ್ ಸಮಸ್ಯೆಯಿಂದ‌ ಈ ಭಾಗದ ಜನರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಭೆಯಲ್ಲಿ ಆರ್ ಟಿಓ ಅಧಿಕಾರಿಗಳೇ ಭಾಗವಹಿಸಬೇಕಿತ್ತು ಅವು ಭಾಗವಹಿಸಿಲ್ಲ ಎಂದು ಗ್ರಾಮಸ್ಥ ಬಶೀರ್ ಅವರು ಅಳವತ್ತುಕೊಂಡಾಗ,   ತಹಶೀಲ್ದಾರರು ಉತ್ತರಿಸಿ , ನಿಮ್ಮ ಮನವಿಯನ್ನು  ಆರ್ ಟಿಒ ಅವರ ಗಮನಕ್ಕೆ ತಂದು ಪರಿಹಾರಕ್ಕೆ ಯತ್ನಿಸುತ್ತೇವೆ  ಎಂದು ಹೇಳಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸಂಭಂದಿಸಿದಂತೆ ತೋಟಗಾರಿಕೆ ಇಲಾಖೆ 2, ಸಣ್ಣ ನೀರಾವರಿ ಇಲಾಖೆ 1, ಪಂಚಾಯತ್ ರಾಜ್ ಇಲಾಖೆ 2, ಮೋಜಣಿ ಇಲಾಖೆ 3 ಹಾಗೂ ಕಂದಾಯ ಇಲಾಖೆ 13, ಒಟ್ಟು 21 ಅರ್ಜಿಗಳು ಸ್ವೀಕೃತವಾಗಿರುತ್ತದೆ. ಅದರಲ್ಲಿ 13 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥಗೊಂಡವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News