ಮಂಡ್ಯದ ಅಸ್ಮಿತೆ ಡಾ. ಶಂಕರೇಗೌಡರು

Update: 2022-10-18 06:56 GMT

ಸಿಎನ್‌ಎನ್ ನ್ಯೂಸ್ 18 ‘ಇಂಡಿಯನ್ ಆಫ್ ದಿ ಇಯರ್ 2022’ರ ಸಾಮಾಜಿಕ ಬದಲಾವಣೆ ವಿಭಾಗದ ಪ್ರಶಸ್ತಿಯು ಮಂಡ್ಯದ ಅಸ್ಮಿತೆಯಂತಿರುವ ಡಾ. ಶಂಕರೇಗೌಡ ಅವರಿಗೆ ಸಂದಿದ್ದು, ಆ ಪ್ರಶಸ್ತಿಯ ಘನತೆ ಮತ್ತು ಗೌರವವನ್ನು ಮತ್ತಷ್ಟು ಹೆಚ್ಚಿಸಿತು ಎಂದರೆ ತಪ್ಪಾಗಲಾರದು. ಏಕೆಂದರೆ ಶಂಕರೇಗೌಡರು ಅಂತಹ ಪ್ರಶಸ್ತಿಗಳಿಗೆ ಸದಾ ಮೀಸಲಿರುತ್ತಾರೆ. ಶಂಕರೇಗೌಡರು ‘‘ಐದು ರೂಪಾಯಿ ಡಾಕ್ಟರ್’’ ಎಂದು ಕರೆಸಿಕೊಳ್ಳುವುದರ ಜೊತೆ ಜೊತೆಗೇ ಅವರು ಬಳಸುವ ಮಂಡ್ಯದ ಆಡು ಭಾಷೆಯಿಂದಲೂ ಪ್ರಸಿದ್ಧರಾಗಿದ್ದಾರೆ. ಆದ್ದರಿಂದ ಮಂಡ್ಯದ ಆಡು ಭಾಷೆಯ ನೆಲೆಯಲ್ಲಿ ಶಂಕರೇಗೌಡರ ವ್ಯಕ್ತಿತ್ವವನ್ನು ನೋಡುವ ಪ್ರಯತ್ನ ಇಲ್ಲಿದೆ.

ಅಂದು ಮಂಡ್ಯದ ಆರ್.ಪಿ. ರಸ್ತೆಯ ಪಶ್ಚಿಮ ಪೊಲೀಸ್ ಠಾಣೆಯ ಎದುರಿನ ಕಟ್ಟಡದ ಮೊದಲನೆಯ ಅಂತಸ್ತಿನಲ್ಲಿ ‘ತಾರಾ ಕ್ಲಿನಿಕ್’ ಎಂಬ ಬೋರ್ಡ್ ಕಂಡು ಬೇಗ ಬೇಗ ಮೆಟ್ಟಿಲು ಹತ್ತಿ ಕ್ಲಿನಿಕ್ ಬಳಿ ಬಂದಿದ್ದೆ. ಆಗಲೇ ಬೆಳಗ್ಗಿಂದಲೇ ಬಂದು ನಿಂತಿದ್ದ ರೋಗಿಗಳ ಸಾಲಿನಲ್ಲಿ ನನ್ನ ಸರದಿ ಮೂವತ್ತೊ ನಲವತ್ತೊ ಆಗಿತ್ತು. ನಾನು ಹೋಗಿ ಒಂದು ಗಂಟೆ ಕಳೆದರೂ ಡಾಕ್ಟರ್ ಸುಳಿವೇ ಇಲ್ಲ. ಕಾದು ಕಾದು ನಿದ್ದೆ ಬರಲು ಆರಂಭವಾಯಿತ್ತು. ಅಷ್ಟೊತ್ತಿಗೆ ಹಿಂದಿನಿಂದ ಯಾರೋ ಮುಟ್ಟಿದಂತಾಯಿತು. ತಿರುಗಿ ನೋಡಿದೆ. ಕುರುಚಲು ಗಡ್ಡ, ಕೆದರಿದ ತಲೆ ಕೂದಲು, ಗದ್ದೆಯಿಂದ ನೇರವಾಗಿ ಇಲ್ಲಿಗೇ ಬಂದಿರುವಂತೆ ಕುರುಹು ನೀಡುತ್ತಿದ್ದ ವೇಷಭೂಷಣ ಗಮನಿಸಿ ‘‘ಅಲ್ಲೇ ನಿಂತಿಕೊಳ್ರಿ ನಾನು ಮೊದಲು ಬಂದಿದ್ದೇನೆ’’ ಎಂದೆ. ಪಕ್ಕದವರು ‘‘ಏ ಡಾಕ್ಟ್ರು ಡಾಕ್ಟ್ರು’’ ಅಂದಾಗಲೇ ನನಗೆ ಗೊತ್ತಾಗಿದ್ದು ಅವರು ಚರ್ಮ ವೈದ್ಯ ಶಂಕರೇಗೌಡರು ಎಂದು. ಅಲ್ಲಿಯತನಕ ನಾನು ಶಂಕರೇಗೌಡರ ಬಗ್ಗೆ ಕೇಳಿದ್ದೇನೆ ಹೊರತು ನೋಡಿರಲಿಲ್ಲ. ಅಂತೂ ನನ್ನ ಸರದಿ ಬಂದಾಗ ಪರಿಶೀಲಿಸಿ ಚೀಟಿ ಕೈಗಿತ್ತರು. ನಾನು ನೂರರ ನೋಟೊಂದನ್ನು ಅವರ ಎದುರು ನೀಡಿದ್ದೇ ತಡ ಮೇಲಿಂದ ಒಂದ್ಸಲ ನೋಡಿದರು. ‘‘ಯಾವೂರ್ಲಾ’’ ಎಂದರು. ‘‘ಬೆಕ್ಕಳಲೆ’’ ಎಂದೆ. ‘‘ನಿಮ್ಮಪ್ಪ ಏನ್ ಕೆಲ್ಸ ಮಾಡ್ತಾನ್ಲಾ’’ ಎಂದರು. ‘‘ವ್ಯವಸಾಯ’’ ಎಂದೆ. ‘‘ಐದ್ರೂಪಾಯಿ ಕೊಡ್ಲಾ ತಂದ್ಬುಟಾ ನೂರೂಪಾಯ’’ ಎಂದು ಮಂಡ್ಯದ ಗಡಸು ಭಾಷೆಯಲ್ಲಿ ಗುಡುಗಿದರು.

 ಮನುಷ್ಯ ನಾಗರಿಕನಾದಂತೆ, ಸುಸಂಸ್ಕೃತನಾದಂತೆ ಅವನು ಬಳಸುವ ಭಾಷೆಯು ಕೂಡ ಶಿಷ್ಟವಾಗುತ್ತದೆ. ಆದರೆ ಕೆಲವರು ಇದಕ್ಕೆ ಅಪವಾದಂತೆ ಇರುತ್ತಾರೆ. ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಮಣ್ಣಿನ ಭಾಷೆಯೊಂದಿಗೆಯೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುತ್ತಾರೆ. ಅಂತಹವರ ನುಡಿಯಲ್ಲಿ ದೇಸಿಯ ಮೂಲ ಭಾಷೆ ಯಾವುದೇ ಪಾಲಿಶ್ ಇಲ್ಲದೆ ಜೀವಂತಿಕೆಯನ್ನು ಪಡೆದುಕೊಂಡಿರುತ್ತದೆ. ಈ ನಿಟ್ಟಿನಲ್ಲಿ ಮಂಡ್ಯದ ಭಾಷೆಯನ್ನು ಅದರ ಮೂಲ ದಾಟಿಯಲ್ಲಿ ಬಳಸುವುದನ್ನೇ ತಮ್ಮ ವ್ಯಕ್ತಿತ್ವದ ವೈಶಿಷ್ಟ್ಯವನ್ನಾಗಿ ಹೊಂದಿದ್ದವರ ಸಾಲಿನಲ್ಲಿ ಮಾಜಿ ಸಚಿವ ಮತ್ತು ನಟರಾದ ದಿ. ಅಂಬರೀಷ್, ಮಾಜಿ ಶಾಸಕ ಮತ್ತು ರೈತ ಸಂಘದ ನಾಯಕರಾಗಿದ್ದ ದಿ.ಪುಟ್ಟಣಯ್ಯ ಮತ್ತು ಚರ್ಮತಜ್ಞ ಐದು ರೂಪಾಯಿ ವೈದ್ಯರಾದ ಡಾ. ಶಂಕರೇಗೌಡರನ್ನು ಕಾಣಬಹುದು.

‘ಐದು ರೂಪಾಯಿ ಡಾಕ್ಟರ್’ ಎಂದೇ ಖ್ಯಾತರಾದ ಡಾ. ಶಂಕರೇಗೌಡರು ಸಾಮಾಜಿಕ ಕಳಕಳಿಯುಳ್ಳ ಮತ್ತು ವೈದ್ಯ ವೃತ್ತಿಯನ್ನು ಕೇವಲ ಸೇವೆ ಎಂದು ಪರಿಗಣಿಸಿರುವ ಅಪರೂಪದ ವ್ಯಕ್ತಿ.

ಶಂಕರೇಗೌಡರು ಪ್ರತಿಷ್ಠಿತ ಮಣಿಪಾಲ್ ಸಂಸ್ಥೆಯಲ್ಲಿ ವೈದ್ಯಕೀಯ ಪದವಿ ಪಡೆದಿದ್ದರೂ ಮಂಡ್ಯದ ದೇಸೀತನ ದಿಂದಲೇ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಮಂಡ್ಯದ ಆಡುಭಾಷೆ ಇವರ ಐಡೆಂಟಿಟಿ.

 ಶಂಕರೇಗೌಡರು ಮಂಡ್ಯದ ಗ್ರಾಮ್ಯ ಭಾಷೆಯ ಪ್ರಾತಿನಿಧಿಕ ಎಂದರೆ ತಪ್ಪಾಗಲಾರದು. ಏಕೆಂದರೆ ಒಂದು ಭಾಷೆಯು ತನ್ನ ಒಡಲಲ್ಲಿ ಆ ಪ್ರದೇಶದ ಆಚಾರ ವಿಚಾರ, ನಡೆ ನುಡಿ, ಸಮಸ್ತ ಕಸುಬು, ಕೌಶಲ, ಅಪಾರ ಜ್ಞಾನವನ್ನು ಒಳಗೊಂಡಿರುತ್ತದೆ. ಭಾಷೆಯ ಬಹುಮುಖ್ಯ ಕೊಡುಗೆ ಏನೆಂದರೆ ಅದು ಮಾನವ ಸಂಸ್ಕೃತಿಯ ಪ್ರತಿಬಿಂಬ. ಆದ್ದರಿಂದ ಶಂಕರೇಗೌಡರಿಗೆ ಭಾಷೆ ಕೇವಲ ಸಂವಹನ ಮಾತ್ರವಾಗಿರದೇ, ಅದು ಮಂಡ್ಯದ ಪ್ರಾದೇಶಿಕತೆ ಮತ್ತು ಸಂಸ್ಕೃತಿಗಳನ್ನು ಬಿಂಬಿಸುವ ಕ್ರಿಯೆಯಾಗಿ ಸ್ಫುರಿಸಿದೆ. ಇಂದು ಶಿಕ್ಷಣ ಪಡೆದು ನಗರಕ್ಕೆ ವಲಸೆ ಹೋಗಿ ತಮ್ಮತನವನ್ನು ಕಳೆದುಕೊಂಡು ಪರಕೀಯರಂತೆ ಬದುಕುತ್ತಿರುವವ ನಡುವೆ ಶಂಕರೇಗೌಡರು ಮಾದರಿಯಾಗಿ ನಿಲ್ಲತ್ತಾರೆ. ‘‘ನನಗೆ ಗೊತ್ತಿರುವ ಭಾಷೆ ನನ್ನ ಜನಗಳಿಗೂ ಗೊತ್ತಿದೆ. ಹಾಗಾಗಿ ಆ ಭಾಷೆಯಲ್ಲೇ ಮಾತನಾಡಿದರೆ ಹೆಚ್ಚು ಸಂವಹನ ಸಾಧ್ಯವಾಗುತ್ತದೆ. ಅದು ಅಲ್ಲದೆ ನಾನು ಮಾತಾಡಿದ್ದು ಅವರಿಗೆ ಅರ್ಥವಾಗುತ್ತೆ, ಅವರು ಮಾತಾಡಿದ್ದು ನನಗೂ ಅರ್ಥವಾಗುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ನಾವು ಎಷ್ಟೇ ಓದಿದರೂ, ತಿಳಿದುಕೊಂಡಿದ್ದರೂ ನಮ್ಮ ಸಂಸ್ಕೃತಿ, ನಮ್ಮ ದೇಸಿತನ, ನಮ್ಮ ಭಾಷೆಯನ್ನು ಯಾಕೆ ಬಿಟ್ಟುಕೊಡಬೇಕು? ನಮ್ಮ ಭಾಷೆಯಲ್ಲಿ ಕೇಳಿದ್ದೇ ಹೆಚ್ಚು ಉಳಿದುಕೊಂಡಿರುತ್ತದೆ’’ ಎನ್ನುವ ಶಂಕರೇಗೌಡರು ಕೇವಲ ವೈದ್ಯರಾಗಷ್ಟೇ ಕಾಣದೆ, ಅವರಳಗೊಬ್ಬ ಭಾಷಾ ಮೀಮಾಂಸಕ ಮತ್ತು ಸಂಸ್ಕೃತಿ ಚಿಂತಕನಿದ್ದಾನೆ ಎಂಬುದು ಅವರ ಮಾತುಗಳನ್ನು ಕೇಳಿದವರಿಗೆ ಗೋಚರಿಸದೆ ಇರದು.

ನಮ್ಮ ಭಾವನೆಗಳನ್ನು ಹಾಗೂ ವಿಚಾರಗಳನ್ನು ಮನಮುಟ್ಟುವಂತೆ ವ್ಯಕ್ತಪಡಿಸುವ, ಪರಸ್ಪರ ವಿನಿಮಯಗೊಳಿಸುವ ಮತ್ತು ಸಂವಾದ ಮಾಡಲು ಕೂಡ ನೆಲದ ಅಥವಾ ದೇಸಿ ಭಾಷೆ ಅತ್ಯುತ್ತಮ ಮಾಧ್ಯಮ ಎಂಬುದನ್ನು ಶಂಕರೇಗೌಡರು ಬಲವಾಗಿ ನಂಬಿದ್ದಾರೆ. ಹಾಗಾಗಿ ಶಂಕರೇಗೌಡರ ದೃಷ್ಟಿಯಲ್ಲಿ ಮಂಡ್ಯದ ಭಾಷೆ ಕೇವಲ ಒಂದು ಪ್ರಾದೇಶಿಕ ಭಾಷೆಯಷ್ಟೇ ಆಗಿರದೆ ವ್ಯಕ್ತಿಯ ಸಾಂಸ್ಕೃತಿಕ ವ್ಯಕ್ತಿತ್ವವನ್ನು ಪ್ರತಿನಿಧಿಸುವ ಸಂಸ್ಕೃತಿ ವಾಹಕವು ಆಗಿದೆ.

ಕನ್ನಡ ಭಾಷಾ ಪ್ರದೇಶವನ್ನು ಗಮನಿಸಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರಲ್ಲಿ ಅನೇಕ ಬಗೆಯ ಭಾಷಾ ಪ್ರಭೇದಗಳು ಕಂಡುಬರುತ್ತವೆ. ಮುಖ್ಯವಾಗಿ ಮೈಸೂರು ಕನ್ನಡ, ಕರಾವಳಿ ಕನ್ನಡ, ಧಾರವಾಡ ಕನ್ನಡ, ಕಲಬುರ್ಗಿ ಕನ್ನಡ ಎಂಬ ನಾಲ್ಕು ಉಪಭಾಷಾ ಪ್ರಭೇದಗಳನ್ನು ಗುರುತಿಸಬಹುದು. ಈ ಪ್ರಭೇದಗಳನ್ನು ಪ್ರಾದೇಶಿಕವಾಗಿ ಹಾಗೂ ಸಾಮಾಜಿಕವಾಗಿ ಪರಿಶೀಲಿಸಿದಾಗ ಇವುಗಳಲ್ಲೇ ಎಷ್ಟೋ ಬಗೆಯ ಒಳ ಪ್ರಭೇದಗಳು ಇರುವುದು ಕಂಡುಬರುತ್ತವೆ. ಅಂತಹ ಒಳ ಪ್ರಭೇದಗಳಲ್ಲಿ ಮಂಡ್ಯ ಪ್ರಾದೇಶಿಕ ಭಾಷೆಯು ಒಂದು. ಲೇಖಕರಾದ ಬೆಸಗರಹಳ್ಳಿ ರಾಮಣ್ಣ ಅವರು ತಮ್ಮ ಕಥೆಗಳಲ್ಲಿ ಮಂಡ್ಯದ ಪ್ರಾದೇಶಿಕ ಭಾಷೆಯನ್ನು ಸಮರ್ಥವಾಗಿ ಬಳಸಿರುವುದನ್ನು ನೋಡಬಹುದು. ಆದರೆ ಇಂದು ಆಧುನಿಕತೆ ಮತ್ತು ಜಾಗತೀಕರಣ ಪ್ರಭಾವದಿಂದ ಯಾವುದೇ ಕ್ಷೇತ್ರದಲ್ಲಿ ಅದರ ನೈಜ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಏಕೆಂದರೆ ಯಾಂತ್ರೀಕೃತ ಬದುಕಿನ ಒತ್ತಡದಿಂದ ಮನುಷ್ಯ ಸಂದರ್ಭಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾನೆ. ಆದರೆ ಶಂಕರೇಗೌಡರು ಕಳೆದ ನಲವತ್ತು ವರ್ಷಗಳಿಂದ ತಮ್ಮ ತಾತ್ವಿಕತೆಯೊಂದಿಗೆ ಯಾವುದೇ ರಾಜಿ ಮಾಡಿಕೊಂಡಿಲ್ಲದಿ ರುವುದು ಸೋಜಿಗವನ್ನುಂಟು ಮಾಡುತ್ತದೆ. ಅದೇ ರೀತಿ ಶಂಕರೇಗೌಡರ ಮಾತಿನಲ್ಲಿ ಮಂಡ್ಯ ನೆಲದ ಭಾಷೆಯ ಸೊಗಡು ವ್ಯಕ್ತವಾಗುವುದನ್ನು ಕಾಣಬಹುದು. ಒಂದು ಭಾಷೆಯನ್ನು ಎಷ್ಟು ಜನ ಮಾತನಾಡುತ್ತಾರೆ ಎಂಬುದು ಮುಖ್ಯವಲ್ಲ. ಆ ಭಾಷೆಯ ಸಂಸ್ಕೃತಿ ಪರಂಪರೆಯ ಸೊಗಡನ್ನು ಎಷ್ಟು ಜನ ಉಳಿಸಿಕೊಂಡು ಬರುತ್ತಾರೆ ಎಂಬುದು ಬಹಳ ಮುಖ್ಯ. ಆ ದಿಶೆಯಲ್ಲಿ ಮಂಡ್ಯದ ಗ್ರಾಮ್ಯ ಭಾಷೆ ಮತ್ತು ಶಂಕರೇಗೌಡರಿಗೂ ಅವಿನಾಭಾವ ಸಂಬಂಧ ಏರ್ಪಟ್ಟಿರುವುದು ಸುಳ್ಳಲ್ಲ. ಈ ಕಾರಣಕ್ಕಾಗಿ ಶಂಕರೇಗೌಡರು ಆಪ್ತರಾಗುವುದರ ಜೊತೆಗೆ ಮಂಡ್ಯದ ನೆಲದ ಭಾಷೆಯ ಅಸ್ಮಿತೆಯಾಗಿ ಸ್ಫುರಿಸುತ್ತಾರೆ.

Writer - ಲೋಕೇಶ ಬೆಕ್ಕಳಲೆ

contributor

Editor - ಲೋಕೇಶ ಬೆಕ್ಕಳಲೆ

contributor

Similar News