ಸುರತ್ಕಲ್ ಟೋಲ್‌ಗೇಟ್‌ಗೆ ಮುತ್ತಿಗೆ: ಅಧಿಕಾರಿಗಳ ಸಭೆಗೆ ಶಾಸಕ ಯುಟಿ ಖಾದರ್ ಆಗ್ರಹ
ಮಂಗಳೂರು, ಅ. 18: ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುತ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತಕ್ಷಣ ಹೋರಾಟಗಾರರು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ಕರೆದು ಚರ್ಚಿಸಲಿ ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಸುರತ್ಕಲ್ ಟೋಲ್ ಬಗ್ಗೆ ನಾನು ವಿಧಾನ ಸಭೆಯ ಸದನದಲ್ಲಿ ಪ್ರಸ್ತಾಪಿಸಿದಾಗಲೇ ಸರಕಾರವು ಇದನ್ನು ಅನಧಿಕೃತ ಹಾಗೂ ನಿಯಮ ಬಾಹಿರ ಎಂದು ಒಪ್ಪಿಕೊಂಡಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಟೋಲ್ ಗೇಟ್ ತೆಗೆಯಲು ಸಮಯಾವಕಾಶ ಬೇಕೆಂದು ಹೇಳಿತ್ತು. ತಕ್ಷಣ ಜಿಲ್ಲಾಧಿಕಾರಿಗಳು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಸಭೆ ಕರೆದು ಟೋಲ್ ತೆರವುಗೊಳಿಸಲು ಇದ್ದ ತಾಂತ್ರಿಕ ಕಾರಣಗನ್ನು ನಿವಾರಿಸಬೇಕಿತ್ತು. ಆದರೆ ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇ ಇಷ್ಷೆಲ್ಲಾ ಗೊಂದಲಗಳಿಗೆ ಕಾರಣ ಎಂದು ಶಾಸಕ, ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹೋರಾಟಗಾರರ ಹಕ್ಕನ್ನು ಪೋಲಿಸ್ ಇಲಾಖೆಯ ಮೂಲಕ ಹತ್ತಿಕ್ಕದೇ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಹೋರಾಟಗಾರರನ್ನೊಳಗೊಂಡ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದರಾದ ನಳೀನ್ ಕುಮಾರ್ ಕಟೀಲು ಈ ಗೊಂದಲಗಳನ್ನು ನಿವಾರಿಸಬೇಕೇ ಹೊರತು ಈ ಬಗ್ಗೆ ಕೋರ್ಟಿಗೆ ಹೋಗುತ್ತೇನೆಂಬ ಹೇಳಿಕೆ ನೀಡಿ ಜನರನ್ನು ಇನ್ನಷ್ಟು ಗೊಂದಲಕ್ಕೀಡು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.