​ಹೆಚ್ಚು ಶಬ್ದದ ಪಟಾಕಿ, ಸಿಡಿ ಮದ್ದು ಉಪಯೋಗಿಸದಂತೆ ಸೂಚನೆ

Update: 2022-10-20 16:59 GMT

ಮಂಗಳೂರು, ಅ.20: ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999ರ ಅನ್ವಯ ಹಾಗೂ ಸುಪ್ರೀಂಕೋರ್ಟ್‌ನ ಆದೇಶದಂತೆ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ಮತ್ತು ಉಪಯೋಗವನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿಯು ಪ್ರಕಟನೆ ತಿಳಿಸಿದೆ.

ಸಾರ್ವಜನಿಕರು ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಉಪಯೋಗಿಸಬಾರದು. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶಬ್ದ ವಲಯಗಳೆಂದು ಘೋಷಿಸಲ್ಪಟ್ಟಿರುವ ಸ್ಥಳಗಳ (ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರ) ಸುತ್ತಮುತ್ತ ಯಾವುದೇ ರೀತಿಯ ಶಬ್ದಯನ್ನುಂಟು ಮಾಡುವ ನಿಷೇಧಿತ ಪಟಾಕಿ, ಸಿಡಿಮದ್ದು ಬಳಸಬಾರದು. ಸುಪ್ರೀಂಕೋರ್ಟ್ ಮೇಲ್ಕಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕು ಎಂದು ತಿಳಿಸಿದೆ.

ನಗರ ಮತ್ತು ಪಟ್ಟಣದ ಚಿಕ್ಕಚಿಕ್ಕ ಬೀದಿಗಳಲ್ಲಿ ಪಟಾಕಿ ಮತ್ತು ಸಿಡಿಮದ್ದುಗಳನ್ನು, ಬಾಣಬಿರುಸುಗಳನ್ನು ಉಪಯೋಗಿಸುವದರಿಂದ ಅಲ್ಲಿನ ನಿವಾಸಿಗಳಿಗೆ ಹಾನಿಯುಂಟಾಗುವ ಅಥವಾ ಬೆಂಕಿ ಹಾಗೂ ಸ್ಫೋಟದಿಂದ ಅಪಾಯಗಳಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನಗಳಲ್ಲಿ ಸಿಡಿಸಬೇಕು. ಸಿಡಿಮದ್ದು, ಪಟಾಕಿಗಳನ್ನು ಉಪಯೋಗಿಸದೆ ದೀಪದ ಹಬ್ಬವನ್ನಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News