ವಿಟ್ಲ ಪಟ್ಟಣ ಪಂಚಾಯತ್ ಸಮಸ್ಯೆಗಳ ಆಗರ : ಹೆಮನಾಥ್ ಶೆಟ್ಟಿ ಕಾವು ಆರೋಪ
ವಿಟ್ಲ: ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿರುವ ವಿಟ್ಲ ಪಟ್ಟಣ ಪಂಚಾಯತ್ ಸಮಸ್ಯೆಗಳ ಆಗರವಾಗಿ ಜನರು ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ.
ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಭಾಗದ ಶಾಸಕರು ಪಟ್ಟಣ ಪಂಚಾಯತ್ ನಲ್ಲಿ ಸಭೆ ನಡೆಸಿ ಕೇವಲ ಸಲಹೆ ಸೂಚನೆಗಳನ್ನು ಮಾತ್ರ ಕೊಟ್ಟು ಹೋಗುವ ಮೂಲಕ ಜನರ ಆಕಾಂಕ್ಷೆಗಳಿಗೆ ತಣ್ಣೀರೆರೆಯುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿರುವ ಸಮಸ್ಯೆಗಳಿಗೆ ಅವರು ಸರಿಯಾದ ಪರಿಹಾರ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಜನರ ಪರವಾಗಿ ಹೋರಾಟ ಮಾಡಬೇಕಾಗಬಹುದು ಎಂದು ಎಚ್ಚರಿಸಿದರು.
ವಿಟ್ಲದ ಬಗ್ಗೆ ಒಟ್ಟಾಗಿ ನಾವು ಅವಲೋಕನ ಮಾಡಿದಾಗ ಇಲ್ಲಿ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ರಾಜ್ಯ ಸರಕಾರದ ಜನಪ್ರತಿನಿಧಿಗಳ ಇಚ್ಚಾ ಶಕ್ತಿಯ ಕೊರತೆಯಿಂದ ಒಂಬತ್ತು ತಿಂಗಳುಗಳಿಂದ ಒಂದು ಪಟ್ಟಣ ಪಂಚಾಯತ್ ನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅಸಾಧ್ಯ ವಾಗಿರುವುದು ದುರಾದೃಷ್ಟಕರ. ವಿಟ್ಲ ಪಟ್ಟಣ ಪಂಚಾಯತ್ ಹಾಗು ವಿಟ್ಲ ಪರಿಸರ ಈ ಹಿಂದೆ ವಿಟ್ಲ ವಿಧಾನಸಭಾ ಕ್ಷೇತ್ರವಾಗಿತ್ತು ಎನ್ನುವುದನ್ನು ನಾನು ನೆನಪು ಮಾಡುತ್ತಿದ್ದೇನೆ. ಯಾವಾಗ ಈ ವಿಧಾನ ಸಭಾ ಕ್ಷೇತ್ರ ಇಲ್ಲಿಂದ ಹೋಯಿತೋ ಅನಂತರದ ದಿನಗಳಲ್ಲಿ ಈ ಭಾಗದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಾಸಕರು ಈ ಭಾಗದವರೇ ಇದ್ದಾಗ ಈ ಭಾಗಕ್ಕೆ ಬೇಕಾದ ಅಭಿವೃದ್ಧಿ ಕಾರ್ಯವನ್ನು ಯಾವುದೇ ಪಕ್ಷ ಇದ್ದರೂ ಮಾಡುತ್ತಾ ಬರುತ್ತಿದ್ದರು. ಆದರೆ ಅ ಕ್ಷೇತ್ರ ಹೋದ ನಂತರ ಇದು ಪುತ್ತೂರು ವಿಧಾನ ಸಭಾ ಕ್ಷೇತ್ರ ಸೇರಿದೆ. ಆ ಬಳಿಕ ಬಹಳಷ್ಟು ಅಭಿವೃದ್ದಿಯನ್ನು ಮಾಡಲಾಗಲಿಲ್ಲ ಎನ್ನುವಂತದ್ದು ಬಹಳ ಪ್ರಮುಖ ವಿಚಾರ. ಈ ಭಾಗದಲ್ಲಿ ಹಲವಾರು ಗಂಭೀರ ಸಮಸ್ಯೆಗಳಿವೆ. ಪಟ್ಟಣ ಪಂಚಾಯತ್ ನಲ್ಲಿ ನಡೆಯದ ಅಧ್ಯಕ್ಷ ಉಪಾಧ್ಯಕ್ಷರ ಅಯ್ಕೆ. ಈ ಪಟ್ಟಣ ಪಂಚಾಯತ್ ನಲ್ಲಿರುವ ಸಾವಿರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳಲು ಬೇಕಾದ ಅಧಿಕಾರಿ ವರ್ಗದವರು ಇಲ್ಲಿಲ್ಲ. ಇದ್ದರೂ ವಾರಕ್ಕೊಮ್ಮೆ ಬರುವಂತದ್ದು, ಬಂದರೂ ಜನರ ಸಮಸ್ಯೆ ಪರಿಹಾರ ವಾಗುತ್ತಿಲ್ಲ. ಕಳೆದ ಆರು ತಿಂಗಳಿನಿಂದ ಕಟ್ಟಡ ಪರವಾನಿಗೆ ನೀಡುವ ಕೆಲಸ ಪಟ್ಟಣ ಪಂಚಾಯತ್ ನಿಂದ ಆಗಿಲ್ಲ. ಇದರಿಂದಾಗಿ ಅಭಿವೃದ್ಧಿ ಕುಂಟಿತವಾಗಿದೆ. ಹೀಗಿರುವಾಗ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮಾರ್ಪಾಟಾಗಿ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದ ಅವರು ಶಾಸಕರು ಸಭೆ ನಡೆಸುತ್ತಾರೆ ವಿನಃ ಅದಕ್ಕೊಂದು ಸೂಕ್ತ ಪರಿಹಾರ ದೊರಕಿಸಿ ಕೊಡುವಲ್ಲಿ ವಿಫಲರಾಗಿದ್ದಾರೆ. ಸ್ವಚ್ಚತೆಯಲ್ಲಿಯೂ ಪಟ್ಟಣ ಪಂಚಾಯತ್ ವಿಫಲವಾಗಿದೆ. ಜಿಲ್ಲಾಧಿಕಾರಿಗಳು ಇಂತಹ ಪ್ರದೇಶದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಈ ಭಾಗದ ಜನರ ಸಮಸ್ಯೆಯನ್ನು ಆಲಿಸಿ ಅದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಕೂಡಲೇ ಪಟ್ಟಣ ಪಂಚಾಯತ್ ಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾಡುವುದರ ಮೂಲಕ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ರಾಜ್ಯಸರಕಾರ, ಸಂಬಂಧ ಪಟ್ಟ ಉಸ್ತುವರಿ ಸಚಿವರು, ಶಾಸಕರು ಈ ಕೂಡಲೇ ಮಾಡಬೇಕೆಂದು ನಾವು ಆಗ್ರಹಿಸುತ್ತಿದ್ಧೇನೆ. ಪಟ್ಟಣ ಪಂಚಾಯತ್ ಜನರ ಸಮಸ್ಯೆ ಪರಿಹರಿಸುವ ಕೇಂದ್ರವಾಗಬೇಕಾಗಿದೆ ಎಂದವರು ಒತ್ತಾಯಿಸಿದರು.
ಈ ಭಾಗದ ಜನರ ಸಂಪರ್ಕದಿಂದ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತೇನೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಲು ಇಚ್ಚಿಸಿದ್ದೇನೆ. ದೇವರ ದಯೆ ಹಾಗೂ ಜನರ ಆಶೀರ್ವಾದದಿಂದ ಜಯಗಳಿಸಿ ಶಾಸಕನಾದರೆ ವಿಟ್ಲ ಭಾಗದ ಬಹುಜನರ ಬಹುದಿನದ ಕನಸಾದ ವಿಟ್ಲ ತಾಲೂಕು ರಚನೆಗೆ ಒತ್ತು ನೀಡುತ್ತೇನೆ ಹಾಗೂ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.
ಕಬಕ - ವಿಟ್ಲ ರಸ್ತೆಯ ಅವ್ಯವಸ್ಥೆಯ ಕುರಿತಾಗಿ ಪ್ರತಿಭಟನೆ ನಡೆಸುವ ವಿಚಾರವಿತ್ತು. ಆ ಭಾಗದ ಜನರ ಒತ್ತಾಯಕ್ಕಾಗಿ ವಲಯ ಕಾಂಗ್ರೆಸ್ ಅನ್ನು ಸೇರಿಸಿಕೊಂಡು ಪ್ರತಿಭಟನೆಯ ತೀರ್ಮಾನ ಮಾಡಿದ್ದೆವು. ನಾನು ಪ್ರತಿಭಟನೆ ಘೋಷಣೆ ಮಾಡಿ ಬಳಿಕ ಅದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿ ಎರಡೇ ದಿನದಲ್ಲಿ ಶಾಸಕರು ಪತ್ರಿಕಾಗೋಷ್ಟಿ ನಡೆಸಿ ಈಗಾಗಲೇ 15 ಕೋಟಿ ರೂಪಾಯಿಯಲ್ಲಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಐದೂವರೆ ಮೀಟರ್ ನಿಂದ ಏಳುವರೆ ಮೀಟರ್ ಗೆ ರಸ್ತೆಯನ್ನು ಅಗಲಗೊಳಿಸಿ ಮೇಲ್ದರ್ಜೆಗೆ ವಿಸ್ತರಿಸಲಾಗಿದೆ. ಹದಿನೈದು ದಿನಗಳ ಒಳಗೆ ಕಾಮಗಾರಿಯನ್ನು ಆರಂಭಿಸುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ನಮ್ಮ ಪ್ರಯತ್ನ ಯಶಸ್ವಿಯಾಯಿತು. ಪ್ರತಿಭಟನೆ ರಾಜಕಾರಣಕ್ಕಾಗಿ ಆಗಬಾರದು ಎನ್ನುವುದು ನನ್ನ ಉದ್ದೇಶ. ಪ್ರತಿಭಟನೆಯ ವಿಚಾರದಲ್ಲಿ ರಾಜಕೀಯಕ್ಕಿಂತ ನೈಜತೆಗೆ ಹೆಚ್ಚು ಒತ್ತುಕೊಡುವ ಹಿನ್ನೆಲೆಯಲ್ಲಿ ಈ ಬಗ್ಗೆ ನಾನು ಆ ಭಾಗದ ಜನರಲ್ಲಿ ವಿಚಾರಿಸಿ, ನಾನು ಬಹಳಷ್ಟು ಆಲೋಚನೆಯನ್ನು ಮಾಡಿಕೊಂಡು ಹಾಗೂ ಶಾಸಕರ ಕಚೇರಿಯಲ್ಲಿ ನನ್ನೊಂದಿಗೆ ಆತ್ಮೀಯತೆಯಿಂದ ಇರುವವರು ನೇರವಾಗಿ ಸಂಪರ್ಕಿಸಿ ವಿಚಾರ ತಿಳಿಸಿ ಶಾಸಕರು ಅನುದಾನ ಬಿಡುಗಡೆ ಗೊಳಿಸಿದ ಮೇಲೆಯೂ ನಿಮ್ಮ ಪ್ರತಿಭಟನೆಯ ಅರ್ಥ ಏನು. ನೀವು ನಾಟಕ ಮಾಡಿದ ಹಾಗೆ ಆಗ್ತದಲ್ವಾ ಎಂದವರು ನನ್ನನ್ನು ಪ್ರಶ್ನಿಸಿದ್ದರು. ಕೂಡಲೇ ಕೆಲಸವನ್ನು ಆರಂಭಿಸದಿದ್ದಲ್ಲಿ ನಾವು ತಿಂಗಳೋಳಗೆ ಪ್ರತಿಭಟನೆಯನ್ನು ಮಾಡುತ್ತೇವೆ. ಒಂದು ವೇಳೆ ಟೆಂಡರ್ ಪ್ರಕ್ರೀಯೆಯಲ್ಲಿ ಸಮಸ್ಯೆಗಳಿದ್ದರೆ ಈ ಕೂಡಲೇ ಹೊಂಡ ಮುಚ್ಚಿಕೊಡಬೇಕು ಹಾಗೂ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ನಾವು ಒತ್ತಾಯಿಸಿದ್ದೇವೆ. ಅವರ ಕಡೆಯಿಂದ ಸ್ಪಂದನೆ ದೊರತಿದೆ. ಆದ್ದರಿಂದ ಪ್ರತಿಭಟನೆ ಮುಂದೂಡಿದ್ದೇನೆ ಎಂದು ಕಾವು ಹೇಮನಾಥ ಶೆಟ್ಟಿಯವರು ಸ್ಪಷ್ಟನೆ ನೀಡಿದರು.
ಪುತ್ತೂರು ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ಎನ್.ಎಸ್.ಯು.ಐ. ರಾಜ್ಯ ಕಾರ್ಯದರ್ಶಿ ಫಾರುಕ್ ಬಾಯಾಬೆ, ಅಶೋಕ್ ಶೆಟ್ಟಿ, ಇಬ್ರಾಹಿಂ ಕಡಂಬು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.