ನಟ ಚೇತನ್ ಕ್ಷಮೆಯಾಚಿಸಬೇಕು: ದೈವಾರಾಧಕ ಪ್ರತಿನಿಧಿಗಳ ಆಗ್ರಹ

Update: 2022-10-21 14:04 GMT

ಮಂಗಳೂರು: ದೈವಾರಾಧನೆ ಹಾಗೂ ದೈವಾರಾಧಕರು ಹಿಂದೂ ಧರ್ಮದವರು. ಸಾಂವಿಧಾನಿಕವಾಗಿಯೂ ಹಿಂದೂ ಧರ್ಮದ ಪರಿಶಿಷ್ಟ ಜಾತಿಯಲ್ಲಿ ಪಂಬದ, ಪರವ ಹಾಗೂ ನಲಿಕೆಯವರು ಎಂದೇ ಪ್ರಮಾಣ ಪತ್ರ ನೀಡಲಾಗುತ್ತದೆ.  ಈ ಸಮುದಾಯಗಲು ಹಿಂದೂ ಧರ್ಮದ ಅವಿಭಾಜ್ಯ ಅಂಗ. ಆದರೆ  ಚಿತ್ರನಟ ಚೇತನ್‌ರವರು ಸಮಾಜವನ್ನು ಬೇರ್ಪಡಿಸುವ ರೂಪದ ಷಡ್ಯಂತ್ರದ ಹೇಳಿಕೆ ನೀಡಿದ್ದಾರೆ.  ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಜಿಲ್ಲೆಯ ದೈವಾರಾಧಕರ ಪ್ರತಿನಿಧಿಗಳು ಹೇಳಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಂಬದರ ಯಾನೆ ದೈವಾರಾಧಕರ ಸೇವಾ ಸಮಾಜ ಸಂಘದ ನಿಕಟಪೂರ್ವ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ, ದೈವಾರಾಧಕರು ನಾವೆಲ್ಲಾ ಹಿಂದೂಗಳು. ನಮ್ಮನ್ನು ಒಡೆಯುವುದಕ್ಕೆ ಯಾವ ಸ್ಥಾಪಿತ ಹಿತಾಸಕ್ತಿಯಿಂದಲೂ ಸಾಧ್ಯವಿಲ್ಲ. ಅಂತಹ ಕಾರ್ಯವನ್ನು ನಾವು ಖಂಡಿಸುತ್ತೇವೆ ಎಂದರು.

ನಟ ಚೇತನ್ ಮತ್ತು ಅವರ ಹೇಳಿಕೆಯ ಹಿಂದಿರುವ ಕರಾಳ ಕೈಗಳು, ಕರಾಳ ಮನಸ್ಸುಗಳು ಈ ಬಗ್ಗೆ ಯೋಚಿಸ ಬೇಕು. ಇದು ಮುಂದುವರಿದರೆ ನಮ್ಮಿಂದ ಪ್ರತಿಭಟನೆ ಮಾತ್ರವಲ್ಲ, ಕಾನೂನು ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ ಎಂದರು.

ಪಂಬದರು, ಪರವರು ಮತ್ತು ನಲಿಕೆಯವರು 16 ವರ್ಷದ ಒಳಗಿದ್ದೇವೆ. ನಮಗೆ ೧೬ ಸಂಸ್ಕಾರಗಳು ಹಿಂದೂ ಸಂಸ್ಕೃತಿಯಲ್ಲೇ ಇರುವುದು.  ಇವರು ಆರ್ಥಿಕವಾಗಿ ಸ್ಥಿತಿವಂತರಲ್ಲ. ಹೀಗಿರುವಾಗ ದೈವಾರಾಧನೆ ಮತ್ತು ದೈವಾರಾಧಕರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳದೆ ಬಾಯಿಗೆ ಬಂದಂತೆ ಹೇಳಿಕೆ ನೀಡುವುದು ಸರಿಯಲ್ಲ. ಎಲ್ಲ 16 ವರ್ಗದವರೂ ಸೇರಿ ದೈವಾರಾಧನೆ ನಡೆಸುತ್ತಾರೆ. ಇಲ್ಲಿ ಒಂದು ವರ್ಗ ಸೇರದಿದ್ದರೂ ದೈವಾರಾಧನೆ ಪರಿಪೂರ್ಣ ಆಗದು. ಪ್ರತಿಯೊಬ್ಬ ತುಳುವರೂ ದೈವಾರಾಧನೆ ನಡೆಸುತ್ತಾರೆ. ಇಂತಹ ನಂಬಿಕೆಯನ್ನು ಘಾಸಿಗೊಳಿಸುವ ಕೆಲಸ ಯಾರೂ ಮಾಡಬಾರದು. ಆದ್ದರಿಂದ ದೈವಾರಾಧಕರ ವಿರುದ್ಧದ ಹೇಳಿಕೆಯನ್ನು ಚಿತ್ರನಟರು ವಾಪಸ್ ತೆಗೆದುಕೊಳ್ಳಬೇಕು ಎಂದವರು ಹೇಳಿದರು.

ನಾವೆಲ್ಲ ಹಿಂದೂ ಸಮಾಜದ ಸಾಗರಕ್ಕೆ ಮುತ್ತುಗಳಿದ್ದಂತೆ. ಹೀಗಿರುವಾಗ ನಮ್ಮನ್ನು ಸಾಗರದಿಂದ ಹೊರಗೆ ಹಾಕಿ ಸಾಯಿಸುವ ಹುನ್ನಾರ ನಡೆಸುವುದು ಬೇಡ. ಇದನ್ನು ಟೀಕಿಸುವವರು ಅರ್ಥ ಮಾಡಿಕೊಳ್ಳಲಿ. ದೈವಾರಾಧನೆಯಲ್ಲಿ ಮೇಲು ಕೀಳು ಎಂಬುದಿಲ್ಲ. ಎಲ್ಲ ವರ್ಗದವರೂ ದೈವಾರಾಧನೆ ನಡೆಸುತ್ತಾರೆ. ಮುಸ್ಲಿಂ, ಕ್ರೈಸ್ತರು ಕೂಡ ಕೆಲವು ಕಡೆಗಳಲ್ಲಿ ದೈವಾರಾಧನೆ ಮಾಡುತ್ತಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ. ಪರವ ಸಂಘ ಸಂಚಾಲಕ ಡಾ.ರವೀಶ್ ಪರವ ಪಡುಮಲೆ, ನಲಿಕೆ ಸಮಾಜ ಘಟಕ ಅಧ್ಯಕ್ಷ ಪಾಂಡುರಂಗ ನಲಿಕೆ ಉಪಸ್ಥಿತರಿದ್ದರು.

ದೈವಾರಾಧಕರಿಗೆ ಮಾಸಾಶನ ಎಲ್ಲಾ ವರ್ಗಕ್ಕೂ ದೊರೆಯಲಿ

ದೈವಾರಾಧಕರಿಗೆ ಮಾಸಿಕ 2 ಸಾವಿರ ರೂ. ಮಾಸಾಶನ ಘೋಷಿಸಿರುವುದು ಶ್ಲಾಘನೀಯ. ಆದರೆ ದೈವದ ಚಾಕರಿಯನ್ನು 16 ವರ್ಗಗಳು ಮಾಡುತ್ತಿರುವುದರಿಂದ ಇದನ್ನು ಎಲ್ಲರಿಗೂ ವಿಸ್ತರಿಸಿದರೆ ಉತ್ತಮ ಹಾಗೂ ದೈವಾರಾಧಕರಿಗೆ ವಯೋಮಾನ 60ರ ಬದಲು 50 ಅಥವಾ 55ಕ್ಕೆ ನಿಗದಿಪಡಿಸಿದರೆ ಹೆಚ್ಚಿನ ಮಂದಿಗೆ ಮಾಸಾಶನ ಸಿಗಲು ಸಾಧ್ಯ. ವೃದ್ಧಾಪ್ಯ ವೇತನ ಪಡೆಯುತ್ತಿರುವ ಕಲಾವಿದರು ಮಾಶಾಸನಕ್ಕೆ ಅರ್ಜಿ ಸಲ್ಲಿಸುವಾಗ ಹಿಂದಿನ ಮಾಸಾಶನ  ರದ್ದುಗೊಳಿಸಬೇಕು ಎಂಬ ಸಾಧ್ಯತೆ ಅಧಿಕವಿದೆ. ಹೀಗಾಗಿ ಗೊಂದಲ ಉಂಟಾಗಬಹುದು. ಇಂತಹ ಸಮಸ್ಯೆಗಳಿಗೆ ಸರಕಾರ ಪರಿಹಾರ ಕಂಡಕೊಳ್ಳಬೇಕು ಎಂದು ದಯಾನಂದ ಕತ್ತಲ್‌ಸಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News