ಪ್ರತಿಭಾ ಕುಳಾಯಿಯ ಅಶ್ಲೀಲ ನಿಂದನೆ: ಆರೋಪಿ ಶ್ಯಾಮ ಸುದರ್ಶನ್‌ ಭಟ್‌ ವಿರುದ್ಧ ಪ್ರಕರಣ ದಾಖಲು

Update: 2022-10-22 14:11 GMT

ಮಂಗಳೂರು, ಅ.22: ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟದ ಮೂಲಕ ಗಮನ ಸೆಳೆದಿರುವ ಕಾಂಗ್ರೆಸ್ ನಾಯಕಿ, ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಹೇಳಿಕೆ ನೀಡಿದ್ದ ಆರೋಪಿ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ವಿರುದ್ಧ ಶನಿವಾರ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್‌‌‌ನಲ್ಲಿ ನಡೆದ ಟೋಲ್‌ಗೇಟ್ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ಬಂಧಿಸುವಾಗ ಪ್ರತಿಭಾ ಕುಳಾಯಿ ಪ್ರತಿಭಟಿಸಿದ್ದರು. ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಈ ಮಧ್ಯೆ ‘ಕಹಳೆ ನ್ಯೂಸ್’ ಎಂಬ ವೆಬ್‌ಸೈಟ್‌ನ ಸಂಪಾದಕನಾಗಿದ್ದ ಆರೋಪಿ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ಎಂಬಾತ ಪ್ರತಿಭಾ ಕುಳಾಯಿಯ ವಿರುದ್ಧ ಅವಹೇಳನಕಾರಿ ಬರಹವನ್ನು ಪ್ರಕಟಿಸಿ ಅದನ್ನು ಫೇಸ್‌ಬುಕ್‌ನಲ್ಲಿ ಹಂಚಿದ್ದ.

ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಸಮಾನ ಮನಸ್ಕ ಸಂಘಟನೆಗಳ ಪ್ರಮುಖರು ಆರೋಪಿ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಪ್ರತಿಭಾ ಕುಳಾಯಿ ಕೂಡ ದೂರು ನೀಡಿದ್ದರು. ಅದರಂತೆ ಶನಿವಾರ ಶ್ಯಾಮ ಸುದರ್ಶನ್‌ ಭಟ್‌ ಹೊಸಮೂಲೆ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆ.354 ಎ(1), 509, ಐಟಿ ಕಾಯ್ದೆ 67ರ ಅಡಿ ಪ್ರಕರಣ ದಾಖಲಿಸಲಾಗಿದೆ.

"ಆರೋಪಿಯ ಬಂಧನವಾಗಿಲ್ಲ. ಆತ ವಾಸಸ್ಥಳದಿಂದ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ" ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News