ಪ್ರತಿಭಾ ಕುಳಾಯಿ ಬಗ್ಗೆ ಅಶ್ಲೀಲ ಪದ ಬಳಕೆ: ಆರೋಪಿಗಳಿಗೆ ತಕ್ಕ ಶಿಕ್ಷೆಗೆ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಆಗ್ರಹ

Update: 2022-10-22 14:51 GMT

ಮಂಗಳೂರು : ಸುರತ್ಕಲ್ ಟೋಲ್‌ಗೇಟ್ ವಿರುದ್ಧದ ಹೋರಾಟದ ಸಂದರ್ಭದ ಫೋಟೋವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ, ಉಮೇಶ್ ದಂಡಕೇರಿ, ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಾ ಕುಳಾಯಿ ಬಗ್ಗೆ ಅಶ್ಲೀಲ ಶಬ್ಧಗಳನ್ನು ಬಳಸಿ ವಿಕೃತಿ ಮೆರೆದಿದ್ದಾರೆ. ಬಿಜೆಪಿ ಪ್ರಾಯೋಜಿತ ವೆಬ್ ಚಾನೆಲ್ ಒಂದರ ಸಂಪದಾಕ ಹಾಗೂ ಸಂಘ ಪರಿವಾರದ ಮುಖಂಡನಾಗಿ ಗುರುತಿಸಿಕೊಂಡಿರುವ ವ್ಯಕ್ತಿ ಅಶ್ಲೀಲವಾದ ಬರಹದ ಮೂಲಕ ಪ್ರತಿಭಾ ಕುಳಾಯಿ ಅವರ ಚಾರಿತ್ರ್ಯಹರಣಕ್ಕೆ ಮುಂದಾಗಿದ್ದು, ಖಂಡನೀಯ ಎಂದರು.

ಬಿಜೆಪಿ ಪಕ್ಷದ ಕೆಲವರು ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ಕಾಣುತ್ತಾರೆ. ಪ್ರತಿಭಾ ಕುಳಾಯಿ ಅವರು ಈಗಾಗಲೇ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ತಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

ಮಾಜಿ ಶಾಸಕ ಮೊಯ್ದಿನ್ ಬಾವಾ ಮಾತನಾಡಿ, ಮಹಿಳೆಯರಿಗೆ ಸಾಮಾಜಿಕವಾಗಿ ಹೋರಾಟ ಮಾಡುವ ಹಕ್ಕಿಲ್ಲವೇ? ಮಹಿಳೆಯರನ್ನು ಈ ರೀತಿ ಹತ್ತಿಕ್ಕುವ ಪ್ರಯತ್ನ ಯಾಕೆ ಎಂದು ಪ್ರಶ್ನಿಸಿದರು.

ಸುಳ್ಯದಲ್ಲಿ ವ್ಯಾಪಾರಕ್ಕೆ ಹೋದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಆಗಬೇಕು. ವ್ಯಾಪಾರಿಗಳಿಗೆ ಹಲ್ಲೆ ನಡೆಸುತ್ತಿರುವ ವೀಡಿಯೋ ವೈರಲ್ ಆಗಿದ್ದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ. ಈ ರೀತಿ ಗೂಂಡಾಗಿರಿ ಮಾಡಲು, ಕಾನೂನುಕೈಗೆತ್ತಿಕೊಳ್ಳಲು ಅವಕಾಶ ನೀಡಿದವರು ಯಾರು ಎಂದು ಮೊಯ್ದೀನ್ ಬಾವ ಪ್ರಶ್ನಿಸಿದ್ದಾರೆ.

ಗೋಷ್ಠಿಯಲ್ಲಿ ಬಶೀರ್ ಬೈಕಂಪಾಡಿ, ರಾಘವೇಂದ್ರ ಭಟ್, ಆನಂದ ಅಮೀನ್, ರಾಜೇಶ್ ಕುಳಾಯಿ, ರೆಹಮಾನ್ ಕುಂಜತ್ತಬೈಲ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News