ಕಾಂಗ್ರೆಸ್ ‘‘ಐ’’ನ್ನು ಕಾಂಗ್ರೆಸ್ ‘‘ವಿ’’ ಆಗಿಸದ ಹೊರತು...

Update: 2022-10-23 06:41 GMT

ಈ ‘‘ಐ’’ ಸ್ವಭಾವದ, ಹಣದ ಥೈಲಿಯನ್ನೇ ತಮ್ಮ ನಾಯಕತ್ವದ ಅರ್ಹತೆ ಮಾಡಿಕೊಂಡಿರುವ ಎಲ್ಲರಿಗೂ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ’ ಯಾತ್ರೆ ಪಾಠ ಆಗಬೇಕು. ಕಾಂಗ್ರೆಸ್ ಐ(ನಾನು) ಅನ್ನು ಕಾಂಗ್ರೆಸ್ ‘‘ವಿ’’(ನಾವು) ಆಗಿಸುವತ್ತ, ಕಾಂಗ್ರೆಸ್ ಒಳಗೆ ತುಕ್ಕು ಕಟ್ಟಿರುವ ‘‘ನಾನು’’ ಅನ್ನು ಅಳಿಸಿ ನಾವು ಆಗಿಸುವ ದಿಕ್ಕಿನಲ್ಲಿ ರಾಹುಲ್ ನಡೆ-ನುಡಿ ಕೆಲಸ ಮಾಡುತ್ತಿರುವುದು ಪಾದಯಾತ್ರೆಯುದ್ದಕ್ಕೂ ಕಾಣಿಸುತ್ತಿದೆ.

ಇಂದಿರಾಗಾಂಧಿ ಅವರಿಗೆ ತಮ್ಮ ಪುತ್ರ ಸಂಜಯ್‌ಗಾಂಧಿ ಬಗ್ಗೆ ಒಂದು ಭಯ ಇತ್ತು. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ) ಏಜೆಂಟರು ಮತ್ತು ಅವರಿಗೆ ಕೊಂಡಿಗಳಾಗಿರುವವರು ಸಂಜಯ್‌ಗಾಂಧಿ ಸುತ್ತ ಆವರಿಸುತ್ತಿದ್ದಾರೆ ಎನ್ನುವ ಭಯ ಇಂದಿರಾಗಾಂಧಿ ಅವರಿಗೆ ಇತ್ತು. 1975ರಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸುವುದರಲ್ಲಿ ಮತ್ತು ಹಿಂದೆಗೆದುಕೊಳ್ಳುವುದರ ಹಿಂದೆ ಇದ್ದ ಹಲವು ಕಾರಣಗಳಲ್ಲಿ ಈ ಭಯವೂ ಕೆಲಸ ಮಾಡಿತ್ತು ಎನ್ನುವ ಮಾತುಗಳೂ ಇವೆ.

ಇಂದಿರಾಗಾಂಧಿ ಹುತಾತ್ಮರಾದ ಬಳಿಕ ೧೯೮೪ರಲ್ಲಿ ರಾಜೀವ್‌ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿದಾಗಲೂ ಇಂದಿರಾಗಾಂಧಿ ಅವರಿಗಿದ್ದ ಭಯ ಗಾಂಧಿ ಕುಟುಂಬದಲ್ಲಿ ಹಾಗೇ ಉಳಿದಿತ್ತು. ಸಂಜಯ್‌ಗಾಂಧಿ ಸುತ್ತ ಆವರಿಸಿಕೊಂಡಿದ್ದವರು ರಾಜೀವ್‌ಗಾಂಧಿ ಹಾದಿಯಲ್ಲಿ ತೊಡರುಗಾಲಾಗಬಹುದು ಎನ್ನುವ ಭಯ. ಸಂಜಯ್‌ಗಾಂಧಿ ಮೂಲಕ ಕಾಂಗ್ರೆಸ್ ಆವರಣದೊಳಕ್ಕೆ ಎಂಟ್ರಿ ಪಡೆದಿದ್ದ ಹಲವರು ನಾಯಕರೂ ಆಗಿಬಿಟ್ಟಿದ್ದರು. ಆ ನಾಯಕರು ರಾಜೀವ್‌ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದಾಗ ಪಕ್ಷದ ಒಳಗಿನಿಂದಲೇ ನಾನಾ ಕಂಟಕಗಳನ್ನು ಸೃಷ್ಟಿಸಬಹುದು ಎನ್ನುವ ಆತಂಕ ನಿಜವಾಗಿತ್ತು. ಆಗ ಕಾಂಗ್ರೆಸ್‌ನ ಒಳಗಿದ್ದುಕೊಂಡೇ ತೊಂದರೆ ಕೊಡುತ್ತಿದ್ದ ಹಿರಿಯ ಕಾಂಗ್ರೆಸಿಗರನ್ನು ಸರಿ ಮಾಡುತ್ತಾ ಕೂರುವುದಕ್ಕಿಂತ ದೇಶವನ್ನು ದೂರದೃಷ್ಟಿಯಿಂದ ಮುನ್ನಡೆಸುವ ಹೊಸ ಯುವ ಪಡೆಯನ್ನು ಕಟ್ಟಿ ಅವರ ಜತೆ ಪಕ್ಷ ಮತ್ತು ಸರಕಾರವನ್ನು ನಿಭಾಯಿಸುವುದು ಸುಲಭ ಎಂದು ರಾಜೀವ್‌ಗಾಂಧಿ ತೀರ್ಮಾನಿಸಿ ತಾವು ಹುತಾತ್ಮರಾಗುವವರೆಗೂ ಆ ದಿಕ್ಕಿನಲ್ಲೇ ಸಾಗಿದರು.

ಅಂದು ರಾಜೀವ್‌ಗಾಂಧಿ ಬೆಳೆಸಿದ ಹಲವು ಯುವ ನಾಯಕರು ನಾನಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳೂ ಆಗಿ ದೇಶಕ್ಕೆ ಹಲವು ದೂರದೃಷ್ಟಿಯ ಕಾರ್ಯಕ್ರಮಗಳನ್ನು ನೀಡಿದರು. ರಾಜೀವ್‌ಗಾಂಧಿ ಹುತಾತ್ಮರಾದ ನಂತರದ ಹತ್ತು ವರ್ಷಗಳ ಕಾಲ ಗಾಂಧಿ ಕುಟುಂಬ ಸಂಪೂರ್ಣವಾಗಿ ಕಾಂಗ್ರೆಸ್‌ನ ನಾಯಕತ್ವದಿಂದ ದೂರ ಉಳಿದಿತ್ತು. ತಮ್ಮ ಇಬ್ಬರು ಮಕ್ಕಳನ್ನು ಜೀವಸಹಿತ ಸುರಕ್ಷಿತವಾಗಿ ಕಾಪಾಡಿಕೊಂಡರೆ ಸಾಕು ಎನ್ನುವ ಭಯದಲ್ಲಿ ಸೋನಿಯಾಗಾಂಧಿ ಇದ್ದರು.

ಈ ಹತ್ತು ವರ್ಷಗಳಲ್ಲಿ ರಾಜೀವ್‌ಗಾಂಧಿ ಅವರಿಗೆ ತೊಡರುಗಾಲಾಗಿದ್ದ ಕಾಂಗ್ರೆಸಿಗರು ಜೀವಂತ ಇದ್ದರು. ಅವರ್ಯಾರಿಗೂ ಪಕ್ಷವನ್ನು ಮತ್ತೆ ಮುನ್ನಡೆಸಲು, ಕಟ್ಟಿ ನಿಲ್ಲಿಸಲು ಸಾಧ್ಯವೇ ಆಗಲಿಲ್ಲ. ಪರಿಣಾಮವಾಗಿ ಅಳಿದುಳಿದ ನಿಷ್ಠಾವಂತರೆಲ್ಲಾ ಕಾಡಿ-ಬೇಡಿ ಸೋನಿಯಾಗಾಂಧಿ ಅವರನ್ನು ಕರೆ ತಂದು ಪಕ್ಷದ ಚುಕ್ಕಾಣಿ ಅವರಿಗೆ ವಹಿಸಿಕೊಳ್ಳುವಂತೆ ದುಂಬಾಲು ಬಿದ್ದರು. ಈ ಗ್ಯಾಪ್‌ನಲ್ಲಿ ಸೋನಿಯಾಗಾಂಧಿ ಅವರಿಗೆ ತನ್ನ ಅತ್ತೆ ಇಂದಿರಾ, ತನ್ನ ಪತಿ ರಾಜೀವ್‌ಗಾಂಧಿ ಅವರ ಹತ್ಯೆಗಳ ಸುತ್ತ ನಡೆದ ರಾಜಕಾರಣ, ವಿದೇಶಿ ಕೈವಾಡಗಳು, ಕಾಂಗ್ರೆಸ್ ಅಂಗಳದಲ್ಲೇ ಇದ್ದವರು ಆಡಿದ ಆಟಗಳೆಲ್ಲಾ ಚೆನ್ನಾಗಿ ಗೊತ್ತಿತ್ತು. ಈ ಕಾರಣಕ್ಕೆ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿ ಆದರಾದರೂ ತಮ್ಮ ಪಾಲಿಗೆ ಒದಗಿ ಬಂದಿದ್ದ ಪ್ರಧಾನಮಂತ್ರಿ ಹುದ್ದೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದರು.

ತಾವು ಪ್ರಧಾನಿ ಹುದ್ದೆ ಅಲಂಕರಿಸಿದರೆ ಬಿಜೆಪಿಯ ಬಾಣಗಳಿಗಿಂತ ಕಾಂಗ್ರೆಸ್‌ನಲ್ಲಿರುವ ಹಲವರ ಚೂರಿಗಳು ಬೆನ್ನಿಗೆ ಇರಿಯಬಹುದು, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ ಜೀವಕ್ಕೂ ತೊಂದರೆಯಾಗಬಹುದು ಎನ್ನುವ ಆತಂಕ ಸೋನಿಯಾಗಾಂಧಿ ಅವರಿಗೆ ಇದ್ದೇ ಇತ್ತು. ಪ್ರಧಾನಿ ಹುದ್ದೆಯನ್ನು ತಿರಸ್ಕರಿಸಲು ಈ ಭಯವೂ ಒಂದು ಕಾರಣವಾಗಿದ್ದಿರಬಹುದು. ಅನಾಥವಾಗಿದ್ದ ಕಾಂಗ್ರೆಸ್‌ಗೆ ಮರು ಜನ್ಮ ನೀಡಿದ್ದ ಸೋನಿಯಾಗಾಂಧಿ ಪಕ್ಷದೊಳಗಿದ್ದ ಚೂರಿಗಳನ್ನು ನಾಜೂಕಾಗಿ ನಿರ್ವಹಿಸುತ್ತಾ, ಬ್ಯಾಲೆನ್ಸ್ ಮಾಡುತ್ತಾ ಮನಮೋಹನ್‌ಸಿಂಗ್ ಅವರನ್ನು ಪ್ರಧಾನ ಮಂತ್ರಿಯನ್ನಾಗಿಸಿದ ಜಾಣ್ಮೆಯಿಂದಾಗಿ ಪಕ್ಷದೊಳಗೆ ಸಂಭವಿಸಬಹುದಾಗಿದ್ದ ಹಲವು ಬಿರುಕುಗಳು ಕಾಣಿಸಿಕೊಳ್ಳದಂತೆ ಯಶಸ್ವಿಯಾಗಿ ನಿರ್ವಹಿಸಿದರು.

ಮನಮೋಹನ್‌ಸಿಂಗ್ ಅವರ ಬದಲಿಗೆ ತಮ್ಮ ಪುತ್ರ ರಾಹುಲ್ ಅವರನ್ನು ಪ್ರಧಾನ ಮಂತ್ರಿ ಕುರ್ಚಿಯಲ್ಲಿ ಕೂರಿಸುವ ಅವಕಾಶ ಸೋನಿಯಾಗಾಂಧಿ ಅವರಿಗೂ ಇತ್ತು. ಕೂರುವ ಅವಕಾಶ ರಾಹುಲ್ ಗಾಂಧಿ ಅವರಿಗೂ ಇತ್ತು. ಒಮ್ಮೆ ಪ್ರಧಾನ ಮಂತ್ರಿ ಕುರ್ಚಿಯಲ್ಲಿ ಕುಳಿತರೆ ನಾಯಕತ್ವದ ಇಮೇಜ್ ಸೃಷ್ಟಿಸಿಕೊಳ್ಳುವುದು ಕಷ್ಟದ ಕೆಲಸ ಅಲ್ಲ. ನೆಹರೂ ವಿಚಾರಧಾರೆಯ ನೆರಳೂ ರಾಹುಲ್‌ಗೆ ಇದ್ದಿದ್ದರಿಂದ ಮಾಸ್ ಲೀಡರ್ ಇಮೇಜ್ ಅನ್ನು ಪ್ರಧಾನ ಮಂತ್ರಿ ಕುರ್ಚಿಯಲ್ಲಿ ಕುಳಿತು ರೂಪಿಸಿಕೊಳ್ಳುವುದು ರಾಹುಲ್‌ಗಾಂಧಿಗೆ ಕಷ್ಟದ ಕೆಲಸವೂ ಆಗಿರಲಿಲ್ಲ. ಆದರೆ, ಸೋನಿಯಾಗಾಂಧಿ ಅವರು ತಿರಸ್ಕರಿಸಿದ ಪ್ರಧಾನಿ ಹುದ್ದೆಯನ್ನು ರಾಹುಲ್ ಬಯಸುವುದರಲಿ, ಕೇಂದ್ರ ಮಂತ್ರಿ ಕೂಡ ಆಗದಂತೆ ದೂರ ಉಳಿದರು. ಎರಡು ಬಾರಿ ಕೇಂದ್ರ ಮಂತ್ರಿ ಆಗುವ ಅವಕಾಶವನ್ನು ಅಪ್ಪಿತಪ್ಪಿಯೂ ಅಪ್ಪಿಕೊಳ್ಳಲಿಲ್ಲ. ಇಂದಿರಾಗಾಂಧಿ, ಸಂಜಯ್‌ಗಾಂಧಿ, ರಾಜೀವ್‌ಗಾಂಧಿ ಕಾಲದುದ್ದಕ್ಕೂ ಇದ್ದ ಅತೃಪ್ತ ಆತ್ಮಗಳು ಇನ್ನೂ ಕಾಂಗ್ರೆಸ್ ಅಂಗಳದಲ್ಲೇ ಇದ್ದುದರಿಂದ ಸೋನಿಯಾಗಾಂಧಿ ಬಹಳ ಜಾಗರೂಕತೆಯಿಂದ ಆ ಹಾವುಗಳು ತಮ್ಮ ಮಕ್ಕಳನ್ನು ಕಚ್ಚದಂತೆ ಕಾಪಾಡಿಕೊಂಡರು. ಮತ್ತೊಂದು ಕಡೆ ಅನಾಥವಾಗಿದ್ದ ಕಾಂಗ್ರೆಸನ್ನು ಮತ್ತೆ ಅಧಿಕಾರಕ್ಕೆ ತಂದು ಮನಮೋಹನ್ ಸಿಂಗ್ ಅವರು ಪ್ರಧಾನಿ ಆದ ಬೆನ್ನಲ್ಲೇ ರಾಜೀವ್‌ಗಾಂಧಿ ಹತ್ಯೆಯ ಮಾಸ್ಟರ್ ಬ್ರೈನ್ ಎಲ್‌ಟಿಟಿಇ ಪ್ರಭಾಕರನ್ ಅವರನ್ನು ಯಶಸ್ವೀ ಕಾರ್ಯಾಚರಣೆಯಲ್ಲಿ ಶ್ರೀಲಂಕಾ ಸರಕಾರ ಕೊನೆಗಾಣಿಸಿತು. ಅಮೆರಿಕದ ಗುಪ್ತಚರ ಸಂಸ್ಥೆಯ ಕಣ್ಣು ತಪ್ಪಿಸಿ ಶ್ರೀಲಂಕಾ ಸರಕಾರ ಈ ಯಶಸ್ವಿ ಕಾರ್ಯಾಚರಣೆ ನಡೆಸಿತ್ತು. ಸೋನಿಯಾಗಾಂಧಿ ನಿಟ್ಟುಸಿರು ಬಿಟ್ಟರು.

ಇನ್ನೇನು ರಾಹುಲ್ ೫೦ ಸಮೀಪಿಸಿ ಪಕ್ಷದ ಚುಕ್ಕಾಣಿಯನ್ನು ನಿರ್ವಹಿಸಬಹುದು ಎನ್ನುವ ಸಂದರ್ಭದಲ್ಲಿ ಆ ಹಾವುಗಳೆಲ್ಲಾ ಮತ್ತೆ ಬುಸುಗುಟ್ಟತೊಡಗಿದವು. ಆ ಹಾವುಗಳಿಗೆ ಹಾಲು ಎರೆಯಲು ತಮಗೆ ಸಿಗುವ ಅವಕಾಶವನ್ನು ಬಿಜೆಪಿ ಮತ್ತು ಸಂಘ ಪರಿವಾರ ಮಿಸ್ ಮಾಡಿಕೊಳ್ಳುವುದಿಲ್ಲ ಎನ್ನುವ ತಿಳಿವಳಿಕೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರಿಗೆ ಇದ್ದೇ ಇದೆ. ಆ ಅತೃಪ್ತ ಆತ್ಮಗಳನ್ನು ತಿದ್ದುತ್ತಾ ಕೂರುವುದಕ್ಕಿಂತ ಅಪ್ಪನ ಹಾದಿಯನ್ನು ಆಯ್ಕೆ ಮಾಡಿಕೊಂಡರು ರಾಹುಲ್. ಭಿನ್ನ ಆಲೋಚನೆ ಮತ್ತು ಬೇಷರತ್ ಬದ್ಧತೆಯಿಂದ ದೇಶವನ್ನು ಪುನರ್ ನಿರ್ಮಿಸುವ ಶಕ್ತಿ ಇರುವ ಯುವಶಕ್ತಿಯನ್ನು ಸಂಘಟಿಸುತ್ತಾ ಹೊರಟಿದ್ದಾರೆ. ಕನ್ಹಯ್ಯಕುಮಾರ್, ಜಿಗ್ನೇಶ್ ಮೇವಾನಿ ರೀತಿ ಹಲವರು ಈ ಕಾರಣಕ್ಕೇ ರಾಹುಲ್ ಸುತ್ತ ಸಂಘಟಿತರಾಗಲು ಸಾಧ್ಯವಾಗುತ್ತಿದೆ. ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ರೀತಿಯ ಹೋರಾಟ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ಪ್ರತಿಭಟನಾ ವ್ಯಕ್ತಿತ್ವಗಳಿಗೆ ರಾಹುಲ್ ತಮ್ಮ ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಬಾರಿ ಪೊಲೀಸರಿಂದ ತಲೆ ಒಡೆಸಿಕೊಂಡು ಮೂರು ಬಾರಿ ಸಾವಿನ ದವಡೆಯಿಂದಲೂ ಬಚಾವಾಗಿ ಬಂದ ಬಿ.ವಿ.ಶ್ರೀನಿವಾಸ್ ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ತಾಜಾತನದ, ಯುವ ಉತ್ಸಾಹಿಗಳನ್ನು ಹೋರಾಟ ರಾಜಕಾರಣದ ಕಣಕ್ಕೆ ಸಜ್ಜುಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಲು ತಾನಾಗೇ ಒದಗಿ ಬಂದಿದ್ದ ಮತ್ತೊಂದು ಅವಕಾಶದ ಕಡೆ ಆಸೆಗಣ್ಣಿನಿಂದಲೂ ನೋಡದೆ ಹೊಸ ಅಧ್ಯಕ್ಷರ ಆಯ್ಕೆಯ ಚುನಾವಣೆಯ ಹೊತ್ತಲ್ಲೂ ರಾಹುಲ್‌ಗಾಂಧಿಯ ನಡೆ ಕಾಂಗ್ರೆಸ್ ‘ಐ’ ಬಗ್ಗೆ ಹೊಸ ಭರವಸೆಯನ್ನು ಸೃಷ್ಟಿಸುತ್ತಿದೆ.

ಇಂದಿರಾಗಾಂಧಿ ಅವಧಿಯಿಂದ ಮೋದಿ ಅವರ ಅವತಾರದ ಈ ಹೊತ್ತಿನವರೆಗೆ ನಡೆಯುತ್ತಿರುವ ಸರಣಿ ರಾಜಕೀಯ ಮತ್ತು ಸಾಮಾಜಿಕ ಅನಾಹುತಗಳ ಈ ಚಾರಿತ್ರಿಕ ಮತ್ತು ವರ್ತಮಾನದ ಹಿನ್ನೆಲೆಯೇ ‘ಭಾರತ್ ಜೋಡೊ’ ಯಾತ್ರೆಯ ಮಹತ್ವವನ್ನು ಹೆಚ್ಚಿಸಿದೆ. ಇದರ ಜತೆಗೇ ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ, ರಾಜಕೀಯ ಪರಂಪರೆ ಹಿಂದೆಂದೂ ಇಲ್ಲದಷ್ಟು ವಿಷಮಯ ಆಗಿರುವ ಹೊತ್ತಲ್ಲಿ ರಾಹುಲ್‌ಗಾಂಧಿ ತನ್ನ ಜವಾಬ್ದಾರಿ ಏನು ಎನ್ನುವುದನ್ನು ದಾಖಲಿಸುತ್ತಿದ್ದಾರೆ. ಇಷ್ಟು ಕೆಟ್ಟ ಭಾರತ ಹಿಂದೆಂದೂ ಇರಲಿಲ್ಲ ಎನ್ನುವಷ್ಟು ಕುಲಗೆಟ್ಟಿರುವ ಸಾಮಾಜಿಕ ಸಂದರ್ಭದಲ್ಲಿ, ದ್ವೇಷವನ್ನೇ ಭಾರತೀಯ ಸಂಸ್ಕಾರ ಎಂದು ಸಾಬೀತುಪಡಿಸಲು ಸನಾತನ ಪಿತೂರಿ ಪಾಂಡಿತ್ಯ ಹೊರಟಿರುವ ಹೊತ್ತಿನಲ್ಲೇ ರಾಹುಲ್ ಗಾಂಧಿ ತಮ್ಮ ಜವಾಬ್ದಾರಿ ಏನು ಎನ್ನುವುದನ್ನು ಬೀದಿಗಿಳಿದು ದಾಖಲಿಸುತ್ತಿದ್ದಾರೆ.

ತನ್ನ ನಡೆಯ ಮೂಲಕವೇ ರಾಹುಲ್‌ಗಾಂಧಿ ಕಾಂಗ್ರೆಸಿಗರಿಗೆ ಪಾಠವನ್ನೂ ಹೇಳುತ್ತಿದ್ದಾರೆ. ಕಾಂಗ್ರೆಸ್ ‘ಐ’ ಎಂದರೆ ಏನು ಎನ್ನುವುದನ್ನು ಕಾಂಗ್ರೆಸಿಗರು ಅಪಾರ್ಥ ಮಾಡಿಕೊಂಡು ಎಲ್ಲದರಲ್ಲೂ ‘‘ಐ’’ ‘‘ಐ’’ ‘‘ಐ’’ -ನಾನು ನಾನು ನಾನು ಎಂದು ಹಾತೊರೆಯುತ್ತಿದ್ದಾರೆ. ತ್ಯಾಗಕ್ಕೆ ಸಜ್ಜಾಗಬೇಕಾದ ಹೊತ್ತಲ್ಲೂ ಕಾಂಗ್ರೆಸ್ ನಾಯಕರು ನಾನು-ನನಗೆ-ನನ್ನಿಂದ ಎಂದು ಹಾತೊರೆಯುತ್ತಿರುವುದರ ಪರಿಣಾಮವೇ ಹಲವು ರಾಜ್ಯಗಳಲ್ಲಿ ಜನ ತಾವಾಗೇ ಕೊಟ್ಟ ಅಧಿಕಾರವೂ ಕಾಂಗ್ರೆಸ್ ಕೈಯಿಂದ ಜಾರಿ ಹೋಗಿದೆ. ಬಿಜೆಪಿ-ಆರೆಸ್ಸೆಸ್‌ಗೆ ಭಯ ಪಡುವವರು ಪಕ್ಷವನ್ನು ತ್ಯಜಿಸಿ ಎಂದು ರಾಹುಲ್ ಗಾಂಧಿ ನೇರವಾಗಿ ಕರೆ ಕೊಟ್ಟಿದ್ದೂ ಆಗಿದೆ. ಆದರೂ, ಬಿಜೆಪಿ-ಆರೆಸ್ಸೆಸ್ ಪರವಾಗಿ ಬೀದಿಗಿಳಿದು ಹೋರಾಡುವುದನ್ನು ಕಸನು ಮನಸಿನಲ್ಲೂ ಯೋಚಿಸದವರೇ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯಲ್ಲಿ ಹೆಚ್ಚೆಚ್ಚು ಜಾಗ ಪಡೆದಿದ್ದಾರೆ. ಸ್ಥಳೀಯ ಸಂಸ್ಥೆಗಳ ‘ಬಿ’ ಫಾರಂ ಪಡೆಯುವವರಲ್ಲೂ ಇವರೇ ತುಂಬಿಕೊಂಡಿದ್ದಾರೆ.

ಈ ‘‘ಐ’’ ಸ್ವಭಾವದ, ಹಣದ ಥೈಲಿಯನ್ನೇ ತಮ್ಮ ನಾಯಕತ್ವದ ಅರ್ಹತೆ ಮಾಡಿಕೊಂಡಿರುವ ಎಲ್ಲರಿಗೂ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ’ ಯಾತ್ರೆ ಪಾಠ ಆಗಬೇಕು. ಕಾಂಗ್ರೆಸ್ ಐ(ನಾನು) ಅನ್ನು ಕಾಂಗ್ರೆಸ್ ‘‘ವಿ’’(ನಾವು) ಆಗಿಸುವತ್ತ, ಕಾಂಗ್ರೆಸ್ ಒಳಗೆ ತುಕ್ಕು ಕಟ್ಟಿರುವ ‘‘ನಾನು’’ ಅನ್ನು ಅಳಿಸಿ ನಾವು ಆಗಿಸುವ ದಿಕ್ಕಿನಲ್ಲಿ ರಾಹುಲ್ ನಡೆ-ನುಡಿ ಕೆಲಸ ಮಾಡುತ್ತಿರುವುದು ಪಾದಯಾತ್ರೆಯುದ್ದಕ್ಕೂ ಕಾಣಿಸುತ್ತಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ೭೫ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಮತ್ತು ಈಗ ನಡೆಯುತ್ತಿರುವ ‘ಭಾರತ್ ಜೋಡೊ’ ಯಾತ್ರೆಯ ಹೊತ್ತಲ್ಲಿ ನಾಡಿನ ಮತ್ತು ದೇಶದ ಸಾಮಾನ್ಯ ಜನ ಒಂದು ಸಂದೇಶವನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಈ ಎರಡೂ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿಸಿದ್ದಕ್ಕಿಂತ ನಾಲ್ಕೈದು ಪಟ್ಟು ಹೆಚ್ಚು ಜನ ಸ್ವಯಂಪ್ರೇರಿತವಾಗಿ ನೆರೆದಿದ್ದಾರೆ. ನೆರೆಯುತ್ತಿದ್ದಾರೆ.

ಹೀಗೆ ಜನ ಸೇರುತ್ತಿರುವುದಕ್ಕೆ ಹಾಲಿ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳ ದುರಾಡಳಿತವೂ ಕಾರಣ ಎನ್ನುವ ಒಂದು ಸ್ಪಷ್ಟ ಸಂದೇಶ ಇಲ್ಲಿದೆ. ಜತೆಗೆ ತಮ್ಮ ಕಷ್ಟ ಕೇಳಲು ಮೇಲಿನಿಂದ ಕೆಳಗಿಳಿದು ತಮ್ಮ ಬಳಿಗೆ ನಡೆದು ಬರುವ ಮೇಕಪ್ ರಹಿತ, ಸುಳ್ಳುಗಳಿಲ್ಲದ, ಮುಖವಾಡಗಳಿಲ್ಲದ ನಾಯಕನಿಗಾಗಿ ನಾವು ಕಾಯುತ್ತಿದ್ದೇವೆ ಎನ್ನುವ ಸಂದೇಶವನ್ನೂ ಜನ ನೀಡಿದ್ದಾರೆ. ನಮಗೆ ಭಾಷಣ ಮಾಡುವ ನಾಯಕ ಸಾಕೇ ಸಾಕು. ನಮ್ಮ ಮಾತು ಕೇಳಿಸಿಕೊಳ್ಳುವ ಒಬ್ಬ ನಾಯಕ ಬೇಕು ಎನ್ನುವ ಜನರ ಆಕಾಂಕ್ಷೆ ಕೂಡ ‘ಭಾರತ್ ಜೋಡೊ’ ಯಾತ್ರೆಯುದ್ದಕ್ಕೂ ಕಾಣಿಸುತ್ತಿದೆ.

ಹೀಗಾಗಿ ಇದು ಜನರ ಮಾತನ್ನು ಕೇಳಿಸಿಕೊಳ್ಳುವ ಕಾಲ. ತಮ್ಮ ಅಹಂಗಳನ್ನು ಬದಿಗಿಟ್ಟು ಕೇಳಿಸಿಕೊಳ್ಳುವ ಮೇಕಪ್ ಇಲ್ಲದ ವ್ಯಕ್ತಿತ್ವ ಮಾತ್ರ ಈ ಜನರ ಆಯ್ಕೆ ಬಲ್ಲದು.

Writer - ಗಿರೀಶ್ ಕೋಟೆ

contributor

Editor - ಗಿರೀಶ್ ಕೋಟೆ

contributor

Similar News