ಬಟ್ಟೆ ವ್ಯಾಪಾರಿಗಳ ಮೇಲೆ ಹಲ್ಲೆಗೆ ಖಂಡನೆ: ಅ. 28ರಂದು ಯುವಜನ ಪರಿಷತ್ ಪ್ರತಿಭಟನೆ

Update: 2022-10-24 13:37 GMT

ಪುತ್ತೂರು: ತಾಲೂಕಿನ ಕಾಣಿಯೂರಿನಲ್ಲಿ ಇಬ್ಬರು ಯುವಕರ ಮೇಲೆ ತಂಡದಿಂದ ನಡೆದ ಮಾರಣಾಂತಿಕ ಹಲ್ಲೆ ಹಾಗೂ ಕೊಲೆಯತ್ನವನ್ನು ಖಂಡಿಸಿ ಅ. 28ರಂದು ಪುತ್ತೂರಿನಲ್ಲಿ ಬೃಹತ್ ಜಾಥಾ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್ ತೀರ್ಮಾನಿಸಿದೆ.

ಬಟ್ಟೆ ವ್ಯಾಪಾರಿಗಳಾದ ರಫೀಕ್ ಮತ್ತು ರಮೀಝುದ್ದೀನ್ ಅವರ ಮೇಲೆ ನಡೆಸಲಾದ ಹಲ್ಲೆ ಘಟನೆಯನ್ನು ಖಂಡಿಸಿ ಸೋಮವಾರ ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಇದರ ನೇತೃತ್ವದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯಲ್ಲಿ ಮಾತನಾಡಿದ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಅವರು ಕಾಣಿಯೂರಿನಲ್ಲಿ ಇಬ್ಬರು ಮುಸ್ಲಿಮ್ ಯುವಕರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡನೀಯವಾಗಿದೆ.  ಫ್ಯಾಶಿಸ್ಟ್ ಗೂಂಡಾಗಳಿಂದ ನಡೆದ ದರೋಡೆ ಮತ್ತು ಕೊಲೆ ಯತ್ನ ಇದಾಗಿದೆ. ಈ ದರೋಡೆ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ವ್ಯಾಪಾರಿಗಳನ್ನು ಕೊಲ್ಲಲು ಯತ್ನಿಸಿದ್ದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಪ್ರಕರಣ ದಾಖಲಿಸಬೇಕಾದ ಪೊಲೀಸರು ನಿರ್ಲಕ್ಷ್ಯ ವಹಿಸಿ ಜಾಮೀನು ಸಿಗುವಂತಹ ಪ್ರಕರಣ ದಾಖಲಿಸಿದ್ದಾರೆ. ಇದನ್ನು ಖಂಡಿಸಿ ಮುಂದಿನ ಶುಕ್ರವಾರ ಅಪರಾಹ್ನ ದರ್ಬೆ ಜಂಕ್ಷನ್ ನಿಂದ ಪುತ್ತೂರು ಎಸಿ ಕಚೇರಿ ತನಕ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಕೊಲೆಯತ್ನ ಪ್ರಕರಣ ದಾಖಲಿಸಬೇಕು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಮುಂಜಾಗೃತಾ ಕ್ರಮಕೈಗೊಳ್ಳಬೇಕು. ಮನವಿ ಸ್ವೀಕರಿಸಲು ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಧಾವಿಸಬೇಕು ಎಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಎಂ.ಎಸ್. ಮಹಮ್ಮದ್, ಅರಿಯಡ್ಕ ಅಬ್ದುಲ್ ರಹಿಮಾನ್ ಹಾಜಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಎಪಿಎಂಸಿ ಸದಸ್ಯ ಶುಕೂರ್ ಹಾಜಿ, ಇಬ್ರಾಹಿಂ ಗೋಳಿಕಟ್ಟೆ, ಬಿ.ಎ. ಶಕೂರ್ ಹಾಜಿ, ಖಾಸಿಂ ಹಾಜಿ ಮಿತ್ತೂರು, ಅಝಾದ್ ಅಬ್ದುಲ್ ರಹಿಮಾನ್ ಹಾಜಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News