ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ನಾಯಕರು ಎಲ್ಲಿದ್ದಾರೆ?

Update: 2022-10-24 19:30 GMT

ಮಾನ್ಯರೇ,

ಮೊನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಕಾಣಿಯೂರಿನಲ್ಲಿ ಇಬ್ಬರು ಮುಸ್ಲಿಮ್ ವ್ಯಾಪಾರಿಗಳ ಮೇಲೆ ನಡೆದ ಗುಂಪು ಹಲ್ಲೆ ಹಾಗೂ ಹತ್ಯೆ ಯತ್ನ ಘಟನೆಯ ವೀಡಿಯೊ ಹಾಗೂ ವರದಿಗಳನ್ನು ನೋಡಿ ಆಘಾತವಾಯಿತು. ಎಲ್ಲೋ, ಯಾವಾಗಲೋ ನಡೆಯಿತು ಎಂಬಂತೆ ನಾವು ಮಾತಾಡುತ್ತಿದ್ದ ಭಯಾನಕ ಘಟನೆಗಳು ಈಗ ನಮ್ಮ ಆಸುಪಾಸಿನಲ್ಲೇ ಬಹಳ ಸಹಜ ಎಂಬಂತೆ ನಡೆಯುತ್ತಿರುವ ಈ ವಿದ್ಯಮಾನ ನಮ್ಮನ್ನು ಕಂಗೆಡಿಸುತ್ತಿದೆ. ಯಾವ ಆರೋಪ ಇದ್ದರೂ ಅದನ್ನು ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕಾದದ್ದು ಪೊಲೀಸರು. ಜನರೇ ಗುಂಪಾಗಿ ಹೀಗೆ ದಾಳಿ ಮಾಡುವುದು ಅನಾಗರಿಕ ವರ್ತನೆ.

ಆದರೆ ಇಂತಹ ಅಮಾನವೀಯ ದಾಳಿಯೊಂದು ನಡೆದಾಗ ರಾಜ್ಯದ ವಿಪಕ್ಷ ಅತ್ಯಂತ ನಿಷ್ಕ್ರಿಯವಾಗಿರುವುದು ಚಿಂತಾಜನಕ ವಿಷಯವಾಗಿದೆ. ಇಡೀ ರಾಜ್ಯದ ಸರ್ವಧರ್ಮೀಯರು, ಸರ್ವ ರಾಜಕೀಯ ಪಕ್ಷಗಳು ತಡಮಾಡದೆ ಬೀದಿಗಿಳಿದು ಹೋರಾಟ ನಡೆಸಬೇಕಿದ್ದ ಇಷ್ಟು ಗಂಭೀರ ಘಟನೆ ಬಗ್ಗೆ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮುಖಂಡರು ಮಾತ್ರ ಯಾಕೆ ಮಾತನಾಡುತ್ತಿದ್ದಾರೆ? ಇದು ಇಡೀ ನಾಡು ವಿರೋಧಿಸಬೇಕಾದ ಅಕ್ಷಮ್ಯ ಅಪರಾಧವಲ್ಲವೇ? ಇದು ಕೇವಲ ಅಲ್ಪಸಂಖ್ಯಾತರ ಸಮಸ್ಯೆ ಎಂದು ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದು ಯಾರು? ಗುಂಪು ದಾಳಿ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮವಾಗಬೇಕು ಎಂದು ಜಿಲ್ಲೆಯ ಪ್ರಮುಖ ಕಾಂಗ್ರೆಸ್ ಮುಖಂಡರು ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಏಕೆ? ಹೋರಾಟ ನಡೆಸುತ್ತಿಲ್ಲ ಏಕೆ?

ಕಾಟಾಚಾರದ ಖಂಡನೆ ಹೇಳಿಕೆಗೆ ಮಾತ್ರ ಸೀಮಿತವಾಗಿದ್ದಾರೆ ಏಕೆ? ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಎಲ್ಲಿ ಹೋಗಿ ಅಡಗಿ ಕುಳಿತಿದ್ದಾರೆ? ಇದರ ಬಗ್ಗೆ ಹೆಚ್ಚು ಮಾತಾಡಬೇಡಿ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಇಲ್ಲಿನ ಲೋಕಸಭಾ ಅಭ್ಯರ್ಥಿಯಾಗಿದ್ದ ಮಿಥುನ್ ರೈ, ಮೊನ್ನೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಇವರಿಗೆಲ್ಲ ಫರ್ಮಾನು ಹೊರಡಿಸಿದವರು ಯಾರು? ಇಂತಹ ದುರಂತವೊಂದನ್ನು ಸ್ಪಷ್ಟವಾಗಿ ವಿರೋಧಿಸದೇ ಇದ್ದರೆ ನೀವು ವಿಪಕ್ಷ ನಾಯಕರಾಗಿದ್ದು ಏನು ಪ್ರಯೋಜನ ಸ್ವಾಮೀ? ಇಂತಹ ಸೋಗಲಾಡಿತನ ಇಟ್ಟುಕೊಂಡು ನೀವು ಯಾವ ಚುನಾವಣೆ ಗೆದ್ದರೆಷ್ಟು, ಬಿಟ್ಟರೆಷ್ಟು?

Writer - -ನವೀನ್ ಸುವರ್ಣ ಮಂಗಳೂರು

contributor

Editor - -ನವೀನ್ ಸುವರ್ಣ ಮಂಗಳೂರು

contributor

Similar News