ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸೇನೆ ದಾಳಿ: ಐವರು ಫೆಲೆಸ್ತೀನಿಯರ ಹತ್ಯೆ

Update: 2022-10-25 17:15 GMT

ಗಾಝಾ,ಅ.25: ಇಸ್ರೇಲ್ ಆಕ್ರಮಿತ ಪಶ್ಚಿಮದಂಡೆಯ ವಿವಿಧ ಪ್ರದೇಶಗಳ ಮೇಲೆ ಮಂಗಳವಾರ ಇಸ್ರೇಲಿ (Israeli)ಪಡೆಗಳು ದಾಳಿ ನಡೆಸಿದ್ದು, ಕನಿಷ್ಠ ಆರು ಮಂದಿ ಫೆಲೆಸ್ತೀನ್(Palestine) ನಾಗರಿಕರನ್ನು ಹತ್ಯೆಗೈದಿದೆ.

ಮುಂಜಾನೆ ವೇಳೆಗೆ ನಬ್ಲಸ್ ನಗರ(Nablus city)ದ ಮೇಲೆ ಭಾರೀ ಸಂಖ್ಯೆಯ ಇಸ್ರೇಲಿ ಸೈನಿಕರು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಫೆಲೆಸ್ತೀನಿ ಭದ್ರತಾಪಡೆಗಳು ಹಾಗೂಸಶಸ್ತ್ರ ಫೆಲೆಸ್ತೀನ್ ಹೋರಾಟಗಾರರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.ಆಗ ಉಂಟಾದ ಘರ್ಷಣೆಯಲ್ಲಿ ಐವರು ಫೆಲೆಸ್ತೀನಿಯರು ಇಸ್ರೇಲಿ ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ಮೃತಪಟ್ಟವರಲ್ಲಿ ಒಬ್ಬಾತ ನಿರಾಯುಧನಾಗಿದ್ದನೆಂದು ಫೆಲೆಸ್ತೀನಿ ಆರೋಗ್ಯ ಹಾಗೂ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

  ಪಶ್ಚಿಮದಂಡೆ ಇನ್ನೊಂದು ನಗರವಾದ ರಮಲ್ಲಾ ಸಮೀಪದ ನಬಿ ಸಲೇಹ್ ಗ್ರಾಮದಲ್ಲಿ ಇಸ್ರೇಲಿ ಪಡೆಗಳ ಜೊತೆ ನಡೆದ ಸಂಘರ್ಷದಲ್ಲಿ 19 ವರ್ಷ ವಯಸ್ಸಿನ ಖುಸೈ ಅಲ್ ತಾಮೀಮಿ ಎಂಬ ಯುವಕನೊಬ್ಬ ಸಾವನ್ನಪ್ಪಿದ್ದಾನೆ.

      ನಬ್ಲಸ್ ನಲ್ಲಿ  ನಮ್ಮ ಜನತೆಯ ವಿರುದ್ಧ ಇಸ್ರೇಲ್ ನ  ಸೇನಾ ಆಕ್ರಮಣವನ್ನು ನಿಲ್ಲಿಸಲು ಫೆಲೆಸ್ತೀನ್ ಅಧ್ಯಕ್ಷ ಮುಹಮ್ಮದ್ ಅಬ್ಬಾಸ್ ಅವರು ತುರ್ತು ಸಂಪರ್ಕಗಳನ್ನು ಸ್ಥಾಪಿಸಿದ್ದಾರೆಂದು ಅವರ ವಕ್ತಾರರಾದ ನಬಿಲ್ ಅಬು ರುದೆಯ್ನೆಹ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಇಸ್ರೇಲ್ ಸೇನೆಯು ನಡೆಸುತ್ತಿರುವ ಇಂತಹ ದಾಳಿಂದ ಅತ್ಯಂತ ಅಪಾಯಕಾರಿ ಹಾಗೂ ವಿನಾಶಕಾರಿ ಪರಿಣಾಮಗಳಾಗುತ್ತವೆ’’ ಎಂದು ಫೆಲೆಸ್ತೀನ್ ಟಿವಿ ವಾಹಿನಿಗೆ ಅಬು ರುದಿಯೆನೆಹ್ ತಿಳಿಸಿದ್ದಾರೆ.

ಈ ಮಧ್ಯೆ ಇಸ್ರೇಲ್ ಸೇನೆಯ ದಾಳಿಯಿಂದ ಗಾಯಗೊಂಡ ಫೆಲೆಸ್ತೀನ್ ನಾಗರಿಕರನ್ನು ತೆರವುಗೊಳಿಸಲು ಅಲ್-ಖ್ವಾರಯೂನ್ ವಸತಿ ಪ್ರದೇಶವನ್ನು ಪ್ರವೇಶಿಸಿದ ತನ್ನ ವೈದ್ಯಕೀಯ ಸಿಬ್ಬಂದಿಯನ್ನು ಇಸ್ರೇಲ್ ಸೇನೆ ತಡೆದಿರುವುದಾಗಿ ಫೆಲೆಸ್ತೀನ್ ರೆಡ್ ಕ್ರಿಸೆಂಟ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News