ಉತ್ತರಪ್ರದೇಶ: ಕನೌಜ್ ನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಯ ಅತ್ಯಾಚಾರ ಆರೋಪಿಯ ಸೆರೆ
ಲಖ್ನೋ: ಅಕ್ಟೋಬರ್ 23 ರಂದು ಕನೌಜ್‌ನ ಸರ್ಕಾರಿ ಅತಿಥಿ ಗೃಹದ ಹಿಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ 13 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಮಂಗಳವಾರ ದೂರು ದಾಖಲಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ರಕ್ತಸ್ರಾವದಿಂದ ಬಳಲಿದ್ದ ಬಾಲಕಿ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದರೂ, ಜನರು ಸುತ್ತಲೂ ನೆರೆದು ವೀಡಿಯೊ ಚಿತ್ರೀಕರಣ ನಡೆಸುತ್ತಿದ್ದ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ನಂತರದ ವೀಡಿಯೋ ಒಂದರಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ವೈದ್ಯಕೀಯ ನೆರವು ನೀಡಲು ಬಾಲಕಿಯನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಬಾಲಕಿಯ ತಲೆಗೆ ಗಾಯವಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿಯ ಕುಟುಂಬದವರು ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ, ಮತ್ತು ಭಾರತೀಯ ದಂಡ ಸಂಹಿತೆ 376 (ಅತ್ಯಾಚಾರ), 363 (ಅಪಹರಣ), 307 (ಕೊಲೆ ಯತ್ನ) ಮತ್ತು 511 ಅಡಿಯಲ್ಲಿ ಶಂಕಿತನ ಮೇಲೆ ಆರೋಪ ಹೊರಿಸಲಾಗಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.