ನದಿಗಳ ಮಾಲಿನ್ಯ: ಕುಡಿಯುವ ನೀರೇ ವಿಷವಾದರೆ?

Update: 2022-10-28 05:18 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತ ನದಿಗಳ ದೇಶ. ಆ ಕಾರಣಕ್ಕಾಗಿಯೇ ಕೃಷಿ ಪ್ರಧಾನ ದೇಶವಾಗಿ ವಿಶ್ವದಲ್ಲಿ ಗುರುತಿಸಿಕೊಂಡಿದೆ. ನದಿಗಳಿಗೆ ಭಾರತದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮುಖಗಳಿವೆ. ಭಾರತ ನದಿಗಳನ್ನು ಪೂಜಿಸುವ ದೇಶ. ಇಲ್ಲಿ ಪ್ರತೀ ನದಿಗಳ ಹಿಂದೆಯೂ ಕತೆಗಳಿವೆ. ಅವುಗಳಿಗೆ ಪುರಾಣದ ಹಿನ್ನೆಲೆಯಿದೆ. ಭಾರತದ ಬಹುತೇಕ ಪುಣ್ಯ ಕ್ಷೇತ್ರಗಳು ನದಿ ತಟಗಳಲ್ಲಿವೆ. ನದಿಗಳಲ್ಲಿ ಮುಳುಗೆದ್ದರೆ ಸಕಲ ಪಾಪಗಳೂ ಪರಿಹಾರವಾಗುತ್ತವೆ ಎಂದು ನಂಬುವ ದೇಶ ನಮ್ಮದು. ಈ ನದಿಗಳನ್ನು ಬಳಸಿಕೊಂಡು ಈ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಅವಕಾಶ ಭಾರತಕ್ಕಿತ್ತು. ಆದರೆ ಇಂದು ಈ ನದಿಗಳನ್ನು ಶುದ್ಧೀಕರಿಸುವುದಕ್ಕಾಗಿಯೇ ಪ್ರತೀ ವರ್ಷ ಕೋಟ್ಯಂತರ ರೂಪಾಯಿಯನ್ನು ವ್ಯಯಿಸಬೇಕಾದಂತಹ ಸ್ಥಿತಿಗೆ ಬಂದು ನಿಂತಿದೆ ಭಾರತ.

ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಸಮಯದಲ್ಲಿ ‘ನಮಾಮಿ ಗಂಗೆ’ ಬಹಳಷ್ಟು ಸುದ್ದಿಮಾಡಿತ್ತು. ಸುಮಾರು 20,000 ಕೋಟಿ ರೂಪಾಯಿಗಳನ್ನು ಗಂಗೆಯ ಶುದ್ಧೀಕರಣಕ್ಕಾಗಿ ಸರಕಾರ ಮೀಸಲಿರಿಸಿತ್ತು. ‘‘ಮಾತೆ ಗಂಗೆಯ ಸೇವೆ ಸಲ್ಲಿಸುವ ಭಾಗ್ಯ ದೊರಕಿರುವುದು ನನ್ನ ಪುಣ್ಯ’’ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಹೇಳಿದ್ದರು. ಗಂಗಾನದಿ ಶುದ್ಧೀಕರಣವನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ‘ಗಂಗಾ ನದಿಯನ್ನು ಶುಚಿಗೊಳಿಸಲು’ ಎನ್ನುವ ರೀತಿಯಲ್ಲಿ ಮಾಧ್ಯಮಗಳಲ್ಲಿ ಪ್ರಚಾರ ದೊರೆಯಿತು. ಆದರೆ ಇಂದಿಗೂ ಗಂಗಾನದಿಯ ಸ್ಥಿತಿ ಚಿಂತಾಜನಕವಾಗಿಯೇ ಇದೆ. ಗಂಗಾ ನದಿಯ ನೀರು ಕುಡಿಯುವುದಕ್ಕೆ ಯೋಗ್ಯವಲ್ಲ ಎಂದು ಈಗಾಗಲೇ ತಜ್ಞರು ವರದಿ ನೀಡಿದ್ದಾರೆ. ಭಾರತದಲ್ಲಿ ಇಂತಹ ಹೀನಾಯ ಸ್ಥಿತಿ ಒದಗಿರುವುದು ಗಂಗಾ ನದಿಗೆ ಮಾತ್ರವಲ್ಲ. ದೇಶದ 351 ಪ್ರಮುಖ ನದಿಗಳಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದು, ಅವುಗಳ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಇತ್ತೀಚೆಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸೂಚಿಸಿದೆ. ಕರ್ನಾಟಕದಲ್ಲೂ 17 ನದಿಗಳಿಗೆ ಕೊಳಚೆ ನೀರು ಬಿಡುತ್ತಿರುವ ಬಗ್ಗೆ ಜಲ ಶಕ್ತಿ ಸಚಿವಾಲಯದ ಕೇಂದ್ರ ಮೇಲ್ವಿಚಾರಣಾ ಸಮಿತಿಯು ಗಮನ ಸೆಳೆದಿದೆ. ರಾಜ್ಯ ಸರಕಾರಗಳು ಈ ಕೊಳಚೆ ನೀರಿನ ಕುರಿತಂತೆ ಗಾಢ ನಿರ್ಲಕ್ಷ ವಹಿಸುತ್ತಿರುವುದರ ಬಗ್ಗೆ ಅದು ತನ್ನ ಆತಂಕ ವ್ಯಕ್ತಪಡಿಸಿದೆ.

ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರವನ್ನು ನಿರಾಕರಿಸುವಂತಿಲ್ಲ. ಆದರೆ ಕೈಗಾರಿಕೆಗಳು ಮತ್ತು ಪರಿಸರದ ನಡುವೆ ಸಮನ್ವಯ ಸಾಧ್ಯವಾಗದೇ ಇದ್ದರೆ ಆ ಅಭಿವೃದ್ಧಿಯೇ ನಮಗೆ ಮುಳುವಾಗಬಹುದು. ಯಾವುದೇ ಕೈಗಾರಿಕೆಗಳು ಸ್ಥಾಪನೆಯಾಗುವಾಗ ಅದು ಹೊರ ಬಿಡುವ ತ್ಯಾಜ್ಯದ ನಿಭಾವಣೆ ಬಹುದೊಡ್ಡ ಸವಾಲು. ಬಹುತೇಕ ಕೈಗಾರಿಕೆಗಳು ನದಿಗಳನ್ನು ತಮ್ಮ ತ್ಯಾಜ್ಯ ಹೊರಬಿಡುವ ಚರಂಡಿಗಳಾಗಿ ಭಾವಿಸಿವೆ. ಪರಿಣಾಮವಾಗಿ ಇಂದು ಜಲಮೂಲಕ್ಕೆ 56 ಕೋಟಿ ಲೀಟರ್ ಕೊಳಚೆ ಸೇರ್ಪಡೆಯಾಗಿರುವುದು ಬೆಳಕಿಗೆ ಬಂದಿದೆ. ಹಲವು ಸಣ್ಣ ಪುಟ್ಟ ನದಿಗಳನ್ನು ಈ ತ್ಯಾಜ್ಯಗಳು ಬಹುತೇಕ ಕೊಂದು ಹಾಕಿವೆ. ಅಲ್ಲಿ ನದಿಯೆನ್ನುವುದು ಅಸ್ತಿತ್ವದಲ್ಲಿತ್ತು ಎನ್ನುವುದನ್ನು ನಂಬಲು ಯಾವ ದಾಖಲೆಗಳೂ ಸಿಗುವುದಿಲ್ಲ. ನದಿಗಳನ್ನು ಈ ಕೈಗಾರಿಕೆಗಳು ಚರಂಡಿಗಳಾಗಿ ಮಾರ್ಪಡಿಸಿವೆ. ಗಂಗಾ ನದಿಯ ಇಂದಿನ ಸ್ಥಿತಿಗೆ ಇದರ ದಡದಲ್ಲಿರುವ ಕೈಗಾರಿಕೆಗಳ ಪಾತ್ರ ಬಹುದೊಡ್ದದು. ರಾಜಕಾರಣಿಗಳು ಮತ್ತು ಕೈಗಾರಿಕೆಕೋದ್ಯಮಿಗಳ ನಡುವಿನ ಅನೈತಿಕ ಮೈತ್ರಿಯ ಕಾರಣದಿಂದಲೇ, ಕೈಗಾರಿಕೆಗಳು ನಿಯಮ ಉಲ್ಲಂಘಿಸಿ ತ್ಯಾಜ್ಯವನ್ನು ನದಿಗಳಿಗೆ ರಾಜಾರೋಷವಾಗಿ ಬಿಡುತ್ತಿವೆ. ನದಿಗಳಿದ್ದೂ ಆ ನೀರನ್ನು ಬಳಸಲಾಗದ ಸ್ಥಿತಿಯಲ್ಲಿ ಹಲವು ನಗರಗಳಿವೆ. ಪಾಪವನ್ನು ಕಳೆಯುತ್ತಾಳೆ ಎಂದು ನಂಬಿರುವ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ, ಚರ್ಮರೋಗಗಳು ಅಂಟಿಕೊಳ್ಳುವ ಭಯ ಜನರನ್ನು ಕಾಡುತ್ತಿದೆ.

ಒಂದೆಡೆ ಜಲ ಮಾಲಿನ್ಯಕ್ಕೆ ಕೈಗಾರಿಕೆಗಳು ಕಾರಣವಾಗಿದ್ದರೆ, ಇನ್ನೊಂದೆಡೆ ಧಾರ್ಮಿಕ ನಂಬಿಕೆಗಳು ಕೂಡ ಕಾರಣವಾಗುತ್ತಿರುವುದು ವಿಪರ್ಯಾಸವಾಗಿದೆ. ನದಿಯನ್ನು ‘ತಾಯಿ, ದೇವತೆ’ ಎಂದೆಲ್ಲ ಕರೆಯುತ್ತಲೇ ಭಕ್ತರು ಅದರ ಮಾಲಿನ್ಯಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ. ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ಪಾಪಗಳು ಪರಿಹಾರವಾಗುತ್ತವೆ ಎನ್ನುವುದೇ ಗಂಗೆಗೆ ಬಹುದೊಡ್ಡ ಶಾಪವಾಗಿದೆ. ಮೃತರ ಚಿತಾಭಸ್ಮವನ್ನು ಗಂಗಾ ನದಿಯಲ್ಲಿ ಅಥವಾ ಇತರ ನದಿಗಳಲ್ಲಿ ತೇಲಿ ಬಿಡುವುದು ಸಂಪ್ರದಾಯವಾಗಿದೆ. ಈ ಮೂಲಕ, ಮೃತರು ಸ್ವರ್ಗ ಸೇರುತ್ತಾರೆ ಎನ್ನುವುದು ಭಕ್ತರ ನಂಬಿಕೆ. ಈ ನಂಬಿಕೆಯೇ ಗಂಗಾ ನದಿಗೆ ದೊಡ್ಡ ಮಟ್ಟದಲ್ಲಿ ಮುಳುವಾಗಿದೆ. ಪೂರ್ತಿಯಾಗಿ ದಹನವಾಗದ ಅರೆಬೆಂದ ಮೃತದೇಹಗಳನ್ನು ಗಂಗಾನದಿಗೆ ಎಸೆಯುವ ಹೇಯ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಲೇ ಇವೆೆ. ಗಂಗಾನದಿಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಮೃತರ ಅಸ್ಥಿಪಂಜರಗಳು ಪತ್ತೆಯಾದವು. ಕಳೆದ ಕೊರೋನ ಸಂದರ್ಭದಲ್ಲಿ ನೂರಾರು ಮೃತದೇಹಗಳು ಗಂಗಾನದಿಯಲ್ಲಿ ತೇಲಿರುವುದು ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಯಾದವು. ಹಾಗೆಯೇ ಗಂಗೆಯ ದಡದಲ್ಲೇ ನೂರಾರು ಮೃತದೇಹಗಳನ್ನು ದಫನಮಾಡಿರುವುದು, ಅವುಗಳನ್ನು ನರಿ, ನಾಯಿಗಳು ಎಳೆಯುತ್ತಿರುವುದು ಬೆಳಕಿಗೆ ಬಂದವು. ಬದುಕಿನ ಜೀವ ದ್ರವ್ಯ ಎನ್ನುವ ಕಾರಣಕ್ಕಾಗಿ ನದಿಗೆ ನಮ್ಮ ಹಿರಿಯರು ದೇವರ ಪಟ್ಟವನ್ನು ಕಟ್ಟಿದರು. ಆದರೆ ಆ ಪಟ್ಟವೇ ಇಂದು ಬಹುತೇಕ ನದಿಗಳಿಗೆ ಮುಳುವಾಗಿವೆ. ನದಿ ದಡದಲ್ಲಿರುವ ಪುಣ್ಯ ಕ್ಷೇತ್ರಗಳಿಗೆ ಆಗಮಿಸುವ ಭಕ್ತರಿಂದಾಗಿಯೂ ದೊಡ್ಡ ಮಟ್ಟದಲ್ಲಿ ಜಲ ಮಾಲಿನ್ಯವಾಗುತ್ತಿರುವುದನ್ನು ಪರಿಸರ ತಜ್ಞರು ಬೊಟ್ಟು ಮಾಡಿ ತೋರಿಸಿದ್ದಾರೆ.

ಹಾಗೆಯೇ ಹಬ್ಬಗಳಿಗೂ ನಮ್ಮ ನದಿ, ಕೆರೆಗಳು ಬಲಿಯಾಗುತ್ತಿವೆ. ಗಣೇಶೋತ್ಸವದ ಸಂದರ್ಭದಲ್ಲಿ ವಿಸರ್ಜಿಸಲಾದ ವಿಗ್ರಹಗಳನ್ನು ಹೊರ ತೆಗೆದು ನದಿ, ಕೆರೆಗಳನ್ನು ಶುಚಿಗೊಳಿಸುವುದಕ್ಕಾಗಿಯೇ ಸರಕಾರ ಕೋಟ್ಯಂತರ ರೂಪಾಯಿ ವ್ಯಯ ಮಾಡಬೇಕಾದಂತಹ ಸ್ಥಿತಿಯಿದೆ. ಸರಕಾರದ ಎಲ್ಲ ಎಚ್ಚರಿಕೆಗಳನ್ನು ಮೀರಿ ಈ ಜಲ ಮಾಲಿನ್ಯಗಳು ಸಂಭವಿಸುತ್ತವೆ. ನಮ್ಮ ನದಿಗಳನ್ನು ಗೌರವಿಸುವ ಒಂದೇ ಒಂದು ವಿಧಾನ, ಅದನ್ನು ಗರಿಷ್ಠ ಮಟ್ಟದಲ್ಲಿ ಶುಚಿಯಾಗಿಡುವುದು. ನದಿಗಳಲ್ಲಿ ಅಸ್ಥಿಯನ್ನು ವಿಸರ್ಜಿಸಿದರೆ ಸ್ವರ್ಗಕ್ಕೆ ಹೋಗುತ್ತಾರೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲಿ ನಾವು ನದಿಯನ್ನು ಕೆಡಿಸಿದರೆ ಆ ಪಾಪವನ್ನು ಯಾವ ನದಿಯಲ್ಲೂ ತೊಳೆದು ಶುಚಿಗೊಳಿಸಲಾಗುವುದಿಲ್ಲ. ಒಂದೆಡೆ ಕೈಗಾರಿಕೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಮಾಲಿನ್ಯ, ಇನ್ನೊಂದೆಡೆ ಭಕ್ತಿಯ ಪರಾಕಾಷ್ಠೆಯಿಂದ ನಡೆಯುವ ಮಾಲಿನ್ಯ ಇವೆರಡರಿಂದ ನಮ್ಮ ನದಿಗಳನ್ನು ರಕ್ಷಿಸದೇ ಇದ್ದರೆ, ನಮ್ಮ ಭವಿಷ್ಯವನ್ನು ನಾವೇ ಕೈಯಾರೆ ನಾಶ ಮಾಡಿಕೊಳ್ಳಲಿದ್ದೇವೆ. ನಮ್ಮ ನದಿಗಳನ್ನು ಸಾಯಿಸುವುದೆಂದರೆ, ಜೊತೆಜೊತೆಗೆ ಅವುಗಳನ್ನು ಅವಲಂಬಿಸಿರುವ ಸಕಲ ಜೀವರಾಶಿಗಳನ್ನು ಸಾಯಿಸಿದಂತೆ. ಈ ಜೀವ ರಾಶಿಗಳಲ್ಲಿ ಮನುಷ್ಯನೂ ಸೇರಿರುತ್ತಾನೆ ಎನ್ನುವ ಎಚ್ಚರಿಕೆ ನಮಗಿರಬೇಕು.

Similar News